ಕಾಫಿ ನಾಡು, ಮಲೆನಾಡು ಚಿಕ್ಕಮಗಳೂರು ಜಿಲ್ಲೆಯ ಪರಿಸರ ಎಷ್ಟು ಚಂದವೋ, ಅಷ್ಟೇ ಸಮಸ್ಯೆಗಳೂ ಜಿಲ್ಲೆಯಲ್ಲಿವೆ. ಜಿಲ್ಲೆಯ ನಾನಾ ಭಾಗಗಳಲ್ಲಿ ವಾಸಿಸುತ್ತಿರುವ ಹಕ್ಕಿಪಿಕ್ಕಿ ಸಮುದಾಯದ ಜನರು ಸ್ವಂತ ಸೂರು ಕಟ್ಟಿಕೊಳ್ಳಲು ಭೂಮಿಯಿಲ್ಲ. ವಾಸಿಸುತ್ತಿರುವ ಭೂಮಿಯೂ ತಮ್ಮದಲ್ಲ. ತಾವಿರುವ ಜಾಗ ತಮ್ಮದೆಂದು ಹಕ್ಕುಪತ್ರ ಕೊಟ್ಟರೆ, ನೆಲೆ ರೂಪಿಸಿಕೊಳ್ಳುತ್ತೇವೆಂದು ಆ ಸಮುದಾಯ ಕೇಳುತ್ತಲೇ ಇದೆ. ಆದರೆ, ಅವರ ಅಳಲಿಗೆ ಕಿವಿಗೊಡುವವರು ಇಲ್ಲದಂತಾಗಿದೆ.
ಚಿಕ್ಕಮಗಳೂರಿಗೆ ಸಮೀಪದಲ್ಲೇ ಇರುವ ಮಲ್ಲೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಂಡಿಗ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದ ಮಂದಿ ವಾಸಿಸುರತ್ತಿದ್ದಾರೆ. ತಾವಿರುವ ಜಾಗಕ್ಕೆ ಹಕ್ಕುಪತ್ರ ನೀಡಬೇಕೆಂದು ಕಳೆದ 25 ವರ್ಷಗಳಿಂದ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೂ, ಜಾಗ ಅವರದ್ದಾಗಿಲ್ಲ. ಹಲವರಿಗೆ ನೆಲೆಯೂ ಇಲ್ಲ. ಅವರೆಲ್ಲರೂ ಸಮುದಾಯ ಭವನವನ್ನೇ ಮನೆ ಮಾಡಿಕೊಂಡು ಬದುಕುತ್ತಿದ್ದಾರೆ. ತಮಗೆ ನಿವೇಶನಗಳನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.
“ಚರ್ಚ್ ಗುಡ್ಡ ಕಾವಲು ಗ್ರಾಮದ ಸರ್ವೇ ನಂ.1ರಲ್ಲಿರುವ ಭೂಮಿಯನ್ನು ಸಾಗುವಳಿ ಭೂಮಿಯಾಗಿ ಗುರುತಿಸಿ 1981-82ರಲ್ಲಿ ಅರಣ್ಯ ಹಕ್ಕು ಸಮಿತಿ ಪ್ರಸ್ತಾವನೆ ಸಲ್ಲಿಸಿತ್ತು. ಅಂದಿನಿಂದಲೇ ಆ ಭೂಮಿಯಲ್ಲಿ ಹಲವರು ಸಾಗುವಳಿ ಮಾಡುತ್ತಿದ್ದರು. ಆದರೆ, 2006-07ರಲ್ಲಿ ಆ ಭೂಮಿಯನ್ನು ಅಕ್ರಮವಾಗಿ ಪಡುತೋಪು ಪ್ರದೇಶವೆಂದು ಗುರುತಿಸಲಾಗಿದೆ. ಹೀಗಾಗಿ, ಅಲ್ಲಿ ಸಾಗುವಳಿ ಮಾಡುತ್ತಿದ್ದವರು ಭೂಮಿ ಕಳೆದುಕೊಂಡಿದ್ದಾರೆ” ಎಂದು ಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮದ ನಿವಾಸಿ ವಿಶ್ವ ಮತ್ತು ಶರತ್ ಆರೋಪಿಸಿದ್ದಾರೆ.
“ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಲು ನಮಗೆ ಸೂರು ಇಲ್ಲ. ಸೂರು ಹೊಂದಿರುವವರಿಗೆ ಹಕ್ಕುಪತ್ರವೂ ದೊರೆತಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಒಪ್ಪೊತ್ತಿನ ಗಂಜಿಗೂ ಪರದಾಡುವಂತಾಗಿದೆ” ಎಂದು ಶರತ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
“ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದೇವೆ. ಮಳೆ ಬಂದರೆ, ಮನೆಗಳಿಗೆ ನೀರು ನುಗ್ಗುತ್ತದೆ. ಇನ್ನು, ಕಡಿಮೆ ಕೂಲಿಗೆ ದುಡಿಯುತ್ತಿದ್ದೇವೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ನಾವು ದುಡಿಯುವುದು ಸಾಕಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
“ಜೀವನ ನಡೆಸಲು, ಹೊಟ್ಟೆ ಪಾಡಿಗೆ ಬೆಳೆ ಬೆಳೆದು ತಿನ್ನಲು ನಮಗೆ ಒಂದಿಷ್ಟು ಭೂಮಿಬೇಕು. ಆದರೆ, ನಮಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ” ಎಂದು ಹಕ್ಕಿಪಿಕ್ಕಿ ಸಮುದಾಯದ ಸರಿತಾ ಹೇಳಿದ್ದಾರೆ.
“ನಮಗೆ ಬದುಕುವುದಕ್ಕೆ ಹಾಗೂ ಬದುಕು ಕಟ್ಟಿಕೊಳ್ಳಲು ಒಂದಿಷ್ಟೂ ಭೂಮಿ ಬೇಕು. ನಾವಿರುವ ನಿವೇಶನಗಳ ಹಕ್ಕುಪತ್ರಗಳನ್ನು ನೀಡಬೇಕು” ಎಂದು ಸಮುದಾಯದ ಜನರು ಒತ್ತಾಯಿಸಿದ್ದಾರೆ.