ಒಂದು ತಿಂಗಳು ತಡವಾಗಿ ನೈರುತ್ಯ ಮಾನ್ಸೂನ್ ಮಾರುತಗಳು (ಮುಂಗಾರು ಮಳೆ) ರಾಜ್ಯವನ್ನು ಪ್ರವೇಶಿಸಿವೆ. ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.
ಮಂಗಳೂರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಅಬ್ಬರದ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಮಂಗಳೂರು ನಗರದ ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಸಂಚಾರ ಅಸ್ಥವ್ಯಸ್ಥವಾಗಿದೆ. ನಗರದ ಪಂಪ್‌ವೆಲ್ ರಸ್ತೆಯಲ್ಲಿ ತುಂಬಿರುವ ನೀರಿನಿಂದ ಖಾಸಗೀ ಬಸ್‌ವೊಂದರ ಎಂಜಿನ್ ಹಾಳಾಗಿದ್ದು, ರಸ್ತೆಯಲ್ಲಿಯೇ ಕೆಟ್ಟುಹೋಗಿದೆ.
ಆ ಬಸ್‌ಅನ್ನು ನೀರಿನ ಮಧ್ಯದಲ್ಲಿಯೇ ಹಲವಾರು ತಳ್ಳಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವು ನೆಟ್ಟಿಗರು ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯನ್ನು ಅಣಕಿಸಿ, ವ್ಯಂಗ್ಯವಾಡಿದ್ದಾರೆ.
ನೆಟ್ಟಿಗರೊಬ್ಬರು ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ‘ಸ್ಮಾರ್ಟ್ ಸಿಟಿ ಮಂಗಳೂರು. ಶ್ರೇಯಸ್ಸೆಲ್ಲಾ ಮೋದಿಯವರಿಗೇ ಮೀಸಲು’ ಎಂದು ವ್ಯಂಗ್ಯವಾಡಿದ್ದಾರೆ.
ವಿಡಿಯೋವನ್ನು ಹಲವರು ರೀ-ಟ್ವೀಟ್ ಮಾಡಿದ್ದು, “ಚರಂಡಿ, ಮೋರಿ, ರಸ್ತೆಗಳ ಬಗ್ಗೆ ಮಾತಾಡಬೇಡಿ. ಲವ್ ಜಿಹಾದ್ ಬಗ್ಗೆ ಮಾತಾಡಿ” ಎಂದು ಲೇವಡಿ ಮಾಡಿದ್ದಾರೆ. ಕೆಲವರು “40% ಕಮಿಷನ್‌ನ ಕೃಪೆ” ಎಂದಿದ್ದಾರೆ.