ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷ ಸಾಧಿಸಲು ಅಥವಾ ಪ್ರತಿಪಕ್ಷದ ನಾಯಕರನ್ನು ಗುರಿಯಾಗಿಸಲು ಬಳಸಬಾರದು ಎಂದು ಅಹಿಂದ ಮುಖಂಡ ಶಂಕರರಾವ ದೊಡ್ಡಿ ಒತ್ತಾಯಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೈಗೊಂಡಿರುವ ದಾಳಿ ಹಾಗೂ ತನಿಖಾ ಕ್ರಮಗಳನ್ನು ಬೀದರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“ಜನಪ್ರತಿನಿಧಿಗಳ ವಿರುದ್ಧ ಯಾವುದೇ ತನಿಖೆ ನಡೆದರೂ ಅದು ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಕಾನೂನುಬದ್ಧವಾಗಿ ನಡೆಯಬೇಕು. ಆರೋಪಗಳಿದ್ದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನು ಪ್ರಕಾರ ತನಿಖೆ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ಒತ್ತಡ ಹೇರುವ ಅಥವಾ ರಾಜಕೀಯ ನಾಯಕರ ಧ್ವನಿಯನ್ನು ಅಡಗಿಸುವ ಪ್ರಯತ್ನ ಸಲ್ಲದು” ಎಂದು ಹೇಳಿದರು.
“ಇಡಿ ಮತ್ತು ಸಿಬಿಐ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳ ಸ್ವಾಯತ್ತತೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷವನ್ನು ಆಯ್ದ ರೀತಿಯಲ್ಲಿ ಗುರಿಯಾಗಿಸುವ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತವೆ” ಎಂದು ಅಭಿಪ್ರಾಯಪಟ್ಟರು.
ಹಿರಿಯ ಮುಖಂಡ ಪಂಡಿತ ಚಿದ್ರಿ ಮಾತನಾಡಿ, “ರಾಜ್ಯದಲ್ಲಿ ಅಹಿಂದ ನಾಯಕರ ಏಳಿಗೆಯನ್ನು ಸಹಿಸದೆ ಸತೀಶ್ ಜಾರಕಿಹೊಳಿ ಅವರ ಮೇಲೆ ಇಡಿ ದಾಳಿ ನಡೆಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ತನಿಖಾ ಸಂಸ್ಥೆಗಳ ಕ್ರಮಗಳ ಹಿಂದೆ ರಾಜಕೀಯ ಉದ್ದೇಶವಿದೆಯೇ ಎಂಬುದರ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು” ಎಂದು ಆಗ್ರಹಿಸಿದರು.
“ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಗುರಿಯಾಗಿಸುವ ಯಾವುದೇ ಕ್ರಮವನ್ನು ಖಂಡಿಸುತ್ತೇವೆ. ಪ್ರಜಾಪ್ರಭುತ್ವ, ಸಂವಿಧಾನ, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಗೌರವ ನೀಡುವ ವಾತಾವರಣ ನಿರ್ಮಾಣವಾಗಬೇಕು. ತನಿಖಾ ಸಂಸ್ಥೆಗಳ ದುರ್ಬಳಕೆಗೆ ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಸಮಾನತೆ ಸಮಾಜಕ್ಕಾಗಿ ಹೋರಾಡಿದ ಅಂಬೇಡ್ಕರ್ : ರಾಜಕುಮಾರ ಹೆಬ್ಬಾಳೆ
ಪತ್ರಿಕಾಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆ ಮುಖಂಡ ಮಹೇಶ ಗೋರನಾಳಕರ್, ಇಡಗಾರ ಸಮಾಜದ ಮುಖಂಡ ರಾಜಕುಮಾರ ಎನ್. ಪಾಟೀಲ್ ಹಾಗೂ ಲಿಂಗಾಯತ ಪ್ರಗತಿಪರ ಚಿಂತಕ ಜಗದೀಶ್ವರ ಬಿರಾದರ ಮತ್ತಿತರರಿದ್ದರು.





