ಮಣಿಪುರದಲ್ಲಿ 1998ರಿಂದೀಚೆಗೆ ಬಾಲಿವುಡ್‌ನ ಚಲನಚಿತ್ರಗಳನ್ನು ಪ್ರದರ್ಶಿಸಲು ಅನುಮತಿ ಇರಲಿಲ್ಲ. 1998ರಲ್ಲಿ ಇಂಫಾಲ್‌ನಲ್ಲಿ ಕರಣ್ ಜೋಹರ್ ಅವರ ನಿರ್ಮಾಣದ 'ಕುಚ್ ಕುಚ್ ಹೋತಾ ಹೈ' ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟ ಕೊನೆಯ ಚಲನಚಿತ್ರವಾಗಿದೆ
ಸುಮಾರು 25 ವರ್ಷಗಳ ನಂತರ, 77ನೇ ಸ್ವಾತಂತ್ರ್ಯ ದಿನದಂದು ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಹಿಂದಿ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಆಗಸ್ಟ್ 15 ರ ಸಂಜೆ ಲಮ್ಕಾ/ಚುರಾಚಂದ್‌ಪುರ ಜಿಲ್ಲೆಯ ಕಟ್ಟಡವೊಂದರ ಹೊರಭಾಗದಲ್ಲಿ ಪ್ರಾಜೆಕ್ಟರ್ ಪರದೆಯ ಮೂಲಕ 2019ರ ಜನಪ್ರಿಯ ಹಿಂದಿ ಚಲನಚಿತ್ರ ‘ಉರಿ – ದಿ ಸರ್ಜಿಕಲ್ ಸ್ಟ್ರೈಕ್ʼ ಅನ್ನು ಪ್ರದರ್ಶಿಸಲಾಯಿತು.
ಮಣಿಪುರದಲ್ಲಿ 1998 ರಿಂದೀಚೆಗೆ ಬಾಲಿವುಡ್ ನ ಚಲನಚಿತ್ರಗಳನ್ನು ಪ್ರದರ್ಶಿಸಲು ಅನಿಮತಿ ಇರಲಿಲ್ಲ. 1998ರಲ್ಲಿ ಇಂಫಾಲ್‌ನಲ್ಲಿ ಕರಣ್ ಜೋಹರ್ ಅವರ ನಿರ್ಮಾಣದ ‘ಕುಚ್ ಕುಚ್ ಹೋತಾ ಹೈ’ ಸಾರ್ವಜನಿಕವಾಗಿ ಪ್ರದರ್ಶಿಸಲ್ಪಟ್ಟ ಕೊನೆಯ ಚಲನಚಿತ್ರವಾಗಿದೆ.
ಉಗ್ರಗಾಮಿ ಸಂಘಟನೆಗಳ ಬೆದರಿಕೆಯ ಕಾರಣದಿಂದಾಗಿ ಮಣಿಪುರದ ಚಿತ್ರಮಂದಿರಗಳಲ್ಲಿ ಇಂಗ್ಲಿಷ್, ಕೊರಿಯನ್ ಮತ್ತು ಮಣಿಪುರಿ ಸಿನಿಮಾಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. 2014ರಲ್ಲಿ ತೆರೆಕಂಡ ಬಾಕ್ಸರ್ ಮೇರಿ ಕೋಮ್ ಅವರ ಜೀವನಾಧಾರಿತ ‘ಮೇರಿ ಕೋಮ್‘ ಕೂಡ ಪ್ರದರ್ಶಿಸಲಿಲ್ಲ. ವಿಪರ್ಯಾಸವೆಂದರೆ ಮೇರಿ ಕೋಮ್ ಮಣಿಪುರದವರು!
ಆದಾಗ್ಯೂ, ಪ್ರತ್ಯೇಕ ರಾಜ್ಯ ಬಯಸುತ್ತಿರುವ ಕುಕಿ ಸಮುದಾಯ ಮತ್ತು ಪ್ರಬಲ ಮೈತೇಯಿ ಸಮುದಾಯದ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ನಂತರ ಪ್ರತಿಭಟನಾರ್ಥವಾಗಿ ಈ ಚಿತ್ರದ ಪ್ರದರ್ಶನವಾಯಿತು. ಮೇ 3, 2023ರಿಂದ ಯುದ್ಧದ ಹಾದಿಯಲ್ಲಿರುವ ಎರಡು ಸಮುದಾಯಗಳು ಪರಸ್ಪರ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿವೆ ಮತ್ತು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಈ ಚಲನಚಿತ್ರ ಪ್ರದರ್ಶನವನ್ನು ಹ್ಮಾರ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಚ್‌ಎಸ್‌ಎ) ತುತಾಫೈ ಜೆಹೆಚ್‌ಕ್ಯು ಆಯೋಜಿಸಿತ್ತು. ಮಣಿಪುರದಲ್ಲಿ ಹಿಂಸಾಪೀಡಿತ ನೆಲದಿಂದ ವರದಿ ಮಾಡುತ್ತಿರುವ Eedina.com ಚಿತ್ರದ ಪ್ರದರ್ಶನದ ಸಮಯದಲ್ಲಿ ಹಾಜರಿದ್ದದ್ದು ಕುಕಿ ಸಮುದಾಯದ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಚಲನಚಿತ್ರವನ್ನು HSA ಕ್ಯಾಂಪಸ್, ರೆಂಕೈ, ಲಂಕಾ/ಚುರಾಚಂದ್‌ಪುರದ ತುತಾಫೈನಲ್ಲಿ ಪ್ರದರ್ಶಿಸಲಾಯಿತು.
Eedina.com ಜೊತೆ ಮಾತನಾಡಿದ ಎಚ್‌ಎಸ್‌ಎ ಅಧ್ಯಕ್ಷ ಲಾಲ್ಜಿಯಾಂಗ್ಥಾಂಗ್, “ನಮ್ಮ ಶಕ್ತಿಯನ್ನು ತೋರಿಸುವುದು, ಮೈತೇಯಿಗಳ ಭಯೋತ್ಪಾದಕ ಗುಂಪುಗಳನ್ನು ಮತ್ತು ಮೈತೇಯಿಗಳ ಪರವಾಗಿ ಆದಿವಾಸಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿದೆ” ಎಂದು ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯನ್ನು ಮಣಿಪುರದ ಬಹುಸಂಖ್ಯಾತ ಮೈತೇಯಿ ಪ್ರತ್ಯೇಕತಾವಾದಿ ಬಂಡುಕೋರ ಗುಂಪುಗಳು ವಿರೋಧಿಸಿವೆ ಎಂದು ಅವರು ಹೇಳಿದರು. 2000ರಲ್ಲಿ ಹಿಂದಿ ಚಲನಚಿತ್ರಗಳು ಮತ್ತು ಹಾಡುಗಳ ಮೇಲೆ ನಿಷೇಧವನ್ನು ಹೇರಲಾಯಿತು. ಸುಮಾರು 8,000 ಹಿಂದಿ ವಿಡಿಯೋ ಮತ್ತು ಆಡಿಯೊ ಕ್ಯಾಸೆಟ್‌ಗಳು ಮತ್ತು ಕಾಂಪ್ಯಾಕ್ಟ್ ಡಿಸ್ಕ್‌ಗಳನ್ನು ನಾಶಪಡಿಸಲಾಗಿದೆ ಎಂದು ಅವರು ವಿವರಿಸಿದರು.
2006ರಲ್ಲಿ, ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (UNLF), ಪ್ರತ್ಯೇಕತಾವಾದಿ ಬಂಡುಕೋರ ಗುಂಪು ಮತ್ತು ಕಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ (KCP)ಮೈತೇಯಿ ಭೂಗತ ಗುಂಪುಗಳು ಚುರಾಚಂದ್‌ಪುರ/ಲಮ್ಕಾನಲ್ಲಿರುವ ಪರ್ಬಂಗ್ ಗ್ರಾಮದಲ್ಲಿ ಹಿಂದಿ ಚಲನಚಿತ್ರದ ಕ್ಯಾಸೆಟ್‌ಗಳು ಮತ್ತು ಡಿಸ್ಕ್‌ಗಳನ್ನು ನಾಶಪಡಿಸಿದ್ದವು. ಪರ್ಬಂಗ್‌ನಲ್ಲಿ ಹ್ಮಾರ್ ಜನಾಂಗೀಯ ಬುಡಕಟ್ಟು ಜನಾಂಗದವರು ಹೆಚ್ಚು ನೆಲೆಸಿದ್ದಾರೆ.
ಚಲನಚಿತ್ರ ನಿಷೇಧವು “ಮೈತೇಯಿ ಭಯೋತ್ಪಾದಕರು, ಕೋಮುವಾದಿಗಳು ಮತ್ತು ರಾಷ್ಟ್ರವಿರೋಧಿಗಳು ಮಣಿಪುರದ ಇತರ ಸಮುದಾಯಗಳ ಮೇಲೆ ಸಮರ ಸಾರುವ ಹುನ್ನಾರವನ್ನು ಸೂಚಿಸುತ್ತದೆ” ಎಂದು ಅವರು ಹೇಳಿದರು.
“ಕುಕಿ-ಜೋಮಿ-ಹ್ಮಾರ್-ಮಿಜೋ ಬುಡಕಟ್ಟು ಜನಾಂಗದವರು ಭಾರತೀಯರು ಮತ್ತು ಭಾರತದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತಾರೆ ಎಂಬುದಕ್ಕೆ ಹಿಂದಿ ಚಲನಚಿತ್ರದ ಪ್ರದರ್ಶನವು ಸಾಂಕೇತಿಕವಾಗಿದೆ” ಎಂದು ಅವರು ಹೇಳಿದರು.
ಮ್ಯಾನ್ಮಾರ್‌ನಲ್ಲಿ ಅಡಗಿರುವ ಈಶಾನ್ಯ ದಂಗೆಕೋರರ ವಿರುದ್ಧ ಮೇಜರ್ ವಿಹಾನ್ ಶೆರ್ಗಿಲ್ (ವಿಕ್ಕಿ ಕೌಶಲ್) ನೇತೃತ್ವದ ವಿಶೇಷ ಪಡೆಯ ಕಮಾಂಡೋಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನೊಂದಿಗೆ ಚಲನಚಿತ್ರವು ಪ್ರಾರಂಭವಾಗುವುದರಿಂದ, ʼಉರಿʼಯ ಪ್ರದರ್ಶನವು ಸಾಂಕೇತಿಕವಾಗಿತ್ತು. ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಬೆಂಗಾವಲು ಪಡೆಯ ಮೇಲೆ ಬಂಡುಕೋರರು ಭೀಕರ ದಾಳಿ ನಡೆಸಿದ್ದರು. ಈ ಚಿತ್ರವು 2015ರಲ್ಲಿ ಚಾಂಡೆಲ್ ದಾಳಿಯ ನಂತರ ಈಶಾನ್ಯ ರಾಜ್ಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಅನ್ನು ಆಧರಿಸಿದೆ.
ಪ್ರದರ್ಶನದ ಸಮಯದಲ್ಲಿ ಮಾತನಾಡಿದ 23 ವರ್ಷದ ರೆಂಗ್ಕೈಯ ಲಾಲ್ರೆಮ್‌ಸಾಂಗ್, “ನಾನು ಹಿಂದೆಂದೂ ದೊಡ್ಡ ಪರದೆಯ ಮೇಲೆ ಹಿಂದಿ ಚಲನಚಿತ್ರವನ್ನು ನೋಡಿಲ್ಲ. ʼಉರಿʼ ನೋಡುವ ಉತ್ಸಾಹದಲ್ಲಿದ್ದೇನೆ” ಎಂದು ತಿಳಿಸಿದರು.
“ಇಂತಹದ್ದು (ದೊಡ್ಡ ಪರದೆಯ ಮೇಲೆ ಹಿಂದಿ ಚಿತ್ರವೊಂದರ ಪ್ರದರ್ಶನ) ಕಳೆದ 20 ವರ್ಷಗಳಲ್ಲಿ ನಡೆದಿಲ್ಲ. ಭಾರತದ ಸ್ವಾತಂತ್ರ್ಯ ದಿನದಂದು ಈ ಪ್ರದರ್ಶನ ಏರ್ಪಡಿಸಿರುವುದು ಅದ್ಭುತ ಅನುಭವ. ಇದು ನಾವು ಭಾರತದ ಪ್ರಜೆಗಳು ಮತ್ತು ಮ್ಯಾನ್ಮಾರಿಗಳು ಅಥವಾ ನಿರಾಶ್ರಿತರಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.
ಅಶ್ವಿನಿ ವೈ ಎಸ್
ಪತ್ರಕರ್ತೆ