ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ (ಇಸಿಐ) ನೀಡಿದ ಸ್ಪಷ್ಟೀಕರಣವನ್ನು ಸಿಪಿಐ(ಎಂ) ಪೋಲಿಟ್ ಬ್ಯೂರೋ ತಿರಸ್ಕರಿಸಿದೆ. ಇದರ ಬೆನ್ನಲ್ಲೇ, ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪಕ್ಷವು ಆಗ್ರಹಿಸಿದೆ.
ಇತ್ತೀಚೆಗೆ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆ ಪ್ರಕಟಿಸಿದ ತನಿಖಾ ವರದಿಯ ಪ್ರಕಾರ, ಮೂವರು ಸದಸ್ಯರ ಚುನಾವಣಾ ಆಯೋಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತೆಗೆದುಕೊಂಡ ಹಲವು ನಿರ್ಧಾರಗಳು ಹಾಗೂ SIR ಪ್ರಕ್ರಿಯೆಗೆ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: SIR ಅಕ್ರಮ | ಗ್ಯಾನೇಶ್ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್ ಶಾ ಏನು?
ಕಾನೂನಿನ ಪ್ರಕಾರ ಮೂವರೂ ಆಯುಕ್ತರು ಸಮಾನ ಅಧಿಕಾರ ಹೊಂದಿದ್ದು, ನಿರ್ಧಾರಗಳನ್ನು ಬಹುಮತ ಅಥವಾ ಸರ್ವಸಮ್ಮತಿಯಿಂದ ತೆಗೆದುಕೊಳ್ಳಬೇಕಿತ್ತು. ಆದರೆ, ಸಿಇಸಿ ಅವರು ಆಕ್ಷೇಪಗಳನ್ನು ಬದಿಗೊತ್ತಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಆರೋಪಗಳನ್ನು ತಳ್ಳಿಹಾಕಿದ್ದ ಚುನಾವಣಾ ಆಯೋಗ, ಆಯೋಗದ ಎಲ್ಲಾ ನಿರ್ಧಾರಗಳು ನಿಯಮಾನುಸಾರವೇ ನಡೆದಿವೆ ಮತ್ತು ಹತ್ತಾರು ತಿಂಗಳ ನಿರ್ಧಾರಗಳಲ್ಲಿ ನಿರ್ದಿಷ್ಟ ಆಂತರಿಕ ಟಿಪ್ಪಣಿಗಳನ್ನು ಮಾತ್ರ ಉಲ್ಲೇಖಿಸಿ ದಾರಿ ತಪ್ಪಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.
ಆಯೋಗದ ಈ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿರುವ ಸಿಪಿಐಎಂ ಮತದಾರರ ಸೇರ್ಪಡೆ, ತೆಗೆದುಹಾಕುವಿಕೆ ಮತ್ತು ವ್ಯವಸ್ಥೆಯ ಕೇಂದ್ರೀಕರಣದಂತಹ ಪ್ರಮುಖ ವಿಷಯಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ವಿಫಲರಾಗಿದ್ದಾರೆ. ಆದ್ದರಿಂದ ಅವರು ತಕ್ಷಣವೇ ಹುದ್ದೆಯಿಂದ ಕೆಳಗಿಳಿಯಬೇಕು. ಅವರು ರಾಜೀನಾಮೆ ನೀಡದಿದ್ದರೆ ಸಂಸತ್ತಿನಲ್ಲಿ ಅವರ ವಿರುದ್ಧ ವಜಾ (Impeachment) ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದೆ.
ಹಾಗೆಯೇ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವಂತಿರುವ ಈ ಅಸ್ಪಷ್ಟ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಅಕ್ರಮವಾಗಿ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಹೆಸರುಗಳನ್ನು ಮರು ಸೇರ್ಪಡೆಗೊಳಿಸಬೇಕು ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಮೂಲಕವೇ ಚುನಾವಣಾ ಆಯುಕ್ತರ ನೇಮಕ ನಡೆಯುವ ಹೊಸ ಕಾನೂನು ತರಬೇಕು ಎಂದು ಒತ್ತಾಯಿಸಿದೆ.




