ಜೆಡಿಎಸ್ ಪಕ್ಷವು ಎಂದಿಗೂ ರೈತರ ಹಿತರಕ್ಷಣೆಗೆ ಬದ್ಧವಾಗಿದ್ದು,ಆಡಳಿತಾರೂಢ ಸರ್ಕಾರವು ರಿಯಲ್ ಎಸ್ಟೇಟ್ ದಂಧೆಯನ್ನು ಬಿಟ್ಟು ರೈತರ ಮತ್ತು ಬಡವರ ನೇರವಿಗೆ ಬರಬೇಕು ಎಂದು ಜೆ ಡಿ ಎಸ್ ಕೋರ್ ಕಮಿಟಿ ರಾಜ್ಯಾಧ್ಯಕ್ಷರಾದ ಜೆಕೆ ಕೃಷ್ಣಾರೆಡ್ಡಿ ಹೇಳಿದರು.
ಇಂದು ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಕ್ರಾಸ್ ಸಮೀಪವಿರುವ ವಿ ಪಿ ಪ್ಯಾಲೇಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಮಟ್ಟದ ಕೋರ್ ಕಮಿಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಹಿತರಕ್ಷಣೆಗಾಗಿ ಅನೇಕ ಐತಿಹಾಸಿಕ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ.
2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಬಿಡದಿ ಪ್ರದೇಶದಲ್ಲಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸುವ ಯೋಜನೆ ಇತ್ತು.ಆದರೆ ಆ ಸಂದರ್ಭದಲ್ಲಿ ರೈತರು ಮತ್ತು ಸಂಘಟನೆಗಳು ಜಮೀನು ನೀಡಲು ವಿರೋಧ ವ್ಯಕ್ತಪಡಿಸಿ,ಮನವಿ ಮಾಡಿಕೊಂಡಿದ್ದರು. 2007ರಲ್ಲಿ ವಿಧಾನಸಭೆಯ ಕಲಾಪದಲ್ಲಿ ಸ್ವತಃ ಕುಮಾರಸ್ವಾಮಿ ಅವರೇ ಸ್ಪಷ್ಟವಾಗಿ ಘೋಷಿಸಿ,ರೈತರ ತೀವ್ರ ವಿರೋಧ ಹಾಗೂ ಮನವಿಗೆ ಗೌರವ ನೀಡಿ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಕೈಬಿಟ್ಟಿದ್ದರು.ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ರೈತರ ಪರವಾಗಿ ಗಟ್ಟಿಯಾಗಿ ನಿಂತಿದ್ದರು ಎಂದು ಹೇಳಿದ ಅವರು ಮುಂಬರುವ ಚುನಾವಣೆಗಳಲ್ಲಿ ಮತ್ತು ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಇನ್ನಷ್ಟು ಸಂಘಟಿಸಿ ಬಲಪಡಿಸುವ ಕುರಿತು ಕಾರ್ಯಕರ್ತರು ಹಾಗೂ ಮುಖಂಡರಿಗೆ ಸುದೀರ್ಘ ಮಾರ್ಗದರ್ಶನ ನೀಡಿದರು.ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಮನೆ ಮನೆಗೆ ತಲುಪಿಸಿ,ಪಕ್ಷದ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಚುರುಕುಗೊಳಿಸಬೇಕು ಎಂದು ಜೆ.ಕೆ. ಕೃಷ್ಣಾರೆಡ್ಡಿ ಅವರು ಕರೆ ನೀಡಿದರು.
ಪಕ್ಷದ ಬೆನ್ನೆಲುಬಾಗಿ ನಿಂತಿರುವ ನಿಷ್ಠಾವಂತ ಕಾರ್ಯಕರ್ತರ ಶ್ರಮವನ್ನು ಸ್ಮರಿಸಿದ ಅವರು,ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಹೇಳಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಮೇಲೂರು ರವಿಕುಮಾರ್ ಅವರು ಭಾಗವಹಿಸಿ ಪಕ್ಷದ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳ ಕುರಿತು ಮಹತ್ವದ ಮಾತನಾಡಿದರು.ಗ್ರಾಮ ಪಂಚಾಯಿತಿ,ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಶೀಘ್ರದಲ್ಲೇ ಬರಲಿದ್ದು,ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಒಗ್ಗಟ್ಟಿನಿಂದ ಶ್ರಮಿಸಬೇಕು. ಗ್ರಾಮೀಣ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಶಾಸಕರು ಮನವಿ ಮಾಡಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಪ್ರಭಾವದಿಂದಾಗಿ ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಿದ್ದಾರೆ.ಇದೇ ಮೈತ್ರಿ ಮತ್ತು ಒಗ್ಗಟ್ಟಿನಿಂದ ಮುಂಬರುವ ಚುನಾವಣೆಗಳನ್ನೂ ಎದುರಿಸಲಾಗುವುದು ಎಂದರು.
ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಹಾಲು ಉತ್ಪಾದಕರು ಹಾಗೂ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಶಾಸಕರು ಆರೋಪಿಸಿದರು.ಹಾಲಿನ ಪ್ರೋತ್ಸಾಹಧನ ಹಾಗೂ ರೈತರ ಸಮಸ್ಯೆಗಳ ಪರವಾಗಿ ಜೆಡಿಎಸ್ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ತಿಳಿಸಿದರು.
ರಾಜ್ಯದ ಹಾಲು ಉತ್ಪಾದಕರ ನಿಯೋಗ ಹಾಗೂ ಕಾರ್ಯಕರ್ತರೊಂದಿಗೆ ನವೆಂಬರ್ 22, 2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಸದಸ್ಯರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಮೇಲೂರು ರವಿಕುಮಾರ್ ಮನವಿ ಮಾಡಿದರು.
ಇದನ್ನು ಓದಿದ್ದೀರಾ..?ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ
ಕಾರ್ಯಕ್ರಮದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು,ಮಾಜಿ ಸಚಿವರಾದ ಎಚ್ ಕೆ ಕುಮಾರಸ್ವಾಮಿ,ಮಾಜಿ ಸಂಸದ ಸಿ ಎಸ್ ಪುಟ್ಟರಾಜು, ಶಾಸಕ ಎ ಮಂಜು,ಎಚ್ ಕೆ ಕುಮಾರ ಸ್ವಾಮಿ,ಕೆ ಎ ತಿಪ್ಪೇಸ್ವಾಮಿ,ಸಿ ಎಸ್ ಪುಟ್ಟರಾಜು,ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ,ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ,ಕೆ ಬಿ ಪ್ರಸನ್ನ ಕುಮಾರ್,ಆನಂದರೆಡ್ಡಿ,ಸೇರಿದಂತೆ ಜಿಲ್ಲಾ ಮಟ್ಟದ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.




