ಮತಗಳು ಚಿದ್ರವಾದರೆ ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಸ್‌ಎಸ್ ಕುಟುಂಬದ ತಂತ್ರವೇನು ಎಂಬುದರ ಮೇಲೂ ಕುತೂಹಲ ಹೆಚ್ಚಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಭರ್ಜರಿ ಪ್ರಚಾರದಿಂದ ಕಣ ರಂಗೇರಿದೆ. ವಿಶೇಷವಾಗಿ ಬಾಗಲಕೋಟೆಗಿಂತ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚು ಉತ್ಕಟಗೊಂಡಿದ್ದು, ಈ ಕ್ಷೇತ್ರವೇ ರಾಜ್ಯ ರಾಜಕೀಯದ ಕೇಂದ್ರಬಿಂದುವಾಗಿದೆ. ಕಟ್ಟೆ, ಹೋಟೆಲ್ ಹಾಗೂ ಬೀದಿ ಮೂಲೆಗಳಲ್ಲಿಯೂ ಈ ಕ್ಷೇತ್ರದ ಕುರಿತು ಚರ್ಚೆಗಳು ಜೋರಾಗಿವೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ ಹೈಕಮಾಂಡ್‌ಗೆ ಸವಾಲಾಗಿ ಪರಿಣಮಿಸಿತ್ತು. ಹಲವು ಒತ್ತಡಗಳು, ಲಾಬಿ ಮತ್ತು ಒಳಜಗಳಗಳ ನಡುವೆ ಕೊನೆಗೂ ಹಿರಿಯ ನಾಯಕ ಶಾಮನೂರು ಕುಟುಂಬದ ಮೊಮ್ಮಗನನ್ನು ಅಭ್ಯರ್ಥಿಯಾಗಿ ಘೋಷಿಸಲಾಯಿತು. ಆದರೆ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಅಸಮಾಧಾನ ಇನ್ನೂ ಶಮನವಾಗಿಲ್ಲ.
ಮುಸ್ಲಿಂ ಬಹುಸಂಖ್ಯಾತರಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ತೀವ್ರವಾಗಿತ್ತು. ಸ್ಥಳೀಯ ಮುಖಂಡರಾದ ಸಾದಿಕ್ ಪೈಲ್ವಾನ್, ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಈ ವಿಚಾರದಲ್ಲಿ ಪಟ್ಟು ಹಿಡಿದರೂ, ಅವರ ಬೇಡಿಕೆ ಈಡೇರಲಿಲ್ಲ. ಇದರಿಂದ ಅಸಮಾಧಾನಗೊಂಡ ಕೆಲ ಮುಸ್ಲಿಂ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕುಟುಂಬ ರಾಜಕೀಯಕ್ಕೆ ಕೊನೆಯಾಗಿಸಲು ಸಾದಿಕ್ ಪೈಲ್ವಾನ್ ಅವರನ್ನು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು.

ನಾಲ್ಕು ಬಾರಿ ನಾಮಪತ್ರ ಸಲ್ಲಿಸಿರುವ ಅನುಭವ ಹೊಂದಿರುವ ಸಾದಿಕ್ ಪೈಲ್ವಾನ್ ಈ ಬಾರಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಅವರನ್ನು ಮನವೊಲಿಸಲು ಕಾಂಗ್ರೆಸ್ ಮುಸ್ಲಿಂ ಮುಖಂಡರಾದ ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ ಭೇಟಿ ನೀಡಿದರೂ, ಕಾರ್ಯಕರ್ತರ ವಿರೋಧದ ನಡುವೆ ಮಾತುಕತೆ ನಡೆಸಿ ನಂತರವೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ಮಾಸ್ಟರ್ ಮೈಂಡ್ ಮೂಲಕ ಸಮಾಧಾನಪಡಿಸಿ ಬಂಡಾಯ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದರು. ಇದರಿಂದ ದಕ್ಷಿಣ ಕ್ಷೇತ್ರದ ಸುಮಾರು 80 ಸಾವಿರ ಮುಸ್ಲಿಂ ಮತದಾರರಲ್ಲಿ ಗೊಂದಲ ಉಂಟಾಗಿದ್ದು, ಮುಸ್ಲಿಂ ಅಭ್ಯರ್ಥಿ ಇಲ್ಲದ ಹಿನ್ನೆಲೆ ಎಸ್‌ಡಿಪಿಐ ಪಕ್ಷ ಮನೆಮನೆಗೆ ಪ್ರಚಾರ ನಡೆಸುತ್ತಿದ್ದಾರೆ. ಆದಿಲ್, ಮನ್ಸೂರು ಅಲಿ ಸೇರಿದಂತೆ ಒಟ್ಟು 11 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತಗಳ ವಿಭಜನೆ ಸಂಭವಿಸಿದರೆ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80 ಸಾವಿರ ಮತದಾರರು ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿಲ್ಲವೆಂಬ ಅಸಮಾಧಾನಕ್ಕೆ ತೆರೆ ಎಳೆದಿದ್ದಾರೆ. ಮುಸ್ಲಿಂ ಯುವಕರು ರೊಚ್ಚಿಗೆದ್ದು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ ಶಾಮನೂರು ಅವರನ್ನು ಗೆಲ್ಲಿಸಬಾರದು ಎಂದು ಮುಸ್ಲಿಂ ಮನೆಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯದ ಮುಸ್ಲಿಂ ಕಾಂಗ್ರೆಸ್ ಮುಖಂಡರೂ ಕೂಡ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಹಾಗಿದ್ದರೆ 80 ಸಾವಿರ ಮುಸ್ಲಿಂ ಮತಗಳನ್ನು ಯಾರಿಗೆ ಚಲಾಯಿಸಬೇಕು ಎಂಬ ಗೊಂದಲ ಉಂಟಾಗಿದೆ. ಎಸ್‌ಡಿಪಿಐ ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದೆ. ಇನ್ನೊಂದೆಡೆ, ಸಿಎಂ ಇಬ್ರಾಹಿಂ ಆಪ್ತ ವಜ್ರ ಚಿಹ್ನೆಯೊಂದಿಗೆ ಆದಿಲ್ ಸ್ಪರ್ಧಿಸಿದ್ದಾರೆ. ಇಂತಹ ವಿಭಿನ್ನ ಚುನಾವಣೆಯಲ್ಲಿ ಒಟ್ಟು 11 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಾಮನೂರು ಕುಟುಂಬದವರು ಮುಸ್ಲಿಂ ಮತಗಳು ಛಿದ್ರವಾಗಬಾರದು ಮೊದಲಿದ್ದ ಹಾಗೆ ಕಾಂಗ್ರೆಸ್ ಪಕ್ಷಕ್ಕೆ ಮತ ಬರಬೇಕು. ಸಚಿವ ಜಮೀರ್ ಅಹ್ಮದ್ ಕ್ಷೇತ್ರಕ್ಕೆ ಬರುತ್ತಾರೆ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ರಾಜ್ಯದಿಂದ ಕೆಲವು ಅಲ್ಪಸಂಖ್ಯಾತರ ಮುಖಂಡರು ಭೇಟಿ ನೀಡುತ್ತಿದ್ದು, ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ಗೆ ಬೀಳಿಸಿಕೊಳ್ಳುವುದಕ್ಕೆ ಏನು ಪ್ಲ್ಯಾನ್ ಸಿದ್ಧ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತವಾಗುತ್ತಿದೆ.
ರಾಜ್ಯದ ಮುಸ್ಲಿಂ ಸಾಹಿತ್ಯಿಕರು, ರಾಜಕೀಯ ನಾಯಕರು, ಪ್ರಗತಿಪರ ಚಿಂತಕರು ಮತ್ತು ಮೌಲ್ವಿಗಳು ಕುಟುಂಬ ರಾಜಕೀಯಕ್ಕೆ ತೆರೆ ಎಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಬರುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕೆಲವು ಕ್ಷೇತ್ರಗಳು ಕೈ ತಪ್ಪುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.
ಇದನ್ನೂ ಓದಿದ್ದೀರಾ? ಬಾಗಲಕೋಟೆ ನೆಲ ಐವರು ಮುಖ್ಯಮಂತ್ರಿಗಳ ಹಣೆಬರೆಹ ಬರೆದ ರಾಜಕೀಯ ಕ್ಷೇತ್ರ!
ಈ ಎಲ್ಲ ಬೆಳವಣಿಗೆಗಳ ನಡುವೆ, ದಕ್ಷಿಣ ಕ್ಷೇತ್ರದ 80 ಸಾವಿರ ಮುಸ್ಲಿಂ ಮತದಾರರು ಯಾರಿಗೆ ಮತ ಹಾಕಬೇಕು ಎಂಬ ಗೊಂದಲದಲ್ಲಿದ್ದಾರೆ. ಮತಗಳು ಚಿದ್ರವಾದರೆ ಬಿಜೆಪಿ ಗೆಲುವಿಗೆ ಅನುಕೂಲವಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಸ್‌ಎಸ್ ಕುಟುಂಬದ ತಂತ್ರವೇನು ಎಂಬುದರ ಮೇಲೂ ಕುತೂಹಲ ಹೆಚ್ಚಾಗಿದೆ. ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ ಮುಂದಿನ ದಿನಗಳಲ್ಲಿ ಚುನಾವಣಾ ಕಣ ಇನ್ನಷ್ಟು ರಂಗೇರುವ ಸಾಧ್ಯತೆ ಇದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್




