ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಒಳಮೀಸಲಾತಿಯ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಬಿಜೆಪಿಯವರಿಗೆ ಅಹಿಂದ ಮತ್ತು ದಲಿತರ ಮೇಲೆ ಕಾಳಜಿಯಿಲ್ಲ. ಅವರು ಶ್ರೀಮಂತರ ಪರವಾಗಿದ್ದು, ನಮ್ಮ ಕಾಂಗ್ರೆಸ್ ಸರ್ಕಾರ ಯುನಿವರ್ಸಲ್ ಬೇಸಿಕ್ ಇನ್ಕಮ್ ತತ್ವದಡಿ ತಳ ಸಮುದಾಯಕ್ಕೆ ಅನುಕೂಲತೆಗಳನ್ನು ಕಲ್ಪಿಸುತ್ತಿದ್ದೇವೆ. ಇದರ ಹಿನ್ನೆಲೆಯಲ್ಲಿ ಬಿಜೆಪಿಯ ಬೆಂಬಲಿತ ಮತದಾರರು ಸೇರಿದಂತೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಬಡ ಜನತೆಯ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ” ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕಾಗಿ ಆಗಮಿಸಿದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ, ಬೆಂಬಲ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತಿದ್ದು, ಅಪಪ್ರಚಾರದ ನಡುವೆಯೂ ಜನ ವಿಶ್ವಾಸ ಉಳಿಸಿಕೊಂಡಿದ್ದಾರೆ. ಗ್ಯಾರಂಟಿಗಳು ನಿಲ್ಲುವುದಿಲ್ಲವೆಂದು ಸ್ಪಷ್ಟಪಡಿಸಿ, ಈಗಾಗಲೇ ₹52,000 ಕೋಟಿ ಮೀಸಲು ಮಾಡಿ ₹1,31,000 ಕೋಟಿ ವೆಚ್ಚ ಮಾಡಲಾಗಿದೆ” ಬಿಜೆಪಿಗೆ ತಿರುಗೇಟು ನೀಡಿದರು.
*ಕೇಂದ್ರದಿಂದ ನ್ಯಾಯಬದ್ಧ ಅನುದಾನಗಳು ದೊರೆಯದ ಕಾರಣ ರಾಜ್ಯಕ್ಕೆ ರೆವಿನ್ಯೂ ಸರ್ಪ್ಲಸ್ ಸಾಧಿಸಲು ಸಾಧ್ಯವಾಗಿಲ್ಲ. ಆದರೂ ರಾಜ್ಯದ ಸಾಲವು ಜಿಡಿಪಿಯ 25% ಮಿತಿಯೊಳಗಿದ್ದು, ವಿತ್ತೀಯ ಕೊರತೆ 2.95% ಇದೆ. ಜಿಎಸ್‌ಟಿ ದರ ಕಡಿತದಿಂದ ₹10,000 ಕೋಟಿ ನಷ್ಟವಾಗಿದ್ದು, ಬೆಳವಣಿಗೆ ಶೇ.10ರಿಂದ ಶೇ.4ಕ್ಕೆ ಕುಸಿದಿದೆ” ಎಂದು ಆರೋಪಿಸಿದರು.
“ಗ್ಯಾರಂಟಿ ಯೋಜನೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಎಲ್ಲಾ ಆರ್ಥಿಕ ದಾಖಲೆಗಳನ್ನು ಬಜೆಟ್‌ನಲ್ಲಿ ವಿವರಿಸಲಾಗಿದೆ. ಬಿಜೆಪಿಯ ಅವಧಿಯಲ್ಲಿ ₹5.3 ಲಕ್ಷ ಕೋಟಿ ಸಾಲ ಮಾಡಲಾಗಿದೆ” ಎಂದು ಅಂಕಿ ಅಂಶಗಳ ಸಮೇತ ಉಲ್ಲೇಖಿಸಿದರು.

“ಹಿಂದಿನ ಸರ್ಕಾರ ಗುತ್ತಿಗೆದಾರರ ಬಾಕಿ ಉಳಿಸಿದ್ದ ₹29,000 ಕೋಟಿ ಬಾಕಿಯಲ್ಲಿ ₹24,000 ಕೋಟಿ ಈಗಾಗಲೇ ಪಾವತಿಸಲಾಗಿದೆ. ಈ ಬಗ್ಗೆ ಅಧಿವೇಶನದಲ್ಲಿ ದಾಖಲಾತಿಗಳೊಂದಿಗೆ ಉತ್ತರ ನೀಡಲಾಗಿದೆ. ಬೆಲೆ ಏರಿಕೆ ನಿಯಂತ್ರಿಸುವುದು ಕೇಂದ್ರದ ಹೊಣೆಗಾರಿಕೆ ರಾಜ್ಯವು ಇಂಧನ ವಿತರಣೆ ಮಾಡುತ್ತದೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬೆಲೆಗಳು ಕಡಿಮೆ ಇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾಢಳಿತದಿಂದ ಮತದಾನ ಜಾಗೃತಿ ಅಭಿಯಾನದಡಿ ರಂಗೋಲಿ ಸ್ಪರ್ಧೆ
“ಖಾಲಿ ಹುದ್ದೆಗಳ ನೇಮಕಾತಿಗೆ ಈ ವರ್ಷ 56432 ಹುದ್ದೆಗಳ ನೇಮಕಾತಿ ಮಾಡಲಿದ್ದು, ಹೀಗೆ ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು” ಎಂದರು.





