ಜಿಲ್ಲೆಯ ರೈತರು ಹಾಗೂ ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್‌ಕೆ) ಹರಾಜು/ಮಾರಾಟ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಅಗತ್ಯವಿದ್ದಲ್ಲಿ ಕಾರ್ಖಾನೆಯನ್ನು ಸೂಕ್ತ ಸಂಸ್ಥೆ ಅಥವಾ ಅರ್ಹ ವ್ಯಕ್ತಿಗೆ ಕಾನೂನುಬದ್ಧ ಷರತ್ತುಗಳೊಂದಿಗೆ ಲೀಸ್‌ಗೆ ನೀಡಿ ಪುನಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಬೀದರ್ ಉತ್ತರ ತಾಲೂಕು ಅಧ್ಯಕ್ಷ ರಾಜಕುಮಾರ ಸ್ವಾಮಿ ಹಾಗೂ ಉಮೇಶ ಹಳ್ಳಿಖೇಡ ಅವರು ಬೀದರ್ ಜಿಲ್ಲಾಧಿಕಾರಿಗಳ ಹೆಸರಿಗೆ ಬರೆದ ಮನವಿಯನ್ನು ಅಪರ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು.
“ಬಿಎಸ್ಎಸ್‌ಕೆಯು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಮುಖ ಆಧಾರವಾಗಿದೆ. ಕಾರ್ಖಾನೆ ಹರಾಜು ಅಥವಾ ಮಾರಾಟದಿಂದ ಕಬ್ಬು ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗುವುದರ ಜೊತೆಗೆ ಕಬ್ಬು ಸಾಗಣೆ, ಕಾರ್ಮಿಕರ ಉದ್ಯೋಗ ಹಾಗೂ ಜಿಲ್ಲೆಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ತಿಳಿಸಿದ್ದಾರೆ.
“ಕಾರ್ಖಾನೆ ಹರಾಜು ಅಥವಾ ಮಾರಾಟದ ಕುರಿತು ರೈತರು, ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರ ಅಭಿಪ್ರಾಯವನ್ನು ಪಡೆಯದೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಬಾರದು. ಕಾರ್ಖಾನೆ ಪುನಶ್ಚೇತನಗೊಳಿಸಿ ಕಾರ್ಯಾರಂಭ ಮಾಡಲು ಸಾಧ್ಯವಾಗದಿದ್ದಲ್ಲಿ, ಮಾರಾಟ ಮಾಡುವ ಬದಲು ಸೂಕ್ತ ಷರತ್ತುಗಳೊಂದಿಗೆ ಲೀಸ್‌ಗೆ ನೀಡಬೇಕು. ಇದರಿಂದ ಕಾರ್ಖಾನೆ ಉಳಿಯುವುದರ ಜೊತೆಗೆ ರೈತರಿಗೆ ಕಬ್ಬು ಮಾರಾಟಕ್ಕೆ ಮಾರುಕಟ್ಟೆ ಹಾಗೂ ಕಾರ್ಮಿಕರಿಗೆ ಉದ್ಯೋಗಾವಕಾಶ ಮುಂದುವರಿಯಲಿದೆ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹರಾಜು ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಕಾರ್ಖಾನೆಯನ್ನು ಮಾರಾಟ ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕು. ಅಲ್ಲದೆ ರೈತ ಸಂಘಟನೆಗಳು, ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರ ಪ್ರತಿನಿಧಿಗಳ ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆದು, ಜಿಲ್ಲೆಯ ರೈತರ ಹಿತಾಸಕ್ತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಇದನ್ನೂ ಓದಿ : ಬೀದರ್ | ಬರ ಘೋಷಣೆ, ಸಾಲಮನ್ನಾ, ಎಕರೆಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
ಹರಾಜು/ಮಾರಾಟ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದೆ ಮುಂದುವರಿಸಿದರೆ ರೈತರ ಹಿತಾಸಕ್ತಿಗಾಗಿ ಶಾಂತಿಯುತ ಪ್ರತಿಭಟನೆ, ಧರಣಿ ಹಾಗೂ ಉಪವಾಸ ಸತ್ಯಾಗ್ರಹ ಸೇರಿದಂತೆ ಕಾನೂನುಬದ್ಧ ಹೋರಾಟ ನಡೆಸಲಾಗುವುದು ಎಂದು ರಾಜಕುಮಾರ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.




