ಮಲೆನಾಡಿನ ಕೊಪ್ಪ ಮತ್ತು ಕುದುರೆಮುಖ ಭಾಗದಲ್ಲಿ ಆಗಸ್ಟ್ 15 ಮತ್ತು 16ರಂದು ಅನಧಿಕೃತವಾಗಿ ನಡೆಯಲಿರುವ ಜೀಪ್ ಆಫ್-ರೋಡಿಂಗ್ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಲಗೇಶ್ವರ ಪ್ರದೇಶದಲ್ಲಿ ದಿನಾಂಕ 15/08/2026ರಂದು ‘ಭದ್ರಾ ಸ್ಪೋರ್ಟ್ಸ್ ಕ್ಲಬ್’ ‘Moto Mania’ ಎಂಬ ಹೆಸರಿನಲ್ಲಿ ಆಫ್-ರೋಡಿಂಗ್ ಕಾರ್ಯಕ್ರಮ ಆಯೋಜಿಸಿದೆ. ಅಲಗೇಶ್ವರ ಎಸ್ಟೇಟ್ (GPS: 13° 24′ 33.93″ N, 75°24′ 2.15″ E) ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ನಡುವಿನ ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ. ಇಂತಹ ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆ ನಡೆಸುವ ಮೊದಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಅವರ ಅನುಮತಿ ಕಡ್ಡಾಯ. ಆದರೆ ಇಲ್ಲಿ ಅನುಮತಿ ಪಡೆಯದೆ ಅನಧಿಕೃತವಾಗಿ ಇಂತಹ ಚಟುವಟಿಗಳನ್ನು ನಡೆಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
“ಈ ಪ್ರದೇಶದಲ್ಲಿ ಕಾಡುಕೋಣಗಳು (ಕಾಟಿ) ದೊಡ್ಡ ಸಂಖ್ಯೆಯಲ್ಲಿದ್ದು, ಇತ್ತೀಚೆಗೆ ಆನೆಗಳ ಓಡಾಟವೂ ವರದಿಯಾಗಿದೆ. ನೂರಾರು ವಾಹನಗಳು ಸೇರಿ ಗದ್ದಲ ಎಬ್ಬಿಸುವುದು, ಸೈಲೆನ್ಸರ್ ಮಾರ್ಪಾಡಿಸಿದ ಜೀಪುಗಳ ಕರ್ಕಶ ಶಬ್ದ ವನ್ಯಜೀವಿಗಳ ನಡವಳಿಕೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಭವಿಷ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ಹೆಚ್ಚಿಸುವ ಅಪಾಯವಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಇದೇ ವೇಳೆಗೆ, ಬೆಂಗಳೂರಿನ ‘Bangalore Adventures’ ಸಂಸ್ಥೆ ಆಗಸ್ಟ್ 15 ಮತ್ತು 16ರಂದು ಕುದುರೆಮುಖದಲ್ಲಿ ‘Kudremukh Off-road adventure’ ಆಯೋಜಿಸಿದೆ. ನೆಲಮಂಗಲದಿಂದ ಕುದುರೆಮುಖದವರೆಗೆ ಪ್ರಯಾಣಿಸಿ, ಕಾಡು ಮಾರ್ಗಗಳು, ನದಿ ದಾಟುವಿಕೆ, ಮಣ್ಣು ಕಲ್ಲು ಕೂಡಿದ ರಸ್ತೆಗಳಲ್ಲಿ ಆಫ್-ರೋಡಿಂಗ್ ನಡೆಸುವುದಾಗಿ ಜಾಹೀರಾತು ಮಾಡಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಸುತ್ತಮುತ್ತಲಿನ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ. ಸರಿಯಾದ ರಸ್ತೆಗಳಿಲ್ಲದೆ ಮಳೆಗಾಲ ಮಲೆನಾಡಿಗರು ಕಷ್ಟಕ್ಕೆ ಬಿದ್ದಿದ್ದಾರೆ, ಇರುವ ತಗ್ಗು ಗುಂಡಿ ರಸ್ತೆಗಳನ್ನು ಈ ಆಫ್ ರೋಡ್ ಕ್ರೇಝ್ ಹಾಳುಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಅಷ್ಟೇಯಲ್ಲ, ಇಂತಹ ಚಟುವಟಿಕೆಗಳು ನಡೆದ ಮರುದಿನ ಕಾಡು, ನದಿ ತೊರೆಗಳ ಬಳಿ ಕಸದ ರಾಶಿ ಬಿದ್ದಿರುತ್ತದೆ. ಈ ತ್ಯಾಜ್ಯ (ಪ್ಲಾಸ್ಟಿಕ್, ಆಹಾರ, ಮದ್ಯದ ಬಾಟಲಿಗಳು) ಮಣ್ಣು, ನೀರನ್ನು ಮಲಿನಗೊಳಿಸುತ್ತವೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಆನೆ ದಾಳಿಯಿಂದ 12ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಕಾಡುಕೋಣ ದಾಳಿಯಿಂದಲೂ ಹಲವು ಜೀವಹಾನಿ ಮತ್ತು ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಸುರಕ್ಷತೆ ಮತ್ತು ವನ್ಯಜೀವಿಗಳ ನೆಮ್ಮದಿಗಾಗಿ ಈ ಅನಧಿಕೃತ ಕಾರ್ಯಕ್ರಮಗಳಿಗೆ ನಿಷೇಧ ಹೇರಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಪರಿಸರ ಪ್ರೇಮಿಗಳ ಮುಖ್ಯ ಬೇಡಿಕೆಗಳು:
- ಚಿಕ್ಕಮಗಳೂರು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಆಫ್-ರೋಡಿಂಗ್ ಚಟುವಟಿಕೆಯನ್ನು ಸಂಪೂರ್ಣ ನಿಷೇಧಿಸಬೇಕು.
- ಅನಧಿಕೃತವಾಗಿ ಪ್ರಚಾರ ನಡೆಸುವ ವ್ಯಕ್ತಿಗಳು, ಕ್ಲಬ್‌ಗಳು ಮತ್ತು ರೆಸಾರ್ಟ್‌ಗಳ ವಿರುದ್ಧ ಪ್ರಕರಣ ದಾಖಲಿಸಬೇಕು.
- ನೈಟ್ ಸಫಾರಿ ನಡೆಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಕರೆ ನೀಡಿದ್ದಾರೆ.




