ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಮಾಸಿಕ ಕನಿಷ್ಠ ಮೂಲವೇತನ ನಿಗದಿಪಡಿಸಿ, ಅವರ ಮಾಸಿಕ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಕಳೆದ ಜುಲೈ 27ರಂದು ರಾಜ್ಯ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಗ್ರಂಥಪಾಲಕರ ಸಂಘದ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ತಮ್ಮ ಹಲವಾರು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದರು. ಈ ಬೇಡಿಕೆಗಳಲ್ಲಿ ಪ್ರಮುಖವಾಗಿ ವೇತನ ಪರಿಷ್ಕರಣೆಯ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ “ಅರಿವು ಕೇಂದ್ರ” ಗಳಾಗಿ ಕಾರ್ಯ ನಿರ್ವಹಿಸಲು, ಕೆಲಸದ ಸಮಯವನ್ನು 8.00 ಗಂಟೆವರೆಗೆ ನಿಗಧಿಪಡಿಸಿ, ಗ್ರಂಥಾಲಯ ಮೇಲ್ವಿಚಾರಕರಿಗೆ 15,196.72 ರೂ. ಮಾಸಿಕ ಕನಿಷ್ಠ ವೇತನ ಮತ್ತು ವ್ಯತ್ಯಯವಾಗುವ ತುಟ್ಟಿ ಭತ್ಯೆ ಪಾವತಿಸುವ ಬಗ್ಗೆ ಆದೇಶಿಸಲಾಗಿದೆ.
“ಬಸವಣ್ಣನವರ ‘ಅರಿವೇ ಗುರು’ ತತ್ವದ ಆಶಯದಂತೆ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳನ್ನಾಗಿ ಮಾರ್ಪಡಿಸಿ ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ಗ್ರಾಮೀಣ ವಿಶ್ವವಿದ್ಯಾಲಯಗಳಂತೆ ರೂಪಿಸಲು ಈ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.