ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ‍್ಯ ದಿನಾಚರಣೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಆಗಸ್ಟ್ 15ರಂದು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಕಚೇರಿಗಳಲ್ಲಿ ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಎಲ್ಲ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸರ್ಕಾರದ ಶಿಷ್ಟಾಚಾರವನ್ನು ಚಾಚೂ ತಪ್ಪದೇ ಪಾಲಿಸಿ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸಬೇಕು” ಎಂದು ನಿರ್ದೇಶನ ನೀಡಿದರು.
“ನಗರದ ಪ್ರಮುಖ ರಸ್ತೆ, ವೃತ್ತಗಳನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡಬೇಕು. ಕ್ರೀಡಾಂಗಣದಲ್ಲಿ ಕುಡಿಯುವ ನೀರು, ನೆರಳು, ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಕಾಯ್ದಿರಿಸಬೇಕು. ವಿಶೇಷವಾಗಿ ಸ್ವಾತಂತ್ರ‍್ಯ ಚಳುವಳಿಯ ಮಹತ್ವ ಸಾರುವ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು” ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, “ಪ್ಲಾಸ್ಟಿಕ್ ಧ್ವಜ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ನಗರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಪರಿಶೀಲನೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಕಚೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಿ, ವಿಶೇಷ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ ಅವರು ಸಾರ್ವಜನಿಕರಲ್ಲಿ ರಾಷ್ಟ್ರಧ್ವಜದ ಗೌರವ ಮತ್ತು ಪ್ಲಾಸ್ಟಿಕ್ ಮುಕ್ತ ಧ್ವಜ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದರು.
ಇದನ್ನೂ ಓದಿ : ಬೀದರ್ | ಆ.10ರವರೆಗೆ ಬೆಳೆ ವಿಮೆ ನೋಂದಾಯಿಸಲು ಅವಧಿ ವಿಸ್ತರಣೆ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಶಿವನಾಂದ ಕರಾಳೆ ಹಾಗೂ ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




