ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಸತ್ಯ ಮತ್ತು ಅಹಿಂಸೆಯ ಮಾರ್ಗ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 157ನೇ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಗಾಂಧೀಜಿಯವರ ಜೀವನವೇ ಸಮಾಜಕ್ಕೆ ಒಂದು ಸಂದೇಶ. ಅವರ ಆದರ್ಶಗಳನ್ನು ಜಗತ್ತಿನ ಎಲ್ಲ ಖಂಡಗಳಲ್ಲಿಯೂ ಸ್ಮರಿಸಲಾಗುತ್ತದೆ. ಇಂದಿನ ಯುವಜನರು ಮತ್ತು ವಿದ್ಯಾರ್ಥಿಗಳು ಗಾಂಧೀಜಿಯವರ ಬದುಕು, ಸ್ವಾತಂತ್ರ್ಯ ಚಳವಳಿ, ಸರಳತೆ, ಸಹಬಾಳ್ವೆ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳನ್ನು ಅರಿತು ದೇಶವನ್ನು ಮುನ್ನಡೆಸಬೇಕು,” ಎಂದು ಕರೆ ನೀಡಿದರು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಶಾಸ್ತ್ರಿಯವರ “ಜೈ ಜವಾನ್ ಜೈ ಕಿಸಾನ್” ಕನಸನ್ನು ನನಸಾಗಿಸಲು ಜಿಲ್ಲಾಡಳಿತ ಶ್ರಮಿಸುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 1.5 ಲಕ್ಷ ಜನರಿಗೆ ಕಂದಾಯ ಸೇವೆಗಳನ್ನು ತಲುಪಿಸಲಾಗಿದೆ. ಜಿಲ್ಲೆಯ ಕಡುಬಡವರಿಗೆ ನಿವೇಶನ ಒದಗಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.
This video cannot be played in your browser. Open the video directly
ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರಿಯವರ ಉತ್ತಮ ಚಿಂತನೆಗಳು ಇಂದು ನಾವು ನೆಮ್ಮದಿಯಾಗಿ ಬದುಕಲು ಕಾರಣವಾಗಿವೆ. ಸಮಾಜದ ಒಳಿತಿಗಾಗಿ ತಮ್ಮ ಆಲೋಚನೆಗಳನ್ನು ಆಚರಣೆಗೆ ತಂದ ಈ ಮಹನೀಯರು ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ. ಪ್ರಯತ್ನ ಮತ್ತು ಪರಿಶ್ರಮದಿಂದ ನಾವೂ ಜನಮಾನಸದಲ್ಲಿ ಉಳಿಯಬಹುದು ಎಂಬುದನ್ನು ಯುವಜನಾಂಗ ಮನಗಾಣಬೇಕು. ಗಾಂಧೀಜಿಯವರ ಸ್ವಚ್ಛ ಭಾರತದ ಪರಿಕಲ್ಪನೆ ಹಾಗೂ ಶಾಸ್ತ್ರಿಯವರ ಸಮರ್ಥ ಆಡಳಿತ ನಮಗೆಲ್ಲ ಮಾದರಿ ಎಂದರು.
ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಅಧ್ಯಾಪಕ ಅಕಾಡೆಮಿ ನಿರ್ದೇಶಕ ಪ್ರೊ. ಆರ್.ಎಲ್. ಸುನಿಲ್ ಕುಮಾರ್, ಗಾಂಧೀಜಿಯವರ ಬಾಲ್ಯ, ವ್ಯಾಸಂಗ, ವೃತ್ತಿಜೀವನ, ಸ್ವಾತಂತ್ರ್ಯ ಹೋರಾಟದಲ್ಲಿನ ಪಾತ್ರ, ರೈತರ ಪರವಾಗಿ ನಡೆಸಿದ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಹಾಗೂ ನೈತಿಕ ಮೌಲ್ಯಗಳ ಬಗ್ಗೆ ಬೆಳಕು ಚೆಲ್ಲಿದರು. “ಪಾಪವನ್ನು ವಿರೋಧಿಸಿ, ಪಾಪಿಗಳನ್ನು ಕ್ಷಮಿಸಿ” ಎಂಬ ಉದಾರತೆ ಗಾಂಧೀಜಿಯವರದಾಗಿತ್ತು. ಅವರ ಸತ್ಯ ಮತ್ತು ಅಹಿಂಸೆಯ ಆದರ್ಶದಿಂದ ಪ್ರೇರಿತವಾದ ವಿಶ್ವಸಂಸ್ಥೆ, ಅಕ್ಟೋಬರ್ 2ನ್ನು “ಅಂತರರಾಷ್ಟ್ರೀಯ ಅಹಿಂಸಾ ದಿನ”ವಾಗಿ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ರೈಲ್ವೆ ಮಂತ್ರಿಯಾಗಿ ಹಾಗೂ ದೇಶದ ಎರಡನೇ ಪ್ರಧಾನಿಯಾಗಿ ಶಾಸ್ತ್ರಿಯವರು ಸಲ್ಲಿಸಿದ ಸೇವೆ, ವರದಕ್ಷಿಣೆ ನಿರಾಕರಣೆ ಹಾಗೂ ರೈತಪರ ಕಾಳಜಿಯ ಬಗ್ಗೆ ಮಾಹಿತಿ ನೀಡಿದ ಅವರು, ಕಡುಬಡತನದಲ್ಲಿ ಹುಟ್ಟಿದರೂ ತಮ್ಮ ವಿಚಾರಧಾರೆಗಳಿಂದ ಪ್ರಧಾನಿ ಹುದ್ದೆಗೇರಿದ ಶಾಸ್ತ್ರಿಯವರು, ಬಡತನ ಶಾಪವಲ್ಲ, ಅದು ಸಾಧನೆಯ ಮೆಟ್ಟಿಲಾಗಬೇಕು ಎಂದು ದೇಶಕ್ಕೆ ತೋರಿಸಿಕೊಟ್ಟ ಶ್ರಮಜೀವಿ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿ ಮತ್ತು ಸಂಗಡಿಗರು “ರಘುಪತಿ ರಾಘವ ರಾಜಾರಾಂ” ಸೇರಿದಂತೆ ಭಜನಾ ಗೀತೆಗಳನ್ನು ಪ್ರಸ್ತುತಪಡಿಸಿದರು. ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ವಾರ್ತಾ ಇಲಾಖೆ ಹೊರತಂದಿರುವ “ಗಾಂಧಿ ದರ್ಶನ” ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
**ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಸನ್ಮಾನ**
ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಕಾಲೇಜು/ಸ್ನಾತಕೋತ್ತರ ವಿಭಾಗಗಳಲ್ಲಿ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
– **ಪ್ರೌಢಶಾಲಾ ವಿಭಾಗ:** ತುಮಕೂರು ತಾಲ್ಲೂಕು ಸ್ವಾಂದೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕು. ಲೇಖನ ಬಿ.ಎಂ. (ಪ್ರಥಮ), ಗುಬ್ಬಿ ತಾಲ್ಲೂಕು ಸಿ.ಎಸ್. ಪುರ ಕೆ.ಪಿ.ಎಸ್. ಶಾಲೆಯ ಕು. ಅಮೃತ ಹೆಚ್.ಆರ್. (ದ್ವಿತೀಯ), ಗುಬ್ಬಿ ತಾಲ್ಲೂಕು ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕು. ಚಿನ್ಮಯಿ ಜೆ.ಎನ್. (ತೃತೀಯ).
– **ಪದವಿಪೂರ್ವ ಕಾಲೇಜು ವಿಭಾಗ:** ತುಮಕೂರಿನ ಶ್ರೀ ಶಾರದಾಂಬ ಪದವಿಪೂರ್ವ ಕಾಲೇಜಿನ ಕು. ವರಲಕ್ಷ್ಮಿ (ಪ್ರಥಮ), ಕುಣಿಗಲ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕು. ಮಾನ್ಯ ಆರ್. (ದ್ವಿತೀಯ), ಪಾವಗಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಕು. ಅನಘ (ತೃತೀಯ).
– **ಕಾಲೇಜು/ಸ್ನಾತಕೋತ್ತರ ವಿಭಾಗ: ತುಮಕೂರು ವಿಶ್ವವಿದ್ಯಾನಿಲಯದ ಕು. ರಂಗಲಕ್ಷ್ಮಿ ಎಚ್. (ಪ್ರಥಮ), ಕು. ಸುಪ್ರಿತ ಜಿ. (ದ್ವಿತೀಯ), ಪದವಿ ವಿದ್ಯಾರ್ಥಿನಿ ಕು. ಮೇಘನ (ತೃತೀಯ).
ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೆ. ರಾಜಶೇಖರ್ ನಿರೂಪಿಸಿದರು. ಅನಿಲ್‌ಕುಮಾರ್ ಸ್ವಾಗತಿಸಿದರು.
ವಾರ್ತಾ ಸಹಾಯಕಿ ಆರ್. ರೂಪಕಲಾ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕಿ ಭಾವನ ಬಸವರಾಜ್, ಜಿಲ್ಲಾ ಖಜಾನೆ ಉಪನಿರ್ದೇಶಕಿ ಉಮಾ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಎಂ.ಎಚ್. ನಂಜುಂಡಪ್ಪ, ಗ್ರೇಡ್-2 ತಹಶೀಲ್ದಾರ್ ಕಮಲಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿಜೇತ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





