ಕಾರ್ಮಿಕರ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಜಾರಿಗೊಂಡಿರುವ ಎಲ್ಲಾ ಯೋಜನೆಗಳನ್ನು ಅರ್ಹ ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಮಾಜಿ ಸಚಿವ, ಶಾಸಕ ಪ್ರಭು ಬಿ.ಚವ್ಹಾಣ ಹೇಳಿದರು.
ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ ಔರಾದ್ ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಮಿಕರ ಸುರಕ್ಷತಾ ಕಿಟ್ ಹಾಗೂ ಆರ್‌ಪಿಎಲ್ ತರಬೇತಿ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಪಿಂಚಣಿ, ದುರ್ಬಲತೆ ಪಿಂಚಣಿ, ತರಬೇತಿ ಹಾಗೂ ಟೂಲ್‌ಕಿಟ್ ಸೌಲಭ್ಯ, ಹೆರಿಗೆ ನೆರವು, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ನೆರವು, ಅಪಘಾತ ಪರಿಹಾರ, ಮದುವೆ ಸಹಾಯಧನ, ತಾಯಿ-ಮಗು ಸಹಾಯ ಸೇರಿದಂತೆ ಹಲವು ಯೋಜನೆಗಳು ಲಭ್ಯವಿವೆ. ಈ ಯೋಜನೆಗಳ ಕುರಿತು ಪ್ರತಿಯೊಬ್ಬ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು” ಎಂದು ತಿಳಿಸಿದರು.
“ಕಾರ್ಮಿಕರು ತಮ್ಮ ದೈನಂದಿನ ಕಾಯಕದಲ್ಲಿ ನಿರತರಾಗಿರುವುದರಿಂದ ಯೋಜನೆಗಳ ಬಗ್ಗೆ ಅರಿವು ಕಡಿಮೆ ಇರುತ್ತದೆ. ಹೀಗಾಗಿ ತಿಳಿದವರು ಅವರಿಗೆ ಮಾರ್ಗದರ್ಶನ ನೀಡಬೇಕು. ಕಾರ್ಮಿಕರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಅಪಘಾತಗಳು ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಪರಸ್ಪರ ಸಹಕಾರ ಅಗತ್ಯ” ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ರಾಹುಲ್ ಬಿ.ರತ್ನಾಕರ ಮಾತನಾಡಿ, “ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ ಕಡ್ಡಾಯವಾಗಿದ್ದು, ಪ್ರತಿವರ್ಷ ನವೀಕರಣ ಮಾಡಿಕೊಳ್ಳಬೇಕು” ಎಂದು ಹೇಳಿದರು.
ಪ್ರಬೋಧಿತ ಸರ್ವಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ಸುರೇಶಕುಮಾರ ಅವರು ಸರ್ಕಾರದ ಯೋಜನೆಗಳು ಹಾಗೂ ಆರ್‌ಪಿಎಲ್ ತರಬೇತಿ ಕುರಿತು ಮಾಹಿತಿ ನೀಡಿದರು.
ಈ ವೇಳೆ 434 ಕಾರ್ಮಿಕರಿಗೆ ಆರ್‌ಪಿಎಲ್ ತರಬೇತಿ ಪ್ರಮಾಣಪತ್ರ ಮತ್ತು ಕಿಟ್‌ಗಳನ್ನು, 400 ಕಾರ್ಮಿಕರಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಿಸಲಾಯಿತು. ಜೊತೆಗೆ ಉಚಿತ ಆರೋಗ್ಯ ತಪಾಸಣೆಯೂ ನಡೆಸಲಾಯಿತು.
ಇದನ್ನೂ ಓದಿ : ಬೀದರ್ | ಮಹಿಳೆಯರು ವೃತ್ತಿಪರ ಕೌಶಲ್ಯ ಬೆಳೆಸಿಕೊಳ್ಳಿ : ಶೈನಿ ಪ್ರದೀಪ ಗುಂಟಿ
ಕಾರ್ಯಕ್ರಮದಲ್ಲಿ ತಹಸೀಲ್ದಾರ ಮಹೇಶ್ ಪಾಟೀಲ, ಮುಖಂಡರಾದ ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಶಿವಾಜಿರಾವ ಕಾಳೆ, ಶ್ರೀಮಂತ ಪಾಟೀಲ, ಕೇರಬಾ ಪವಾರ, ಶ್ರೀನಿವಾಸ ಖೂಬಾ, ರಾಮ ನರೋಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




