ಶಿಕ್ಷಕರು ಪಾಠ ಬೋಧನೆಯ ಜೊತೆಗೆ ಕೌಶಲ್ಯ, ಭಾಷಾ ನೈಪುಣ್ಯ, ನಡವಳಿಕೆ ಹಾಗೂ ಸಂವಹನ ಕಲೆಗಳನ್ನು ಬೆಳೆಸಿಕೊಳ್ಳಬೇಕು. ಆದರ್ಶ ಶಿಕ್ಷಕರು ಭವಿಷ್ಯದ ಕನಸುಗಳ ರೂವಾರಿಗಳು ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ ಐಪಿಎಸ್ ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ಪುನಶ್ಚೇತನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.

ಶಿಕ್ಷಕರ ಪುನಶ್ಚೇತನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ವಿದ್ಯಾರ್ಥಿಗಳನ್ನು ಕೇವಲ ಕಲಿಯುವವರಂತೆ ಅಲ್ಲ, ಭವಿಷ್ಯದ ಕನಸುಗಳನ್ನು ಹೊತ್ತಿರುವ ವ್ಯಕ್ತಿತ್ವಗಳೆಂದು ಕಾಣಬೇಕು. ಶಿಕ್ಷಕರು ಸದಾ ವಿದ್ಯಾರ್ಥಿಯಂತೆ ಕಲಿಯುತ್ತಾ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. “ಜ್ಞಾನದ ದೀಪ ನಿರಂತರವಾಗಿ ಪ್ರಕಾಶಿಸಬೇಕಾದರೆ ಶಿಕ್ಷಕರು ಆಸಕ್ತಿ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

“ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಕಾರ್ಯಾಗಾರ ನಾಂದಿಯಾಗಲಿದ್ದು, ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬೋಧನೆ ರೂಪಿಸಬೇಕು. ಶಿಕ್ಷಕರ ಕೌಶಲ್ಯ ವೃದ್ಧಿಗೆ ಇಂತಹ ಕಾರ್ಯಾಗಾರಗಳು ಅಗತ್ಯವೆಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಎಸ್ಸಿ ಸದಸ್ಯ ರಾಮಕೃಷ್ಣ ಪ್ರಸಾದ್ ಎಂ.ವಿ. ಮಾತನಾಡಿ, “ಶಿಕ್ಷಕರಿಗೆ ಕಲಿಕೆಯ ಹಸಿವು ಸದಾ ಇರಬೇಕು. ಹೊಸತನ ಹಾಗೂ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ವೃತ್ತಿಪರತೆಯೊಂದಿಗೆ ಬೋಧನೆ ನಡೆಸಬೇಕು. ವಿದ್ಯಾರ್ಥಿಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡಾಗ ಮಾತ್ರ ಶಿಕ್ಷಣ ಅರ್ಥಪೂರ್ಣವಾಗುತ್ತದೆ. ಇಂತಹ ಪುನಶ್ಚೇತನ ಕಾರ್ಯಾಗಾರಗಳು ಶಿಕ್ಷಕರಲ್ಲಿ ಹೊಸ ಚಿಂತನೆ ಹಾಗೂ ಕ್ರಿಯಾಶೀಲತೆ ಮೂಡಿಸುತ್ತವೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ನೀರಜಾಕ್ಷಿ, ಪದ್ಮ ಪ್ರಭು, ಕಾಮಾಕ್ಷಿ ಸುರೇಶ್, ಇಂದುಮತಿ, ಕರೀಮಾ ಅಂಜುಂ ಹಾಗೂ ಅಶೋಕ್ ವಿವಿಧ ಬೋಧನಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಗಳೂರಿನಲ್ಲಿ ಬಕ್ರೀದ್ ಹಬ್ಬದ ಶಾಂತಿ-ಸಾಮರಸ್ಯ ಕಾಪಾಡಲು ಶಾಂತಿ ಸಭೆ
ಕಾರ್ಯಕ್ರಮದಲ್ಲಿ ದಾವಣಗೆರೆ, ಶಿವಮೊಗ್ಗ ಹಾಗೂ ಶಿಗ್ಗಾವಿಯ ಪೊಲೀಸ್ ಪಬ್ಲಿಕ್ ಶಾಲೆಗಳ ಪ್ರಾಂಶುಪಾಲರು, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಪಿ.ಬಿ., ಆರ್‌ಪಿಐ ಕಿರಣ್ ಕುಮಾರ್, ಶಿಕ್ಷಕಿ ಮಂಜುಳಾ, ಶಿಕ್ಷಕಿ ಸಲ್ಮಾ ಬಾನು, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.





