ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಸೋಮವಾರ ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಪಕ್ಷದ ವತಿಯಿಂದ ಧಾರವಾಡದಲ್ಲಿ ಭರ್ಜರಿ ಮೆರವಣಿಗೆ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಧಾರವಾಡ ನಗರದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ನ ಹಲವು ಪ್ರಮುಖ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಪದವೀಧರರು ಪಾಲ್ಗೊಂಡಿದ್ದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಚಿವ ಲಕ್ಷ್ಮಣ ಸವದಿ, ಶಾಸಕ ಎನ್.ಎಚ್. ಕೋನರಡ್ಡಿ, ಕಾಂಗ್ರೆಸ್ ಮುಖಂಡರಾದ ವಿನೋದ್ ಅಸೂಟಿ, ನಾಗರಾಜ ಗೌರಿ, ಬಸವರಾಜ ಗುರಿಕಾರ, ದೀಪಕ್ ಚಿಂಚೋರೆ, ತವನಪ್ಪ ಅಷ್ಟಗಿ, ಗೌರಮ್ಮ ಬಲೋಗಿ ಸೇರಿದಂತೆ ಹಲವು ಮುಖಂಡರು ಮೋಹನ ಲಿಂಬಿಕಾಯಿ ಅವರಿಗೆ ಬೆಂಬಲವಾಗಿ ನಿಂತರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮೋಹನ ಲಿಂಬಿಕಾಯಿ, ಈ ಚುನಾವಣೆ ತಮ್ಮ ಪಾಲಿಗೆ ವಿಶೇಷವಾದದ್ದು ಎಂದು ಹೇಳಿದರು. ಈ ಹಿಂದೆ ಎಚ್.ಕೆ. ಪಾಟೀಲ್ ಅವರ ವಿರುದ್ಧವೇ ಚುನಾವಣಾ ಕಣದಲ್ಲಿದ್ದ ತಾವು, ಇದೀಗ ಅವರೊಂದಿಗೆ ಒಂದೇ ವೇದಿಕೆಯಲ್ಲಿ ನಿಂತು ಚುನಾವಣೆ ಎದುರಿಸುತ್ತಿರುವುದಾಗಿ ಅವರು ಹೇಳಿದರು.
This video cannot be played in your browser. Open the video directly
“ಎಚ್.ಕೆ. ಪಾಟೀಲ್ ಅವರು ನಮ್ಮ ನಾಯಕರು.ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸವಿದೆ,” ಎಂದು ಲಿಂಬಿಕಾಯಿ ಹೇಳಿದರು.
ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಹಿರಿಯ ನಾಯಕರು ಹಾಗೂ ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಕಾಂಗ್ರೆಸ್ನ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ನಡುವೆ, ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಅಕ್ಟೋಬರ್ 5ರಂದು ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದುವರೆಗೆ ಒಟ್ಟು ಎಂಟು ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೋಹನ ಲಿಂಬಿಕಾಯಿ, ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿಯಾಗಿ ನಿಶಾಂತ ಬಂಕಾಪೂರ, ಪಕ್ಷೇತರ ಅಭ್ಯರ್ಥಿಗಳಾಗಿ ಬಸವರಾಜ ಕೊಟಗಿ, ಜಿಶಾನ ಸಿರಸಂಗಿ ಮತ್ತು ಕಾಂತಕುಮಾರ್ ಆರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಕೆ.ಎಂ. ಜಾನಕಿ ಈ ಕುರಿತು ಮಾಹಿತಿ ನೀಡಿದ್ದಾರೆ.





