ನಡೆ–ನುಡಿಗಳಲ್ಲಿ ಒಂದಾದ ಭಕ್ತಿ ಮತ್ತು ಪ್ರಾಮಾಣಿಕತೆಯಿಂದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದ ಬಸವಾದಿ ಶರಣರ ತತ್ವಗಳು ಇಂದಿನ ಯುವ ಪೀಳಿಗೆಯ ಬದುಕಿಗೆ ಪ್ರೇರಣೆ ಮತ್ತು ಮಾರ್ಗದರ್ಶನವಾಗಿವೆ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಬಸವಪ್ರಭು ಸ್ವಾಮಿಜಿ ಹೇಳಿದರು.
ಬಸವಕಲ್ಯಾಣದ ಹೊರವಲಯದ ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ಹಮ್ಮಿಕೊಂಡ ಶರಣೆ ದಾನಮ್ಮದೇವಿ ಉತ್ಸವ ಹಾಗೂ 4ನೇ ಶರಣ ಸಮಾಗಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ನಡೆದ ಶರಣ ಗೋಷ್ಠಿ–ಯುವ ಶರಣ ಜ್ಞಾನ ಸಂಗಮ ಗೋಷ್ಠಿಯ ನೇತೃತ್ವ ವಹಿಸಿ ಮಾತನಾಡಿದರು.
“ಇಂದಿನ ಯುವಕರು ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಒದ್ದಾಡುತ್ತಿರುವ ಸಂದರ್ಭದಲ್ಲಿ ಶರಣರ ಸರಳ ಮತ್ತು ನಿಸ್ವಾರ್ಥ ಜೀವನ ಮಾದರಿಯಾಗಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆ, ಸ್ತ್ರೀ ಸಬಲೀಕರಣ, ಭಕ್ತಿ ಮಾರ್ಗ, ದಾಸೋಹ ಮತ್ತು ಕಾಯಕ ತತ್ವಗಳನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ಅವರ ತತ್ವಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.
ಸಂಚಾರಿ ಜಂಗಮ ಬಸವದೇವರು ಮಾತನಾಡಿ, “ಯುವ ಜನತೆ ಬಸವಣ್ಣನವರ ಸಮಕಾಲೀನ ಶರಣರ ವಚನಗಳನ್ನು ಅಧ್ಯಯನ ಮಾಡಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಪ್ರಭು ಸ್ವಾಮೀಜಿ ಅವರು ಯುವಕರಿಗೆ ಬಸವ ತತ್ವಗಳನ್ನು ಪರಿಚಯಿಸಲು ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯ” ಎಂದರು.

ಕಾರ್ಯಕ್ರಮದಲ್ಲಿ ʼಕಾಯಕ ತತ್ವದಲ್ಲಿ ಯುವಕರ ಪಾತ್ರʼ ವಿಷಯದ ಕುರಿತು ಸಿದ್ರಾಮ ಶೆಟಗಾರ ʼಹೆಣ್ಣು ದೇಶದ ಕಣ್ಣುʼ ವಿಷಯದ ಕುರಿತು ಸಿದ್ಧಪ್ಪ ಮುಗನೂರು ಹಾಗೂ ʼಬಸವ ತತ್ವದಲ್ಲಿ ಯುವಕರ ಪಾತ್ರʼ ಕುರಿತು ಸಿದ್ಧವೀರ ಸಂಗಮ ಅವರು ಅನುಭವ ಹಂಚಿಕೊಂಡರು.
ಪ್ರೋ ನಾಗಪ್ಪ ಮುಗನೂರು ಆಶಯ ನುಡಿಯನ್ನು ಹೇಳಿದರು. ಪ್ರಕಾಶ ಗಂದಿಗುಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶರಣ ಸಂಗಮೇಶ ಜವಾದಿ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಸಮಾನತೆ ಸಿದ್ಧಾಂತದ ಪ್ರತಿಪಾದಕ ಬಾಬು ಜಗಜೀವನ್ ರಾಮ್ : ಸಚಿವ ರಹೀಂ ಖಾನ್
ಕಾರ್ಯಕ್ರಮದಲ್ಲಿ ಪ್ರವೀಣ ಎಕಲಾರೆ ಅವರಿಂದ ವಚನ ಗಾಯನ ಹಾಗೂ ತೊಗಲೂರಿನ ಕೋಲಾಟ ಪ್ರದರ್ಶನ ಗಮನ ಸೆಳೆಯಿತು. ಮಹಾಮನೆ ಕಾರ್ಯಾಧ್ಯಕ್ಷ ದಿಲೀಪ ಶಿಂಧೆ, ಗೌರವಾಧ್ಯಕ್ಷ ಲಕ್ಷ್ಮಣರಾವ್ ಹಂದಿಕೇರಿ, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟಿ ಪಾಟೀಲ ಸೇರಿದಂತೆ ಅನೇಕ ಬಸವಾನುಯಿಗಳು ಉಪಸ್ಥಿತರಿದ್ದರು.




