“ಸಂಶೋಧನೆ ಎಂಬುದು ಒಂದು ತಪಸ್ಸು ಇದ್ದಂತೆ. ಅನೇಕ ಸಮಸ್ಯೆ, ಅನಾನುಕೂಲತೆಗಳನ್ನು ಎದುರಿಸಿ ಸಾಧನೆ ಮಾಡಬೇಕಾಗುತ್ತದೆ. ಸಂಶೋಧಕರಿಗೆ ತಾಳ್ಮೆ ಅಧ್ಯಯನ ಶೀಲತೆ, ಕ್ಷೇತ್ರ ಕಾರ್ಯ ಸಂಶೋಧಕರಿಗೆ ಮುಖ್ಯ” ಎಂದು ಕಪ್ಪತಗುಡ್ಡದ ನಂದಿವೇರಿ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಹಾದೇವಿ ಪ್ರಕಾಶನ, ಧಾರವಾಡ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ. ಧನವಂತ ಹಾಜವಗೋಳ, ಡಾ. ಬಾಳಪ್ಪ ಚಿನಗುಡಿ ಹಾಗೂ ಡಾ. ಶಂಕ್ರಮ್ಮ ಹುಲಿಕಟ್ಟಿ ಅವರ ಗ್ರಂಥಗಳ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
“ಡಾ. ಧನವಂತ ಹಾಜವಗೋಳ ಅವರ ಸಂಶೋಧನಾ ಮಹಾಪ್ರಬಂಧ ‘ಮುಳುಗುಂದ ನಾಡು ಒಂದು ಅಧ್ಯಯನ’ ಒಂದು ಮೌಲಿಕ ಕೃತಿಯಾಗಿದೆ. ಈ ಕೃತಿ ರಚನೆಗೆ ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲಾ. ಕಪ್ಪತಗುಡ್ಡದ ಜೊತೆ ಮುಳಗುಂದ ನಾಡು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಮುಳುಗುಂದ ಹಾಗೂ ಸುತ್ತಲಿನ ೧೨ ಹಳ್ಳಿಗಳು ಚಾರಿತ್ರಿಕವಾಗಿ ಮಹತ್ವ ಪಡೆದಿವೆ. ಡಾ. ಹಾಜವಗೋಳ ಮುಳಗುಂದ ನಾಡಿನ ಸಂಸ್ಕೃತಿ, ಧಾರ್ಮಿಕ ಸಾಮರಸ್ಯ, ಸಮಾಜಮುಖಿ ಕಾರ್ಯ, ನ್ಯಾಯದಾನ ಪದ್ಧತಿ, ಶಿಕ್ಷಣ ಬಗ್ಗೆ ಲಿಖಿತ ದಾಖಲೆ ಹಾಗೂ ಶಾಸನಾಧ್ಯಾಯನದ ಮೂಲಕ ಕರಾರುವಕ್ಕಾಗಿ ಸತ್ಯಶೋಧನೆಯ ಮೂಲಕ ದತ್ತಾಂಶ ಸಂಗ್ರಹಿಸಿ ಕೃತಿ ರಚಿಸಿದ್ದು ಎಲ್ಲರೂ ಓದಲೇಬೇಕಾದ ಮಹಾಪ್ರಬಂಧ” ಎಂದು ಹೇಳಿದರು.
ಡಾ. ಬಿ.ವ್ಹಿ. ಶಿರೂರ ಅವರು ಡಾ. ಧನವಂತ ಹಾಜವಗೋಳರ ಸಂಶೋಧನಾ ಪ್ರಬಂಧ ತುಂಗಳ-ಸಾಂಸ್ಕೃತಿಕ ಅಧ್ಯಯನ ಕುರಿತು ಮಾತನಾಡಿ, “ಡಾ. ಹಾಜವಗೋಳ ವಿನಯಶೀಲರು, ಉಪಕಾರ ಸ್ಮರಿಸುವ ಗುಣ ಉಳ್ಳವರು. ಅವರು ಒಟ್ಟು ೨೦ ಕೃತಿಗಳನ್ನು ರಚಿಸಿದ್ದಾರೆ. ತುಂಗಳ ಮೂವತ್ತು ಗ್ರಾಮಗಳನ್ನೊಳಗೊಂಡ ಪ್ರಮುಖ ಕೇಂದ್ರ. ಅದೊಂದು ಅಗ್ರಹಾರವಾಗಿತ್ತು. ಗ್ರಾಮದ ಕೆಳಸಮುದಾಯದ ಬದುಕು, ಜನರ ಸ್ಥಿತಿಗತಿ, ಆಚರಣೆಗಳು, ಶಾಸನಗಳು, ವೀರಗಲ್ಲುಗಳ ಬಗ್ಗೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಡಾ. ಧನವಂತ ಅವರಿಂದ ಇನ್ನೂ ಹೆಚ್ಚು ಕೃತಿಗಳು ಪ್ರಕಟವಾಗಲಿ” ಎಂದು ಹಾರೈಸಿದರು.
ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಶಾಂತಿನಾಥ ದಿಬ್ಬದ ಅವರು, ಮಾಸ್ತಿಯವರ ಕತೆಗಳಲ್ಲಿ ಜೀವನ ದರ್ಶನ ಮಹಾಪ್ರಬಂಧ ಕುರಿತು ಮಾತನಾಡಿ, “ಮಾಸ್ತಿ ಸಣ್ಣ ಕತೆಗಳ ಜನಕ. ಅವರು ಕನ್ನಡದ ಆಸ್ತಿ. ಮಾಸ್ತಿ ಸಣ್ಣಕತೆ ರಚನೆ ಪೂರ್ವದಲ್ಲಿ ಕ್ರಿ.ಶ. ೬ನೇ ಶತಮಾನದಲ್ಲಿ ಈ ಕಥಾ ಪರಂಪರೆ ಬೆಳೆದು ಬಂದಿದೆ. ಅವರ ಎಲ್ಲಾ ಕತೆಗಳು ಚಿಕ್ಕದಾಗಿದ್ದರೂ ಒಂದೊಂದು ಜೀವನ ಸಂದೇಶ ಬದುಕಿನ ಪಾಠವನ್ನು ಹೇಳಿಕೊಡುವಂತಹವುಗಳಾಗಿವೆ” ಎಂದು ಹೇಳಿದರು.
ಡಾ. ಬಾಳಪ್ಪ ಚಿನಗುಡಿ ಅವರು ‘ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಸಾಹಿತ್ಯ : ತಲ್ಲಣಗಳು ಕುರಿತು ಮಾತನಾಡಿದರು. ಡಾ. ಶಂಕ್ರಮ್ಮ ಹುಲಿಕಟ್ಟಿ ಅವರು ಡಾ. ಧನವಂತ ಹಾಜವಗೋಳವರ ‘ಬಾನುಲಿ ಚಿಂತನಗಳು’ ಕೃತಿ ಪರಿಚಯಿಸಿದರು.
ಸಂಶೋಧಕರಾದ ಡಾ. ಧನವಂತ ಹಾಜವಗೋಳ ಮಾತನಾಡಿ, “ಡಾ. ಬಿ. ವ್ಹಿ. ಶಿರೂರ ಅವರು ನನ್ನನ್ನು ಸಂಶೋಧಕನನ್ನಾಗಿ ರೂಪಿಸಿದವರು ಎಂದು ಸ್ಮರಿಸಿ, ತಮ್ಮ ೩೩ ವರ್ಷದ ವೃತ್ತಿ ಜೀವನದ ಅನುಭವಗಳನ್ನು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, “ನಮ್ಮ ಬದುಕಿಗೆ ಬೇಕಾದ ಸಾಹಿತ್ಯ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲದಿರುವುದು ವಿಷಾದಕರ. ವೈದ್ಯರೂ ಸಾಹಿತ್ಯ ಓದುವಂತಾಗಬೇಕು. ಡಾ. ಧನವಂತ ಹಾಜವಗೋಳ ಪರಿಶ್ರಮ ಅಭಿನಂದನೀಯ” ಎಂದರು.
ವೇದಿಕೆಯಲ್ಲಿ ಮಹಾದೇವಿ ಧ. ಹಾಜವಗೋಳ ಉಪಸ್ಥಿತರಿದ್ದರು. ಮಹಾದೇವಿ ಪ್ರಕಾಶನದ ಪರವಾಗಿ ವೇದಿಕೆ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪಿ.ಕೆ. ಧಾರವಾಡ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಕುಂ. ವೀರಭದ್ರಪ್ಪ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಜಿನದತ್ತ ಹಡಗಲಿ ಸೇರಿದಂತೆ ಡಾ. ಧನವಂತ ಹಾಜವಗೋಳ ಅವರ ಪರಿವಾರದವರು ಉಪಸ್ಥಿತರಿದ್ದರು.




