ಎಸ್.ಎಸ್ ಹಿರೇಮಠ: ತಲ್ಲಣಗಳಲ್ಲೇ ನಿಧನರಾದ ಮೇಷ್ಟ್ರು

Date:

ಸೋಮವಾರ (ಜೂನ್‌ 1),‌ ಹೊಸಪೇಟೆಯಲ್ಲಿ ಪ್ರಖರ ಚಿಂತಕ ಎಸ್.ಎಸ್.  ಹಿರೇಮಠ ಅವರ ಸಂಶೋಧನೆ ಚಿಂತನೆ ವಿಮರ್ಶೆಯ ಸಂಪುಟಗಳ ಬಿಡುಗಡೆ. ಕನ್ನಡ ಕಂಡ ಅಪರೂಪದ ಆದರೆ ಹೆಚ್ಚು ಚರ್ಚೆಗೊಳಗಾಗದ ಚಿಂತಕ ಅವರು. ಈ ಸಂಪುಟಗಳು ಅವರೆಷ್ಟು ದೊಡ್ಡ ವಿದ್ವಾಂಸರೆಂಬುದಕ್ಕೆ ಸಾಕ್ಚಿಯಾಗಿವೆ. ನಾನು ಅವರಿಂದ ಪ್ರಭಾವಕ್ಕೆ ಒಳಗಾಗಿದ್ದೆ. ನನ್ನ 'ಧರ್ಮ ಪರೀಕ್ಷೆ' ಸಂಕಲನವನ್ನು ಅವರಿಗೆ ಅರ್ಪಿಸಿದ್ದೆ.  ಅವರು ನಿಧನರಾದಾಗ ಬರೆದ ಬರೆಹ…

ಕನ್ನಡದ ಸಂಸ್ಕೃತಿ ಚಿಂತಕರೂ ಹಿರಿಯ ವಿದ್ವಾಂಸರೂ ಜನಪ್ರಿಯ ಪ್ರಾಧ್ಯಾಪಕರೂ ಆಗಿದ್ದ ಎಸ್.ಎಸ್ ಹಿರೇಮಠ ಅವರ ಮರಣ (೧೯೫೦-೨೦೦೯) ನಿರೀಕ್ಷಿತವಾಗಿತ್ತು. ಎರಡು ವರುಷಗಳಿಂದ ಕ್ಯಾನ್ಸರ್‌ನಿಂದ ನವೆಯುತ್ತಿದ್ದರು. ಕಾಲೇಜು ಅಧ್ಯಾಪನದಿಂದ ನಿವೃತ್ತರಾದ ಬಳಿಕ, ಪ್ರಾಣವನ್ನು ಹುಟ್ಟೂರಿನಲ್ಲೇ ಬಿಡಲು ನಿರ್ಧರಿಸಿದವರಂತೆ ಬೆಳಗಾವಿಯ ಸಾಣಿಕೊಪ್ಪಕ್ಕೆ ಹೋಗಿಬಿಟ್ಟರು. ಹೋದ ಕೆಲವು ದಿವಸಗಳ ಬಳಿಕ ಮರಣವಾರ್ತೆ ಬಂದಿತು. ರೋಗಗ್ರಸ್ತ ದೇಹ ಕೊಡುತ್ತಿದ್ದ ಯಾತನೆಯಿಂದಲೂ ಹಣಕಾಸಿನ ಕಷ್ಟದಿಂದಲೂ ಅನಿರೀಕ್ಷಿತವಾಗಿ ಕಣ್ಮರೆಯಾದ ಮಗನ ಅಗಲಿಕೆಯಿಂದಲೂ ಒದ್ದಾಡುತ್ತ, ‘ಉಸಿರಿಗೆ ಒಮ್ಮೆ ಜನನಾ ಮರಣಾ’ ಮಾಡುತ್ತಿದ್ದ ಅವರಿಗೆ, ಸಾವು ವಿಕಟ ಪರಿಸ್ಥಿತಿಯಿಂದ ವಿಮೋಚನೆಯೂ ಆಗಿತ್ತು.

- Advertisement -

ನರಳಿಕೆ ಪರಿತಾಪ ನೋವುಗಳಿಂದ ಸೊರಗಿ ಅಜ್ಞಾತರಂತೆ ಬದುಕನ್ನು ಕೊನೆಗಾಣಿಸಿದ ಹಿರೇಮಠರ ಜೀವನ ಮಾತ್ರ, ಓದು ಬರೆಹ ಹೋರಾಟ ತಿರುಗಾಟ ಚರ್ಚೆ ಹಾಗೂ ತಾತ್ವಿಕ ಜಗಳಗಳಿಂದ ಕೂಡಿ ಉಜ್ವಲವಾಗಿತ್ತು. ಅತ್ಯಂತ ಸಾರ್ವಜನಿಕವಾಗಿತ್ತು. ಬಂಡಾಯ ಸಾಹಿತ್ಯ ಸಂಘಟನೆಯ ಕಾರ್ಯಕ್ರಮಗಳಲ್ಲಿ ನಾನವರನ್ನು ಕಂಡಿದ್ದೆ. ಸ್ನೇಹ ಏರ್ಪಟ್ಟಿರಲಿಲ್ಲ. ಪರಿಚಯವಾಗಿದ್ದು, ಸ್ನೇಹವಾಗಿದ್ದು ಹಂಪಿಗೆ ಹೋದಾಗಲೇ. ಅವರ ಬಗ್ಗೆ ದಂತಕತೆಗಳೇ ಹಬ್ಬಿದ್ದವು. ಸರ್ಕಾರಿ ಕಾರ್ಯಕ್ರಮಗಳಿಗೆ ಹೋದಾಗ, ಪ್ರಥಮ ದರ್ಜೆ ರೈಲ್ವೆ ಪ್ರಯಾಣದ ಹಣವನ್ನು ಸ್ವೀಕರಿಸಲು ನಿರಾಕರಿಸಿ ಬಸ್‌ಛಾರ್ಜನಷ್ಟೇ ಸ್ವೀಕರಿಸುತ್ತಾರೆ; ವಿದ್ಯಾರ್ಥಿಗಳನ್ನು ಕೂಡಿಸಿ ಅನ್ಯಾಯಗಳ ವಿರುದ್ಧ ಚಳುವಳಿ ಮಾಡಿಸುತ್ತಾರೆ; ಎಡಪಂಥೀಯ ಚಳುವಳಿಗೆ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ. ವಿದ್ಯಾರ್ಥಿಗಳ ಫೀಸನ್ನು ತುಂಬಿ ಓದಿಸುವ  ಅವರ ಮನೆ ವಿದ್ಯಾರ್ಥಿ ನಿಲಯದಂತಿದೆ. ಶಿಷ್ಯರ ಕವನಗಳನ್ನು ಸ್ವಂತ ಖರ್ಚಿನಲ್ಲಿ ಪ್ರಕಟಿಸುತ್ತಾರೆ. ಅವರನ್ನು ಜತೆಗಿಟ್ಟುಕೊಂಡು ಕ್ಷೇತ್ರಕಾರ್ಯಕ್ಕೆ ತಿರುಗುತ್ತಾರೆ. ತಮ್ಮ ಪುಸ್ತಕಗಳಿಗೆ ಅವರಿಂದ ಮುನ್ನುಡಿ ಬರೆಯಿಸುತ್ತಾರೆ- ಇತ್ಯಾದಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಅಧ್ಯಾಪಕರೊಬ್ಬರು ತಮ್ಮ ಅಧ್ಯಾಪನ ಕರ್ತವ್ಯದ ಜತೆಗೆ ಸಮಾಜ ಕಟ್ಟಲು ಹೊಸತಲೆಮಾರಿನ ಮನಸ್ಸುಗಳನ್ನು ಹೇಗೆ ಸಿದ್ಧಗೊಳಿಸಬಹುದು ಎಂಬುದಕ್ಕೆ ಅವರು ಜ್ವಲಂತ ಸಾಕ್ಷಿಯಂತಿದ್ದರು. ತಾವು ಕೆಲಸ ಮಾಡಿದ ಕಾಲೇಜುಗಳಲ್ಲಿ ಮಾರ್ಕ್ಸವಾದಿ ಚಿಂತನೆಯಿಂದ ವಿದ್ಯಾರ್ಥಿಗಳ ಲೋಕದೃಷ್ಟಿಯನ್ನು ಬದಲಿಸುತ್ತಿದ್ದ ಹಿರೇಮಠರು, ಜಿಲ್ಲೆಯಾದ್ಯಂತ ಶಿಷ್ಯರನ್ನು ಹೊಂದಿದ್ದರು. ಲೇಖಕರಾದ ಕೆ. ಫಣಿರಾಜ್, ಪರಶುರಾಮ ಕಲಾಲ್, ಪೀರಬಾಶಾ, ಎ.ಎಸ್.ಪ್ರಭಾಕರ, ನಿಂಗಪ್ಪ ಮುದೇನೂರು-ಅವರ ಗರಡಿಯಲ್ಲಿ ಪಳಗಿದವರು. 

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಪಟ್ಟಣ ಕೇಂದ್ರಗಳಲ್ಲಿ ನಡೆಸುತ್ತಿದ್ದ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಹಿರೇಮಠರು, ಅಲ್ಪಕಾಲ ಕನ್ನಡ ವಿಶ್ವವಿದ್ಯಾಲಯದಲ್ಲಿ ನನ್ನ ಸಹೋದ್ಯೋಗಿ ಆಗಿದ್ದರು. ಆಗಷ್ಟೇ ಆರಂಭವಾಗಿದ್ದ ವಿಶ್ವವಿದ್ಯಾಲಯವು, ಕರ್ನಾಟಕ ಸಂಸ್ಕೃತಿಯ ಅಧ್ಯಯನದಲ್ಲಿ ಏನೆಲ್ಲ ಮಾಡಬಹುದು ಎಂದು ಪ್ರಣಾಳಿಕೆಯನ್ನು ಅವರು ಪ್ರಕಟಿಸಿದ್ದರು.

ಸದಾ ಓದುಬರೆಹ ಚಿಂತನೆ ಮಾಡುತ್ತಿದ್ದ ಅವರಿಗೆ ಸಂಶೋಧನ ವಿಶ್ವವಿದ್ಯಾಲಯವೊಂದು ಬಂದಿದ್ದು, ‘ಅರಲುಗೊಂಡ ಗಿಡಕೆ ತೊರೆ ಬಂದು ಹೊಯ್ದಂತೆ’ ಆಗಿತ್ತು. ವಿಶ್ವವಿದ್ಯಾಲಯದ ಮೊದಲ ದಿನಗಳು. ನಮ್ಮದೇ ಕಟ್ಟಡವಿರಲಿಲ್ಲ. ಕೆಲವರು, ಹಂಪಿಯ ಪುರಾತತ್ವ ಇಲಾಖೆಯ ಮಂಟಪಗಳಲ್ಲಿ ನೆಲೆಸಿದ್ದರು; ನಾನು, ಪುರುಷೋತ್ತಮ ಬಿಳಿಮಲೆ, ಹಿರೇಮಠರು ಕಮಲಾಪುರದಲ್ಲಿ ಪಿಡಬ್ಲುಡಿ ಪ್ರವಾಸಿ ಮಂದಿರವಾಗಿ ಪರಿವರ್ತನೆಯಾಗಿದ್ದ ಹಳೆಯ ವೈಷ್ಣವಗುಡಿಯಲ್ಲಿ ಬಿಡಾರ ಹೂಡಿದ್ದೆವು. ವಿಶ್ವವಿದ್ಯಾಲಯವು ಹಿರೇಮಠರಿಗೆ ಗ್ರಾಮದೇವತೆಗಳ ಬಗ್ಗೆ ಮಾಡಲಾದ ಸಮೀಕ್ಷೆಯನ್ನು ಆಧರಿಸಿ ವಿಶ್ವಕೋಶಕ್ಕೆ ಟಿಪ್ಪಣಿಗಳನ್ನು ಸಿದ್ಧಪಡಿಸುವ ಕೆಲಸ ವಹಿಸಿತು. ಅವರು ಬಳ್ಳಾರಿ ಬಿಸಿಲ ಧಗೆಗೆ ಶರಟು ತೆಗೆದಿಟ್ಟು, ಪ್ರವಾಸಿ ಮಂದಿರದ ಕಲ್ಲುಕಂಬವೊಂದಕ್ಕೆ ಬೆನ್ನುಕೊಟ್ಟು ಬರೆಯುತ್ತಿದ್ದರು.  ಬರೆದು ಬೆರಳು ನೋವಾದಾಗ ಪೆನ್ನಿಗೆ ಕರ್ಚಿಫು ಸುತ್ತಿ ಕಂಠಪತ್ರದಂತೆ ಹಿಡಿದು ಕೆಲಸ ಮಾಡುತ್ತಿದ್ದರು. ಇದು ಪ್ರಾಚೀನ ಕವಿಗಳ ಕಾವ್ಯರಚನೆಯ ಮಿತ್‌ಗಳನ್ನು ನೆನಪಿಸುತ್ತಿತ್ತು. 

WhatsApp Image 2026 05 31 at 3.18.32 PM

ಹಿರೇಮಠರು ನಮ್ಮ ಮನೆಯ ಪಕ್ಕದಲ್ಲೆ ಬಾಡಿಗೆ ಮನೆ ಹಿಡಿದರು. ಅವರ ಗ್ರಂಥಾಲಯ ದೊಡ್ಡದಾಗಿತ್ತು. ಯಾವಾಗ ಮನೆಗೆ ಹೋದರೂ ದಪ್ಪಕಟ್ಟಿನ ಕನ್ನಡಕ ಹಾಕಿಕೊಂಡು, ಕುರ್ಚಿಯ ಕೈಗಳ ಮೇಲೆ ಅಡ್ಡಹಲಗೆ ಇಟ್ಟುಕೊಂಡು, ನಲವತ್ತು ಕ್ಯಾಂಡಲ್ ಬಲ್ಬಿನ ಮಿಣಿಮಿಣಿ ಬೆಳಕಿನಲ್ಲಿ ಓದು ಬರೆಹದಲ್ಲಿ ತೊಡಗಿರುತ್ತಿದ್ದರು. ಅವರಿಗೆ ತಾವು ಓದುವ ಪುಸ್ತಕಗಳ ಮೈತುಂಬ ಟಿಪ್ಪಣಿ ಬರೆವ ಅಭ್ಯಾಸವಿತ್ತು. ಅವರ ಪುಸ್ತಕಗಳ ಮಾರ್ಜಿನುಗಳು ಎರೇಹುಳುಗಳಂತಹ ಅಕ್ಷರಗಳಿಂದ ಭರ್ತಿ ಆಗಿರುತ್ತಿದ್ದವು. ಅವರು ವಿದ್ವತ್ತಿನಲ್ಲಿ ಶಂಬಾ ಪರಂಪರೆಯ ಉತ್ತರಾಧಿಕಾರಿ. ಶಂಬಾರಂತೆಯೇ ಸಂವಹನದ ವಿಷಯದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೆ ನಾಡಿನ ಸಮುದಾಯಗಳ ಸಾಂಸ್ಕೃತಿಕ ಅಧ್ಯಯನ ಮಾಡುತ್ತಿದ್ದರು. ವ್ಯತ್ಯಾಸವೆಂದರೆ, ಶಂಬಾ ಬರೆಹಕ್ಕಿಲ್ಲದ ರಾಜಕೀಯ ಕ್ರಿಯಾಶೀಲತೆ ಮತ್ತು ವರ್ತಮಾನದ ಪ್ರಜ್ಞೆ ಅವರ ಬರೆಹಕ್ಕಿತ್ತು.

ಶಂಬಾ ಬಿಟ್ಟರೆ ಅವರ ಮೇಲೆ ಪ್ರಭಾವ ಬೀರಿದ ಮತ್ತೊಬ್ಬ ವಿದ್ವಾಂಸ ದೇವಿಪ್ರಸಾದ್ ಚಟ್ಟೋಪಾಧ್ಯಾಯ. ದೇವೀಪ್ರಸಾದರ ‘ಲೋಕಾಯತ’ವು ಅವರ ಪಾಲಿಗೆ ಭಕ್ತನೊಬ್ಬನ ಧಾರ್ಮಿಕ ಗ್ರಂಥ ಪಠಣದಂತಿತ್ತು. ದೇವಿಪ್ರಸಾದರಂತೆ, ಅವರೂ ಭಾರತದ ಸಮಾಜವಾದಿ ದರ್ಶನಗಳು ಸಮುದಾಯಗಳ ಬದುಕಿನಲ್ಲಿ ರೂಪಾಂತರಗೊಂಡು ಸುಪ್ತವಾಗಿರುವ ಪರಿಯನ್ನು ಹುಡುಕುತ್ತಿದ್ದರು. ಈ ಹುಡುಕಾಟದ ಫಲವೇ ಪಾಶುಪತ, ಸಾಂಖ್ಯ, ಕಾಳಾಮುಖ, ಲೋಕಾಯತ, ಲಾಕುಳ ದರ್ಶನ ಕುರಿತ ಪುಸ್ತಕಗಳು. ಈ ಸರಣಿಯ ಕೊನೆಯಲ್ಲಿ ಯೋಗ ಮತ್ತು ತಂತ್ರದರ್ಶನದ ಪುಸ್ತಕಗಳನ್ನು ಸಿದ್ಧಪಡಿಸುತ್ತಿದ್ದರು. ಅಷ್ಟರಲ್ಲೇ ಸಾವು ‘ಸಾಕು ಬಾ’ ಎಂಬಂತೆ ಕರೆದುಕೊಂಡು ಹೋಗಿಬಿಟ್ಟಿತು.

ಹಿರೇಮಠರಿಗಿದ್ದ ಜನಪರ ಕಾಳಜಿ, ಅಧ್ಯಯನ, ಶ್ರಮಗಳಿಗೆ ತಕ್ಕ ಅಚ್ಚುಕಟ್ಟುತನವು ಬರವಣಿಗೆಯಲ್ಲಿ ಇರಲಿಲ್ಲ; ಡಿ.ಆರ್. ಅವರಿಗಿದ್ದಂತೆ ತಮ್ಮ ಅಧ್ಯಯನದ ನೆಲೆಯಿಂದಲೇ ತರ್ಕಬದ್ಧವೂ ವ್ಯವಸ್ಥಿತವೂ ಆದ ಪ್ರಮೇಯ ಕಟ್ಟುವ ಕುಶಲತೆ ಇರಲಿಲ್ಲ; ಅವರ ಚಿಂತನೆ ಚದುರಿರುತ್ತಿತ್ತು. ಅದಿನ್ನೂ ಹರಳುಗಟ್ಟುವ ಮೊದಲೇ ತೆಗೆದುಕೊಡುತ್ತಿದ್ದರು. ಕೆಲಸ ಮುಗಿಸುವ ಅವಸರದಲ್ಲಿ ಇರುತ್ತಿದ್ದ ಅವರಿಗೆ ಫಿನಿಶಿಂಗ್ ಟಚ್ ಕೊಡುವ ತಾಳ್ಮೆಯಿರಲಿಲ್ಲ. ಈ ಅವಸರ ಪ್ರವೃತ್ತಿಯನ್ನು ಅವರು ಕುಟುಂಬ ಹಾಗೂ ಆರೋಗ್ಯದ ವಿಷಯದಲ್ಲೂ ತೋರಿದರೊ ಏನೊ? ಅವರು ಬರೆಹ ಆರಂಭಿಸಿದ್ದು ಕವಿತೆಯಿಂದ. ಅವರು ಎಡಪಂಥೀಯ ದೃಷ್ಟಿಕೋನದಲ್ಲಿ ಲೋಕದ ಬಾಳಿನಲ್ಲಿರುವ ಮನುಷ್ಯತ್ವವನ್ನು  ಹುಡುಕುತ್ತಿದ್ದರು. ಇಬ್ಬರು ಗಂಡುಮಕ್ಕಳಿಗೆ ವರ್ಗಹೋರಾಟದ ಧ್ವನಿಯುಳ್ಳ ಸಂಘರ್ಷ ಸಂಗ್ರಾಮ ಎಂಬ ಹೆಸರನ್ನು ಇಟ್ಟಿದ್ದರು. ತಮ್ಮ ಪುಸ್ತಕಗಳನ್ನು ತಮ್ಮದೇ ಪ್ರಕಾಶನದಿಂದ ಪ್ರಕಟಿಸುತ್ತಿದ್ದರು. ನ್ಯೂಸ್‌ಪ್ರಿಂಟ್ ಬಳಸಿ ಕಣ್ಣಿಗೆ ಕಂಡ ಪ್ರೆಸ್ಸಿನಲ್ಲಿ ಮುದ್ರಿಸುತ್ತಿದ್ದರು. ಸಮತಾ ಪ್ರಕಾಶನವು ಅವರು ವರ್ಗವಾಗಿ ಹೋಗುತ್ತಿದ್ದ ಕೊಟ್ಟೂರು, ಹೊಸಪೇಟೆ, ಹರಪನಹಳ್ಳಿ, ಹಡಗಲಿ ಹೆಸರುಗಳಲ್ಲಿದೆ. ಕರ್ನಾಟಕದಲ್ಲಿ ಮೂರು ವರ್ಷಕ್ಕೊಮ್ಮೆ ತನ್ನ ಸ್ಥಳ ಬದಲಿಸಿದ ಅಲೆಮಾರಿ ಪ್ರಕಾಶನ ಇದೇ ಇರಬೇಕು.

 ಜಂಗಮ ಪಂಗಡದಲ್ಲಿ ಹುಟ್ಟಿದ ಹಿರೇಮಠರು, ಜೀವಮಾನವಿಡೀ ಮಿಡಿದಿದ್ದು ಮಾತ್ರ ಬಡವರಿಗೆ ಮತ್ತು ದಲಿತರಿಗೆ. ಅವರಲ್ಲಿದ್ದ ಬದ್ಧತೆ ಅವರ ದೇಹವನ್ನು ದಣಿವಿಲ್ಲದ ದುಡಿಮೆಗಳಿಗೆ ದೂಡುತ್ತಿತ್ತು. ಒಮ್ಮೆ ಬಂಡಾಯ ಸಾಹಿತ್ಯ ಸಂಘಟನೆಯು ಪುಸ್ತಕ ಜಾಥಾ ನಡೆಸಿಕೊಡುವ ಹೊಣೆ ಹೊರೆಸಿತು. ಅದು ಕತ್ತೆಕೆಲಸ. ಹಡಗಲಿಯಿಂದ ಹೊರಟು ಕರ್ನಾಟಕವನ್ನು ಪುಸ್ತಕದ ಬಂಡಲುಗಳೊಂದಿಗೆ ಅವರು ಸುತ್ತುಹಾಕಿದರು. ನಾನು ಶಿವಮೊಗ್ಗೆಯಲ್ಲಿದ್ದಾಗ ಜಾಥಾ ಬಂದಿತ್ತು. ನಾನೂ ಗೆಳೆಯರೂ ಶಿವಮೊಗ್ಗೆಯ ಗೋಡೆಗಳಿಗೆ ಪುಸ್ತಕ ಯಾತ್ರೆಯ ಪೋಸ್ಟರುಗಳನ್ನು ಅಂಟಿಸಿದ್ದು, ಅವರ ಜತೆ ಪುಸ್ತಕದ ಬಂಡಲುಗಳ ನಡುವೆ ಮಲಗಿ, ರಾತ್ರಿಯಿಡೀ ಚರ್ಚಿಸಿದ್ದು ನೆನಪಾಗುತ್ತಿದೆ.

ಯಾವುದೇ ಕೆಲಸವನ್ನು ಮೇಲುಕೀಳೆನ್ನದೆ ಮಾಡುತ್ತಿದ್ದ ಅವರು, ಬಂಡಲುಗಳನ್ನು ಹೆಗಲಲ್ಲಿ ಹೊತ್ತು ಕಾರ್ಯಕ್ರಮದ ಜಾಗಕ್ಕೆ ಹೋಗುತ್ತಿದ್ದರು. ಅವರು ಬಳ್ಳಾರಿ ಜಿಲ್ಲೆಯಲ್ಲಿದ್ದಾಗ ಹಲವು ಹೋರಾಟಗಳನ್ನು ರೂಪಿಸಿದರು. ಚಳುವಳಿಗಳು ಅವರ ಉಸಿರಾಗಿದ್ದವು. ಒಮ್ಮೆ ಕನ್ನಡ ವಿಶ್ವವಿದ್ಯಾಲಯದ ಸೆಮಿನಾರಿಗೆಂದು ಬಂದವರು, ಅದರ ನೌಕರರು ಮುಷ್ಕರಕ್ಕೆ ಕುಳಿತಿದ್ದಾರೆ ಎಂದು ಕೇಳಿದವರೇ, ಅವರ ಜತೆ ಹೋಗಿ ಕೂತುಬಿಟ್ಟರು. ಬೀದಿಯಲ್ಲಿ ಕೊಲೆಯಾದ ಸಫ್ದರ್ ಹಶ್ಮಿಯ ಮೇಲೆ ಅವರು ನಾಟಕ ಬರೆದಿದ್ದು ಕೂಡ ಇಂತಹ ಬದ್ಧತೆಯ ಭಾಗವಾಗಿಯೇ. ವಿದ್ವಾಂಸರಾದ ಅವರು ಓದುವ ಕೋಣೆಯಷ್ಟೇ ಕಾಲವನ್ನು ಬೀದಿಗಳಲ್ಲಿ ಕಳೆದರು.

ಸಂಕೋಚದ ಸ್ವಭಾವದ ಮೆದುಮಾತಿನ ಹಿರೇಮಠರು, ಸೈದ್ಧಾಂತಿಕ ಚರ್ಚೆ ಬಂದಾಗ ಮಾತ್ರ-ಭಾಷಣವಿರಲಿ ಬರವಣಿಗೆಯಿರಲಿ ಚಳುವಳಿಯಿರಲಿ- ಉಕ್ಕಿನ ನಿಷ್ಠುರತೆ ತೋರುತ್ತಿದ್ದರು. ಚಾಟಿ ಹೊಡೆದಂತಹ ವರ್ತನೆ. ಹಿಪಾಕ್ರಸಿಯಿಲ್ಲದ ಅವರ ವ್ಯಕ್ತಿತ್ವ ಪಾರದರ್ಶಕವಾಗಿತ್ತು. ನನ್ನ ಬರೆಹವನ್ನು ಓದಿ ವಿಮರ್ಶಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದರು. ‘ನಿಮ್ಮ ಭಾಷೆ ಆಕರ್ಷಕ. ಆದರೆ ಅದರೊಳಗೆ ಮೈಮರೆತು ವಿಚಾರಕ್ಕೆ ಅಪಚಾರ ಮಾಡ್ತೀರಿ. ತಮಾಶೆಯ ಮಾತಾಡಿ ಗಂಭೀರ ವಾಗ್ವಾದದಿಂದ ತಪ್ಪಿಸಿಕೊಳ್ತೀರಿ. ಯಾವುದೇ ಆಚರಣೆ ನಂಬಿಕೆ ಕಲೆಯ ಹಿಂದೆ ಕೆಲಸ ಮಾಡುತ್ತಿರುವ ಆರ್ಥಿಕ ರಚನೆಗಳ ಬಗ್ಗೆ ಗಮನ ಹರಿಸುವುದಿಲ್ಲ’ ಎಂಬುದು ನನ್ನ ಬಗ್ಗೆ ಅವರಿಗಿದ್ದ  ಆಕ್ಷೇಪವಾಗಿತ್ತು.  ನಾನೊಂದು ದಿನ ಅವರೆತ್ತುವ ಪ್ರಶ್ನೆಗಳನ್ನು ಮುಖಾಮುಖಿ ಮಾಡಲೆಂದೇ ಹರಪನಹಳ್ಳಿಯ ಮನೆಗೆ ಹೋಗಿದ್ದೆ. ತಾವೇ ಮಾಡಿದ ಅಡುಗೆಯನ್ನು ಬಡಿಸಿದರು. ಮಾರನೇ ದಿನ ಸಮೀಪದಲ್ಲಿದ್ದ ಭೈರವನ ಬೆಟ್ಟಕ್ಕೆ ಅಲ್ಲಿನ ಗುಹೆಯನ್ನು ತೋರಿಸಲು ಕರೆದೊಯ್ದರು. 

ಆದರ್ಶಗಳಿಂದಲೂ ಮುಗ್ಧತೆಯಿಂದಲೂ ತುಂಬಿದ್ದ ಹಿರೇಮಠರಿಗೆ ಸ್ವಂತಕ್ಕೆ ಬದುಕುವ ವ್ಯವಹಾರ ಪ್ರಜ್ಞೆಯಿರಲಿಲ್ಲ. ಬದುಕಲು ಒಳ ಉಪಾಯಗಳನ್ನು ಅನುಸರಿಸದ ಅವರು ನೇರಮಾತುಗಳಿಂದ ದೊಡ್ಡವರನ್ನು ಎದುರು ಹಾಕಿಕೊಳ್ಳುತ್ತಿದ್ದರು. ಅವರೊಮ್ಮೆ ಕೊಪ್ಪಳದ ಸಭೆಯಲ್ಲಿ ಬರಗೂರು ಚಂಪಾ ಅವರಿಗೆ, `ನೀವು ಸಂಘಟನೆಯ ನಾಯಕರಾಗಿ ದಾರಿ ತಪ್ಪುತ್ತಿದ್ದೀರಿ. ನಿಮಗೆ ಕಿರಿಯರಾಗಿ ನಾವು ದಾರಿ ತೋರಿಸಬೇಕಾದ ಅಗತ್ಯವಿದೆ’ ಎಂದು ತೀಕ್ಷ್ಣ ವಾಗಿ ನುಡಿದರು. ಅಂಬೇಡ್ಕರ್ ಪ್ರತಿಮೆಗೆ ಅಪಮಾನವಾದಾಗ, ದಲಿತ ಸಂಗಾತಿಗಳ ಜತೆಗೂಡಿ ಹೋರಾಟ ಕಟ್ಟಿದರು.  ಇದುವೇ ಮುಂದೆ ಕನ್ನಡ ವಿಶ್ವವಿದ್ಯಾಲಯಲ್ಲಿ ಉಳಿವ ಅವರ ಮಹದಾಸೆ ಕೈಗೂಡದಿರಲು ಕಾರಣವೂ ಆಯಿತು. ಹಿರೇಮಠರ ಚಳುವಳಿಗಾರತನವು ತಮ್ಮ ರಾಜಕೀಯಕ್ಕೆ ಕುತ್ತಾಗಬಹುದೆಂದು ಕೆಲವರು  ಭಾವಿಸಿದರು.

WhatsApp Image 2026 05 31 at 3.21.02 PM

ಹಿರೇಮಠರು ಸಂಶೋಧಕರಾಗಿ ಹೊಸಹೊಸ ಚಿಂತನೆ ಮಂಡಿಸುತ್ತಿದ್ದರು; ತಂತ್ರಪಂಥವನ್ನು ಅರಿತರೆ ಕರ್ನಾಟಕ ಸಂಸ್ಕೃತಿಯ ಗೂಢವನ್ನೇ ಅರಿತಂತೆ ಎನ್ನುತ್ತಿದ್ದರು. ದಲಿತ ಸಂಸ್ಕೃತಿಯಲ್ಲಿ ಈ ಗೂಢದ ಮೂಲಗಳಿವೆ ಎಂದು ನಂಬಿದ್ದರು. ದಲಿತ ಸಂಸ್ಕೃತಿಯನ್ನು ಜಾತ್ರೆ ಹಬ್ಬ ಕಸುಬು ಕೃಷಿ ಭಾಷೆಗಳ ಮೂಲಕ ಅಧ್ಯಯನ ಮಾಡುತ್ತಿದ್ದರು. ಕರ್ನಾಟಕದಲ್ಲಿ ದರ್ಶನಗಳ ಚರಿತ್ರೆ ಕಟ್ಟಿಕೊಳ್ಳುವುದು ಎಲ್ಲ ಹೋರಾಟಗಳಿಗೆ ಬುನಾದಿ ಎಂದು ಪ್ರತಿಪಾದಿಸುತ್ತಿದ್ದರು; ನಾಶ ಆಗಬೇಕಿರುವುದು ದುಡಿವ ಜನರ ಸಾಂಸ್ಕೃತಿಕ ಲೋಕಗಳಿರುವ ಕುಲಗಳಲ್ಲ, ಉಳ್ಳವರ ಪರವಾದ ಚಿಂತನೆಯುಳ್ಳ ಸಾಂಸ್ಥಿಕ ಧರ್ಮಗಳು ಎನ್ನುತ್ತಿದ್ದರು.

ಅವರ ಸಾಂಸ್ಕೃತಿಕ ಪರ್ಯಾಯ ಚಿಂತನೆಗಳು ‘ಕರ್ನಾಟಕ ಸಂಸ್ಕೃತಿ ಪರಂಪರೆ: ಹಬ್ಬಗಳು’ `ಕರ್ನಾಟಕ ದಲಿತ ಸಂಸ್ಕೃತಿ ಪರಂಪರೆ: ಜಾತ್ರೆಗಳು’ ‘ಮಾದಾರ ಚನ್ನಯ್ಯನ ನಾಡಿನಲ್ಲಿ’ ‘ದಲಿತ ಸಂಸ್ಕೃತಿ’ ಕೃತಿಗಳಲ್ಲಿ ಅಡಕವಾಗಿವೆ. ಅವರ ವಿದ್ವತ್ತು ಮತ್ತು ಆಕ್ಟಿವಿಸಂ ಹೊಸ ತಿರುವನ್ನು ಪಡೆದುಕೊಳ್ಳುತ್ತಿತ್ತು. ಸಾಂಪ್ರದಾಯಿಕವಾದ ತಮ್ಮ ಮಾರ್ಕ್ಸ್ವಾದಿ ತರಬೇತಿಗೆ ಇದು ಅವರೇ ಜೋಡಿಸಿಕೊಳ್ಳುತ್ತಿದ್ದ ಅರ್ಥಪೂರ್ಣ ಕವಲಾಗಿತ್ತು. ಅವರ ಸಂಸ್ಕೃತಿ ಶೋಧವನ್ನು ದಲಿತಪರ ಚಿಂತಕರು ಉತ್ಸುಕತೆಯಿಂದ ಸ್ವಾಗತಿಸಿದರು. ಆದರೆ ಅವರ ಮಾತೃಪಕ್ಷ ತನ್ನ ಸಿದ್ಧಾಂತಕ್ಕೆ ಹೊರತೆಂಬಂತೆ ನೋಡಿತು. ಅವರ ಶಿಷ್ಯರೇ ಅವರನ್ನು ‘ದಾರಿ ತಪ್ಪಿದ ಕಾಮ್ರೇಡ್’ ಎಂದು ಟೀಕಿಸಿದರು.

ಬದುಕನ್ನು ಎಡಚಳುವಳಿಗಾಗಿ ತೇದ ಹಿರೇಮಠರಿಗೂ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಹೋಗಿತ್ತು. ನಿಜವಾದ ಇಂಟಲೆಕ್ಚುವಲ್ ಹಾಗೆ ರಾಜಕೀಯ ಪಕ್ಷಗಳ ಜತೆಗೆ ನಿರುಮ್ಮಳವಾಗಿ ಇರುವುದೂ ಸಾಧ್ಯವೂ ಇಲ್ಲ. ಹಿರೇಮಠರ ಸಂಶೋಧನೆ ಎಡ ಸಿದ್ಧಾಂತಗಳಿಂದ ವರ್ಗಕಲ್ಪನೆಗೆ ಹೇಗೆ ವ್ಯತಿರಿಕ್ತ?  ದೇವಿಪ್ರಸಾದದ ಚಿಂತನೆಗಳೇ ಅವರ ಹುಡುಕಾಟಕ್ಕೆ ಮಿತಿ ಒಡ್ಡಿದವೇ? ದಲಿತ ಸಂಸ್ಕೃತಿಯ ಅವರ ಶೋಧದಿಂದ ಕರ್ನಾಟಕದ ರಾಜಕಾರಣಕ್ಕೆ ಸಿಕ್ಕ ಹೊಸ ಆಯಾಮ ಯಾವುದು? ಈ ಕುರಿತು ಸರಿಯಾದ ತಾತ್ವಿಕ ಚರ್ಚೆ ಏರ್ಪಡಲಿಲ್ಲ. 

ಹಿರೇಮಠರ ಕೊನೆಯ ದಿನಗಳು ದುಗುಡದಾಯಕವಾಗಿದ್ದವು. ಅವರು  ಕೌಟುಂಬಿಕ   ತಾಕಲಾಟಗಳಿಂದ ಕಂಗೆಟ್ಟರು. ಅವರ ಒಬ್ಬ ಮಗ ಸಂಘರ್ಷ, ಅವರಂತೆಯೇ ಸುಂದರವಾಗಿದ್ದ ತರುಣ, ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟ. ಆತ ಹಣೆಯ ಮೇಲೆ ದೊಡ್ಡದಾಗಿ ಕುಂಕುಮ ಇಟ್ಟುಕೊಂಡು ಓಡಾಡುತ್ತಿದ್ದ. ಇದು ಸಮಾಜವನ್ನು ಬದಲಿಸುವ ಭರದಲ್ಲಿ ತಮ್ಮ ಬದುಕಿನ ಬಗ್ಗೆ ನಿಗಾವಹಿಸದ ಅಪ್ಪನ ವಿರುದ್ಧ ರಚ್ಚು ತೀರಿಸಿಕೊಳ್ಳುತ್ತಿದ್ದಾನೆ ಎಂಬಂತಿತ್ತು. ನಾಸ್ತಿಕ ಮಾನವತಾವಾದಿಯಾಗಿದ್ದ ಹಿರೇಮಠರು, ಸಾಮಾಜಿಕ ರಾಜಕೀಯ ಜೀವನದಲ್ಲಿ ಎದುರಿಸಿದ ಸಂಘರ್ಷಗಳಿಗಿಂತ, ಮಕ್ಕಳ ವಿಷಯದಲ್ಲಿ ಎದುರಿಸಿದ ಕಷ್ಟಗಳೇ ಅವರನ್ನು ಮೆತ್ತಗಾಗಿಸಿದವು.

ತಮ್ಮ ವಿದ್ವತ್ತು ಚಳುವಳಿ ಹೋರಾಟಗಳಲ್ಲಿ ಮುಳುಗಿದ ಎಲ್ಲ ಸಾರ್ವಜನಿಕ ವ್ಯಕ್ತಿಗಳಂತೆ, ಅವರಿಗೂ ಪರಿತಾಪವೆಂಬುದು ಕೊನೆಯ ದಿನಗಳಲ್ಲಿ ಕಾಡುತ್ತಿತ್ತು. ಕಳೆದುಹೋದ ಮಗನನ್ನು ಹುಡುಕಲು ಮಾಡುತ್ತಿದ್ದ ಯತ್ನಗಳು ದಾರುಣವಾಗಿದ್ದವು. ನಾನು ಪಂಥಗಳ ಅಧ್ಯಯನಕ್ಕಾಗಿ ಬೆಟ್ಟಗುಡ್ಡ ಅಲೆಯುತ್ತೇನೆಂದು ತಿಳಿದಿದ್ದ ಅವರು, ಅಲ್ಲೆಲ್ಲಾದರೂ ಸನ್ಯಾಸಿಯಾಗಿ ಸೇರಿಕೊಂಡಿದ್ದಾನೆಯೇ ನೋಡಿ ಎನ್ನುತ್ತಿದ್ದರು. ಅವರೀಗ ಸಮಾಜವನ್ನು ಕ್ರಾಂತಿಕಾರಕವಾಗಿ ಬದಲಿಸುವ ಹಠವಾದಿ ಚಳುವಳಿಗಾರನ ಪಾತ್ರದಿಂದ, ಅಸಹಾಯಕ ಅಪ್ಪನಾಗಿ ಬದಲಾಗಿದ್ದರು. ಕಷ್ಟವನ್ನು ಯಾರಲ್ಲೂ ಹೇಳಿಕೊಳ್ಳದೆ ಬದುಕಿದ ಅವರು, ಮಗನನ್ನು ಹುಡುಕಿ ಕೊಡುವಂತೆ ಸಿಕ್ಕವರೆಲ್ಲೆಲ್ಲ ಬೇಡುತ್ತಿದ್ದರು. ಕಡೆಗೂ ಈ ದೀನತಂದೆ ಮತ್ತು ಆ ಹಠಮಾರಿ ಮಗನ ಮಿಲನವಾಗಲಿಲ್ಲ.

ಹಿರೇಮಠರು ಕ್ಯಾನ್ಸರ್‌ನಿಂದ ನರಳುತ್ತಿರುವ ಸುದ್ದಿ ತಿಳಿದು ಕೊಟ್ಟೂರಿಗೆ ಹೋದೆ. ಅದು ನನ್ನ ಕೊನೆಯ ಭೇಟಿ. ಜಿಟಿಜಿಟಿ ಮಳೆ. ರಾತ್ರಿಯಾಗಿತ್ತು. ಊರ ಹೊರಗಿದ್ದ ಹೊಸ ಬಡಾವಣೆಯ ತುದಿಯಲ್ಲಿ ಮನೆ. ಅವರಿವರನ್ನು ಕೇಳಿಕೊಂಡು ಅರೆಗತ್ತಲಿನಲ್ಲಿ ಕೆಸರು ತುಳಿಯುತ್ತ, ತೊಯ್ದು ತೊಪ್ಪೆಯಾಗಿ ಹೋಗಿ ಬೆಲ್ ಮಾಡಿದೆ. ಅವರ ಮಡದಿ ಯೋಗಿತಾ ಕದ ತೆರೆದು ‘ತರಿಕೇರಿಯವರಾ? ಕರಿ ಒಳಗೆ’ ಎಂದು ಉದ್ಗರಿಸಿದರು. ನನ್ನ ಹೆಸರು ಕೇಳಿದ ಕೂಡಲೆ ಕೋಣೆಯ ಮಂಚದ ಮೇಲೆ ಮಲಗಿದ್ದ ಆಕೃತಿಯೊಂದು ಧಡಕ್ಕನೆದ್ದು ಹಾಲಿಗೆ ಬಂದಿತು. ಮೈಕೈಯೆಲ್ಲ ಒಣಗಿದ ಕಟ್ಟಿಗೆಯಂತಾಗಿದ್ದ ಆಕೃತಿಗೆ ನಿಕ್ಕರು ಬಿಟ್ಟು ಮೈಮೇಲೆ ಮತ್ತೇನೂ ಇರಲಿಲ್ಲ. ಸುಂದರ ಪುರುಷರಾಗಿದ್ದ ಹಿರೇಮಠರಿಗೆ ಡ್ರೆಸ್‌ಸೆನ್ಸೇ ಇಲ್ಲ ಎಂದು ನಾನು ದೂರುತ್ತಿದ್ದೆ; `ಯೌವನದಲ್ಲಿ ಬಹಳ ಹುಡುಗಿಯರ ಕನಸಿಗೆ ಹೋಗಿ ನೀವು ಕಾಡಿದ್ದೀರಿ’ ಎಂದು ಕೀಟಲೆ ಮಾಡುತ್ತಿದ್ದೆ. ಏನುಟ್ಟರೂ ಅವರು ಚೆಂದ ಕಾಣುತ್ತಿದ್ದರು. ಈಗ ಸ್ಫುರದ್ರೂಪವೆಲ್ಲ ಸುಟ್ಟು ಕರಕಲಾಗಿತ್ತು. ಏನೂ ತೋಚದೆ ತೋಳುಚಾಚಿ ಅಪ್ಪಿಕೊಂಡೆ. ಬಿಸುಪಿಲ್ಲದ ತಣ್ಣನೆಯ ಎಲುಬು ಚಕ್ಕಳದ ರೂಹನ್ನು ತಬ್ಬಿದಂತಾಯಿತು.

ಈ ಲೇಖನ ಓದಿದ್ದೀರಾ?: ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?

ಅವರಿಗೆ ಆಗಾಗ್ಗೆ ಮೂತ್ರ ವಿಸರ್ಜನೆಯಾಗುವುದರಿಂದ ಬಚ್ಚಲು ಮನೆಗೆ ಸಮೀಪದಲ್ಲೇ ಮಂಚ ಹಾಕಲಾಗಿತ್ತು. ಐದೈದು ನಿಮಿಷಕ್ಕೆ ಬಟ್ಟಲಿನಲ್ಲಿ ಲೋಳೆಯಂತಹ ಉಗುಳನ್ನು ಉಗಿಯುತ್ತ, ಅದರ ಮೇಲೆ ಚಿಕ್ಕರಟ್ಟನ್ನು ಮುಚ್ಚಿ ಹಾಸಿಗೆಯ ಪಕ್ಕ ಇಡುತ್ತಿದ್ದರು. ಕಡೆಯಾಟದ ದಿನಗಳಿವು ಎಂದು ಖಚಿತವಾಯಿತು. ನಾನು ಆರೋಗ್ಯದ ಬಗ್ಗೆ ಮಾತಾಡಲು ಯತ್ನಿಸಿದೆ. ಅವರು ತಾವು ಬರೆಯುತ್ತಿರುವ ಯೋಗದರ್ಶನ ಪುಸ್ತಕದ ಬಗ್ಗೆ ಮಾತಾಡಿದರು. ಹಠಯೋಗಿ. ಜಾಸ್ತಿ ಮಾತಾಡಿದರೆ ಸುಸ್ತಾಗುತ್ತಿತ್ತು.   ಪುಸ್ತಕಗಳನ್ನೆಲ್ಲ ಗಂಟುಕಟ್ಟಿ ಮೇಲಿಟ್ಟಿದ್ದರು. ಹೊಸ ಪುಸ್ತಕ ಬರೆಯುವುದಕ್ಕೆ ಬೇಕಾದ ಸಾಮಗ್ರಿಗಳನ್ನು ಮಾತ್ರ ಕೆಳಗಿರಿಸಿಕೊಂಡಿದ್ದರು.

ಬದುಕು ತೆಗೆದುಕೊಳ್ಳುವ ವಿಚಿತ್ರ ತಿರುವು, ಸಾವು ಬಂದು ಆವರಿಸಿಕೊಳ್ಳುವ ಕಠೋರ ಬಗೆ ಕುರಿತು ಚಿಂತಿಸುತ್ತ ವಿಷಾದದಿಂದ ಮರಳಿದೆ. ಹಿರೇಮಠರು ಕೊಟ್ಟೂರು ಬಿಟ್ಟು ತಮ್ಮೂರಿಗೆ ಹೊರಟುಹೋದರು ಎಂದು ತಿಳಿಯಿತು. ಅವರಿಗೆ ಜನ ಬಂದು ಆರೋಗ್ಯದ ಬಗ್ಗೆ ಮಾತನಾಡಿ ಮರುಕ ತೋರುವುದು ಬೇಡವಾಗಿತ್ತೊ ಏನೊ?  ಒಂದು ತಿಂಗಳ ತರುವಾಯ ಫೋನಿನಲ್ಲಿ ಕ್ಷೀಣದನಿಯೊಂದು ಬಂದಿತು: ಅದು ನಮ್ಮಿಬ್ಬರ ಕೊನೆಯ ಮಾತುಕತೆ: “ಸಾರ್, ನಮಸ್ಕಾರ. ಆರಾಮದೀರಾ? ನಾನು ಹಿರೇಮಠ. ಹಳ್ಳಿಗೆ ಬಂದು ಕುರ್ಪಿ ಹಿಡಕೊಂಡು ಹೊಲದಾಗೆ ಕುಂತೀನಿ. ರೊಕ್ಕದ ಅಡಚಣಿ ಐತಿ. ನಿಮ್ಮದೊಂದು ಪುಸ್ತಕ ಹಾಕ್ತೀನಿ. ಒಲ್ಲ್ಲೆ ಅನಬ್ಯಾಡರಿ. ಹ್ಯಂಗಾದರೂ ಮಾರಿ ರೊಕ್ಕ ಮುಟ್ಟಸತೀನಿ. ನಿಮ್ಮ ಹೊಸಾ ಪುಸ್ತಕ ಓದ್ತದೀನಿ’ ಎಂದರು. ಹುಡುಕಿಕೊಂಡು ಹೋದರೂ ಸಿಗದ ಹಳ್ಳಿಯಲ್ಲಿ ಕುಳಿತು ಪುಸ್ತಕ ಪ್ರಕಟಣೆ ಮಾಡುವುದುಂಟೇ? ಬೇಸರವಾಗದಿರಲಿ ಎಂದು ‘ಆಗಲಿ’ ಎಂದೆ. ಸಣ್ಣದೊಂದು ಮೊತ್ತವನ್ನು ಕಳಿಸಿಕೊಟ್ಟೆ. ಕೊನೆಯ ಗಳಿಗೆಯಲ್ಲೂ ಬದುಕುವ ಆಸೆ ಮತ್ತು ಕೆಲಸ ಮಾಡುವ ಛಲ ಅವರ ದನಿಯಲ್ಲಿತ್ತು. ಸಮತಾ ಪ್ರಕಾಶನದಿಂದ ಪುಸ್ತಕ ಪ್ರಕಟಿಸುವ ಅವಕಾಶ ನನಗೆ ಒದಗಲಿಲ್ಲ. 

ಹಿರೇಮಠರಿಗೆ ಪೆನ್ಶನ್ ಸೆಟಲ್ ಆಗದೆ ‘ತಬರನ ಕಥೆ’ ಆಗಿತ್ತು. ಸಾವಿರಾರು ಮಕ್ಕಳಿಗೆ ಅನ್ನ ಬಟ್ಟೆ ವಿದ್ಯೆ ವಿಚಾರ ಕೊಟ್ಟು ಸಾಕಿದ, ಲಗ್ನವನ್ನೂ ಮಾಡಿಸಿದ ಅವರು, ಪರಿಚಿತರಲ್ಲಿ ಕೈಗಡ ಕೇಳುತ್ತಿದ್ದುದು ಕೆಟ್ಟ ಅನಿಸುತ್ತಿತ್ತು. ಮೊದಲನೇ ದರ್ಜೆಯ ರೈಲು ಪ್ರಯಾಣದ ಹಣವನ್ನು ಪಡೆಯಲು ನಿರಾಕರಿಸುತ್ತಿದ್ದ ನೈತಿಕತೆಯನ್ನು ಅಣಕಿಸಲೆಂದೇ ಬಾಳು, ನಾನಾ ತರಹದ ತೊಡಕುಗಳನ್ನೊಡ್ಡಿ ಪರೀಕ್ಷಿಸುತ್ತಿತ್ತು. ಅವರ ಮೇಲೊಂದು ಪುಸ್ತಕ ತರಬೇಕು, ಅವರ ಪುಸ್ತಕಗಳ ಮೇಲೆ ಚರ್ಚೆ ಏರ್ಪಡಿಸಬೇಕು, ಸಾಧ್ಯವಾದರೆ ಒಂದು ಹಮ್ಮಿಣಿ ಸೇರಿಸಿ ಕೊಡಬೇಕು ಎಂದೆಲ್ಲ ಅವರ ಗೆಳೆಯರೂ ಶಿಷ್ಯರೂ ಮಾತಾಡಿಕೊಳ್ಳುತ್ತಿದ್ದೆವು. ಆದರೆ ಸಾವು ನಮ್ಮ ಇಂತಹ ಸಣ್ಣ ನೆರವಿನ ಹಂಗಿನಿಂದಲೂ ಅವರನ್ನು ಪಾರುಮಾಡಿಬಿಟ್ಟಿತು.

ಪೋಸ್ಟ್ ಹಂಚಿಕೊಳ್ಳಿ:

ರಹಮತ್ ತರೀಕೆರೆ
ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬೀದರ್ ದಕ್ಷಿಣ ಕ್ಷೇತ್ರದಲ್ಲಿ 1 ಜಿ.ಪಂ. ಕ್ಷೇತ್ರವನ್ನಾದರೂ ಎಸ್‌ಸಿಗೆ ಮೀಸಲಿಡಿ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಜಿಲ್ಲಾ ಪಂಚಾಯಿತಿ...

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...