ಚಿಕ್ಕಮಗಳೂರು ನಗರದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಮಾತನಾಡಿ, “ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿ ಮಾಡಲು 7ನೇ ಕರಡು ಅಧಿಸೂಚನೆ ಹೊರಡಿಸಿ, ಅಕ್ಷೇಪಣೆ ಸಲ್ಲಿಸಲು 60 ದಿನಗಳ ಗಡುವು ಸಹ ವಿಧಿಸಿದೆ. ಈ ಬಗ್ಗೆ ಮಲೆನಾಡಿನ ರೈತರಲ್ಲಿ ಆತಂಕವಾಗಿದೆ. ಕೃಷಿ ಕಾರ್ಮಿಕರು ಮತ್ತು ಅದಿವಾಸಿಗಳಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲವಾಗಿದೆ. ಹಾಗೆಯೇ ಒಂದಷ್ಟು ಕಡೆ ರೈತರು ಪಕ್ಷ ಭೇದ ಮರೆತು ಕಸ್ತೂರಿ ರಂಗನ್ ವರದಿ ರದ್ದು ಮಾಡಬೇಕ ಎಂದು ಹೋರಾಟ ನಡೆಯುತ್ತಿದೆ.
ಮಲೆನಾಡಿನ ಕಾರ್ಮಿಕ, ರೈತರಿಗೆ ಭೂಮಿ, ವಸತಿ ಸಿಗದೆ ದೊಡ್ಡ ಸಮಸ್ಯೆಯಾಗಿದೆ. ಭೂಮಿ, ವಸತಿ ವಂಚಿತವಾಗಿರುವುದು ಅತಿ ಹೆಚ್ಚು ಬಡ ಜನರು ಮಾತ್ರ, ಫಾರಂ 53, 52, 57 ಅರ್ಜಿ ಹಕ್ಕು ವಂಚಿತಗೊಂಡಿರುವ ಜನರಿಗೆ ಹಕ್ಕು ಪತ್ರ ವಿತರಿಸುವುದನ್ನು ಸಿಎಂ ಪರಿಗಣಿಸಬೇಕು. ಫಾರಂ 50 ರಲ್ಲಿ 65,085 ಅರ್ಜಿ ಸಲ್ಲಿಸಲಾಗಿತ್ತು. ಅದರಲ್ಲಿ 13,970 ಅರ್ಜಿ ಹಾಕಿದವರಿಗೆ ಮಾತ್ರ ಹಕ್ಕುಪತ್ರ ವಿತರಿಸಲಾಗಿದೆ. ಇನ್ನ ಉಳಿದ 51,117 ಜನರ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಹಾಗೆಯೇ ಫಾರಂ 53 ರಲ್ಲಿ 14398 ವಿತರಣೆ, ಉಳಿದ 53,183 ಅರ್ಜಿ ತಿರಸ್ಕಾರ! ಫಾರಂ 57ರಲ್ಲಿ 86,511 ಅರ್ಜಿ ಹಾಗೆ ಉಳಿದಿವೆ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟಾರೆ ಒಂದು ಲಕ್ಷಕ್ಕಿಂತ ಅರ್ಜಿ ಹಾಗೆ ಉಳಿದಿವೆ ಇದನ್ನು ಮುಖ್ಯಮಂತ್ರಿಗಳು ಗಮನವಹಿಸಬೇಕಾಗಿದೆ. ಹಾಗೆಯೇ, 94ಚ್, 94ccಯಲ್ಲಿ 30ಸಾವಿರ ಅರ್ಜಿ ತಿರಸ್ಕರಿಸಲಾಗಿದೆ. ಸೆಕ್ಷನ್(4),( 17) ಹಕ್ಕು ಪತ್ರವನ್ನು ಕೂಡ ಕೊಡುತ್ತಿಲ್ಲ. ಹಾಗೆಯೇ ಇನ್ನೂ ಹಲವಾರು ಅರಣ್ಯ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ “ಇದು ನಮ್ಮ ಮನವಿಯಲ್ಲ ನಮ್ಮ ಹಕ್ಕನ್ನು ಕೇಳ್ತಾ ಇದ್ದೇವೆ’ ಎಂದು ತಿಳಿಸಿದರು.

ಈ ಹಿಂದೆ ಕೇಂದ್ರ ಪರಿಸರ ಇಲಾಖೆ 5, 6ನೇ ಅಧಿಸೂಚನೆ ಹೊರಡಿಸಿದಾಗಲೂ ಕರ್ನಾಟಕದ ಸರ್ಕಾರಗಳು ವರದಿಯನ್ನು ತಿರಸ್ಕರಿಸಿದ್ದವು. ಮಲೆನಾಡಿನ ಜನರೂ ಸಹ ಆಕ್ಷೇಪಣೆ ಸಲ್ಲಿಸಿದ್ದರೂ ಸಹ ಮತ್ತೆ ಪದೇ ಪದೇ ಅಧಿಸೂಚನೆ ಹೊರಡಿಸಿ ಮಲೆನಾಡಿನ ರೈತರ ಹಾಗೂ ಜನರ ಬೇಡಿಕೆಗಳನ್ನು ತಿರಸ್ಕಾರ ಮಾಡುತ್ತಾ ಜನರನ್ನು ಆತಂಕಕ್ಕೆ ದೂಡುತ್ತಿರುವ ಕೇಂದ್ರ ಪರಿಸರ ಇಲಾಖೆಯ ನಿರ್ಧಾರವನ್ನು ನಾವು ಖಂಡಿಸುತ್ತೇವೆಂದು ತಿಳಿಸಿದರು.
ಹಕ್ಕೋತ್ತಾಯ: 1.ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾಗಿ ಕೇಂದ್ರ ಹಸಿರು ಪೀಠಕ್ಕೆ (ನ್ಯಾಯಾಧಿಕರಣಕ್ಕೆ) ಪ್ರಮಾಣ ಪತ್ರ ಸಲ್ಲಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ರಾಜ್ಯ ಸರ್ಕಾರ ಒತ್ತಾಯ ಮಾಡಬೇಕು.
2. ಕಳೆದ 7 ವರ್ಷಗಳಿಂದ ಕಸ್ತೂರಿ ರಂಗನ್ ವರದಿ ವ್ಯಾಪ್ತಿಯ ಸಂಸದರು ವರದಿ ಜಾರಿ ವಿಚಾರವಾಗಿ ಕೇವಲ ಭಾಷಣ ಮಾತ್ರ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತ ಇದ್ದಾರೆಯೇ ವಿನಃ ಕೇಂದ್ರ ಸರ್ಕಾರದೊಂದಿಗೆ ಎದೆಗೊಟ್ಟು ಪ್ರಶ್ನಿಸದೆ ಇರುವುದರಿಂದ ಇವತ್ತು ಮಲೆನಾಡ ಜನ ಆತಂಕಕ್ಕಿಡಾಗಿದ್ದಾರೆ.
3.ಕೂಡಲೇ ತಾವುಗಳು ಸಂಸದರಿಗೆ ಅವರ ಜವಾಬ್ದಾರಿ ನೆನಪಿಸಿ ಕೇಂದ್ರ ಸರ್ಕಾರ ದೊಂದಿಗೆ ಮಾತುಕತೆ ನಡೆಸುವಂತೆ ಮನವರಿಕೆ ಮಾಡಬೇಕು.
4. ಕೇಂದ್ರ ದೊಂದಿಗೆ ಮಾತುಕತೆ ಸಂದರ್ಭದಲ್ಲಿ ಮಲೆನಾಡಿನ ರೈತರ, ಕಾರ್ಮಿಕರ, ದಲಿತ, ಆದಿ ವಾಸಿ, ಜನಪರ, ಪರಿಸರವಾದಿ ಮುಖಂಡರನ್ನು ಒಳಗೊಳ್ಳಬೇಕು.
5. ಕಸ್ತೂರಿ ರಂಗನ್ ವರದಿಗಿಂತಲೂ ಜನವಿರೋಧಿಯಾದ ಅರಣ್ಯ ಕಾನೂನುಗಳು ಈಗಾಗಲೇ ಮಲೆನಾಡಿನ ಜನರ ಕತ್ತು ಹಿಸುಕಿ ಜನರನ್ನು ಬೀದಿ ಪಾಲು ಮಾಡಲು ಕಾಯುತ್ತಿವೆ. ಈಗಾಗಲೇ ಮಲೆನಾಡನ್ನು ಮೀಸಲು ಅರಣ್ಯ ಮಾಡುವ ಸೆಕ್ಷನ್ 4 ಮೂಲಕ ಬಡವರು, ರೈತರ ಕೃಷಿ ಭೂಮಿಯನ್ನೂ, ಮನೆಗಳನ್ನು ಮೀಸಲು ಅರಣ್ಯ ಮಾಡಲು ಹೊರಟಿದ್ದಾರೆ. ಕಳೆದ 15 ವರ್ಷಗಳಿಂದ ನಿವೇಶನಕ್ಕಾಗಿ ಭೂಮಿಯನ್ನೂ ಮಂಜೂರು ಮಾಡಲಾಗಿಲ್ಲ. ಮಂಜೂರು ಆಗಿರುವ ಭೂಮಿಗೂ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಪ್ರತಿ ಪಂಚಾಯತಿಯಲ್ಲೂ ನಿವೇಶನ ರಹಿತರ ಪಟ್ಟಿ ನೂರಾರು ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಸರ್ಕಾರ ಕೂಡಲೇ ನಿವೇಶನಕ್ಕೆ ಭೂಮಿ ಹಾಗೂ ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.
6. ಈಗಾಗಲೇ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಎಂಬ ಪ್ರಹಸನ ನಡೆಸುತ್ತಿದ್ದು ಮಲೆನಾಡಿನ ಜನರಿಗೆ ಯಾವುದೇ ಮಾಹಿತಿ ಇಲ್ಲ. ಜಂಟಿ ಸರ್ವೆಗಿಂತ ಅರ್ಹರಿಗೆ ಭೂಮಿ ಹಾಗೂ ನಿವೇಶನಕ್ಕೆ ಹಕ್ಕು ಪತ್ರ ನೀಡಿ ಮಲೆನಾಡ ಬಡವರಿಗೆ ಬದುಕುವ ಗ್ಯಾರಂಟಿ, ವಾಸಿಸುವ ಗ್ಯಾರಂಟಿ ನೀಡಬೇಕು.
7. ಈ ಹಿಂದೆ ಸರ್ಕಾರಗಳು ದಲಿತರಿಗೆ ಭೂಮಿ ಮಂಜೂರು ಮಾಡಿದ್ದು ಒಂದಷ್ಟು ಜನರಿಗೆ ಹಕ್ಕು ಪತ್ರ ದೊರಕಿದೆ. ಜನರಿಗೆ ಹಕ್ಕು ಪತ್ರ ನೀಡಲು ಅರಣ್ಯ ಇಲಾಖೆ ನಿರಾಕರಿಸುತ್ತಿರುವುದು ಸಂವಿಧಾನಬದ್ಧ ಸಾಮಾಜಿಕ ನ್ಯಾಯದ ವಿರುದ್ಧದ ದಲಿತ ವಿರೋಧಿ ನೀತಿಯಾಗಿದ್ದು, ದಲಿತರಿಗೆ ಮಂಜೂರಾದ ಭೂಮಿಯು ಸಂವಿಧಾನ ಬದ್ಧ ಮೀಸಲು ಭೂಮಿ ಎಂದು ಪರಿಗಣಿಸಿ ಸೆಕ್ಷನ್ 4ರಿಂದ ಕೈ ಬಿಟ್ಟು ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.
8. ಮಲೆನಾಡಿನಲ್ಲಿ ಪರಿಸರ, ಅರಣ್ಯ ಉಳಿಯಬೇಕು; ಅದು ಉಳಿಯಬೇಕೆಂದರೆ ನೂರಾರು ಎಕರೆ ಒತ್ತುವರಿ ಮಾಡಿಕೊಂಡ ಬಲಾಡ್ಯರ ಒತ್ತುವರಿ ತೆರವು ಗೊಳಿಸಬೇಕು. ಹೊಸ ಒತ್ತುವರಿಗಳು ಆಗುತ್ತಿದ್ದು ಅವುಗಳನ್ನು ತಡೆಯಬೇಕು. ಸಂಜೀವ್ ಕುಮಾರ್ ನೇತೃತ್ವದ ಕಸ್ತೂರಿ ರಂಗನ್ ವರದಿ ಪರಾಮರ್ಶೆ ಕಮಿಟಿಗೆ ಎಲ್ಲಾ ಸಂಸದರು ಇಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಹಾಗೆಯೇ ಒಂದು ವೇಳೆ ಕೋರ್ಟ್ ಒಪ್ಪದಿದ್ದರೆ ಈಗಾಗಲೇ ಜನವಸತಿ ಇಲ್ಲದ ಅಧಿಸೂಚಿತ ಸಾವಿರಾರು ಎಕರೆ ಪ್ರದೇಶವನ್ನು ಈ ವರದಿಗೆ ಬಿಟ್ಟು ಕೊಡಲು ಒಪ್ಪಿಗೆ ಸೂಚಿಸಬೇಕೆಂದು ಅಗ್ರಹಿಸಿದರು.
ಇದನ್ನೂ ಓದಿದ್ದೀರಾ?ಕಸ್ತೂರಿ ರಂಗನ್ ವರದಿ: ಸಿಎಂಗೆ ಮನವಿ ಸಲ್ಲಿಸಲು ಪಕ್ಷ, ಸಂಘಟನೆಗಳಿಗೆ ಅವಕಾಶವಿದೆ; ಟಿ.ಡಿ ರಾಜೇಗೌಡ
ಈ ವೇಳೆ ಕೆ.ಎಲ್ ಅಶೋಕ್, ಸುರೇಶ್ ಗಡಿಕಲ್, ಟಿ.ಎಲ್ ಗಣೇಶ್, ರಾಮು ಕೌಳಿ, ಮುನ್ನ ಕಡೂರು, ಸಂದೀಪ ಉಪಸ್ಥಿತರಿದ್ದರು.




