ಸ್ಮರಣೆ | ಎಲ್ಲಾ ಕಾಲಕ್ಕೂ ಸಲ್ಲುವ ಅರಸು ಚಿಂತನೆ

Date:

ಇಂದು ದೇವರಾಜ ಅರಸು ಅವರು ಇಲ್ಲವಾದ ದಿನ. ಅರಸು ಹೇಗಿದ್ದರು, ಎಂತಹವರು, ಅವರ ಕಾಳಜಿ ಏನು, ಅವರ ಆಡಳಿತ ಹೇಗಿತ್ತು ಎನ್ನುವುದನ್ನು ಸಾರುವ ಈ ಪುಟ್ಟ ಪ್ರಸಂಗಗಳನ್ನು `ನಮ್ಮ ಅರಸು’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಈದಿನ ಓದುಗರಿಗಾಗಿ ಅರಸು ಸ್ಮರಣೆ…

ಹೊಸ ಶಾಸಕರಿಗೆ ಅರಸು ಕಿವಿಮಾತು

ದೇವರಾಜ ಅರಸರು 1978ರಲ್ಲಿ ವಿಧಾನಸಭೆಗೆ ಆಯ್ಕೆಯಾದ ತರುಣ ಶಾಸಕರನ್ನು ಕುರಿತು, `ನಿಮ್ಮಲ್ಲಿ ಅನೇಕರು ಹೊಸಬರಿದ್ದೀರಿ, ಚಿಕ್ಕವರಿದ್ದೀರಿ. ಆಡಳಿತದ ಅನುಭವದ ಬಯಕೆಗಳನ್ನು ಆಶಿಸುವವರಿದ್ದೀರಿ. ಆದರೆ ಒಂದನ್ನು ತಿಳಿಯಿರಿ, ನೀವೀಗ ನಿಮ್ಮ ಪಕ್ಷದ ಶಾಸಕರಲ್ಲ, ಕ್ಷೇತ್ರದ ಎಲ್ಲ ಜನರ ಪ್ರತಿನಿಧಿ. ನಿಮಗೆ ವಿರೋಧಿಗಳಿಲ್ಲ. ನೀವು ರಾಜಕಾರಣದಲ್ಲಿ ಬಹುಕಾಲ ಉಳಿಯಬೇಕಾದರೆ ಕ್ಷಮಾಗುಣ ಮುಖ್ಯ, ರೂಢಿಸಿಕೊಳ್ಳಿ. ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ. ಜವಾಬ್ದಾರಿಯ ಜೊತೆಗೆ ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದೊಡನೆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿ ಅನುಷ್ಠಾನಗೊಳಿಸುವ ಹರಿಕಾರರು ನೀವಾಗಬೇಕು. ನೀವೇ ಸರಕಾರ ಹಾಗೂ ಜನರ ನಡುವಿನ ಬೆಸುಗೆ’ ಎಂದರು.

ಟೇಬಲ್ ಮೇಲೆ ನೀರಿನ ಲೋಟವಿತ್ತು. ಅದನ್ನು ಎತ್ತಿ ಹಿಡಿದ ಅರಸು, `ಇದು ಸರಕಾರದ ಕಾರ್ಯಕ್ರಮ. ದಾಹವಿರುವವನಿಗೆ ಕೊಟ್ಟು ಬಾ ಎಂದರೆ, ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದರು.
-ಎಚ್. ವಿಶ್ವನಾಥ್, ಮಾಜಿ ಸಚಿವರು

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೆಳವರಿಗಾಗಿ ಕಣ್ಣೀರಿಟ್ಟ ಅರಸು

ನಾವು ಅಲೆಮಾರಿಗಳು. ಎಷ್ಟು ದಿನಾಂತ ಹೀಗೆಯೇ ಅಲೆಯುತ್ತಿರುವುದು? ಶಾಶ್ವತ ನೆಲೆ ಕಾಣಬೇಕೆಂಬ ಕನಸಿನೊಂದಿಗೆ, ನಾನು ನನ್ನ ಜಾತಿಯವರು ಕಡೂರಿನ ಬಳಿಯ ಅಮೃತಮಹಲ್ ಕಾವಲ್(ಜನರು ವಾಸಿಸಲು ಯೋಗ್ಯವಲ್ಲದ)ನಲ್ಲಿ 50-60 ಎಕರೆ ಕಣಿವೆ ಪ್ರದೇಶವನ್ನು ಸಮತಟ್ಟು ಮಾಡಿಕೊಂಡು ಕೃಷಿ ಮಾಡುತ್ತಿದ್ದೆವು. ಪಕ್ಕದಲ್ಲಿ ನಮ್ಮ ಗುಡಿಸಲುಗಳೂ ಇದ್ದವು. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಆಗಾಗ್ಗೆ ಬಂದು ಭೂಮಿ ತೆರವು ಮಾಡಿ ಎಂದು ಹೇಳುತ್ತಿದ್ದರು ಮತ್ತು ವಾದಕ್ಕಿಳಿದ ನನ್ನ ಮೇಲೆ ಕೇಸು ಕೂಡ ಹಾಕಿದ್ದರು. ನಾನು ವಕೀಲನಾದ್ದರಿಂದ ಹೇಗೋ ನಿಭಾಯಿಸುತ್ತಿದ್ದೆ. ಅದು ಹಾಗೆಯೇ- ನಮಗೂ ಅವರಿಗೂ- ನಡೆದೇ ಇತ್ತು.

ಇದ್ದಕ್ಕಿದ್ದಂತೆ ಒಂದು ದಿನ, ಅಧಿಕಾರಿಗಳ ಒಂದು ತಂಡ, ಎದೆ ಮಟ್ಟ ಬೆಳೆದು ನಿಂತ ಜೋಳದ ಹೊಲಗಳಿಗೆ ಹತ್ತಿರದ ಹಳ್ಳಿಯ ದನಕರುಗಳನ್ನು ನುಗ್ಗಿಸಿ ಮೇಯಿಸಿ, ಸಂಪೂರ್ಣವಾಗಿ ನಾಶ ಮಾಡಿದ್ದರು ಮತ್ತು ನಮ್ಮವರ 29 ಗುಡಿಸಲುಗಳಿಗೆ ಬೆಂಕಿ ಇಟ್ಟು ಸುಟ್ಟಿದ್ದರು. ಆ ಇಡೀ ಭೂ ಪ್ರದೇಶ ಬಾಂಬ್ ಬಿದ್ದಂತೆ ಹೊಗೆ, ಬೂದಿಯಿಂದ ಆವೃತವಾಗಿತ್ತು. ಅಲ್ಲಲ್ಲಿ ಗುಡಿಸಲಿನ ಒಂಟಿ ಬಿದಿರು ಕೋಲುಗಳು ಅರೆಬರೆ ಸುಟ್ಟು ಸಾಕ್ಷಿ ಹೇಳುತ್ತಿದ್ದವು. ಎಲ್ಲವನ್ನು ಕಳೆದುಕೊಂಡ ನನ್ನ ಜನ ಕರುಳು ಕಿತ್ತು ಬರುವಂತೆ ರೋದಿಸುತ್ತಿದ್ದರು.

ನಾನು ಇದನ್ನೆಲ್ಲ ದೇವರಾಜ ಅರಸರಿಗೆ ಹೇಳಿದೆ. ಅಷ್ಟೇ ಅಲ್ಲ, ‘ನಾನು ಹೇಳುವುದಕ್ಕಿಂತ ನೀವು ಖುದ್ದು ಒಂದ್ಸಲ ನೋಡಿ ಬುದ್ಧಿ, ಅಷ್ಟು ಸಾಕು’ ಎಂದು ವಿನಂತಿಸಿಕೊಂಡೆ. ನಾನೊಬ್ಬ ಯಕಃಶ್ಚಿತ್ ಹೆಳವ, ನಾನೇಳಿದ್ದನ್ನು ಕೇಳಬೇಕೆಂಬ ಯಾವ ಉಮೇದು ಇರಲಿಲ್ಲ. ಆದರೆ ಆ ತಕ್ಷಣವೇ ಮುಖ್ಯಮಂತ್ರಿ ಅರಸು ಸ್ಥಳಕ್ಕೆ ಬಂದರು. ಜಿಲ್ಲಾಧಿಕಾರಿಯೂ ಬಂದರು. ಮುಖ್ಯಮಂತ್ರಿಗಳೇ ಬಂದಿದ್ದನ್ನು ನೋಡಿದ ನನ್ನ ಜನ, ಹೆಂಗಸರು ಮಕ್ಕಳಾದಿಯಾಗಿ ಭೂಮಿಯೇ ಬಿರಿಯುವಂತೆ, ಕಣಿವೆ ತುಂಬಿ ಹರಿಯುವಂತೆ ಅತ್ತು ಗೋಳಾಡತೊಡಗಿದರು. ಅಲ್ಲಿಯ ಸ್ಥಿತಿಯೂ ಹಾಗೆಯೇ ಇತ್ತು. ಅದನ್ನೆಲ್ಲ ನೋಡಿದ ಅರಸರ ಕರುಳು ಚುರುಕ್ ಎಂದಿತು. ಜಿಲ್ಲಾಧಿಕಾರಿಯನ್ನು ಕರೆದು, ‘ಯಾಕೆ ಹೀಗೆ ಮಾಡಿದಿರಿ’ ಎಂದರು. ಅದಕ್ಕವರು, ‘ಇದು ಸರಕಾರಿ ಭೂಮಿ, ಸಾಗುವಳಿ ಮಾಡಬಾರದು, ಇಲ್ಲಿಂದ ಖಾಲಿ ಮಾಡಿ ಎಂದು ನಾವು ಇವರಿಗೆ ಸುಮಾರು ಸಲ ವಾರ್ನಿಂಗ್ ಮಾಡಿದ್ದೋ, ಕೇಳದಿದ್ದಾಗ ಹೀಗೆ ಮಾಡಬೇಕಾಯಿತು’ ಎಂದು ಸಮಜಾಯಿಷಿ ನೀಡಿದರು.

ಅರಸರು, ‘ಪೊಲೀಸ್ ಫೋರ್ಸ್ ತೆಗೆದುಕೊಂಡು ಖಾಲಿ ಮಾಡಿಸಬಹುದಿತ್ತಲ್ಲ. ಬೆಳೆದ ಬೆಳೆಯನ್ನು ದನಗಳನ್ನು ಬಿಟ್ಟು ಮೇಯಿಸಿದ್ದು ಏಕೆ, ತಿನ್ನುವ ಅನ್ನವನ್ನು ಹೀಗೆ ನಾಶ ಮಾಡುತ್ತಾರೆಯೇ? ನೀನು ರೈತನ ಮಗನೆ, ಕೃಷಿ ಕುಟುಂಬದಲ್ಲಿ ಹುಟ್ಟಿದವನೆ, ನಿನ್ನ ಕರುಳು ಚುರುಕ್ ಎನ್ನಲಿಲ್ಲವೆ? ಅವರೇನು ಕಳ್ಳತನ ಮಾಡಿಲ್ವಲ್ಲ, ಕಷ್ಟ ಪಟ್ಟು ಬೆವರು ಸುರಿಸಿ, ಭೂಮಿ ಸಮತಟ್ಟು ಮಾಡಿಕೊಂಡು ಗೆಯ್ದಿದ್ದಾರೆ, ಉತ್ತು ಬಿತ್ತು ಬೆಳೆ ತೆಗೆದಿದ್ದಾರೆ, ಹೊಟ್ಟೆ-ಬಟ್ಟೆಗೆ ದಾರಿ ಹುಡುಕಿಕೊಂಡಿದ್ದಾರೆ, ಸ್ವಾವಲಂಬಿಗಳಾಗಿ ಬದುಕಲು ಆಸೆ ಪಟ್ಟಿದ್ದಾರೆ. ಏನೀಗ, ಅವರು ಮತ್ತೆ ಭಿಕ್ಷೆ ಬೇಡಬೇಕಾ… ಅಲೆಮಾರಿಗಳಾಗಿಯೇ ಬದುಕಬೇಕಾ… ಅವರೂ ನಿಮ್ಮಂತೆಯೇ ಮನುಷ್ಯರಲ್ಲವಾ… ಐ ಫೀಲ್ ವೆರಿ ಬ್ಯಾಡ್. ಇದೇ ಮೊದಲು, ಇದೇ ಕೊನೆ, ಇಲ್ಲಿಗೆ ಯಾರೂ ಕಾಲಿಡಕ್ಕೂಡದು’ ಎಂದು ಕಟ್ಟಪ್ಪಣೆ ವಿಧಿಸಿದರು.

ಗೋಳಾಡುತ್ತಿದ್ದ ಜನರನ್ನು ಕಂಡ ಅರಸರು ನನ್ನನ್ನು ಕರೆದು, ‘ಅಲೆಮಾರಿ ಜನಗಳಿಗೆ ಜಮೀನು ಕೊಡಬೇಕೆ’ ಎಂದರು. ಏಕೆಂದರೆ ಸರಕಾರ ಕೊಟ್ಟ ಭೂಮಿಯನ್ನು ಅವರು ಮಾರಿಕೊಂಡು ಕುಡಿದು ತಿಂದು ಬೇರೆಲ್ಲಿಗೋ ಹೋಗಿದ್ದರ ಉದಾಹರಣೆಗಳು ಬೇಕಾದಷ್ಟಿದ್ದವು. ನಾನು ಯೋಚಿಸಿ, ‘ಬುದ್ಧಿ, ಅವರು ಕಷ್ಟಪಟ್ಟು ಉಳುಮೆ ಮಾಡಿ, ಬೆಳೆ ತೆಗೆದಿದ್ದಾರೆ, ಅಂದರೆ ಅವರು ಇಲ್ಲಿಯೇ ಇರ್ತರೆ ಅಂತ, ಅವರು ಸತ್ರೆ ಹೂಳಕ್ಕೂ ಜಾಗಿಲ್ಲ, ನೀವು ಕೊಟ್ಟರೆ, ಇಲ್ಲೇ ಸಾಯ್ತರೆ’ ಅಂದೆ. ಅರಸು, ‘ನೋಡ್ಲ ಹೆಳವರ್, ನಿನ್ನ ನಂಬಿ ಜಮೀನು ಕೊಡುತ್ತಿದ್ದೇನೆ, ದುರುಪಯೋಗವೇನಾದ್ರು ಆದ್ರೆ ನಿನ್ನ ತಲೆ ಹೋಗುತ್ತೆ’ ಅಂದರು. ಆಗಲಿ ಅಂದೆ. ನಿಂತ ಜಾಗದಲ್ಲಿಯೇ 250 ಎಕರೆ ಭೂಮಿಯನ್ನು ಹೆಳವರಿಗಾಗಿ ಮಂಜೂರು ಮಾಡಿದರು.

ಅವತ್ತು ನಮ್ಮ ಹೆಳವರ ಹಟ್ಟಿಯಲ್ಲಿ ನನ್ನ ಏಕೈಕ ಸೆಕೆಂಡ್ ಹ್ಯಾಂಡ್ ಸೈಕಲ್ಲೇ ಭಾರೀ ವಾಹನ. ಇವತ್ತು ಇಲ್ಲಿ 7 ಕಾರುಗಳಿವೆ, 11 ಟ್ರಾಕ್ಟರ್‌ಗಳಿವೆ, 60 ಬೈಕ್‌ಗಳಿವೆ. 200 ಕುಟುಂಬಗಳಿವೆ. 2 ಸಾವಿರಕ್ಕೂ ಮೀರಿ ಜನಸಂಖ್ಯೆ ಬೆಳೆಯುತ್ತಿದೆ. ಲೆಕ್ಕವಿಲ್ಲದಷ್ಟು ಹುಡುಗ-ಹುಡುಗಿಯರು ಪದವಿ ಪಡೆದು, ಎಂಜಿನಿಯರ್, ಡಾಕ್ಟರ್, ಲಾಯರ್‌ಗಳಾಗಿದ್ದಾರೆ. ಗ್ರಾಮ ಪಂಚಾಯ್ತಿ ಮೆಂಬರ್‌ಗಳಾಗಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ನೆಲೆಯೇ ಇಲ್ಲದ ಹೆಳವರು ಇಂದು ಭೂ ಮಾಲೀಕರಾಗಿದ್ದಾರೆ. ಹೆಳವರಿಗೆ ಹೆಗಲು ಕೊಟ್ಟ ದೇವರಾಜ ಅರಸರ ಹೆಸರು ಅಜರಾಮರವಾಗಿ ಉಳಿಯಲು ನಮ್ಮ ಹಟ್ಟಿಗೆ ‘ದೇವರಾಜ ಅರಸು ಹೆಳವರ ಹಟ್ಟಿ’ ಎಂದು ನಾಮಕರಣ ಮಾಡಿದ್ದೇವೆ. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಗುರುತಿಸುವಷ್ಟು ಪ್ರಬಲವಾಗಿ ಬೆಳೆದಿದ್ದೇವೆ. ಇದನ್ನು ನೀವು ಏನಂತ ವ್ಯಾಖ್ಯಾನಿಸುತ್ತೀರಾ…? 
-ಎಂ.ಎಸ್. ಹೆಳವರ್, ವಕೀಲರು, ಸಾಮಾಜಿಕ ಹೋರಾಟಗಾರರು

ಇದನ್ನು ಓದಿದ್ದೀರಾ?: ದೊರೆಸ್ವಾಮಿ ನಮನ: ಶತಾಯುಷಿಯ ಸ್ಫೂರ್ತಿಯಲಿ ಹೋರಾಟದ ಹಾದಿ ಅರಳಲಿ

“ನೀರಿಲ್ಲ ಅಂದ್ರೆ ಏನ್ಮಾಡ್ತೀರಿ…” ಎಂದ ಅರಸು

ಒಂದು ಸಲ ಕಾರಿನಲ್ಲಿ ಮೂರು ಗಂಟೆಗಳ ಕಾಲದ ದೀರ್ಘ ಪ್ರಯಾಣ. ಬೆಳಗಾವಿ, ಜಮಖಂಡಿ, ಬಿಜಾಪುರದ ಮೂಲಕ ಗುಲ್ಪರ್ಗಾಗೆ ಹೋಗುವುದಿತ್ತು. ಅಲ್ಲಿಂದ ಸಿಎಂ ಹೈದರಾಬಾದ್‌ಗೆ, ಹೈದರಾಬಾದ್‌ನಿಂದ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಫಿಕ್ಸ್ ಆಗಿತ್ತು. ಕಾರಿನಲ್ಲಿ ನಾಲ್ವರು- ನಾನು ಮತ್ತು ಡ್ರೈವರ್ ಮುಂದೆ, ಹಿಂದಿನ ಸೀಟಿನಲ್ಲಿ ರೆಬೆಲೋ ಸಾಹೇಬರು ಮತ್ತು ಮುಖ್ಯಮಂತ್ರಿ ದೇವರಾಜ ಅರಸರು. ಕಾರಿನಲ್ಲಿ ಉದ್ದಕ್ಕೂ ಏನೇನೋ ಮಾತು. ಎಲ್ಲವನ್ನೂ ಸಾವಧಾನವಾಗಿ ಕೇಳಿಸಿಕೊಳ್ಳುತ್ತಿದ್ದರು ಅರಸು. ಕಾರಿನಲ್ಲಿ ಕೂತಾಕ್ಷಣ ನಮ್ಮ-ನಿಮ್ಮಂತಹ ಸಾಮಾನ್ಯರು ಮೊದಲಿಗೆ ಕಂಫರ್ಟ್ ಆಗಿ ಕೂತು ರಿಲ್ಯಾಕ್ಸ್ ಆಗುತ್ತಾರೆ. ಆ ನಂತರ ನಿದ್ರೆಗೆ ಜಾರುತ್ತಾರೆ. ಆದರೆ ಅರಸರಿಗೆ ಕಾರಿನಲ್ಲಿ ಕೂತರೂ ರಸ್ತೆಯ ಅಕ್ಕ-ಪಕ್ಕ ನೋಡುವುದು, ಹಸಿರು ಹೊಲ-ಗದ್ದೆಗಳನ್ನು ವೀಕ್ಷಿಸುವುದು, ಕೆರೆ-ಕಟ್ಟೆ-ನಾಲೆಗಳ ನೀರಿನ ಮಟ್ಟವನ್ನು ಗಮನಿಸುವುದೇ ಕೆಲಸವಾಗಿತ್ತು. ಹಾಗೆ ನೋಡುವ, ಕುತೂಹಲದ ಕಣ್ಣುಗಳ ರಾಜಕಾರಣಿಯನ್ನು ನಾನು ನನ್ನ ಸರ್ವೀಸ್‌ನಲ್ಲಿ ಮತ್ತೊಬ್ಬರನ್ನು ನೋಡಲಿಲ್ಲ.

ಹುಮ್ನಾಬಾದ್ ಬಳಿ ಹೋಗುತ್ತಿದ್ದಾಗ ರಸ್ತೆಯ ಅಂಚಿನಲ್ಲಿ ಒಂದಷ್ಟು ಜನ ನಿಂತಿದ್ದರು. ‘ಸ್ಟಾಪ್ ಸ್ಟಾಪ್’ ಎಂದರು. ಕಾರಿನಿಂದ ಇಳಿದು ಅಲ್ಲಿ ನಿಂತಿದ್ದ ಹಳ್ಳಿಯ ಜನರತ್ತ ಹೋದರು. ಆ ಜನರಿಗೆ ಮುಖ್ಯಮಂತ್ರಿ ದೇವರಾಜ ಅರಸು ಎನ್ನುವುದು ಗೊತ್ತಾಯಿತು. ಕೈ ಮುಗಿದರು. ಅರಸು, ‘ಸರಕಾರದಿಂದ ನಿಮಗೆ ಏನು ಅನುಕೂಲ ಆಗಿದೆ’ ಎಂದರು. ಅವರು ‘ಸರಕಾರದೋರು ಬೋರ್ವೆಲ್ ಕೊರೆಸಿಕೊಟ್ಟಿದಾರೆ ಸ್ವಾಮಿ, ಆದರೆ ಹ್ಯಾಂಡ್ಪಂಪ್ ಕೊಟ್ಟಿಲ್ಲ, ಕುಡಿಯೋ ನೀರಿಲ್ಲ, ತೊಂದರೆ ಸ್ವಾಮಿ’ ಎಂದು ದೂರಿದರು. ತಕ್ಷಣ ಅರಸು, ‘ಅಧಿಕಾರಿಗಳಿಗೆ ಹೇಳಿ ಮಾಡಿಸುತ್ತೇನೆ’ ಎಂದು ಅವರಿಗೆ ಭರವಸೆ ನೀಡಿದರು. ಕೈ ಮುಗಿದು ಕಾರು ಹತ್ತಿದರು. ಕಾರಿನಲ್ಲಿ ಕೂರುತ್ತಿದ್ದಂತೆ, ನಮ್ಮನ್ನು ಉದ್ದೇಶಿಸಿ, ‘ಒಂದು ದಿನ ನೀರಿಲ್ಲದಿದ್ದರೆ ಏನ್ಮಾಡ್ತೀರಿ ನೀವು’ ಎಂದು ಸರ್ಕ್ಯಾಸ್ಟಿಕ್ಕಾಗಿ ಪ್ರಶ್ನಿಸಿದರು. ಸಡನ್ನಾಗಿ ಎದುರಾದ ಪ್ರಶ್ನೆಯಿಂದ ನಾವು ಕಕ್ಕಾಬಿಕ್ಕಿಯಾದೆವು. ಉತ್ತರಿಸಲು ತಡವರಿಸಿದೆವು. ‘ಹ್ಯಾಂಡ್ ಪಂಪ್ ಬೇಕಂತೆ, ಕೂಡಲೆ ಕೊಡಿಸಿ’ ಎಂದು ಆಜ್ಞೆ ಮಾಡಿದರು.

ಜನರ ಕಷ್ಟ ಅರಿತು, ನಮ್ಮಂತಹ ಅಧಿಕಾರಿಗಳಿಗೆ ಆ ಕಷ್ಟ ಅರಿವಾಗುವಂತೆ ಹೇಳಿ ಕೆಲಸ ಮಾಡಿಸುವುದು ಅರಸರ ಸ್ಟೈಲ್ ಆಫ್ ವರ್ಕಿಂಗ್.
-ಜೆ.ಸಿ. ಲಿನ್, ನಿವೃತ್ತ ಐಎಎಸ್ ಅಧಿಕಾರಿ

ಹಣ ಮತ್ತು ಅಧಿಕಾರ ಎರಡೂ ಒಂದಾದರೆ…

ಹೈದರಾಬಾದ್ ಕರ್ನಾಟಕದ ಕಡೆಯ ನಮ್ಮ ಪಕ್ಷದ ಶಾಸಕರಿಗೆ ಚುನಾವಣೆಗೆ ಬೇಕಾದ್ದನ್ನು ಯಥೇಚ್ಛವಾಗಿ ಕೊಟ್ಟವರು ಅಬಕಾರಿ ಗುತ್ತಿಗೆದಾರರಾದ ಗುತ್ತೇದಾರ್. ಇವರು ಈಗಿನ ಶಾಸಕ ಮಾಲಕಯ್ಯ ಗುತ್ತೇದಾರ್ ಅವರ ತಂದೆ. ಇವರಿಂದ ಸಹಾಯ ಪಡೆದ ದೇವೇಂದ್ರಪ್ಪ ಘಾಳಪ್ಪ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಪ್ರಭಾಕರ್ ತೇಳ್ಕರ್ ದೇವರಾಜ ಅರಸರಲ್ಲಿಗೆ ಬಂದು, `ವೆಂಕಯ್ಯ ಗುತ್ತೇದಾರರನ್ನು ಎಂಎಲ್ಸಿ ಮಾಡಿ’ ಎಂದು ಶಿಫಾರಸ್ಸು ಮಾಡಿದರು.

ಅದೇ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ಕಡೆಯ ಶಾಸಕರು ಇಂಥದ್ದೇ ಕಾರಣ ಮುಂದೊಡ್ಡಿ, ಅಬಕಾರಿ ಉದ್ಯಮಿ ಶ್ರೀಹರಿ ಖೋಡೆಯನ್ನು ಎಂಎಲ್ಸಿ ಮಾಡಿ ಎಂದರು. ಆಗ ದೇವರಾಜ ಅರಸರು, ಎರಡೂ ಭಾಗದ ಶಾಸಕರನ್ನು ಕರೆದು, `ಅವರು ಉದ್ಯಮಿಗಳು, ವ್ಯಾಪಾರಸ್ಥರು, ಹಣ ಕೊಟ್ಟು ಸಹಕರಿಸಿದ್ದಾರೆ, ನಿಜ. ನೀವೂ ನಿಮ್ಮ ಅಧಿಕಾರ ಬಳಸಿ ಅವರಿಗೆ ಸಹಾಯ ಮಾಡಿಕೊಡಿ, ತಪ್ಪಲ್ಲ. ಆದರೆ ಅವರ ಕೈಗೆ ಅಧಿಕಾರ ಕೊಟ್ಟರೆ, ಹಣ ಮತ್ತು ಅಧಿಕಾರ ಎರಡೂ ಒಂದಾದರೆ ರಾಜಕಾರಣಕ್ಕೆ ಬೆಲೆ ಇಲ್ಲ, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ, ಎಚ್ಚರ’ ಎಂದರು.
-ವೀರಣ್ಣ ಮತ್ತಿಕಟ್ಟಿ, ಮಾಜಿ ಸ್ಪೀಕರ್

ಅರಸು ಸ್ಟೈಲ್ ಆಫ್ ವರ್ಕಿಂಗ್

ದೇವರಾಜ ಅರಸು ಅವರು ಎಲ್ಲಿಗಾದರೂ ಬರುತ್ತಾರೆಂದು ಗೊತ್ತಾದರೆ, ಅದು ಹೇಗೋ ಜನ ಜಮಾಯಿಸಿಬಿಡುತ್ತಿದ್ದರು. ಆ ಜನರಲ್ಲಿ ಬಡವರು, ಶೋಷಿತರು, ಮಹಿಳೆಯರು, ಅಸಹಾಯಕರು, ಶ್ರೀಮಂತರು, ರೈತರು… ಎಲ್ಲರೂ ಇರುತ್ತಿದ್ದರು. ಅವರ ಕೈಯಲ್ಲೊಂದು ಅರ್ಜಿ ಇರುತ್ತಿತ್ತು. ಅರಸರು ಬರುವುದನ್ನು ಕಾದು ಆ ಅರ್ಜಿಯನ್ನು ಅವರ ಕೈಗಿಡುತ್ತಿದ್ದರು. ಅರಸರೂ ಅಷ್ಟೇ, ಕೊಟ್ಟ ಅರ್ಜಿಯನ್ನು ಅಲ್ಲಿಯೇ ಓದುತ್ತಿದ್ದರು. ಅಲ್ಲೇ ಆ ಸಮಸ್ಯೆ ಏನು, ಅದು ಯಾವ ಇಲಾಖೆಗೆ ಸಂಬಂಧಿಸಿದ್ದು, ಅದನ್ನು ಯಾವ ಅಧಿಕಾರಿಗೆ ಕೊಟ್ಟು ಹೇಳಬೇಕು ಎನ್ನುವುದನ್ನು ನಿಂತ ಜಾಗದಲ್ಲಿಯೇ ನಿರ್ಧರಿಸಿಬಿಡುತ್ತಿದ್ದರು. ಅವರವರಿಗೇ ಕೊಟ್ಟು, ಇಷ್ಟು ದಿನಗಳೊಳಗೆ ಇದಾಗಬೇಕು ಎಂದು ಆದೇಶಿಸುತ್ತಿದ್ದರು.

ಅದು ಅವರಲ್ಲಿ ಮಾತ್ರ. ಇದನ್ನು ಮತ್ತಿನ್ಯಾವ ಮುಖ್ಯಮಂತ್ರಿಗಳಲ್ಲೂ ಕಾಣಲಿಲ್ಲ, ಜನರ ಸಮಸ್ಯೆಗಳೂ ನೀಗಲಿಲ್ಲ. ಮುಖ್ಯಮಂತ್ರಿ ದೇವರಾಜ ಅರಸು ಬರುತ್ತಾರೆಂದರೆ ಸಾಮಾನ್ಯವಾಗಿ ಜಿಲ್ಲೆಯ ಅಷ್ಟೂ ಅಧಿಕಾರಿಗಳು ಅಲ್ಲಿ ಹಾಜರಿರುತ್ತಿದ್ದರು. ಒಂದೊಂದು ಸಲ, ಅಲ್ಲಿದ್ದ ಅಧಿಕಾರಿಯನ್ನೇ ಕರೆದು, ಅವರ ಕೈಗೆ ಅರ್ಜಿ ಕೊಟ್ಟು, `ಹೌ ಟು ಸಾಲ್ವ್ ದಿಸ್’ ಎಂದು ಪ್ರಶ್ನಿಸುತ್ತಿದ್ದರು. ಅಧಿಕಾರಿಗಳೂ ಅಷ್ಟೇ, ಅರಸು ಕೊಟ್ಟ ಅರ್ಜಿಗೆ ಸೂಕ್ತ ಸಲಹೆ ಸೂಚಿಸಿ, ಪ್ರಾಮಾಣಿಕವಾಗಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ಇದನ್ನೆಲ್ಲ ನೋಡುತ್ತಿದ್ದ ನನಗೆ, ಈ ಮನುಷ್ಯ, ಜನರ ಸಮಸ್ಯೆ ಪರಿಹಾರ ಮಾಡಲಿಕ್ಕಾಗಿಯೇ ಹುಟ್ಟಿ ಬಂದವನೇನೋ ಅನ್ನಿಸುತ್ತಿತ್ತು. ಆ ಮಟ್ಟಿನ ಕಾಳಜಿ, ಕಳಕಳಿ ಮತ್ತೆ ಯಾರಲ್ಲಿಯೂ ಕಾಣಲಿಲ್ಲ.
-ಎ.ಸಿ. ಲಕ್ಷ್ಮಣ್, ನಿವೃತ್ತ ಐಎಫ್ಎಸ್ ಅಧಿಕಾರಿ

ನಾಳೆಗೂ ಉಳಿಯುವಂತಹ ಕೆಲಸ…

`ಅಹಿಂದ’ ಅಂತ ಇವತ್ತೆಲ್ಲ ಹೇಳ್ತಿದಾರಲ್ಲ, ಅದನ್ನು ಕರ್ನಾಟಕ ರಾಜ್ಯದಲ್ಲಿ ಮೊದಲು ಕನ್ಸಾಲಿಡೇಟ್ ಮಾಡಿದ್ದೆ ದೇವರಾಜ ಅರಸು. ಆ ವರ್ಗಗಳಿಂದ ಬಂದ ನಾಲ್ಕು ಜನ ಮುಖ್ಯಮಂತ್ರಿಯಾಗಲು ಕಾರಣಕರ್ತರೇ ಅರಸು. ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಂಡವರು ಅರಸು. ಟೋಟಲಿ ಡಿಫರೆಂಟ್ ಪರ್ಸನಾಲಿಟಿ. ಆಲ್ವೇಸ್ ಸ್ಮೈಲಿಂಗ್. ವೆರಿ ಗುಡ್ ಲಿಸನರ್. ಫ್ರೆಂಡ್ಲಿ. ಭವಿಷ್ಯದ ಬಗ್ಗೆ ವಿಷನ್ ಇದ್ದ ಮಾಸ್ ಲೀಡರ್. ಅವರು ಯಾವಾಗಲೂ ಹೇಳುತ್ತಿದ್ದ ಮಾತೊಂದು ನೆನಪಾಗುತ್ತಿದೆ, ‘ಇವತ್ತು ಸಿಎಂ ಆಗಿ ಮನೆಗೆ ಹೋಗೋದಲ್ಲ, ನಾಳೆಗೂ ಉಳಿಯಬೇಕು, ಅದು ಮುಖ್ಯ’ ಎನ್ನುತ್ತಿದ್ದರು ಮತ್ತು ಅದಕ್ಕೆ ಬದ್ಧರಾಗಿ ನಡೆದುಕೊಂಡರು. ನನ್ನ ಪ್ರಕಾರ ದೇವರಾಜ ಅರಸು ಆಧುನಿಕ ಕರ್ನಾಟಕದ ನಿರ್ಮಾರ್ತೃ.
-ಮಾರ್ಗರೆಟ್ ಆಳ್ವಾ, ಮಾಜಿ ರಾಜ್ಯಪಾಲರು

ಇದನ್ನು ಓದಿದ್ದೀರಾ?: ನೆಹರೂ ವೈಜ್ಞಾನಿಕ ದೃಷ್ಟಿ ಕುರಿತು ಕುವೆಂಪು ಬರಹ

ಸಾಮಾಜಿಕ ನ್ಯಾಯದ ಹರಿಕಾರ

ದೇವರಾಜ ಅರಸು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡದ್ದು ಮಾರ್ಚ್ 1972ರಲ್ಲಿ. ಅಧಿಕಾರಕ್ಕೆ ಬಂದ ಐದು ತಿಂಗಳಲ್ಲಿಯೇ ಅರಸು, ಬೇಡ ಸಮುದಾಯದ ಮೇಧಾವಿ ವಕೀಲ ಎಲ್.ಜಿ. ಹಾವನೂರ್ ನೇತೃತ್ವದಲ್ಲಿ ಹಾವನೂರು ಆಯೋಗ ರಚಿಸಿದರು. ಈ ಸಮಿತಿಗೆ ವೈ.ರಾಮಚಂದ್ರ, ಧರಂಸಿಂಗ್, ಕೆ.ಆರ್.ಎಸ್.ನಾಯ್ಡು, ಕೆ.ಎಂ.ನಾಗಣ್ಣ, ಎಸ್.ಆರ್.ಮಾನಶೆಟ್ಟಿ ಮತ್ತು ಪಿ.ಜಿ.ಹಬೀಬರನ್ನು ಸದಸ್ಯರನ್ನಾಗಿ ನೇಮಕ ಮಾಡಿದರು. ಈ ಆಯೋಗದ ಮುಖ್ಯ ಉದ್ದೇಶ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಗುರುತಿಸುವುದು, ಪ್ರತಿಯೊಂದು ಜಾತಿಯ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವುದು, ಅಧ್ಯಯನ ನಡೆಸಿ ನಿರ್ಣಾಯಕ ಮಾನದಂಡಗಳನ್ನು ರೂಪಿಸುವುದು; ಅವರ ಉನ್ನತಿಗಾಗಿ ಸರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸ್ಸು ಮಾಡುವುದು.

ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವನ್ನು ಹೇಳಲೇಬೇಕು. ದೇವರಾಜ ಅರಸು ಅತಿ ಸಣ್ಣ ಸಮುದಾಯದಿಂದ ಬಂದು ಮುಖ್ಯಮಂತ್ರಿಯಾದವರು. ಇವರು ಮುಖ್ಯಮಂತ್ರಿಯಾಗುವುದಕ್ಕೂ ಮುಂಚೆ, ಕರ್ನಾಟಕದ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದವರು; ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರು. ಸಣ್ಣ ಪುಟ್ಟ ಜಾತಿಯ ಜನ ಮುಖ್ಯಮಂತ್ರಿಯಾದ ಉದಾಹರಣೆ ಇರಲಿಲ್ಲ. ಅಂತಹ ಸಂದಿಗ್ಧ ಸಂದರ್ಭದಲ್ಲಿ ಮುಖ್ಯಮಂತ್ರಿಯಾದ ಅರಸು, ಅಧಿಕಾರಕ್ಕೇರಿದ ಐದೇ ತಿಂಗಳಿಗೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ನೀಡಲು ಹಾವನೂರ್ ಆಯೋಗ ರಚಿಸಿದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತದೆ, ಕುರ್ಚಿಗೆ ಕಂಟಕ ತರುತ್ತದೆ ಎಂಬುದರ ಅರಿವಿತ್ತು. ಅರಿವಿದ್ದೂ ಸಮಿತಿ ರಚಿಸಿದ್ದು, ಅರಸರ ರಾಜಕೀಯ ಇಚ್ಛಾಶಕ್ತಿಗೊಂದು ಉತ್ತಮ ಉದಾಹರಣೆ.
-ಪ್ರೊ.ರವಿವರ್ಮಕುಮಾರ್, ಹಿರಿಯ ನ್ಯಾಯವಾದಿ

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಒಂದೇ ಠಾಣೆಯಲ್ಲಿ 1.02 ಲಕ್ಷ ಸಂಚಾರ ನಿಮಯ ಉಲ್ಲಂಘನೆ ಪ್ರಕರಣ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಪತ್ತೆ ಮಾಡಲು...

ಲೋಕಸಭಾ ಚುನಾವಣೆ | ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ಜೂನ್ 4ರಂದು ಬೆಂಗಳೂರು ಪೊಲೀಸ್...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...

ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್‌ ಕೆಜಿಗೆ ₹220

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಜನರು...