ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಕಳೆದ ಏ.23ರಂದು ಸಂಜೆ ಸಿಡಿಲು ಬಡಿತದಿಂದ ಇಬ್ಬರು ಯುವಕರು ಮೃತಪಟ್ಟ ದುರ್ಘಟನೆ ನನಗೆ ಅತ್ಯಂತ ನೋವು ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಭಾನುವಾರ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು ರೇವಣಸಿದ್ದಪ್ಪ ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಸಾಂತ್ವನ ತಿಳಿಸಿ ಅವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು. ಅದೇ ದುರ್ಘಟನೆಯಲ್ಲಿ ಮೃತರಾದ ಜೇವರ್ಗಿ ತಾಲೂಕಿನ ಯಲ್ಲಾಲಿಂಗ ಅವರ ಕುಟುಂಬಕ್ಕೂ ಸಹ ₹5 ಲಕ್ಷ ಪರಿಹಾರ ಧನವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾವದಗಿ ಗ್ರಾಮದ ರೇವಣಸಿದ್ದಪ್ಪ ಹಾಗೂ ಜೇವರ್ಗಿ ತಾಲೂಕಿನ ಸಿಗರತಹಳ್ಳಿ ಗ್ರಾಮದ ಯಲ್ಲಾಲಿಂಗ ಅವರ ನಿಧನಕ್ಕೆ ಸಚಿವರು ಸಂತಾಪ ಸೂಚಿಸಿದ್ದಾರೆ.ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ಸಿಡಿಲು ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸಚಿವರು ಸೂಚನೆ ನೀಡಿದ್ದಾರೆ.
ನಾವದಗಿ ಗ್ರಾಮದಲ್ಲಿ ರೇವಣಸಿದ್ದ ಅವರು ಸಹಪಾಠಿ ಸ್ನೇಹಿತ ಯಲ್ಲಾಲಿಂಗ ಅವರು ಜಮೀನಿಗೆ ತೆರಳಿದ ವೇಳೆ ಮಳೆ ಬರುತ್ತಿರುವುದನ್ನು ಕಂಡು ರಕ್ಷಣೆಗಾಗಿ ಮಾವಿನ ಮರದಡಿ ಆಶ್ರಯ ಪಡೆದಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದರು.
ಇದನ್ನೂ ಓದಿ : ಬೀದರ್ | ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ 100 ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ
ಈ ಸಂದರ್ಭದಲ್ಲಿ ಭಾಲ್ಕಿ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.





