ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ್ ಅವರನ್ನು ನಿಂದಿಸಿದ ಆರೋಪದ ಮೇಲೆ ಮಾಜಿ ಶಾಸಕ ಕೆ ಶಿವನಗೌಡ ನಾಯಕ ಅವರ ಸಹೋದರ ಸೇರಿ ಬಿಜೆಪಿಯ ಎಂಟು ಮುಖಂಡರ ವಿರುದ್ಧ ದೂರು ದಾಖಲಾಗಿದೆ.
ದೇವದುರ್ಗ ತಾಲೂಕಿನ ಆಲದಮರ ತಾಂಡಾದಲ್ಲಿ ಭಾನುವಾರ ಲೈನ್‌ಮನ್ ವಿರೂಪಾಕ್ಷ ಮೃತಪಟ್ಟ ಸ್ಥಳಕ್ಕೆ ಶಾಸಕಿ ಕರೆಮ್ಮ ಭೇಟಿ ನೀಡಿದ್ದರು. ಈ ವೇಳೆ ಬಿಜೆಪಿಯ ಮುಖಂಡರು ಶಾಸಕಿಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು. ಬಿಜೆಪಿ ಮುಖಂಡರನ್ನು ಬಂಧಿಸುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು.
ಪೊಲೀಸರ ವೈಫಲ್ಯದಿಂದ ಇಂತಹ ಘಟನೆ ನಡೆಯುತ್ತಿವೆ. ಶಾಸಕರಿಗೆ ರಕ್ಷಣೆ ಇಲ್ಲ. ಇನ್‌ಸ್ಪೆಕ್ಟರ್ ಹೊಸಕೆರಪ್ಪ ತಾಲೂಕಿನಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಇನ್‌ಸ್ಪೆಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಬಸವರಾಜ ನಾಯಕ ಕೊತ್ತದೊಡ್ಡಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ರೋಹಿಣಿ V/S ರೂಪಾ | ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನ ನೀಡಿದ ನಂತರ ಇನ್‌ಸ್ಪೆಕ್ಟರ್ ಹೊಸಕೇರಪ್ಪ ಅವರು ಬಿಜೆಪಿಯ ಮಾಜಿ ಶಾಸಕ ಕೆ ಶಿವನಗೌಡ ಸಹೋದರ ಭಗವಂತ್ರಾಯ ನಾಯಕ ಸೇರಿದಂತೆ ಎಂಟು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು 24 ಗಂಟೆಯ ಒಳಗೆ ಬಂಧಿಸದಿದ್ದರೆ ಠಾಣೆಗೆ ಮತ್ತೆ ಮುತ್ತಿಗೆ ಹಾಕಲಾಗುವುದು ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.