ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಇರಾನ್ ಹಡಗೊಂದು ಮಾರ್ಗಮಧ್ಯೆ ದಿಢೀರನೆ ತನ್ನ ದಾರಿಯನ್ನು ಬದಲಿಸಿದ್ದು, ಈಗ ಚೀನಾ ಕಡೆಗೆ ಹೊರಟಿದೆ. ‘ಪಿಂಗ್ ಶುನ್’ ಎಂಬ ಹೆಸರಿನ ಈ ಹಡಗು ಬರೋಬ್ಬರಿ 6 ಲಕ್ಷ ಬ್ಯಾರೆಲ್‌ನಷ್ಟು ಇರಾನ್ ಕಚ್ಚಾ ತೈಲವನ್ನು ಸಾಗಿಸುತ್ತಿದೆ.
ಮೊದಲು ಈ ಹಡಗು ಗುಜರಾತ್‌ನ ‘ವಾಡಿನಾರ್’ ಬಂದರಿಗೆ ಬರುವುದಾಗಿ ಜಿಪಿಎಸ್ ಮೂಲಕ ಮಾಹಿತಿ ನೀಡಿತ್ತು. ಆದರೆ, ಭಾರತದ ಸಮೀಪಕ್ಕೆ ಬರುತ್ತಿದ್ದಂತೆ ದಿಢೀರನೆ ತನ್ನ ಗಮ್ಯಸ್ಥಾನವನ್ನು ಚೀನಾದ ‘ಡೊಂಗ್ಯಿಂಗ್’ ಬಂದರಿನತ್ತ ಬದಲಿಸಿದೆ. ಇದರಿಂದಾಗಿ ಸುಮಾರು 7 ವರ್ಷಗಳ ಬಳಿಕ ಇರಾನ್‌ನಿಂದ ಮೊದಲ ಬಾರಿಗೆ ತೈಲ ಖರೀದಿಸುವ ಭಾರತದ ನಿರೀಕ್ಷೆಗೆ ಹಿನ್ನಡೆಯಾದಂತಾಗಿದೆ.
ಹೀಗೆ ದಿಢೀರನೆ ಹಡಗು ದಾರಿ ಬದಲಿಸಲು ತೈಲದ ಹಣ ಪಾವತಿ ವಿಚಾರದಲ್ಲಿ ಉಂಟಾದ ಗೊಂದಲವೇ ಮುಖ್ಯ ಕಾರಣ ಎನ್ನಲಾಗಿದೆ. ಮೊದಲೆಲ್ಲ ತೈಲ ಖರೀದಿಸಿದ 30 ರಿಂದ 60 ದಿನಗಳ ಒಳಗೆ ಹಣ ಪಾವತಿಸಲು ಕಾಲಾವಕಾಶವಿತ್ತು. ಆದರೆ ಈಗ ತೈಲ ಮಾರಾಟಗಾರರು ತಕ್ಷಣವೇ ಅಥವಾ ಮುಂಗಡವಾಗಿ ಹಣ ನೀಡುವಂತೆ ಪಟ್ಟು ಹಿಡಿಯುತ್ತಿದ್ದಾರೆ.
ಹಣಕಾಸಿನ ಈ ಭಿನ್ನಾಭಿಪ್ರಾಯದಿಂದಾಗಿಯೇ ಹಡಗು ಬೇರೆಡೆ ಹೋಗಿದೆ. ಆದಾಗ್ಯೂ, ಒಂದು ವೇಳೆ ಉಭಯ ದೇಶಗಳ ನಡುವೆ ಪಾವತಿಯ ಸಮಸ್ಯೆ ಬಗೆಹರಿದರೆ, ಈ ಹಡಗು ಮತ್ತೆ ಭಾರತದತ್ತಲೇ ಮುಖ ಮಾಡುವ ಸಾಧ್ಯತೆಯೂ ಇದೆ ಎಂದು ತಜ್ಞರು ಹೇಳಿದ್ದಾರೆ. ವಾಣಿಜ್ಯ ಹಡಗುಗಳು ಸಮುದ್ರದಲ್ಲಿ ಸಂಚರಿಸುವಾಗ ಹೀಗೆ ದಿಕ್ಕು ಬದಲಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.
ಇದನ್ನು ಓದಿದ್ದೀರಾ? ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?
ಅಮೆರಿಕದ ನಿರ್ಬಂಧಗಳ ಕಾರಣದಿಂದಾಗಿ ಭಾರತವು ಕಳೆದ 7 ವರ್ಷಗಳಿಂದ ಇರಾನ್‌ನಿಂದ ತೈಲ ಖರೀದಿಸಿರಲಿಲ್ಲ. 2018ರಲ್ಲಿ ಅಮೆರಿಕವು ಇರಾನ್ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿ, ಇರಾನ್ ಜೊತೆ ವ್ಯವಹಾರ ಮಾಡುವ ದೇಶಗಳ ಮೇಲೂ ನಿರ್ಬಂಧ ಹೇರುವ ಎಚ್ಚರಿಕೆ ನೀಡಿತ್ತು. ಇದರಿಂದಾಗಿ 2019ರ ಮೇ ತಿಂಗಳ ನಂತರ ಭಾರತವು ಅಲ್ಲಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿ, ಪರ್ಯಾಯವಾಗಿ ಅಮೆರಿಕ ಮತ್ತು ಇತರ ಅರಬ್ ದೇಶಗಳನ್ನು ಅವಲಂಬಿಸಿತ್ತು. ಅಮೆರಿಕದ ನಿರ್ಬಂಧಕ್ಕೂ ಮುನ್ನ ಭಾರತದ ಒಟ್ಟು ತೈಲ ಆಮದಿನಲ್ಲಿ ಶೇ 11.5 ರಷ್ಟು ಪಾಲು ಇರಾನ್‌ನದ್ದೇ ಆಗಿತ್ತು.
ಆದರೆ, ಪ್ರಸ್ತುತ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣದಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯಾಗದಂತೆ ತಡೆಯುವ ಉದ್ದೇಶದಿಂದ, ಸಮುದ್ರದಲ್ಲಿರುವ ಇರಾನ್ ತೈಲವನ್ನು ಖರೀದಿಸಲು ಅಮೆರಿಕವು ಏಪ್ರಿಲ್ 19ರವರೆಗೆ 30 ದಿನಗಳ ತಾತ್ಕಾಲಿಕ ವಿನಾಯಿತಿ ನೀಡಿತ್ತು. ಈ ಸೀಮಿತ ಅವಕಾಶವನ್ನು ಬಳಸಿಕೊಂಡು, ಭಾರತೀಯ ತೈಲ ಕಂಪನಿಗಳು ಮತ್ತೆ ಇರಾನ್‌ನಿಂದ ತೈಲ ಖರೀದಿಸಲು ಮುಂದಾಗಿದ್ದವು.




