ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ್ ದೇಶಮುಖ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಎಸ್‌ಐಆರ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜ್ಞಾನೇಶ್ ಕುಮಾರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಜಾಪ್ರಭುತ್ವದ ಪ್ರಮುಖ ಪ್ರಕ್ರಿಯೆಯಾಗಿದ್ದು, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬೀಳಬಾರದು ಎಂದು ಒತ್ತಾಯಿಸಿದರು. ಎಸ್‌ಐಆರ್ ಹೆಸರಿನಲ್ಲಿ ಅಗತ್ಯ ದಾಖಲೆಗಳಿಗಾಗಿ ಸಾಮಾನ್ಯ ಜನರಿಗೆ ಅನಗತ್ಯ ತೊಂದರೆ ಉಂಟಾಗಬಾರದು’ ಎಂದರು.
‘ಮತದಾನದ ಹಕ್ಕು ಅರ್ಹ ನಾಗರಿಕರ ಸಂವಿಧಾನಾತ್ಮಕ ಹಕ್ಕಾಗಿದ್ದು, ಮತದಾರರ ಪಟ್ಟಿಯಲ್ಲಿನ ತಪ್ಪು ಅಥವಾ ಲೋಪದಿಂದ ಒಬ್ಬ ಅರ್ಹ ನಾಗರಿಕನೂ ಮತದಾನದಿಂದ ವಂಚಿತನಾಗದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಬೇಕು. ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು’ ಎಂದು ಆಗ್ರಹಿಸಿದರು.
This video cannot be played in your browser. Open the video directly

ಜಗದೇವ ಗುತ್ತೇದಾರ ಮಾತನಾಡಿ, ‘ಎಸ್‌ಐಆರ್ ಪ್ರಕ್ರಿಯೆ ಕುರಿತು ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘನೆ ಅಥವಾ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ್ ದೇಶಮುಖ ಮಾತನಾಡಿ, ‘ಎಸ್‌ಐಆರ್‌ಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕ್ರಮಗಳ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಎಸ್‌ಐಆರ್ ಕುರಿತು ಕೇಳಿಬರುತ್ತಿರುವ ಆರೋಪಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮತದಾರರಿಗೆ ಸಮರ್ಪಕ ಮಾಹಿತಿ ನೀಡುವುದು, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸುವುದು ಹಾಗೂ ದಾಖಲೆಗಳ ಪರಿಶೀಲನೆಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಚುನಾವಣಾ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ವಿಶೇಷವಾಗಿ ಬಡವರು, ಕಾರ್ಮಿಕರು ಹಾಗೂ ಅಗತ್ಯ ದಾಖಲೆಗಳ ಲಭ್ಯತೆ ಕಡಿಮೆ ಇರುವವರಿಗೆ ಅನಗತ್ಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಇಸ್ಪೀಟ್ ಜೂಜಾಟ: 13 ಮಂದಿ ಬಂಧನ
ಪ್ರತಿಭಟನೆಯಲ್ಲಿ ಭೀಮರಾವ ಟಿ.ಟಿ., ಮಹಾಂತಪ್ಪ ಸಂಗಾವಿ, ಕುಡಾ ಅಧ್ಯಕ್ಷ ಮಝಾರ್ ಖಾನ್ ಆಲಂ, ಯುವ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಸರಡಗಿ, ಚಂದ್ರಿಕಾ ಪರಮೇಶ್ವರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರೇಣುಕಾ ಸಿಂಗೆ, ಈರಣ್ಣ ಝಳಕಿ, ಶಿವಾನಂದ ಹೊನಗುಂಟಿ, ರಾಜೀವ್ ಜಾನೆ, ಅಭಿಷೇಕ್ ಪಾಟೀಲ್, ಫಾರುಕ್ ಮಾನಿಯಾಲ್, ಅಶೋಕ ವೀರನಾಯಕ್, ದಿನೇಶ ದೊಡ್ಡಮನಿ, ಕಾರ್ತಿಕ್ ನಾಟೇಕರ್, ಪರಶುರಾಮ್ ನಾಟೇಕರ್, ಟೈಗರ್ ವಿಶ್ಲೇಶ್ವರ, ಮಹೇಶ್ ತೆಲ್ಲೂರಕರ್, ಧರ್ಮರಾಜ ಹೇರೂರ, ಆಸೀಫ್ ಗಾಣಗಾಪೂರಿ, ಮೋದಿನ್ ಪಟೇಲ್ ಅಣಬಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.





