2026ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಸೌಲಭ್ಯಕ್ಕೆ ಆಗಸ್ಟ್ 10ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಬೀದರ್ ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ತಿಳಿಸಿದ್ದಾರೆ.
ಭಾರತ ಸರ್ಕಾರದ ಕೃಷಿ ಮಂತ್ರಾಲಯದ ಬೆಳೆ ವಿಮೆ ವಿಭಾಗದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಯ ಮಟ್ಟದಲ್ಲಿ ತೊಗರಿ (ಮಳೆಯಾಶ್ರಿತ) ಹಾಗೂ ಸೋಯಾಅವರೆ (ಮಳೆಯಾಶ್ರಿತ) ಬೆಳೆಗಳನ್ನು ಅಧಿಸೂಚಿಸಲಾಗಿದೆ.
ಎಳ್ಳು (ಮಳೆಯಾಶ್ರಿತ) ಬೆಳೆಗೆ (ಚಿಟಗುಪ್ಪ, ಕೋಹಿನೂರ, ಬಸವಕಲ್ಯಾಣ, ಮಂಠಾಳ, ಮುಡಬಿ, ರಾಜೇಶ್ವರ ಹೋಬಳಿಗಳು), ಭತ್ತ (ನೀರಾವರಿ) ಬೆಳೆಗೆ (ಚಿಟಗುಪ್ಪ, ನಿರ್ಣಾ, ಕಮಠಾಣ, ಬಗದಲ, ಬೀದರ ಉತ್ತರ, ಬೀದರ ದಕ್ಷಿಣ ಹೋಬಳಿಗಳು), ಹತ್ತಿ (ಮಳೆಯಾಶ್ರಿತ) ಬೆಳೆಗೆ (ಔರಾದ್ (ಬಿ), ಚಿಂತಾಕಿ, ಸಂತಪೂರ, ಬೀದರ ಉತ್ತರ, ಬೀದರ ದಕ್ಷಿಣ, ಮನ್ನಳ್ಳಿ ಹೋಬಳಿಗಳು) ಆಯ್ಕೆ ಮಾಡಲಾಗಿದೆ. ತಾಲೂಕಿಗೆ ನಿಗದಿಪಡಿಸಿ, ಹೋಬಳಿ ಮಟ್ಟಕ್ಕೆ ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ʼಅಗ್ರಿಕಲ್ಚರ್ ಇನ್ಶುರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ʼ ವಿಮಾ ಸಂಸ್ಥೆ ಆಯ್ಕೆ ಮಾಡಲಾಗಿದೆ.
ಈ ಯೋಜನೆಗೆ ಒಳಪಡುವ ಮೇಲಿನ ಬೆಳೆಗಳಿಗೆ ಸಾಲ ಪಡೆದ ರೈತರಿಗೆ ಅನುಕೂಲವಾಗುವಂತೆ, 2026ರ ಬೆಳೆ ವಿಮೆ ನೋಂದಾಯಿಸುವ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಆಧಾರ್ ಸಂಖ್ಯೆ ಜೋಡಿಸಿದ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ಕಾರ್ಡ್ ಪ್ರತಿಯನ್ನು ಸಂಬಂಧಿಸಿದ ಬ್ಯಾಂಕ್‌ಗಳಿಗೆ ಒದಗಿಸಿ ನೋಂದಣಿ ಮಾಡಿಸಬಹುದು.
ಇದನ್ನೂ ಓದಿ : ಹುಮನಾಬಾದ್ | ʼಗುರುಗಂಗಾ ಹಳ್ಳ ಸೇರುತ್ತಿರುವ ವಿಷಕಾರಿ ತ್ಯಾಜ್ಯ : ಕಾರ್ಖಾನೆ ವಿರುದ್ಧ ಬೃಹತ್ ಪ್ರತಿಭಟನೆ
ಬೆಳೆ ವಿಮೆ ನೋಂದಣಿಗಾಗಿ ರೈತರು ಕಡ್ಡಾಯವಾಗಿ ಫಾರ್ಮರ್ಸ್ ಐಡಿ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮೀಣ/ಸಹಕಾರಿ ಬ್ಯಾಂಕುಗಳು, ಗ್ರಾಮ ಒನ್ ಸೆಂಟರ್, ಗ್ರಾಹಕ ಸೇವಾ ಕೇಂದ್ರಗಳು, ವಿಮಾ ಸಂಸ್ಥೆಗಳ ಪ್ರತಿನಿಧಿಗಳು ಅಥವಾ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




