ಬಸವಕಲ್ಯಾಣದ ವಿಶ್ವಬಸವಧರ್ಮ ಟ್ರಸ್ಟ್ ಅನುಭವ ಮಂಟಪ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಡಾ.ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರಕ್ಕೆ ಬೀದರ ಜಿಲ್ಲೆಯ ಹಿರಿಯ ಸಮಾಜ ಸೇವಕಿ ಡಾ.ಗುರಮ್ಮ ಸಿದ್ದಾರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪುರಸ್ಕಾರವನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಜೂನ್ 30ರಂದು ಸಂಜೆ 5 ಗಂಟೆಗೆ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ವಿಶ್ವಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಕಾರ್ಯದರ್ಶಿ ಡಾ. ಎಸ್.ಬಿ. ದುರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಗುರಮ್ಮ ಸಿದ್ದಾರೆಡ್ಡಿ ಅವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತರಾಗಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಏಕತೆ, ಸಾಂಸ್ಕೃತಿಕ ಚಟುವಟಿಕೆಗಳು, ಕುಟುಂಬ ಯೋಜನೆ, ಕೈಗಾರಿಕೆ, ನ್ಯಾಯಾಂಗ ಸೇವೆ, ಅಂಗವಿಕಲರ ಪುನರ್ವಸತಿ, ವಯಸ್ಕರ ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿರುವ ಸೇವೆ ಗಮನಾರ್ಹವಾಗಿದೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ : ಬೀದರ್ | ಜುಲೈ 3ರಂದು ಬೆಂಗಳೂರಿನಲ್ಲಿ ದಲಿತ ಜನಾಗ್ರಹ ಸಮಾವೇಶ : ರಮೇಶ ಡಾಕುಳಗಿ
ಗುರು-ಲಿಂಗ-ಜಂಗಮ ತತ್ವಗಳಿಗೆ ಬದ್ಧರಾಗಿ ದಾಸೋಹ ಭಾವನೆಯೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಡಾ. ಗುರಮ್ಮ ಸಿದ್ದಾರೆಡ್ಡಿ ಅವರ ಸಮಗ್ರ ಸೇವೆಯನ್ನು ಪರಿಗಣಿಸಿ ಈ ವರ್ಷದ ಡಾ.ಜಯದೇವಿತಾಯಿ ಲಿಗಾಡೆ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.




