ಜೂನ್ 28ರಂದು ಬಸವಕಲ್ಯಾಣದಲ್ಲಿ ಕೊಲ್ಹಾಪುರದ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾದ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಮಠಾಧೀಶರು, ಬಸವಪರ ಸಂಘಟನೆಗಳ ಮುಖಂಡರು ಹಾಗೂ ಬಸವ ಭಕ್ತರು ಬೀದರ್ ನಗರದ ಐಎಂಎ ಹಾಲ್‌ನಲ್ಲಿ ಶನಿವಾರ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿ ಪ್ರಮುಖರು ಮಾತನಾಡಿ, “ಬಸವ ಭಕ್ತರನ್ನು ʼಬಸವ ತಾಲಿಬಾನಿʼ ಎಂದು ಉಲ್ಲೇಖಿಸಿರುವುದು ಹಾಗೂ ಬಸವ ತತ್ವ ಮತ್ತು ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿರುವ ಪೂಜ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಇಂತಹ ಹೇಳಿಕೆಗಳು ಬಸವಾನುಯಾಯಿಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ” ಎಂದರು.

ಬಸವಾದಿ ಶರಣರ ಪವಿತ್ರ ನೆಲವಾದ ಬಸವಕಲ್ಯಾಣದ ಗೌರವ, ಸಮಸ್ತ ಬಸವ ಭಕ್ತರ ಭಾವನೆಗಳು ಹಾಗೂ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸುವುದಾಗಿ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಲಾಯಿತು.
This video cannot be played in your browser. Open the video directly
ಇದೇ ಸಂದರ್ಭದಲ್ಲಿ ಕನೇರಿ ಶ್ರೀಗಳ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸಿ ಜೂನ್ 28ರಂದು ಹಮ್ಮಿಕೊಳ್ಳಲಾಗಿರುವ ‘ಬಸವಕಲ್ಯಾಣ ಚಲೋ’ ಬೃಹತ್ ಪ್ರತಿಭಟನಾ ಹೋರಾಟದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಪ್ರಮುಖರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.

“ಬಸವಕಲ್ಯಾಣದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ, ಬಸವ ಭಕ್ತರ ಭಾವನೆಗಳು ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಆಡಳಿತಾತ್ಮಕ ನಿರ್ಧಾರ ಕೈಗೊಂಡು ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ನೀಡದಂತೆ ಕ್ರಮವಹಿಸಬೇಕು” ಎಂದು ಬಸವಪರ ಸಂಘಟನೆಗಳ ಒಕ್ಕೂಟ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಇದು ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿರೋಧವಲ್ಲ. ಬಸವ ತತ್ವ, ಸಾರ್ವಜನಿಕ ಶಾಂತಿ ಹಾಗೂ ಸಾಮಾಜಿಕ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ ಸಲ್ಲಿಸಲಾಗುತ್ತಿರುವ ಪ್ರಜಾಸತ್ತಾತ್ಮಕ ಹಾಗೂ ಶಾಂತಿಯುತ ಮನವಿಯಾಗಿದೆ ಎಂದು ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದಲ್ಲಿ ಅಥವಾ ಕನೇರಿ ಸ್ವಾಮೀಜಿಯವರ ಬಸವಕಲ್ಯಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಿದಲ್ಲಿ, ನಾಡಿನ ಸಮಸ್ತ ಬಸವ ಭಕ್ತರಲ್ಲಿ ತೀವ್ರ ಅಸಮಾಧಾನ ಮತ್ತು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಸಾರ್ವಜನಿಕ ಭಾವನೆಗಳಿಗೆ ಧಕ್ಕೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸವಾಲುಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಬೀದರ್ | ವಿದ್ಯಾವಂತ ಮೋಸಗಾರರು, ದೇಶದ್ರೋಹಿಗಳ ಸಂಖ್ಯೆ ಹೆಚ್ಚಳ : ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ
ಈ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಗಂಗಾಬಿಕೆ ಪಾಟೀಲ್, ಮಹಾಲಿಂಗದೇವರು ಬಸವಲ್ಯಾಣ, ಶಿವಾನಂದ ಸ್ವಾಮೀಜಿ ಬಸವಕಲ್ಯಾಣ, ರಮೇಶ ಮಠಪತಿ, ಶಿವಶರಣಪ್ಪ ಹುಗ್ಗೆ ಪಾಟೀಲ್, ರವಿ ಪಾಪಡೆ, ಪ್ರವೀಣಕುಮಾರ ಎಕಲಾರೆ, ಸಿದ್ರಾಮ ಶೆಟಕಾರ, ವಿಜಯಶ್ರೀ ಬಶೆಟ್ಟಿ, ಜಯದೇವಿ ಯದಲಾಪುರೆ, ಶೈಲಜಾ ಹುಡಗೆ ಸೇರಿದಂತೆ ಪೂಜ್ಯರು, ಬಸವಪರ ಸಂಘಟನೆಗಳ ಪ್ರಮುಖರು, ಬಸವಾನುಯಾಯಿಗಳು ಉಪಸ್ಥಿತರಿದ್ದರು.





