ಚಾಮರಾಜನಗರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಹಾಗೂ ಆರೋಗ್ಯ ಸೇವೆಗಳಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜಾನುವಾರುಗಳ ಸಂಖ್ಯೆ ಹೆಚ್ಚಿರುವ ಹಾಗೂ ಮೇವು-ನೀರಿನ ಅಭಾವವಿರುವ ಪ್ರದೇಶಗಳನ್ನು ಗುರುತಿಸಿ, ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ತೆರೆಯಲು ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅಧಿಕಾರಿಗಳಿಗೆ ಸೂಚಿಸಿದರು.
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತವಾಗಿದ್ದು, ಬರ ಪರಿಸ್ಥಿತಿಯಲ್ಲಿ ರೈತರು ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವ ಭಾಗದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದೆ, ಎಲ್ಲಿ ಮೇವು ಹಾಗೂ ಕುಡಿಯುವ ನೀರಿನ ಅಭಾವವಿದೆ ಎಂಬುದನ್ನು ಸಮಗ್ರವಾಗಿ ಗುರುತಿಸಿ, ಗೋಶಾಲೆ ತೆರೆಯಬೇಕಾದ ಸ್ಥಳಗಳ ಕುರಿತು ತಕ್ಷಣ ವರದಿ ಹಾಗೂ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಬರ ಹಾಗೂ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ವಿಪತ್ತು ಪ್ರತಿಕ್ರಿಯೆ ನಿಧಿಯ ಮಾರ್ಗಸೂಚಿ ಮತ್ತು ಮಾನದಂಡಗಳ ಆಧಾರದಲ್ಲಿ ಪರಿಹಾರ ಹಾಗೂ ನೆರವು ಕಾರ್ಯಗಳನ್ನು ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು, ನೀರು ಹಾಗೂ ಆರೋಗ್ಯಪಾಲನಾ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದರು.
ಕುಡಿಯುವ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ನೀರಿನ ಲಭ್ಯತೆ ಇರುವ ಕಡೆಗಳಲ್ಲಿ ಕೊಳವೆಬಾವಿ ದುರಸ್ತಿ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ನೀರು ಪೂರೈಸಬೇಕು ಎಂದು ಸೂಚಿಸಿದರು.
ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿರುವ ಪ್ರದೇಶಗಳಲ್ಲಿ ಜನರ ಅಗತ್ಯಕ್ಕೆ ಅನುಗುಣವಾಗಿ ಸಮರ್ಪಕ ಪ್ರಮಾಣದಲ್ಲಿ ನೀರು ಸರಬರಾಜು ಮಾಡಬೇಕು. ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಎಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಕುಡಿಯುವ ನೀರಿನ ಸಮಸ್ಯೆ ಆಲಿಕೆ ಮತ್ತು ಪರಿಹಾರಕ್ಕಾಗಿ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಕನಿಷ್ಠ ಮೂರು ದಿನಗಳಿಗೊಮ್ಮೆ ತಮಗೆ ನಿಯೋಜಿಸಿರುವ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಬೇಕು. ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಹಾಗೂ ಪಿಡಿಒಗಳನ್ನು ಸಂಪರ್ಕಿಸಿ ತಕ್ಷಣ ಪರಿಹಾರ ಕಲ್ಪಿಸಬೇಕು. ಬರ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೂರೈಕೆಯ ಮೇಲೆ ನಿರಂತರ ನಿಗಾ ಇರಬೇಕು ಎಂದು ತಾಕೀತು ಮಾಡಿದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಬೇಕು. ದುರಸ್ತಿ ಅಗತ್ಯವಿರುವ ಘಟಕಗಳನ್ನು ಕೂಡಲೇ ದುರಸ್ತಿಪಡಿಸಿ ಸಾರ್ವಜನಿಕರ ಬಳಕೆಗೆ ಒದಗಿಸಬೇಕು. ಬರ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯ ಬರ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸಂಕಷ್ಟದಲ್ಲಿರುವ ಜನರು ಹಾಗೂ ರೈತರ ನೆರವಿಗೆ ಅಧಿಕಾರಿಗಳು ನಿಲ್ಲಬೇಕು ಎಂದು ಸೂಚಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ಸ್ವಂತ ಸೂರಿಗಾಗಿ ಕಾಯುತ್ತಿರುವ ಅಂಗನವಾಡಿಗಳು: ಇನ್ನೆಷ್ಟು ದಿನ ಬಾಡಿಗೆ ಕಟ್ಟಡದಲ್ಲಿರಬೇಕು?
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಇಮ್ಯಾನುವಲ್ ಸಂತೋಷ್, ಕೃಷಿ ಇಲಾಖೆ ಉಪನಿರ್ದೇಶಕ ಭಾಸ್ಕರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗಿರೀಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ಜಿಲ್ಲೆಯ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಇದ್ದರು.




