ಶಿರಸಿ: ರಾಜ್ಯದ ಸಾರಿಗೆ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸರ್ಕಾರದ ಬೇಜವಾಬ್ದಾರಿತನ ಹಾಗೂ ಲೋಕೋಪಯೋಗಿ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ದಶಕಗಳಿಂದಲೂ ಅಭಿವೃದ್ಧಿಯ ಕನಸು ಕಾಣುತ್ತಿರುವ ಈ ಹೆದ್ದಾರಿ, ಇಂದು ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ರಸ್ತೆಯ ತುಂಬಾ ಬಿದ್ದಿರುವ ಬೃಹತ್ ಹೊಂಡಗಳು ಮಳೆಯ ನೀರು ಸೇರಿ ಕೆಸರು ಗದ್ದೆಯಂತಾಗಿವೆ.
ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಈ ಕೆಸರಿನ ರಾಶಿಯಲ್ಲಿ ಸಿಲುಕಿ ಮುಂದೆ ಸಾಗಲಾರದೆ ಪರದಾಡುತ್ತಿರುವ ದೃಶ್ಯ ‘ಕರ್ನಾಟಕ ಪೋರ್ಟ್‌ಫೋಲಿಯೋ’ ಎಕ್ಸ್ ಖಾತೆಯಲ್ಲಿ ಹಂಚಿಕೆಯಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಬಲಿಷ್ಠ ಎಂಜಿನ್ ಹೊಂದಿರುವ ಸರ್ಕಾರಿ ಬಸ್‌ಗಳೇ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುತ್ತಿರುವಾಗ, ಸಾಮಾನ್ಯ ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಸ್ಥಿತಿ ಕೇಳುವಂತೆಯೇ ಇಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಗರ್ಭಿಣಿಯರು, ರೋಗಿಗಳು ಹಾಗೂ ತುರ್ತು ಚಿಕಿತ್ಸೆಗೆ ತೆರಳುವ ಆಂಬ್ಯುಲೆನ್ಸ್‌ಗಳು ಗಂಟೆಗಟ್ಟಲೆ ಕೆಸರಿನಲ್ಲಿ ಸಿಲುಕಿಕೊಳ್ಳುವ ಆತಂಕ ಎದುರಾಗಿದೆ.
ಈ ಸುದ್ದಿ ಓದಿದ್ದೀರಾ ? ಮುಂಡಗೋಡ | ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ
ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಕನಿಷ್ಠ ಮೂಲಸೌಕರ್ಯವನ್ನೂ ಒದಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸರ್ಕಾರವಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ರಸ್ತೆಯ ಸ್ಥಿತಿಯನ್ನು ಕಂಡು ಬೇಸತ್ತಿರುವ ಸ್ಥಳೀಯರು, “ಇದು ಹೆದ್ದಾರಿಯೋ ಅಥವಾ ಆಫ್-ರೋಡ್ ರ‍್ಯಾಲಿ ನಡೆಸಲು ಸಿದ್ಧಪಡಿಸಿದ ಕೆಸರು ಗದ್ದೆಯೋ?” ಎಂದು ವ್ಯಂಗ್ಯವಾಡುತ್ತಿದ್ದಾರೆ.
ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಜನರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಈ ಮೃತ್ಯುಮಾರ್ಗಕ್ಕೆ ಮುಕ್ತಿ ನೀಡಿ, ವೈಜ್ಞಾನಿಕವಾಗಿ ರಸ್ತೆ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.





