ಮಂಗಳೂರಿನ ಕೈಗಾರಿಕಾ ವಲಯದಲ್ಲಿರುವ HPCL ಕೈಗಾರಿಕಾ ಸಂಸ್ಥೆಯಲ್ಲಿ ಕೆಲಸದಿಮದ ವಜಾಗೊಂಡ ನಾಲ್ವರು ಮಹಿಳಾ ಉದ್ಯೋಗಿಗಳ ಅನಿರ್ಧಿಷ್ಟಾವದಿ ಧರಣಿ ಇಂದಿಗೆ 75 ದಿನಗಳನ್ನು ಪೂರೈಸಿದೆ.
ಶರಣವ್ವ ಭಜಂತ್ರಿ, ಸೂರವ್ವ ಕೊಲ್ಲದ್, ಪಾರವ್ವ ಗಾಣಿಗೇರ, ಸುವರ್ಣ ಪಾಟೀಲ ಎಂಬ ಬಾಗಲಕೋಟೆ ಜಿಲ್ಲೆಯ ಹುನಗುಂದದ ಮಹಿಳಾ ಗುತ್ತಿಗೆ ಕಾರ್ಮಿಕರು HPCL ನ ಅಧಿಕಾರಿಗಳು ತಮ್ಮನ್ನು ಕೆಲಸದಿಂದ ವಜಾ ಮಾಡಿರುವುದರ ವಿರುದ್ದ ಮಂಗಳೂರಿನ ಸುರತ್ಕಲ್ ಬಾಳದಲ್ಲಿರುವ HPCL ಬಾಟ್ಲಿಂಗ್ ಘಟಕದ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಇಂದಿಗೆ 75 ದಿನ ಪೂರ್ತಿಗೊಳಿಸಿತು.
“ಕೇಂದ್ರ ಕಾರ್ಮಿಕ ಇಲಾಖೆಯ ಅಸಿಸ್ಟೆಂಟ್ ಲೇಬರ್ ಕಮೀಷನರ್, ದ.ಕ. ಜಿಲ್ಲಾಧಿಕಾರಿಗಳು ಉದ್ಯೋಗಕ್ಕೆ ಮರಳಿ ನೇಮಿಸುವಂತೆ ಸೂಚಿಸಿದ್ದರೂ HPCL ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ. ಕಾರ್ಮಿಕ ಇಲಾಖೆಯ ಎಎಲ್ ಸಿ ಇದೇ ನವಂಬರ್ 20 ನೇ ತಾರೀಕು ವಿಚಾರಣೆಗೆ ಆಗಮಿಸುವಂತೆ ಕಂಪೆನಿಯ ಹಿರಿಯ ಅಧಿಕಾರಿಗೆ ನೋಟೀಸು ನೀಡಿದ್ದಾರೆ” ಎಂದು ಹೋರಾಟಗಾರರು ತಿಳಿಸಿದ್ದಾರೆ.
“ನ.20 ರಂದು ಕಂಪೆನಿಯ ಹಿರಿಯ ಅಧಿಕಾರಿಯ ವಿಚಾರಣೆಯ ನಂತರ ತಮಗೆ ನ್ಯಾಯ ದೊರಕದಿದ್ದರೆ, ಅಥವಾ ಕಂಪೆನಿಯ ಅಧಿಕಾರಿಗಳು ವಿಷಯ ಇತ್ಯರ್ಥ ಪಡಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ” ಎಂದು ನಾಗರಿಕ ಹೋರಾಟ ಸಮಿತಿ, ಸುರತ್ಕಲ್ ಮತ್ತು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಎಚ್ಚರಿಸಿದೆ.




