ವಿಧಾನ ಪರಿಷತ್ತಿನಲ್ಲಿ (ಮೇಲ್ಮನೆ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದವಾನಿಯಲ್ಲಿ ಭಾಷಣ ಮಾಡಿದ ಸ್ಥಳವನ್ನು ‘ಶುದ್ಧೀಕರಣ’ ಮಾಡಿದ್ದ ಪ್ರಕರಣವನ್ನು ಖಂಡಿಸಿ, ಖಂಡನಾ ನಿರ್ಣಯವನ್ನು ಮಂಡಿಸಿ ಅಂಗೀಕರಿಸಲಾಗಿದೆ. ಕಾಂಗ್ರೆಸ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ್ ಈ ನಿರ್ಣಯವನ್ನು ಮಂಡಿಸಿದರು, ಸಭಾಪತಿಯವರು ಇದಕ್ಕೆ ಅಂಗೀಕಾರ ನೀಡಿದ್ದಾರೆ.
ಆಗಸ್ಟ್ 8ರಂದು ಉತ್ತರಾಖಂಡದ ಹಲ್ದವಾನಿ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಭೆ ಹಮ್ಮಿಕೊಂಡಿತ್ತು. ಇದರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿ ಭಾಷಣ ಮಾಡಿದ್ದರು. ಖರ್ಗೆ ಅವರು ನಿರ್ಗಮಿಸಿದ ಬಳಿಕ, ಕೆಲವು ಬಲಪಂಥೀಯ ಸಂಘಟನೆ ಸಂಘಟನೆಗಳು (ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್) ಆ ಸ್ಥಳವನ್ನು ಹೋಮ-ಹವನ ಹಾಗೂ ಗಂಗಾಜಲದ ಮೂಲಕ ‘ಶುದ್ಧೀಕರಣ’ ಮಾಡಿದ್ದವು.
ಇದನ್ನೂ ಓದಿ: ‘ನನ್ನ ಭಾಷಣದ ಬಳಿಕ ವೇದಿಕೆ ಶುದ್ಧೀಕರಿಸಿದ್ದೇಕೆ’: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಮಾತನಾಡಿದ್ದಕ್ಕಾಗಿ ಶುದ್ಧೀಕರಣ ಮಾಡಲಾಗಿದೆ ಎಂದು ಆ ಸಂಘಟನೆ ಸಮರ್ಥಿಸಿಕೊಂಡಿದ್ದರೂ, ಕಾಂಗ್ರೆಸ್ ಇದನ್ನು ದಲಿತರ ವಿರುದ್ಧದ “ಅಸ್ಪೃಶ್ಯತೆ ಆಚರಣೆ” ಮತ್ತು ಮನುಸ್ಮೃತಿ ಮಾನಸಿಕತೆ ಎಂದು ತೀವ್ರವಾಗಿ ಖಂಡಿಸಿದೆ.
ಕಾಂಗ್ರೆಸ್ ನಾಯಕರು ಈ ನಿರ್ಣಯವನ್ನು ಬೆಂಬಲಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸದನದ ನಾಯಕ ಯತೀಂದ್ರ ಸಿದ್ದರಾಮಯ್ಯ ಅವರು, “ಬಿಜೆಪಿಗೆ ಅಸ್ಪೃಶ್ಯತೆ ಆಚರಿಸುವ ಹಳೇ ಚಾಳಿ ಇದೆ” ಎಂದು ಟೀಕಿಸಿದರು. ವಿರೋಧ ಪಕ್ಷ ಬಿಜೆಪಿಯ ತೀವ್ರ ಗದ್ದಲದ ನಡುವೆಯೇ, ಸಭಾಪತಿಯವರು ಈ ಖಂಡನಾ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಿದರು.
ಖುದ್ದು ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, “ದೇಶದಲ್ಲಿ ದಲಿತರಿಗೆ ಜಾಗವಿಲ್ಲವೇ? ನನ್ನನ್ನು ಅಸ್ಪೃಶ್ಯನಂತೆ ನಡೆಸಿಕೊಳ್ಳಲಾಗಿದೆ” ಎಂದು ಆಕ್ರೋಶ ಹೊರಹಾಕಿದ್ದರು. ಇನ್ನು ಈ ಘಟನೆಯನ್ನು ರಾಜ್ಯಸಭೆ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.




