ನ್ಯಾಯಾಂಗ ಸದೃಢ ರಾಷ್ಟ್ರ ನಿರ್ಮಾಣದ ಪ್ರಮುಖ ಶಕ್ತಿಯಾಗಿದೆ ಎಂದು ಕರ್ನಾಟಕ ಹಾಗೂ ಒಡಿಶಾ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಸಂಚಾಲಿತ ನಗರದ ಆರ್.ವಿ. ಬಿಡಪ್ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ ವಿವಾದ ಬಗೆಹರಿಸುವುದಷ್ಟೇ ಅಲ್ಲ; ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆಯಾಗಿದೆ. ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆ ಇಲ್ಲದೆ ಬಲಿಷ್ಠ ಪ್ರಜಾಪ್ರಭುತ್ವ ಹಾಗೂ ಸುಸ್ಥಿರ ರಾಷ್ಟ್ರ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಜಾಪ್ರಭುತ್ವದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾದ ನ್ಯಾಯಾಂಗವು ವಿವಾದಗಳನ್ನು ಕಾನೂನು ಬದ್ಧವಾಗಿ ಪರಿಹರಿಸಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸೌಹಾರ್ದ ನೆಲೆಗೊಳಿಸುತ್ತದೆ. ಶಾಸಕಾಂಗ, ಕಾರ್ಯಾಂಗದ ಅಧಿಕಾರಿಗಳ ಮೇಲೆ ಸಂವಿಧಾನಾತ್ಮಕ ನಿಯಂತ್ರಣ ಇಟ್ಟು ಅಧಿಕಾರ ದುರುಪಯೋಗ ತಡೆಯುತ್ತದೆ. ಸಂವಿಧಾನದ ಆಶಯಗಳ ರಕ್ಷಣೆ, ಕಾನೂನು ಬದ್ಧ ಆಡಳಿತ ಸ್ಥಾಪನೆ ಹಾಗೂ ನಾಗರಿಕರ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತದೆ. ಕಾನೂನಿನ ಮುಂದೆ ಎಲ್ಲರೂ ಸರಿ ಸಮಾನರು ಎನ್ನುವ ತತ್ವ ಜಾರಿಗೊಳಿಸುತ್ತದೆ ಎಂದು ಹೇಳಿದರು.
ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಬಸವರಾಜ ಜಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಆರ್.ವಿ. ಬಿಡಪ್ ಕಾನೂನು ಕಾಲೇಜು ಹಾಗೂ ಕಲಬುರಗಿಯ ಮರತೂರಿನ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ : ಬೀದರ್ | ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಖಂಡಿನೀಯ : ಶಂಕರ ದೊಡ್ಡಿ
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ, ನಿರ್ದೇಶಕರಾದ ಚಂದ್ರಕಾಂತ ಶೆಟಕಾರ್, ಶಿವಶಂಕರ ಶೆಟಕಾರ್, ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ, ಹೈಕೋರ್ಟ್ ಹಿರಿಯ ವಕೀಲ ಅಮಿತಕುಮಾರ ದೇಶಪಾಂಡೆ, ಕಲಬುರಗಿಯ ವಿಜ್ಞಾನೇಶ್ವರ ಪ್ರತಿಷ್ಠಾನ ಟ್ರಸ್ಟ್ ನ್ಯಾಸಧಾರಿ ಮಹಾದೇವಯ್ಯ ಕರದಳ್ಳಿ, ಆರ್.ವಿ. ಬಿಡಪ್ ಕಾನೂನು ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ವೀರಭದ್ರಪ್ಪ ಭುಯ್ಯಾ, ಶ್ರೀನಾಥ ನಾಗೂರೆ, ವಿಕಾಸ್ ಗೋಯಲ್ ಮತ್ತಿತರರು ಇದ್ದರು. ಕಾಲೇಜು ಪ್ರಾಚಾರ್ಯ ಮುನಿಯಪ್ಪ ಟಿ. ಸ್ವಾಗತಿಸಿದರು. ಸಾಹಿಲ್ ಅಬ್ಬಾಸ್ ನಿರೂಪಿಸಿದರು. ಸಂತೋಷ್ ವಂದಿಸಿದರು.







