ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಶನಿವಾರ ಪೋಲಿಯೋ ಲಸಿಕೆ ಜಾಗೃತಿ ವಾಹನ ಜಾಥಾಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ (ಆರ್‌ಬಿಎಸ್‌ಕೆ) ಉಪ ನಿರ್ದೇಶಕಿ ಡಾ.ಇಂದುಮತಿ ಪಾಟೀಲ ಅವರು ಹಸಿರು ಬಾವುಟ ತೋರಿಸಿ ಚಾಲನೆ ನೀಡಿದರು.
ಡಾ.ಇಂದುಮತಿ ಪಾಟೀಲ ಮಾತನಾಡಿ, “ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ನಾಳೆ (ಜೂ.28) ಭಾನುವಾರ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು. ಜೂನ್ 29 ರಿಂದ ಜುಲೈ 1ರವರೆಗೆ ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದೇ ಉಳಿದ ಮಕ್ಕಳಿಗೆ ಪೋಲಿಯೋ ಹನಿ ಹಾಕಲಿದ್ದಾರೆ. ಪೋಷಕರು ತಮ್ಮ 0–5 ವರ್ಷದ ಎಲ್ಲ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸುವಂತೆ ಮನವಿ ಮಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಶಿವಶಂಕರ. ಬಿ. ಮಾತನಾಡಿ, “ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಒಟ್ಟು 2,13,213 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಜಿಲ್ಲೆಯಾದ್ಯಂತ 996 ಬೂತ್‌ಗಳನ್ನು ಸ್ಥಾಪಿಸಲಾಗಿದ್ದು, 2,154 ಲಸಿಕೆದಾರರು ಹಾಗೂ 216 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಅಲ್ಲದೆ 11 ಮೊಬೈಲ್ ತಂಡಗಳು ಮತ್ತು 70 ಟ್ರಾನ್ಸಿಟ್ ಪಾಯಿಂಟ್‌ಗಳ ಮೂಲಕ ಶೇ.100ರಷ್ಟು ಲಸಿಕಾಕರಣ ಗುರಿ ಸಾಧಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿ : ಭಾಲ್ಕಿ | ಅರ್ಹ ಮತದಾರರ ಹೆಸರು ಡಿಲೀಟ್ ಆಗದಂತೆ ನೋಡಿಕೊಳ್ಳಿ : ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜಶೇಖರ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಅನೀಲ ಚಿಂತಾಮಣಿ, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕಿರಣ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಸಂಗಾರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಾವಿತ್ರಿಬಾಯಿ ಹಾಗೂ ಚಂದ್ರಶೇಖರ ಇಜಾರೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಬಿರಾದರ, ಡಿ.ಪಿ.ಸಿ. ಹಾಗೂ ಕ್ಲಸ್ಟರ್ ಪ್ರಿವೆನ್ಷನ್ ಅಧಿಕಾರಿ ಶಿವಶಂಕರ ಬೆಮಳಗಿ, ಲಸಿಕಾ ಮೇಲ್ವಿಚಾರಕ ಲೋಕೇಶ ಸಲಗರ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.




