ಬೀದರ್ ಜಿಲ್ಲೆಯಲ್ಲಿರುವ ಮರಾಠಿ, ಉರ್ದು ಸೇರಿದಂತೆ ಎಲ್ಲ ಭಾಷಾ ಮಾಧ್ಯಮಗಳಿಗೆ ಮಂಜೂರಾದ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸಿ, ಅಗತ್ಯವಿರುವ ಹುದ್ದೆಗಳಿಗೆ ಪೂರಕ ಅಧಿಸೂಚನೆ ಹೊರಡಿಸಬೇಕು ಎಂದು ಮೈನಾರಿಟಿ ರಿಫಾರ್ಮ್ಸ್ ಫೋರಂ (ಎಂಆರ್‌ಎಫ್) ಆಗ್ರಹಿಸಿದೆ.
ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ, ಎಂಆರ್‌ಎಫ್ ಅಧ್ಯಕ್ಷ ಡಾ.ಮಕ್ಸೂದ್ ಚಂದಾ ಅವರ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಜನರು, ಡಿಡಿಪಿಐ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಡಾ.ಮಕ್ಸೂದ್ ಚಂದಾ ಮಾತನಾಡಿ, “ಶಿಕ್ಷಣದ ಹಕ್ಕು ಹಾಗೂ ಸಮಾನತೆಯ ಹಕ್ಕಿನ ಬಗ್ಗೆ ಮಾತನಾಡುವ ಸರ್ಕಾರವೇ ಮರಾಠಿ ಮತ್ತು ಉರ್ದು ಮಾಧ್ಯಮದ ಅರ್ಹ ಶಿಕ್ಷಕ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪರಿಷ್ಕರಿಸಿ, ಮರಾಠಿ ಮತ್ತು ಉರ್ದು ಮಾಧ್ಯಮದ ಅರ್ಹ ಅಭ್ಯರ್ಥಿಗಳನ್ನೂ ನೇಮಕಾತಿಗೆ ಪರಿಗಣಿಸಬೇಕು” ಎಂದು ಒತ್ತಾಯಿಸಿದರು.
“ಬೀದರ್ ಗಡಿ ಭಾಗದ ಜಿಲ್ಲೆಯಾಗಿದ್ದು, ನಿಜಾಮರ ಕಾಲದಿಂದಲೂ ಇಲ್ಲಿ ಉರ್ದು ಮಾಧ್ಯಮದ ಹಲವು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದ ಗಡಿ ಹೊಂದಿರುವ ಕಾರಣ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮರಾಠಿ ಮಾಧ್ಯಮದ ಶಾಲೆಗಳೂ ಇವೆ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಅರ್ಹ ಶಿಕ್ಷಕ ಅಭ್ಯರ್ಥಿಗಳು ಹಲವು ವರ್ಷಗಳಿಂದ ನೇಮಕಾತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಬಂದಿರುವುದರಿಂದ ಅಭ್ಯರ್ಥಿಗಳಲ್ಲಿ ಆಶಾಭಾವನೆ ಮೂಡಿದೆ. ಆದರೆ ಮರಾಠಿ ಮತ್ತು ಉರ್ದು ಮಾಧ್ಯಮಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟರೆ ಮುಂದಿನ ಅವಕಾಶ ಯಾವಾಗ ದೊರೆಯುತ್ತದೆ ಎಂಬುದು ಸ್ಪಷ್ಟವಿಲ್ಲ. ವರ್ಷಗಳ ಕಾಲ ಶಿಕ್ಷಣ ಪಡೆದು, ಟಿಇಟಿ ಸೇರಿದಂತೆ ಅಗತ್ಯ ಅರ್ಹತೆಗಳನ್ನು ಪಡೆದಿರುವ ಅಭ್ಯರ್ಥಿಗಳು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಮತ್ತಷ್ಟು ವಿಳಂಬವಾದರೆ ಅನೇಕ ಅಭ್ಯರ್ಥಿಗಳು ವಯೋಮಿತಿ ದಾಟಿ ಉದ್ಯೋಗದ ಅವಕಾಶದಿಂದ ಶಾಶ್ವತವಾಗಿ ವಂಚಿತರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದ ಶಿಕ್ಷಕರ ನೇಮಕಾತಿಗೆ ನಮ್ಮ ವಿರೋಧವಿಲ್ಲ. ಆದರೆ ಮರಾಠಿ ಮತ್ತು ಉರ್ದು ಮಾಧ್ಯಮದ ಅರ್ಹ ಅಭ್ಯರ್ಥಿಗಳನ್ನೂ ಸಮಾನವಾಗಿ ಪರಿಗಣಿಸಬೇಕು. ಪ್ರಸ್ತುತ ನೇಮಕಾತಿ ಅಧಿಸೂಚನೆಯನ್ನು ಪರಿಷ್ಕರಿಸಿ, ಮರಾಠಿ ಮತ್ತು ಉರ್ದು ಮಾಧ್ಯಮದ ಅಗತ್ಯ ಹುದ್ದೆಗಳನ್ನು ಸೇರಿಸಿ ಪೂರಕ ಅಧಿಸೂಚನೆ ಹೊರಡಿಸಬೇಕು. ಹಲವು ಭಾಷಾ ಮಾಧ್ಯಮಗಳ ಶಾಲೆಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಅಗತ್ಯ ಶಿಕ್ಷಕರನ್ನು ನೇಮಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕೆ ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.

ಶಿಕ್ಷಕರ ಕೊರತೆ ಇಲ್ಲ ಎಂದು ಹೇಳುವ ಸರ್ಕಾರವೇ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿ ವೇತನ ಪಾವತಿಸುತ್ತಿದೆ. ಹುದ್ದೆಗಳ ಅಗತ್ಯವಿಲ್ಲ ಎಂದಾದರೆ ಅತಿಥಿ ಶಿಕ್ಷಕರನ್ನು ಏಕೆ ನೇಮಿಸಬೇಕು. ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವದ್ದಾಗಿದೆ. ಆದ್ದರಿಂದ ಮರಾಠಿ, ಉರ್ದು ಸೇರಿದಂತೆ ಎಲ್ಲ ಭಾಷಾ ಮಾಧ್ಯಮದ ಶಾಲೆಗಳಿಗೆ ಅಗತ್ಯವಿರುವ ಎಲ್ಲ ವಿಷಯಗಳ ಶಿಕ್ಷಕರನ್ನು ನೇಮಿಸಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಮತ್ತು ಶಿಕ್ಷಣ ಇಲಾಖೆ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಶಿಕ್ಷಕ ಅಭ್ಯರ್ಥಿಗಳ ಹಕ್ಕಿಗಾಗಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಇದನ್ನೂ ಓದಿ : ಬೀದರ್ | ರೇಷನ್ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಿ
ಪ್ರತಿಭಟನೆಯಲ್ಲಿ ಎಂ.ಡಿ. ಶಕೀಲ್ ಅಹ್ಮದ್, ಎಂ.ಡಿ. ಮುಬಾಶಿರ್ ಶಿಂಧೆ, ಸೈಯದ್ ಮನ್ಸೂರ್ ಖಾದ್ರಿ, ಅನ್ಸಾರ್ ಉಲ್ಲಾ ಬೇಗ್, ಯೂಸುಫ್ ರಹೀಂ ಬಿದ್ರಿ, ಎಂ.ಡಿ.ಅಮೀನ್ ನವಾಜ್, ಸಜ್ಜಾದ್ ಸಾಹೇಬ್, ಶೇಖ್ ಮಸೀಉದ್ದೀನ್, ಎಂ.ಡಿ.ಸಮಿ, ಎಂ.ಡಿ.ಸುಲ್ತಾನ್ ಹಾಗೂ ಖಲೀಲ್ ಖಾನ್ ಸೇರಿದಂತೆ ಎಂಆರ್‌ಎಫ್ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.




