ಪಕ್ಷಿಗಳು ವನ್ಯಜೀವಿ (ರಕ್ಷಣೆ) ಕಾಯ್ದೆಯಡಿಯಲ್ಲಿ ‘ಕಾಡು ಪ್ರಾಣಿಗಳು’ ಎಂದು ಹೇಳಿದ ಬಾಂಬೆ ಹೈಕೋರ್ಟ್, ಗಿಳಿಗಳಿಂದ ಹಾನಿಗೊಳಗಾದ ದಾಳಿಂಬೆ ಮರಗಳಿಗೆ ಪರಿಹಾರ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶಿಸಿದೆ. ಏಪ್ರಿಲ್ 24ರಂದು ಹೊರಡಿಸಲಾದ ಆದೇಶದ ಪ್ರತಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.
ಸಂರಕ್ಷಿತ ಪ್ರಭೇದಗಳಿಂದ ಉಂಟಾಗುವ ನಷ್ಟಗಳಿಗೆ ರೈತರಿಗೆ ಪರಿಹಾರ ನೀಡದಿದ್ದರೆ, ಅವರು ವನ್ಯಜೀವಿಗಳಿಗೆ ಹಾನಿ ಮಾಡಲು ಮುಂದಾಗಬಹುದು. ಇದರಿಂದಾಗಿ ಗಿಳಿಗಳನ್ನೂ ಒಳಗೊಳ್ಳುವ ಕಾಯ್ದೆಯ ಉದ್ದೇಶವೇ ವಿಫಲಗೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಊರ್ಮಿಳಾ ಜೋಶಿ-ಫಾಲ್ಕೆ ಮತ್ತು ನಿವೇದಿತಾ ಮೆಹ್ತಾ ಅವರ ನಾಗ್ಪುರ ಪೀಠ ಹೇಳಿದೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ‘ಗಂಡು ಸಂತಾನದ ಸೂತ್ರ’ ಹೇಳಿದ ನಿವೃತ್ತಿ ಮಹಾರಾಜ್‌ಗೆ ಜೈಲು ಸೇರುವ ಆತಂಕ
2016ರ ಮೇ ತಿಂಗಳಲ್ಲಿ ವನ್ಯಜೀವಿ ಅಭಯಾರಣ್ಯದ ಕಾಡು ಗಿಳಿಗಳಿಂದ ತನ್ನ ದಾಳಿಂಬೆ ಮರಗಳು ಹಾನಿಗೊಳಗಾಗಿವೆ ಎಂದು ಹೇಳಿಕೊಂಡು ವಾರ್ಧಾ ಜಿಲ್ಲೆಯ ಹಿಂಗಿ ಗ್ರಾಮದ ರೈತ ಮಹಾದೇವ್ ಡೆಕಾಟೆ (70) ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಅದಕ್ಕೆ ಪರಿಹಾರವನ್ನು ಕೋರಿದೆ.
200 ಮರಗಳಿಗೆ ಉಂಟಾದ ಹಾನಿಗೆ ಪ್ರತಿ ಮರಕ್ಕೆ 200 ರೂ. ಪಾವತಿಸಲು ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯ ಸರ್ಕಾರವು ಈ ಅರ್ಜಿಯನ್ನು ವಿರೋಧಿಸಿದೆ. ಕಾಡು ಆನೆಗಳು ಮತ್ತು ಕಾಡೆಮ್ಮೆಗಳು ಹಣ್ಣು ಬಿಡುವ ಮರಗಳಿಗೆ ಹಾನಿ ಮಾಡಿದಾಗ ಮಾತ್ರ ಪರಿಹಾರ ನೀಡಬಹುದು ಎಂದು ಹಿಂದೆ ಹೊರಡಿಸಲಾದ ಸರ್ಕಾರಿ ನಿರ್ಣಯಗಳು ಹೇಳಿವೆ ಎಂದು ವಾದಿಸಿದೆ.
ಆದರೆ ನ್ಯಾಯಾಲಯವು ಈ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. “ಕೆಲವು ಜಾತಿಯ ಕಾಡು ಪ್ರಾಣಿಗಳಿಂದ ಉಂಟಾದ ನಷ್ಟವನ್ನು ಮಾತ್ರ ಪರಿಗಣಿಸಿ, ಇತರ ಜಾತಿಯ ಕಾಡು ಪ್ರಾಣಿಗಳಿಂದ ಉಂಟಾದ ನಷ್ಟವನ್ನು ನಿರ್ಲಕ್ಷಿಸುವುದರಲ್ಲಿ ಅರ್ಥವಿಲ್ಲ” ಎಂದು ಹೇಳಿದೆ.
“ಕೆಲವು ಪ್ರಭೇದಗಳಿಂದ ಉಂಟಾಗುವ ಹಾನಿ ಮಾತ್ರ ರೈತರಿಗೆ ಪರಿಹಾರವನ್ನು ಪಡೆಯಲು ಅರ್ಹತೆ ನೀಡುತ್ತದೆ ಎಂದು ಹೇಳುವುದರಲ್ಲಿ ಯಾವುದೇ ತಾರ್ಕಿಕತೆಯಿಲ್ಲ. ಇದು ಸಮಾನತೆಯ ತತ್ವದ ಉಲ್ಲಂಘನೆ ಮತ್ತು ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗುತ್ತದೆ” ಎಂದು ನ್ಯಾಯಾಲಯವು ತಿಳಿಸಿದೆ.





