ಇತ್ತೀಚೆಗೆ ಆಮ್ ಆದ್ಮಿ ಪಕ್ಷವನ್ನು (ಎಎಪಿ) ತೊರೆದು ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ ಏಳು ಮಂದಿ ರಾಜ್ಯಸಭಾ ಸಂಸದರನ್ನು ವಜಾಗೊಳಿಸುವಂತೆ ಕೋರಿ ಎಎಪಿ ನಾಯಕ ಸಂಜಯ್ ಸಿಂಗ್ ಅವರು ರಾಜ್ಯಸಭಾ ಅಧ್ಯಕ್ಷ ಸಿ ಪಿ ರಾಧಾಕೃಷ್ಣನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಭಾನುವಾರ ಸಂಜಯ್ ಸಿಂಗ್ ಅವರು ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಈ ಸಂಸದರನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಸೇರಲು ಮುಂದಾದ ರಾಘವ್ ಛಡ್ಡಾ: ‘ಸಬ್ಜಿ’ ಎಂದು ಪೋಸ್ಟ್ ಮಾಡಿದ ಭಗವಂತ್ ಮಾನ್
ಈ ಏಳು ಸಂಸದರು ಎಎಪಿ ಟಿಕೆಟ್‌ನಲ್ಲಿ ಮೇಲ್ಮನೆಗೆ ಆಯ್ಕೆಯಾದವರು. ಆದರೆ ನಂತರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಶುಕ್ರವಾರ, ಎಎಪಿ ನಾಯಕರುಗಳಾದ ರಾಘವ್ ಛಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್, ಹರ್ಭಜನ್ ಸಿಂಗ್, ರಾಜೇಂದ್ರ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಅವರು ಎಎಪಿಗೆ ರಾಜೀನಾಮೆ ನೀಡಿ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದಾರೆ.
ಇನ್ನೊಂದೆಡೆ ರಾಜ್ಯಸಭೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿತ್ತು. ಅಂದರೆ “ಸಂವಿಧಾನದ ಪ್ರಕಾರ, ಒಂದು ಪಕ್ಷದ ಒಟ್ಟು ಸಂಸದರಲ್ಲಿ ಮೂರನೇ ಎರಡರಷ್ಟು ಮಂದಿ (7 ಮಂದಿ) ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಬಹುದು” ಎಂದು ರಾಘವ್ ಛಡ್ಡಾ ವಾದಿಸಿದ್ದಾರೆ.
ಆದರೆ ಇಂತಹ ಪಕ್ಷಾಂತರಗಳು ಜನರ ಜನಾದೇಶಕ್ಕೆ, ವಿಶೇಷವಾಗಿ ಪಂಜಾಬ್‌ನಲ್ಲಿ, ಮತ್ತು ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಸಂಜಯ್ ಸಿಂಗ್ ಭಾನುವಾರ ಆರೋಪಿಸಿದ್ದಾರೆ. “ಎಎಪಿ ಈ ವಿಷಯದ ಬಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಮಾಜಿ ಲೋಕಸಭಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂವಿಧಾನ ತಜ್ಞರನ್ನು ಸಂಪರ್ಕಿಸಿತ್ತು. ಕಾನೂನಿನ ಅಡಿಯಲ್ಲಿ ಸಂಸದರು ಅನರ್ಹತೆಗೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ” ಎಂದು ಸಿಂಗ್ ಹೇಳಿದ್ದಾರೆ.





