ಅಮರ್ತ್ಯ ಸೇನ್ ಕಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಆಗಷ್ಟೆ ಕೆನ್ನೆತ್ ಆರೋ ಅವರ ಸಾಮಾಜಿಕ ಆಯ್ಕೆಯ ಸಿದ್ಧಾಂತವನ್ನು ಕುರಿತ ಸೋಷಿಯಲ್ ಚಾಯ್ಸ್ ಅಂಡ್ ಇಂಡಿವಿಜುವಲ್ ವ್ಯಾಲ್ಯೂಸ್’ (Social Choice and Individual Values) ಕೃತಿ ನ್ಯೂಯಾರ್ಕ್ನಲ್ಲಿ ಪ್ರಕಟವಾಗಿತ್ತು. ಅದು ದೊಡ್ಡ ಸಂಚಲನವನ್ನೇ ಉಂಟುಮಾಡಿತ್ತು. ಸೇನ್ ಅವರ ಸಹಪಾಟಿ ಸುಖಮೋಯ್ ಚಕ್ರವರ್ತಿ ಅದನ್ನು ದಾಸ್ ಗುಪ್ತ ಪುಸ್ತಕದ ಅಂಗಡಿಯಿಂದ ಎರವಲು ಪಡೆದು ಓದಿ ಮುಗಿಸಿದ್ದರು, ಸುಖಮೋಯ್ ಅವರೊಡನೆಯ ಚರ್ಚೆಯಿಂದ ಸೇನ್ ಪ್ರೇರಿತರಾಗಿ ಅವರಿಂದ ಎರವಲು ಪಡೆದು ಒಂದೇ ರಾತ್ರಿಯಲ್ಲಿ ಓದಿ ಮುಗಿಸಿದರು. ಅಂದಿನಿಂದ ಸಾಮಾಜಿಕ ಆಯ್ಕೆಯ ವಿಷಯದಲ್ಲಿ ಸೇನ್ ಅವರಿಗೆ ಆಸಕ್ತಿ ಪ್ರಾರಂಭವಾಯಿತು. ಸಾಮಾಜಿಕ ಆಯ್ಕೆ ಅನ್ನುವುದು ಸಮಾಜದ ಪ್ರತಿಯೊಬ್ಬ ವೈಯಕ್ತಿಕ ಆಸಕ್ತಿಗಳನ್ನು, ಎಲ್ಲರಿಗೂ ಒಪ್ಪಿಗೆಯಾಗುವ ಒಂದು ‘ಸಾಮೂಹಿಕ ನಿರ್ಧಾರವನ್ನು ಹೇಗೆ ರೂಪಿಸಬಹುದು ಎಂಬುದರ ಅಧ್ಯಯನ.”
ಸಾಮಾಜಿಕ ಆಯ್ಕೆಯ ಸಿದ್ಧಾಂತವು ಕೇವಲ ಒಂದು ಚಿಂತನೆಯಲ್ಲ, ನಮ್ಮನ್ನು ಕಾಡುವ ಹಲವು ಗಂಭೀರ ಪ್ರಶ್ನೆಗಳಿಗೆ ಸಮಾಧಾನವನ್ನು ನೀಡಬಹುದು. ಬಹುಮತವನ್ನು ಆಧರಿಸಿ ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಸರಿಯಿರುತ್ತವೆಯೇ? ಜನರ ಹಿತಾಸಕ್ತಿಗಳು ತೀರಾ ಭಿನ್ನವಾಗಿದ್ದಾಗ ಸಮಾಜದ ಪ್ರಗತಿಯನ್ನು ಅಳೆಯುವುದು ಹೇಗೆ? ಸಮಾಜದ ವಿವಿಧ ಸ್ತರದ ಜನರು ಅನುಭವಿಸುವ ನೋವುಗಳು ವಿಭಿನ್ನ ಬಗೆಯದು ಆಗಿದ್ದಾಗ ಸಮಾಜದ ಬಡತನವನ್ನು ಅಳೆಯುವುದು ಹೇಗೆ? ಜನರ ವೈಯಕ್ತಿಕ ಹಕ್ಕುಗಳನ್ನು ಕಾಪಾಡುತ್ತಲೇ ಅವರ ಇಷ್ಟಗಳನ್ನು ಪೂರೈಸುವುದು ಹೇಗೆ? ಜನರ ವೈಯಕ್ತಿಕ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಇಡೀ ಗುಂಪಿಗೆ ಅಥವಾ ಸಮಾಜಕ್ಕೆ ಒಳ್ಳೆಯದಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಹೇಗೆ ಎಂಬುದೇ ಇದರ ಮುಖ್ಯ ಗುರಿ. ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಆಯ್ಕೆಯ ಚರ್ಚೆ ವ್ಯಕ್ತಿಯಿಂದ ಸಮಾಜದವರೆಗೆ ಹೋಗುವ ಒಂದು ತರ್ಕಬದ್ದ ಹಾದಿಯ ಹುಡುಕಾಟ.
ಕಲ್ಕತ್ತದಲ್ಲಿ ಇದ್ದಾಗಲೇ ಸಾಮಾಜಿಕ ಆಯ್ಕೆಯ ವಿಷಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಸೇನ್ ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡ್ ಗೆ ಹೋದಾಗ, ಅಲ್ಲೂ ಇದನ್ನು ಕುರಿತೇ ಅಧ್ಯಯನ ಮುಂದುವರಿಸಬೇಕೆಂದು ಬಯಸಿದ್ದರು. ಆದರೆ ಕೇಂಬ್ರಿಡ್ಜ್ನ ಯಾವ ಪ್ರೊಫೆಸರ್ಗಳಿಗೂ ಈ ವಿಷಯದ ಬಗ್ಗೆ ಆಸಕ್ತಿ ಇರಲಿಲ್ಲ. ಅಲ್ಲಿ ‘ಕಲ್ಯಾಣ ಅರ್ಥಶಾಸ್ತ್ರವನ್ನು (Welfare Economics) ಯಾರೂ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಅವರೆಲ್ಲಾ ಕೆನ್ನೆತ್ ಆರೋ ಅವರ ಅಸಾಧ್ಯತೆಯ ಸಿದ್ಧಾಂತವನ್ನು ಒಂದು ಸವಾಲಾಗಿ ನೋಡುವ ಬದಲು, ಅದೊಂದು ಸೋಲು ಎಂದು ಭಾವಿಸಿದರು. ಕಲ್ಯಾಣ ಅರ್ಥಶಾಸ್ತ್ರವು ಒಂದು ಪ್ರಯೋಜನವಿಲ್ಲದ ವಿಷಯ ಎಂದು ಅವರು ನಿರ್ಧರಿಸಿಬಿಟ್ಟಿದ್ದರು. ಸೇನ್ ಅವರ ಮಾರ್ಗದರ್ಶಿಯಾಗಿದ್ದ ಜೋನ್ ರಾಬಿನ್ಸನ್ ಕೂಡ ಅದರಲ್ಲಿ ಏನೂ ಸತ್ವವಿಲ್ಲ, ಯಾವುದಾದರೂ ಉಪಯುಕ್ತವಾದ ಬೇರೆ ವಿಷಯವನ್ನು ಆರಿಸಿಕೊಂಡು ಕೆಲಸ ಮಾಡು ಮಾಡು ಎಂದು ಸೇನ್ ಅವರಿಗೆ ಸಲಹೆ ನೀಡಿದರು. ಸೇನ್ ಅವರಿಗೆ ಸಾಮಾಜಿಕ ಆಯ್ಕೆಯ ವಿಷಯ ಮತ್ತೆ ಅಧ್ಯಯನ ಮಾಡುವುದಕ್ಕೆ ಹಲವು ವರ್ಷ ಕಾಯಬೇಕಾಯಿತು. ತಮ್ಮ ಸಂಶೋಧನೆ ಹಾಗೂ ಬೋಧನೆಯ ಕರ್ತವ್ಯ ಮುಗಿದ ಮೇಲೆ ಮತ್ತೆ ಈ ಬಗ್ಗೆ ಅಧ್ಯಯನವನ್ನು ಪ್ರಾರಂಭಿಸಿದ್ದರು. ಆ ವೇಳೆಗೆ ಸಾಮಾಜಿಕ ಆಯ್ಕೆಯ ಬಗ್ಗೆ ಒಂದಿಷ್ಟು ಜನ ಆಸಕ್ತಿ ತೋರಿಸಲು ಪ್ರಾರಂಭಿಸಿದ್ದರು.
ಸಾಮಾಜಿಕ ಆಯ್ಕೆಯ ಸಿದ್ಧಾಂತದ ಹುಟ್ಟು:
ಸಾಮಾಜಿಕ ಆಯ್ಕೆಯ ಸಿದ್ದಾಂತ ಹೇಗೆ ಪ್ರಾರಂಭವಾಯಿತು?
ಸಮಾಜದಲ್ಲಿ ಜನರ ಆಸೆಗಳು, ಕಾಳಜಿಗಳು ಮತ್ತು ಪರಿಸ್ಥಿತಿಗಳು ತೀರಾ ವಿಭಿನ್ನವಾಗಿದ್ದಾಗ, ಇಡೀ ಸಮಾಜಕ್ಕೆ ಸಂಬಂಧಪಟ್ಟ ಸರಿಯಾದ ನಿರ್ಧಾರಗಳನ್ನು (ಉದಾಹರಣೆಗೆ: “ಸಮಾಜದ ಹಿತ”, “ಜನರ ಕ್ಷೇಮ” ಅಥವಾ “ಒಟ್ಟು ಬಡತನದ ಬಗ್ಗೆ) ತಗೊಳ್ಳೋದು ಹೇಗೆ ಸಾಧ್ಯ? ಸಮಾಜಕ್ಕೆ ಇದೇ ಸರಿ, ಇದು ತಪ್ಪು ಅಂತ ನಿರ್ಧರಿಸೋದು ಹೇಗೆ ಅನ್ನುವ ಸವಾಲು ತುಂಬಾ ಹಿಂದಿನಿಂದಲೂ ಕಾಡುತ್ತಿತ್ತು. ಹೊರೇಸ್ ಯಾವುದೋ ಕಾಲದಲ್ಲಿ ಹೇಳಿದ ಹಾಗೆ ಎಷ್ಟು ಜನ ಇರ್ತಾರೋ ಅಷ್ಟೇ ತರಹದ ಆದ್ಯತೆಗಳು ಇರುತ್ತವೆ.
ಸಾಮಾಜಿಕ ಆಯ್ಕೆಯ ಸಿದ್ಧಾಂತ ಸುಮಾರಾಗಿ ಫ್ರೆಂಚ್ ಕ್ರಾಂತಿಯ ಕಾಲದಲ್ಲಿ ಮೊದಲಿಗೆ ಒಂದು ವ್ಯವಸ್ಥಿತ ಸಿದ್ಧಾಂತವಾಗಿ ಬಂತು. ಮೊಟ್ಟಮೊದಲಿಗೆ ಹೆಚ್ಚು ವ್ಯವಸ್ಥಿತವಾಗಿ ಮಾಡಿದವರು ಜೀನ್-ಚಾರ್ಲ್ಸ್ ಡಿ ಬೋರ್ಡಾ (1781) ಮತ್ತು ಮಾರ್ಕ್ಸಿಸ್ ಡಿ ಕಾಂಡೋರ್ಸೆಟ್ (1785). ಪ್ರಜಾಪ್ರಭುತ್ವದ ಮಾದರಿಯಲ್ಲಿ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಕಂಡುಕೊಳ್ಳುವುದು ಇವರೆಲ್ಲರ ಮುಖ್ಯ ಉದ್ದೇಶವಾಗಿತ್ತು. ಇವರೆಲ್ಲಾ ವಿಶೇಷವಾಗಿ ಬಹುಮತವನ್ನು ಆಧರಿಸಿ (Majority Decision) ನಿರ್ಧಾರವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಆದರೆ ಅವರ ಸಂಶೋಧನೆಗಳು ಅಷ್ಟೊಂದು ಆಶಾದಾಯಕವಾದ ಫಲ ನೀಡಿರಲಿಲ್ಲ. ಕೊಂಡೋರ್ಸೆಟ್ ಬಹುಮತದ ಮಾರ್ಗವನ್ನು ಹಿಡಿದು ಸಾಗಿದರೆ ವಿಜಯಿಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗದೇ ಹೋಗಬಹುದು ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಅದನ್ನು ಕಾಂಡೋರ್ಸೆಟ್ ವಿರೋಧಬಾಸ (ಪ್ಯಾರಡಾಕ್ಸ್) ಎನ್ನಲಾಗುತ್ತದೆ.
ಇದನ್ನೂ ಓದಿ:ರೂಪಾಯಿಯ ಸಮಸ್ಯೆ: ಅದರ ಉಗಮ ಮತ್ತು ಪರಿಹಾರ
ಒಂದು ಉದಾಹರಣೆಯ ಮೂಲಕ ಈ ವಿರೋಧಾಭಾಸವನ್ನು ಅರ್ಥಮಾಡಿಕೊಳ್ಳಬಹುದು. ರಾಮು, ಸೋಮು, ಭೀಮು ತಮ್ಮ ಮುಂದಿರುವ ಸೇಬು, ಬಾಳೆಹಣ್ಣು, ಮತ್ತು ಮಾವಿನ ಹಣ್ಣುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಿಟ್ಟುಕೊಳ್ಳಿ. ಅವರ ಆದ್ಯತೆಗಳು ಕೆಳಕಂಡಂತೆ ಇರಬಹುದು.
ರಾಮು: ಸೇಬು > ಬಾಳೆಹಣ್ಣು> ಮಾವು (ಆಂದರೆ ರಾಮು ಸೇಬನ್ನು ಅತಿ ಹೆಚ್ಚು ಇಷ್ಟ ಪಡುತ್ತಾನೆ.) ಸೋಮು: ಬಾಳೆಹಣ್ಣು > ಮಾವು > ಸೇಬು ಭೀಮು: ಮಾವು > ಸೇಬು > ಬಾಳೆಹಣ್ಣು ಈಗ ನಾವು ಬಹುಮತದ ಕ್ರಮವನ್ನು ಅನುಸರಿಸಿ ಎರಡು ಹಣ್ಣುಗಳನ್ನು ಹೋಲಿಸಿ ಯಾರು ವಿಜಯಿಗಳಾಗುತ್ತಾರೆ ನೋಡೋಣ: ಸೇಬು ಮತ್ತು ಬಾಳೆಹಣ್ಣಿನ ನಡುವೆ: ರಾಮು ಮತ್ತು ಭೀಮು ಇಬ್ಬರೂ ಬಾಳೆಹಣ್ಣಿಗಿಂತ ಸೇಬನ್ನೇ ಇಷ್ಟಪಡುತ್ತಾರೆ. ಹಾಗಾಗಿ ಸೇಬು ಗೆದ್ದಿತು. ಬಾಳೆಹಣ್ಣು ಮತ್ತು ಮಾವಿನ ನಡುವೆ: ರಾಮು ಮತ್ತು ಸೋಮು ಇಬ್ಬರೂ ಬಾಳೆಹಣ್ಣನ್ನೇ ಇಷ್ಟಪಡುತ್ತಾರೆ. ಹಾಗಾಗಿ ಬಾಳೆಹಣ್ಣು ಗೆದ್ದಿತು. ಮಾವು ಮತ್ತು ಸೇಬಿನ ನಡುವೆ: ಸೋಮು ಮತ್ತು ಭೀಮು ಇಬ್ಬರೂ ಮಾವನ್ನೇ ಇಷ್ಟಪಡುತ್ತಾರೆ. ಹಾಗಾಗಿ ಮಾವು ಗೆದ್ದಿತು! ಕೊಂಡೋರ್ಸೆಟ್ ಹೇಳುವ ಗೋಜುಲು ಇದು. ಇಲ್ಲಿ ಯಾರು ಆಸಲಿ ವಿಜಯಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇದನ್ನು ‘ವರ್ತುಲ ಆದ್ಯತೆ’ ಎನ್ನಲಾಗುತ್ತದೆ. ಆಯ್ಕೆಯನ್ನು ಮಾಡಿಕೊಳ್ಳುವುದಕ್ಕೆ ಬಹುಮತದ ನಿರ್ಧಾರ ಆಕರ್ಷಕ ವಿಧಾನವಾದರೂ ಇದರಲ್ಲಿ ನಿರ್ಧಾರವೇ ಸಾಧ್ಯವಾಗದೇ ಇರಬಹುದು ಅನ್ನುತ್ತದೆ ಕಾಂಡೋರ್ಸೆಟ್ ವಿರೋಧಬಾಸ.
ಕಲ್ಯಾಣ ಅರ್ಥಶಾಸ್ತ್ರ
ಸಮಾಜ ಆಯ್ಕೆಯ ಸಿದ್ಧಾಂತದಲ್ಲಿದ್ದ ನಿರಾಶಾವಾದ ಕಲ್ಯಾಣ ಅರ್ಥಶಾಸ್ತ್ರಕ್ಕೂ ಹರಡಿಕೊಂಡಿತು. ಸಾಂಪ್ರದಾಯಿಕ ಕಲ್ಯಾಣ ಅರ್ಥಶಾಸ್ತ್ರವನ್ನು ವ್ಯವಸ್ಥಿತವಾಗಿ ಒಂದು ವ್ಯವಸ್ಥಿತ ವಿಷಯವಾಗಿ 18ನೇ ಶತಮಾನದಲ್ಲಿ ಎಡ್ವರ್ತ್, ಮಾರ್ಷಲ್ ಮತ್ತು ಪಿಗೂ ಅವರಂತಹ ಅರ್ಥಶಾಸ್ತ್ರಜ್ಞರು ಪ್ರಾರಂಭಿಸಿದ್ದರು. ಅವರು ಕಾಂಡೋರ್ಸೆಟ್ ಅವರೆಲ್ಲಾ ಹಿಡಿದ ದಾರಿಗಿಂತ ಭಿನ್ನವಾದ ದಾರಿಯನ್ನು ಹಿಡಿದಿದ್ದರು. ಅವರು ಬಹುಮತದ ಕ್ರಮವನ್ನು ಬಿಟ್ಟು ಸಮಾಜದ ಕಲ್ಯಾಣವನ್ನು ಅಳೆಯುವುದಕ್ಕೆ ಉಪಯುಕ್ತತತೆಯನ್ನು (Utility) ಮಾಪನವನ್ನಾಗಿ ಬಳಸಿದ್ದರು. ಅವರು ತಮ್ಮ ಸಮಕಾಲೀನ ಚಿಂತಕ ಜೆರೆಮಿ ಬೆಂಥಮ್ ಅವರಿಂದ ಪ್ರಭಾವಿತರಾಗಿದ್ದರು. ಇವರ ಪ್ರಕಾರ, ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ‘ಸುಖ’ ಅಥವಾ ಉಪಯುಕ್ತತತೆಯನ್ನು ಕೂಡಿಸುವ ಮೂಲಕ ಇಡೀ ಸಮಾಜದ ಕಲ್ಯಾಣವನ್ನು ತಿಳಿಯಬಹುದು. ಇವರೆಲ್ಲರು ವ್ಯಕ್ತಿಗಳ ನಡುವಿನ ಸುಖದುಃಖಗಳನ್ನು ಪರಸ್ಪರ ಹೋಲಿಸಬಹುದು (Interpersonal Comparison) ಎಂದು ಒಪ್ಪಿಕೊಂಡಿದ್ದರು
ಬೆಂತಮ್ ಒಟ್ಟು ಸಮಾಜದ ಹಿತಾಸಕ್ತಿಯನ್ನು ಕಂಡುಕೊಳ್ಳುವುದಕ್ಕೆ ಒಂದು ಕ್ರಮ ಸೂಚಿಸಿದ್ದರು. ಅವರ ಪ್ರಕಾರ, ಸಮಾಜದಲ್ಲಿರೋ ಪ್ರತಿಯೊಬ್ಬರ ತೃಪ್ತಿಯನ್ನು ಲೆಕ್ಕ ಹಾಕಿ, ಅದನ್ನೆಲ್ಲಾ ಒಟ್ಟಿಗೆ ಸೇರಿಸಿದರೆ ಸಮಾಜಕ್ಕೆ ಯಾವುದು ಒಳ್ಳೆಯದು ಅಂತ ಗೊತ್ತಾಗುತ್ತೆ. ಪಿಗು ಅವರೆಲ್ಲಾ ಬೆಂತಮ್ ಅವರಿಂದ ಪ್ರಭಾವಿತರಾಗಿ ಕಲ್ಯಾಣ ಅರ್ಥಶಾಸ್ತ್ರವನ್ನು ಬೆಳೆಸಿದರು. ಈ ಉಪಯುಕ್ತತೆಯ ಸಿದ್ಧಾಂತ ಕಲ್ಯಾಣ ಅರ್ಥಶಾಸ್ತ್ರದಲ್ಲಿ ಬಹಳ ಕಾಲ ಪ್ರಭಾವಶಾಲಿಯಾಗಿತ್ತು.
1930ರಲ್ಲಿ ಇದರ ಬಗ್ಗೆ ಟೀಕೆಗಳು ಪ್ರಾರಂಭವಾದವು. ಕಲ್ಯಾಣ ಅರ್ಥಶಾಸ್ತ್ರದಲ್ಲಿ ಒಂದು ರೀತಿಯ ಗೊಂದಲವಿತ್ತು. ಎಲ್ಲವೂ ಉಪಯುಕ್ತತೆಯನ್ನು ಆಧರಿಸಿಯೇ ನಡೆಯುತ್ತಿತ್ತು. ಆಗ ಯಾರೂ ಉಪಯುಕ್ತತತೆಯನ್ನೇ ಯಾಕೆ ಮಾಪನವನ್ನಾಗಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿರಲಿಲ್ಲ. ಸ್ವಾತಂತ್ರ್ಯ ವೋ ಇನ್ನೊಂದೋ ಯಾಕೆ ಆಗಬಾರದು ಅನ್ನುವ ಪ್ರಶ್ನೆ ಯಾರನ್ನೂ ಕಾಡಿರಲಿಲ್ಲ.
ಹಾಗೆಯೇ ಬೆಂತಮ್ ಅವರ ಈ ‘ಯುಟಿಲಿಟೇರಿಯನಿಸಂ’ ಸಿದ್ಧಾಂತದಲ್ಲಿ ಒಂದು ದೊಡ್ಡ ಕೊರತೆಯಿತ್ತು. ಅವರಿಗೆ ಇಡೀ ಸಮಾಜದ ಒಟ್ಟು ಖುಷಿ ಮುಖ್ಯವಾಗಿತ್ತೆ ಹೊರತು, ಆ ಖುಷಿ ಎಲ್ಲರಿಗೂ ಸಮನಾಗಿ ಹಂಚಿಕೆಯಾಗಿದೆಯಯ, ಇಲ್ಲವಾ ಅನ್ನೋದು ಮುಖ್ಯವಾಗಿರಲಿಲ್ಲ. ಇದು ರಾಜಕೀಯವಾಗಿ ಮತ್ತು ನ್ಯಾಯದ ದೃಷ್ಟಿಯಿಂದ ದೊಡ್ಡ ಸಮಸ್ಯೆ. ಆದರೆ ಯಾರೂ ನೀವು ಒಟ್ಟು ಲಾಭ ಅಥವಾ ಉಪಯುಕ್ತತತೆಯನ್ನು ಲೆಕ್ಕ ಹಾಕುತ್ತೀರಿ. ಆದರೆ ಅದು ಎಲ್ಲರಿಗೂ ಸರಿಯಾಗಿ ಹಂಚಿಕೆಯಾಗಿದೆಯಾ, ಇಲ್ಲವಾ ಎಂದು ಯಾಕೆ ನೋಡುವುದಿಲ್ಲ?” ಅಂತ ಕೇಳಲಿಲ್ಲ.
ಬದಲಿಗೆ ಆಗ ಹುಟ್ಟಿಕೊಂಡ ಟೀಕೆಯೇ ಬೇರೆ. ಲಿಯೋನೆಲ್ ರಾಬಿನ್ಸ್ ಮತ್ತು ಅವರ ತಂಡದವರು ಬೇರೆಯದೇ ನೆಲೆಯಲ್ಲಿ ಇದನ್ನು ಪ್ರಶ್ನಿಸಿದರು. ಅವರ ಪ್ರಕಾರ, ಒಬ್ಬರ ಖುಷಿಯನ್ನು ಅಥವಾ ತೃಪ್ತಿಯನ್ನು ಇನ್ನೊಬ್ಬರ ಜೊತೆ ಹೋಲಿಸೋದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಅವರ ಪ್ರಕಾರ ಒಬ್ಬ ಮನುಷ್ಯನ ಮನಸ್ಸು ಇನ್ನೊಬ್ಬರಿಗೆ ಯಾವತ್ತೂ ಅರ್ಥವಾಗುವುದಿಲ್ಲ. ಎಲ್ಲರ ತೃಪ್ತಿಯನ್ನು ಅಳೆಯೋದಕ್ಕೆ ಒಂದೇ ಅಳತೆಗೋಲು ಇರಲು ಸಾಧ್ಯವೇ ಇಲ್ಲ.” ಅಂದರೆ. ನನಗೆ ಸಿಗೋ ಖುಷಿ ಮತ್ತು ನಿಮಗೆ ಸಿಗೋ ಖುಷಿ ಒಂದೇ ಅಂತ ಲೆಕ್ಕ ಹಾಕೋದು ತಪ್ಪು. ಅದರಿಂದಾಗಿ ಪರಸ್ಪರ ಜನರ ಸುಖದುಃಖಗಳನ್ನು ಹೋಲಿಸುವುದಕ್ಕೂ ಸಾಧ್ಯವಿಲ್ಲ ಎನ್ನುವುದು ಅವರ ವಾದವಾಗಿತ್ತು. ಇದು ಕಲ್ಯಾಣ ಅರ್ಥಶಾಸ್ತ್ರದ ಬುಡವನ್ನೇ ಅಲ್ಲಾಡಿಸಿತು.
ಸಮಾಜದ ಕಲ್ಯಾಣವನ್ನು ತಿಳಿಯುವುದಕ್ಕೆ ಕೇವಲ ಒಟ್ಟು ಉಪಯುಕ್ತತತೆಯನ್ನಷ್ಟೇ ಸಾಮಾಜಿಕ ಆಯ್ಕೆಯ ಸಿದ್ಧಾಂತ ನೆಚ್ಚಿಕೊಂಡಿತ್ತು. ಹಂಚಿಕೆಯನ್ನು ಕೈಬಿಟ್ಟಿತ್ತು. ವೈಯಕ್ತಿಕ ತೃಪ್ತಿಯ ಬಗ್ಗೆ ಮಾಹಿತಿಯನ್ನು ಕಳೆದುಕೊಂಡೆವು. ಆಗಲೇ ಮಾಹಿತಿಯ ವ್ಯಾಪ್ತಿ ಕಮ್ಮಿಯಾಗಿತ್ತು. ಈಗ ತೃಪ್ತಿಯನ್ನು ಪರಸ್ಪರ ಹೋಲಿಸುವುದಕ್ಕೂ ಸಾಧ್ಯವಿಲ್ಲ ಅನ್ನುವ ಮೂಲಕ ಬೋರ್ಡಾ ಮತ್ತು ಕಾಂಡೋರ್ಸೆಟ್ ಅವರ ಹಳೆಯ ಬಹುಮತದ ಪದ್ಧತಿಗೆ ಹಿಂತಿರುಗಿದೆವು. ಈಗ ಆದ್ಯತೆಗಳು ಮಾತ್ರ ತಿಳಿಯುತ್ತವೆ. ಅವರಿಗೆ ನಿರ್ದಿಷ್ಟ ಆಯ್ಕೆ ಇಷ್ಟ ಅಂತ ಗೊತ್ತಾಗುತ್ತದೆ. ಆದರೆ ಎಷ್ಟು ಇಷ್ಟ ಅಂದರೆ ಇಷ್ಟದ ತೀವ್ರತೆ ತಿಳಿಯುವುದಿಲ್ಲ. ಹಾಗಾಗಿ ಹೋಲಿಕೆ ಸಾಧ್ಯವಿಲ್ಲ ಅನ್ನುವ ಮೂಲಕ ಸಾಮಾಜಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾದ ಮಾಹಿತಿಯ ವ್ಯಾಪ್ತಿ (Informational Base) ಇನ್ನಷ್ಟು ಕುಸಿಯಿತು.
1940ರ ನಂತರ ಈ ಉಪಯುಕ್ತತತೆಯನ್ನು ಆಧರಿಸಿದ್ದ ಕಲ್ಯಾಣ ಅರ್ಥಶಾಸ್ತ್ರ ಹಿಂದೆ ಸರಿಯಿತು. ಹೊಸ ಕಲ್ಯಾಣ ಅರ್ಥಶಾಸ್ತ್ರ Welfare Economics) ಬಂದಿತು. ಇದು ಒಂದು ಮುಖ್ಯವಾದ ಅಳತೆಗೋಲನ್ನ ಬಳಸಿತು, ಅದೇ ‘ಪರೇಟೋ ಹೋಲಿಕೆ. ಸರಳವಾಗಿ ಹೇಳುವುದಾದರೆ ಅದು ಹೇಳುವುದು ಇಷ್ಟು: ಒಂದು ಬದಲಾವಣೆಯಿಂದ ಸಮಾಜದಲ್ಲಿರೋ ಯಾರಿಗೂ ತೊಂದರೆಯಾಗದೆ, ಕನಿಷ್ಠ ಒಬ್ಬರಿಗಾದರೂ ಲಾಭವಾಗುತ್ತದೆ ಅಂದರೆ ಅದನ್ನ “ಒಳ್ಳೆಯ ಬದಲಾವಣೆ” ಅಂತ ಕರೆಯಬಹುದು. ಆಮೇಲೆ ಬಂದ ಬಹಳಷ್ಟು ಆರ್ಥಿಕ ಸಿದ್ಧಾಂತಗಳು ಕೇವಲ ಈ ‘ಪರೇಟೋ ದಕ್ಷತೆಯ (Pareto Efficiency) ಬಗ್ಗೆ ಮಾತ್ರ ತಲೆಕೆಡಿಸಿಕೊಂಡವು, ಅಂದರೆ, ನೀವು ಗರಿಷ್ಟ ದಕ್ಷತೆಯ ಸ್ಥಿತಿ ತಲುಪಿರುತ್ತೀರಿ. ಇನ್ನು ಯಾರಿಗಾದರೂ ಲಾಭಮಾಡಿಕೊಡಬೇಕಾದರೆ ಬೇರೆ ಯಾರಿಗಾದರೂ ತೊಂದರೆ ಕೊಡಲೇಬೇಕು. ಯಾರಿಗೂ ತೊಂದರೆ ಕೊಡದೆ ಯಾರಿಗೂ ಲಾಭ ಮಾಡಿಕೊಡಲು ಸಾಧ್ಯವಿಲ್ಲದ ಸ್ಥಿತಿ ತಲುಪುವುದೇ ಪಾರೆಟೋ ದಕ್ಷತೆ. ಆದರೆ ಇಲ್ಲಿ ಒಂದು ದೊಡ್ಡ ಸಮಸ್ಯೆಯಿದೆ. ಇದು “ಹಂಚಿಕೆ” (Distribution) ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಅಂದರೆ, ಒಬ್ಬ ಶ್ರೀಮಂತ ಇನ್ನೂ ಶ್ರೀಮಂತನಾಗಿ, ಬಡವ ಹಾಗೆಯೇ ಉಳಿದರೂ ಈ ಪದ್ಧತಿ ತಪ್ಪು ಎಂದು ಭಾವಿಸುವುದೇ ಇಲ್ಲ. ಜನರ ನಡುವಿನ ಹಿತಾಸಕ್ತಿಗಳ ಸಂಘರ್ಷವನ್ನು ಇದು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.
ಆ್ಯರೋ ಅವರ ಅಸಾಧ್ಯತೆಯ ಸಿದ್ಧಾಂತ
ಸಮಾಜಕ್ಕೆ ಯಾವುದು ಒಳ್ಳೆಯದು ಅಂತ ನಿರ್ಧಾರ ಮಾಡೋಕ್ಕೆ ಇನ್ನೂ ಸಶಕ್ತವಾದ ಕ್ರಮ ಬೇಕಿತ್ತು. ಇದನ್ನ ಅಬ್ರಾಮ್ ಬರ್ಗ್ನ್ ಮತ್ತು ಪಾಲ್ ಸ್ಯಾಮ್ಯುಯೆಲ್ಸನ್ ಅವರು ಆಳವಾಗಿ ಅಭ್ಯಾಸ ಮಾಡಿದರು. ಇದೇ ದಾರಿ ಮುಂದೆ ಕೆನೆತ್ ಆರೋ (Kenneth Arrow) ಅವರ ಸೋಷಿಯಲ್ ಚಾಯ್ಸ್ ಥಿಯರಿ” (Social Choice Theory) ಹುಟ್ಟಲು ಕಾರಣವಾಯಿತು. ಕೆನ್ನೆತ್ ಆರೋ ಅವರು ಕಾಂಡೋರ್ಸೆಟ್ ಅವರ ವಾದವನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಿದರು. ಬಹುಮತದಿಂದ ವಿಜಯಿಯನ್ನು ಆರಿಸುವುದಕ್ಕೆ ಸಾಧ್ಯವಿಲ್ಲ ಅನ್ನುವ ಕಾಂಡೋರ್ಸೆಟ್ ಸಿದ್ಧಾಂತವನ್ನು ಆರೋ ಎಲ್ಲಾ ಆಯ್ಕೆಯ ವಿಷಯಕ್ಕೂ ಅನ್ವಯಿಸಿ ಸಾಮಾನ್ಯಕರಿಸಿದರು.

ಆ್ಯರೋ ಕಲ್ಯಾಣ ಅರ್ಥಶಾಸ್ತ್ರದಲ್ಲಿ ವಿಶೇಷವಾಗಿ ಸಾಮಾಜಿಕ ಆಯ್ಕೆಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನೇ ತಂದರು. ಅಮರ್ತ್ಯ ಸೇನ್ ಆ ಮೂರು ಮುಖ್ಯ ಬದಲಾವಣೆಗಳನ್ನು ಗುರುತಿಸುತ್ತಾರೆ:
ಮೊದಲನೆಯದಾಗಿ, ಗಣಿತ ಹಾಗೂ ತರ್ಕಶಾಸ್ತ್ರದಲ್ಲಿ ಬಳಸುವ ಅಕ್ಸಿಯಾಮೆಟಿಕ್ ಅಪ್ರೋಚ್ ಅಂದರೆ ಆಧಾರ ಸೂತ್ರಗಳನ್ನು ಆಧರಿಸಿ ಸಿದ್ಧಾಂತಗಳನ್ನು ಸಾಬೀತು ಮಾಡುವ ಕ್ರಮವನ್ನು ಸಾಮಾಜಿಕ ಆಯ್ಕೆಯ ವಿಷಯಕ್ಕೆ ಕೆನ್ನೆತ್ ಅನ್ವಯಿಸಿದರು.
ಎರಡನೆಯದಾಗಿ, ಪರ್ಯಾಯ ಸ್ಥಿತಿಗಳ ಅಥವಾ ನೀತಿಗಳ ನಡುವೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಬೇಕಾದ ಒಂದು ಚೌಕಟ್ಟನ್ನು ಆರೋ ರೂಪಿಸಿದರು.

ಮೂರನೆಯದಾಗಿ, ಸಾಮಾಜಿಕ ಆಯ್ಕೆಗೆ ಅಗತ್ಯವಿರುವ ಈ ಕೆಲವು ಸಾಮಾನ್ಯ ನಿಯಮಗಳನ್ನು ಏಕಕಾಲದಲ್ಲಿ ಪೂರೈಸಲು ಸಾಧ್ಯವಿಲ್ಲ ಎಂಬ ಪ್ರಖ್ಯಾತ ಅಸಾದ್ಯತೆಯ ಪ್ರಮೇಯವನ್ನು (Impossibility Theorem) ಪ್ರತಿಪಾದಿಸಿದರು. ವ್ಯಕ್ತಿಗಳ ನಡುವೆ ಹೋಲಿಕೆ ಮಾಡದೆ, ಕೇವಲ ಅವರ ಆದ್ಯತೆಗಳನ್ನು ಬಳಸಿಕೊಂಡು ಒಂದು ನ್ಯಾಯಯುತವಾದ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಾಮಾಜಿಕ ನಿರ್ಧಾರ ತೆಗೆದುಕೊಳ್ಳುವುದು ಗಣಿತದ ಪ್ರಕಾರ ಅಸಾಧ್ಯ ಎಂಬುದು ಅವರ ಪ್ರಮೇಯವಾಗಿತ್ತು. ಸಮಾಜದಲ್ಲಿ ನಿರ್ಧಾರ ತೆಗೆದುಕೊಳ್ಳಲು ನಾವು ಎಷ್ಟೇ ನ್ಯಾಯಯುತವಾದ ನಿಯಮಗಳನ್ನು ರೂಪಿಸಿದರೂ. ಅವು ಯಾವುದೋ ಒಂದು ಹಂತದಲ್ಲಿ ವಿಫಲವಾಗುತ್ತವೆ. “ಏಕ ವ್ಯಕ್ತಿ ಅಥವಾ ಸರ್ವಾಧಿಕಾರಿ ಆಡಳಿತವಿದ್ದಾಗಷ್ಟೇ ಸ್ಥಿರವಾದ ನಿರ್ಧಾರಗಳು ಸಾಧ್ಯ” ಎಂಬ ನಿರಾಶಾದಾಯಕ ಪ್ರಮೇಯವನ್ನು ಅವರು ಪ್ರತಿಪಾದಿಸಿದರು.
ಅವರ ಅಸಾಧ್ಯತೆಯ ಪ್ರಮೇಯ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿತು. ಜನರ ವೈಯಕ್ತಿಕ ಆದ್ಯತೆಗಳನ್ನು ಒಟ್ಟುಗೂಡಿಸಿ ಸಮಾಜದ ಆಯ್ಕೆಯನ್ನು (Social Welfare Function) ಹೇಗೆ ನಿರ್ಧರಿಸಬೇಕು ಅನ್ನುವುದನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸಿದ್ದರು. ಆರೋ ಅವರು ಇದಕ್ಕಾಗಿ ಸರಳವಾಗಿ ಕಾಣುವ ನಾಲ್ಕು ನಿಯಮಗಳನ್ನ (Conditions) ಹಾಕಿಕೊಟ್ಟರು:
ಪ್ಯಾರೆಟೋ ದಕ್ಷತೆ: ಪ್ಯಾರೆಟೋ ಎಫಿಷಿಯನ್ನಿ: ಎಲ್ಲರಿಗೂ ಒಂದು ಆಯ್ಕೆ ಇಷ್ಟವಿದ್ದರೆ, ಸಮಾಜವೂ ಅದನ್ನೇ ಆರಿಸಬೇಕು.
ಸರ್ವಾಧಿಕಾರ ರಹಿತ ವ್ಯವಸ್ಥೆ: ನಾನ್-ಡಿಕ್ಟೇಟರ್ಶಿಪ್: ಯಾರೋ ಒಬ್ಬ ಸರ್ವಾಧಿಕಾರಿಯ ಇಷ್ಟವೇ ಇಡೀ ಸಮಾಜದ ಇಷ್ಟ ಆಗಬಾರದು.
ಆಯ್ಕೆಗಳ ಸ್ವಾತಂತ್ರ್ಯ : ಇಂಡಿಪೆಂಡೆನ್ಸ್: ಎರಡು ವಿಷಯಗಳ ನಡುವೆ ಉದಾಹರಣೆಗೆ A ಮತ್ತು B ಒಂದನ್ನ ಆರಿಸುವಾಗ, ಮೂರನೇ ಸಂಬಂಧವಿಲ್ಲದ ವಿಷಯ (C) ನಮ್ಮ ನಿರ್ಧಾರದ ಮೇಲೆ ಪ್ರಭಾವ ಬೀರಬಾರದು.
ಅನಿರ್ಬಂಧಿತ ವ್ಯಾಪ್ತಿ: ಆನ್ರೆಸ್ಟ್ರಿಕ್ಸೆಡ್ ಡೊಮೈನ್ ಜನರು ಎಷ್ಟೇ ವಿಚಿತ್ರವಾದ ಅಥವಾ ವಿಭಿನ್ನವಾದ ಇಷ್ಟಗಳನ್ನ ಹೊಂದಿದ್ದರೂ, ಎಲ್ಲಾ ರೀತಿಯ ವೈಯಕ್ತಿಕ ಆದ್ಯತೆಗಳಿಗೂ ಈ ಪದ್ಧತಿ ಅನ್ವಯವಾಗಬೇಕು.
ಆರೋ ಪ್ರಕಾರ ಈ ಎಲ್ಲಾ ನಿಯಮಗಳನ್ನು ಏಕಕಾಲದಲ್ಲಿ ಪಾಲಿಸುವುದು ಗಣಿತದ ಪ್ರಕಾರ ಅಸಾಧ್ಯ. ಇದು ನಿರಾಶವಾದವನ್ನು ಮೂಡಿಸಿತ್ತು. ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಯ ಕ್ಷೇತ್ರದಲ್ಲಿ ನಿರಾಶವಾದ ಒಂದು ಪ್ರಧಾನ ಲಕ್ಷಣವಾಗಿಬಿಟ್ಟಿತ್ತು.
ಅಮರ್ತ್ಯ ಸೇನ್ ಅವರ ಪ್ರವೇಶ
ಈ ನಿರಾಶಾವಾದದ ವಾತಾವರಣದ ನಡುವೆ ಅಮರ್ತ್ಯ ಸೇನ್ ಅವರು ಪ್ರವೇಶಿಸಿದರು. ಅಮರ್ತ್ಯ ಸೇನ್ ಅವರು ತಮ್ಮ ವಾದಕ್ಕೆ ಗಣಿತವನ್ನು ಬಳಸುತ್ತಾರೆ. ಅದು ಅವಶ್ಯಕ ಅಂತಲೂ ಭಾವಿಸುತ್ತಾರೆ. ಅರ್ಥಶಾಸ್ತ್ರದಲ್ಲಿ ಗಣಿತದ ಬಳಕೆಯನ್ನು ಬಲವಾಗಿ ಸಮರ್ಥಿಸುತ್ತಾರೆ. ಅವರ ಪ್ರಕಾರ, ಸಾಮಾಜಿಕ ಆಯ್ಕೆಯ ಸಿದ್ಧಾಂತವು ಕೇವಲ ಸಾಮಾನ್ಯ ಜ್ಞಾನ ಮತ್ತು ಅನೌಪಚಾರಿಕ ತರ್ಕವಷ್ಟೆ ಸಾಲುವುದಿಲ್ಲ. ಗಣಿತದ ಚೌಕಟ್ಟು ಬೇಕು. ಇಲ್ಲದೇ ಹೋದರೆ ದಾರಿ ತಪ್ಪಬಹುದು. ಸೇನ್ ಅವರ ಹೆಚ್ಚುಗಾರಿಕೆಯೆಂದರೆ ಗಣಿತದ ಸೂತ್ರಗಳ ಮೂಲಕ ಕಂಡುಕೊಂಡ ಸತ್ಯಗಳನ್ನು ಸಾರ್ವಜನಿಕ ಚರ್ಚೆಗೆ ಪೂರಕವಾಗುವಂತೆ ಸರಳವಾಗಿ ವಿವರಿಸುವುದಕ್ಕೆ ಅವರಿಗೆ ಸಾಧ್ಯವಾಯಿತು.
ಅವರು ಆ್ಯರೋ ಅವರ ಪ್ರಮೇಯವನ್ನು ಒಪ್ಪಿಕೊಳ್ಳುತ್ತಲೇ ಅದರ ಪ್ರಮುಖ ನಂಬಿಕೆಯನ್ನು ಪ್ರಶ್ನಿಸಿದರು.
ಬಹುಮತದ ಆಯ್ಕೆ
ಮೊದಲನೆಯದಾಗಿ ಸೇನ್ ಕಲ್ಯಾಣ ಅರ್ಥಶಾಸ್ತ್ರದ ಸಮಸ್ಯೆಯನ್ನು ಬಹುಮತದ ಅಥವಾ ವೋಟಿಂಗ್ ಸಮಸ್ಯೆಯಾಗಿ ನೋಡುವುದರ ಬಗ್ಗೆಯೇ ಅನುಮಾನವನ್ನು ವ್ಯಕ್ತಪಡಿಸಿದರು. ಚುನಾವಣೆ ಅಥವಾ ಸಮಿತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿ ಬಂದಾಗ ಮತದಾನವು ಒಳ್ಳೆಯ ಕ್ರಮವಾಗಿರಬಹುದು. ಆದರೆ ಇಡೀ ಸಮಾಜದ ಕಲ್ಯಾಣವನ್ನು ಅಳೆಯಲು ಅದು ಸೇನ್ ಹೇಳುವಂತೆ ಎರಡು ಕಾರಣಗಳಿಗೆ ವಿಫಲವಾಗುತ್ತದೆ.
ಮೊದಲನೆಯದಾಗಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯವನ್ನಷ್ಟೇ ಪರಿಗಣಿಸಲಾಗುತ್ತದೆ. ಮತದಾನದಿಂದ ಹೊರಗುಳಿದ ಅಲ್ಪಸಂಖ್ಯಾತರು ಅಥವಾ ದಮನಿತ ವರ್ಗದವರು (ಉದಾಹರಣೆಗೆ ಅಮೇರಿಕಾದಲ್ಲಿ ಆಫ್ರಿಕನ್ ಅಮೇರಿಕನ್ನರು) ಮುಂತಾದವರ ಹಿತಾಸಕ್ತಿಗಳು ನಿರ್ಲಕ್ಷಿಸಲ್ಪಡುತ್ತವೆ. ಆದರೆ ಕಲ್ಯಾಣದ ದೃಷ್ಟಿಯಿಂದ ಅವರ ಹಿತವನ್ನೂ ಗಮನಿಸುವುದು ಅತ್ಯಗತ್ಯ.
ಎರಡನೆಯದಾಗಿ ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಂಡರೂ ಸಹ, ಕಲ್ಯಾಣ ಅರ್ಥಶಾಸ್ತ್ರದ ಮೌಲ್ಯಮಾಪನಕ್ಕೆ
ಆಗತ್ಯವಿರುವ ಪ್ರಮುಖ ಮಾಹಿತಿಯ ಕೊರತೆಯ ಸಮಸ್ಯೆ ಉಳಿಯುತ್ತದೆ. ಮತದಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ವಿಭಿನ್ನ ಆಯ್ಕೆಗಳನ್ನು ಶ್ರೇಣೀಕರಿಸಬಹುದು (Rank), ಆದರೆ ಆ ಮತದಾನದ ಮಾಹಿತಿಯನ್ನು ಬಳಸಿಕೊಂಡು ವಿವಿಧ ವ್ಯಕ್ತಿಗಳ ಕ್ಷೇಮ ಅಥವಾ ಸುಖವನ್ನು ಪರಸ್ಪರ ಹೋಲಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಸಂಪನ್ಮೂಲ ಹಂಚಿಕೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾದರೆ ನಾವು ಬೋರ್ಡಾ, ಕಾಂಡೋರ್ಸೆಟ್ ಮತ್ತು ಆ್ಯರೋ ಅವರು ಅನ್ವೇಷಿಸಿದ ಮತದಾನದ ನಿಯಮಗಳ ವ್ಯಾಪ್ತಿಯಿಂದ ಹೊರಗೆ ಬರುವುದು ಅನಿವಾರ್ಯ.
ನ್ಯೂಯಾರ್ಕ್ ನಗರದ ಎಲ್ಲಾ ಬಡವರ ಆದಾಯವನ್ನು ಅರ್ಧದಷ್ಟು ಕಡಿತಗೊಳಿಸಿ ಅದನ್ನು ಶ್ರೀಮಂತರಿಗೆ ಹಂಚುತ್ತೇವೆ ಎಂದು ಭಾವಿಸೋಣ. ಒಂದು ವೇಳೆ ಬಡವರಿಗಿಂತ ಶ್ರೀಮಂತರ ಸಂಖ್ಯೆ ಹೆಚ್ಚಿದ್ದರೆ, ಬಹುಮತದ ಆಧಾರದ ಮೇಲೆ ಇದು ‘ಸರಿಯಾದ ನಿರ್ಧಾರ’ ಎನಿಸಿಕೊಳ್ಳಬಹುದು. ಆದರೆ ಇದು ಸಾಮಾಜಿಕ ಕಲ್ಯಾಣದ ದೃಷ್ಟಿಯಿಂದ ಅತ್ಯಂತ ಕೆಟ್ಟ ನಿರ್ಧಾರವಾಗಿರುತ್ತದೆ. ಸಮಾಜದಲ್ಲಿ ಬಡವರು ಅಥವಾ ಸಂಕಷ್ಟದಲ್ಲಿರುವವರು ಯಾವಾಗಲೂ ಅಲ್ಪಸಂಖ್ಯಾತರಾಗಿರುತ್ತಾರೆ. ಒಂದು ವೇಳೆ ನಾವು ಕೇವಲ ಬಹುಮತದ ನಿರ್ಧಾರಗಳನ್ನೇ ಅವಲಂಬಿಸಿದರೆ. ಈ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅಗತ್ಯಗಳು ಕಡೆಗಣಿಸಲ್ಪಡುತ್ತವೆ. ಆಮೇರಿಕಾದಲ್ಲಿ 45 ಮಿಲಿಯನ್ ಜನರ ಬಳಿ ವೈದ್ಯಕೀಯ ವಿಮೆಯಿಲ್ಲ. ಇದು ದೊಡ್ಡ ಸಂಖ್ಯೆಯಾದರೂ, ಒಟ್ಟು ಜನಸಂಖ್ಯೆಗೆ ಹೋಲಿಸಿದರೆ ಅವರು ಅಲ್ಪಸಂಖ್ಯಾತರು. ಹಾಗೆಯೇ, ಸುಮಾರು 49 ಮಿಲಿಯನ್ ಜನರು ಅಮೇರಿಕಾದಲ್ಲಿ ‘ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ. ಅಂದರೆ ಅವರಿಗೆ ಮುಂದಿನ ಊಟ ಎಲ್ಲಿಂದ ಬರುತ್ತದೆ ಎಂದು ತಿಳಿದಿಲ್ಲ. ಬಹುಮತದ ನಿರ್ಧಾರಗಳು ಮಾತ್ರವೇ ನಮಗೆ ಮುಖ್ಯವಾದರೆ ಈ ಜನರ ಸಮಸ್ಯೆಗಳಿಗೆ ಬೆಲೆಯೇ ಇರುವುದಿಲ್ಲ. ಅಸಮಾನತೆಯು ಸಮಾಜದ ಒಂದು ದೊಡ್ಡ ಪಿಡುಗಾಗಿಯೇ ಉಳಿಯುತ್ತದೆ.
ವ್ಯಕ್ತಿಗಳ ನಡುವಿನ ಹೋಲಿಕೆ
ಕೆನ್ನೆತ್ ಆ್ಯರೋ ಅವರು ತಮ್ಮ ಸಿದ್ಧಾಂತದಲ್ಲಿ ವ್ಯಕ್ತಿಗಳ ನಡುವಿನ ಹೋಲಿಕೆಯನ್ನು “ಅರ್ಥಹೀನ” ಎಂದು ಹೊರಗಿಟ್ಟಿದ್ದರು. ಈ ಮಾಹಿತಿಯ ನಿರ್ಬಂಧವೇ ಅವರ ಸಿದ್ಧಾಂತವನ್ನು ‘ಅಸಾಧ್ಯತೆಯ’ ಕಡೆಗೆ ತಳ್ಳಿತು. ಸಾಮಾಜಿಕ ಆಯ್ಕೆಯು ಕೇವಲ ಮತದಾನದ ಮಾದರಿಯಲ್ಲೇ ಉಳಿಯುವಂತಾಯಿತು. ಆದರೆ ಸೇನ್ ಅವರು ಇದನ್ನು ವಿರೋಧಿಸಿದರು. ಒಬ್ಬ ವ್ಯಕ್ತಿಗೆ ಸಿಗುವ ಪ್ರಯೋಜನ ಅಥವಾ ಸಂತೋಷವನ್ನು ಇನ್ನೊಬ್ಬನಿಗೆ ಆಗುವ ಅನುಕೂಲದೊಂದಿಗೆ ಹೋಲಿಸದ ಹೊರತು, ನಾವು ಸಮಾಜದ ಕಲ್ಯಾಣವನ್ನು ಅಳೆಯಲು ಸಾಧ್ಯವೇ ಇಲ್ಲ ಎಂದು ಸೇನ್ ವಾದಿಸಿದರು.
ವೈಯಕ್ತಿಕ ಹೋಲಿಕೆಗೆ ಅವಕಾಶ ಇಲ್ಲ ಅಂತಾದರೆ ಬಡವ ಮತ್ತು ಶ್ರೀಮಂತರ ನಡುವಿನ ಹೋಲಿಕೆಯೇ ಸಾಧ್ಯವಾಗುವುದಿಲ್ಲ. ಶ್ರೀಮಂತನಿಗಿಂತ ಬಡವನಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ವ್ಯಕ್ತಿಗಳ ನಡುವೆ ಹೋಲಿಕೆ ಮಾಡಬೇಕಾಗುತ್ತದೆ. ಬಡವನಿಗೆ ಒಂದು ರೂಪಾಯಿ ಸಿಕ್ಕರೆ ಆಗುವ ಲಾಭವು ಒಬ್ಬ ಶ್ರೀಮಂತನಿಗೆ ಒಂದು ರೂಪಾಯಿ ಕಳೆದುಕೊಳ್ಳುವುದರಿಂದ ಆಗುವ ನಷ್ಟಕ್ಕಿಂತ ದೊಡ್ಡದು ಎಂದು ಹೇಳಿದರೆ ಅದು ವೈಯಕ್ತಿಕ ಹೋಲಿಕೆಯಾಗುತ್ತದೆ. ಶ್ರೀಮಂತನ ಬಳಿ ಹೆಚ್ಚು ಹಣವಿದೆ ಅಥವಾ ಬಡವನ ಬಳಿ ಏನೂ ಇಲ್ಲ ಅಂದರೂ ಹೋಲಿಕೆಯಾಗುತ್ತದೆ. ಜನರ ಕಲ್ಯಾಣವನ್ನು ಗಮನಿಸುವಾಗ ಇಂತಹ ಹೋಲಿಕೆ ಅನಿವಾರ್ಯ ಎಂದು ವಾದಿಸುವ ಮೂಲಕ ಸೇನ್ ವೈಯಕ್ತಿಕ ಹೋಲಿಕೆಯನ್ನು ಸಾಮಾಜಿಕ ಆಯ್ಕೆಯ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾದರು. ಈಗ ಅದು ಕಲ್ಯಾಣ ಅರ್ಥಶಾಸ್ತ್ರದ ಭಾಗವಾಗಿದೆ.
ವ್ಯಕ್ತಿಗಳ ನಡುವಿನ ಉಪಯುಕ್ತತತೆಯನ್ನು ನಿಖರವಾಗಿ ಹೋಲಿಸುವುದಕ್ಕೆ ಸಾಧ್ಯವೆ? ನಮಗೆ ವ್ಯಕ್ತಿಗಳ ನಡುವೆ ನೂರಕ್ಕೆ ನೂರರಷ್ಟು ನಿಖರವಾದ ಹೋಲಿಕೆ ಬೇಕಿಲ್ಲ ಎನ್ನುತ್ತಾರೆ. ಉದಾಹರಣೆಗೆ. ರೋಮ್ ನಗರ ಉರಿಯುವಾಗ ಚಕ್ರವರ್ತಿ ನಿರೋನಿಗೆ ಸಿಕ್ಕ ‘ಸುಖವು ಇಡೀ ನಗರದ ಜನ ಅನುಭವಿಸಿದ ‘ದುಃಖಕ್ಕಿಂತ ಕಡಿಮೆ ಎಂದು ಹೇಳಲು ನಮಗೆ ಸಾಮಾನ್ಯ ಜ್ಞಾನ ಸಾಕು. ಇಂತಹ ‘ಅಂಶಿಕ ಹೋಲಿಕೆ’ ಕೂಡ ಸಮಾಜದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಕಾಗುತ್ತದೆ ಎಂದು ಸೇನ್ ವಾದಿಸುತ್ತಾರೆ.

ವ್ಯಕ್ತಿಗಳ ನಡುವಿನ ಹೋಲಿಕೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಅರ್ಥಶಾಸ್ತ್ರವು ಕೇವಲ ಲಾಭ-ನಷ್ಟದ ಲೆಕ್ಕಾಚಾರವಾಗದೆ. ಸಮಾನತೆ. ಹಂಚಿಕೆ ಮತ್ತು ನ್ಯಾಯದ ಕಳಕಳಿಗಳನ್ನು ಒಳಗೊಳ್ಳಲು ಸಾಧ್ಯವಾಯಿತು. ಈ ಬದಲಾವಣೆಯಿಂದಲೇ ಬಡತನ, ಅಸಮಾನತೆ ಮತ್ತು ಪರಿಸರ ಮೌಲ್ಯಮಾಪನದಂತಹ ಕ್ಷೇತ್ರಗಳಲ್ಲಿ ಹೊಸ ಸಂಶೋಧನೆಗಳು ಸಾಧ್ಯವಾದವು.
ಸಾಮಾಜಿಕ ಆಯ್ಕೆಯ ಸಿದ್ಧಾಂತದಲ್ಲಿ ವ್ಯಕ್ತಿಗಳ ನಡುವಿನ ಹೋಲಿಕೆ ಸಾಧ್ಯ ಎಂದು ಒಪ್ಪಿಕೊಂಡ ಸೇನ್ ಯಾವುದನ್ನು ಹೋಲಿಸಬೇಕು ಅನ್ನುವ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಅರ್ಥಶಾಸ್ತ್ರಜ್ಞರು ವ್ಯಕ್ತಿಗಳ ನಡುವಿನ ಮಾನಸಿಕ ಸ್ಥಿತಿ ಮತ್ತು ಸಂತೋಷವನ್ನು ಹೋಲಿಸುತ್ತಿದ್ದರು. ಆದರೆ ಸೇನ್ ಅದನ್ನು ವಿರೋಧಿಸಿದರು. ಕೇವಲ ಸಂತೋಷ ಜನರ ಬಡತನ ಮತ್ತು ವಂಚನೆಯನ್ನು ಸರಿಯಾಗಿ ಪ್ರತಿಬಿಂಬಿಸುವುದಿಲ್ಲ. ಬಹಳ ಕಾಲದಿಂದ ಬಡತನದಲ್ಲಿರುವ ವ್ಯಕ್ತಿ, ಶೋಷಿತ ಕಾರ್ಮಿಕ ಅಥವಾ ಲಿಂಗ ತಾರತಮ್ಯಕ್ಕೆ ಒಳಗಾದ ಮಹಿಳೆ ತನ್ನ ಕಷ್ಟದ ಸ್ಥಿತಿಗೇ ಹೊಂದಿಕೊಂಡಿರುತ್ತಾರೆ. ಅವರು ಸಣ್ಣ ಸಣ್ಣ ಅನುಕೂಲಕ್ಕೆ ಸಂತೋಷ ಪಡಲು ಕಲಿಯುತ್ತಾರೆ. ಹಾಗೆಂದು ಅವರು ‘ಕ್ಷೇಮವಾಗಿದ್ದಾರೆ ಎಂದು ತೀರ್ಮಾನಿಸುವುದು ತಪ್ಪು. ಅವರ ಮಾನಸಿಕ ಸಂತೋಷವು ಅವರ ನೈಜ ವಂಚನೆಯನ್ನು ಮರೆಮಾಚುತ್ತದೆ. ಆದ್ದರಿಂದ, ಕಲ್ಯಾಣವನ್ನು ಅಳೆಯಲು ಕೇವಲ ‘ಉಪಯುಕ್ತತೆ’ ಅಥವಾ ‘ಸುಖ’ ಸರಿಯಾದ ಮಾಪನವಲ್ಲ.
ಪ್ರಖ್ಯಾತ ದಾರ್ಶನಿಕ ಜಾನ್ ರಾಲ್ಸ್ ಅವರು ವ್ಯಕ್ತಿಯ ಏಳಿಗೆಯನ್ನು ಅಳೆಯಲು ‘ಪ್ರಾಥಮಿಕ ಸರಕುಗಳು ಅಂದರೆ ಆದಾಯ, ಸಂಪತ್ತು ಮತ್ತು ಅವಕಾಶಗಳು ಎಲ್ಲರಿಗೂ ಸಿಗಬೇಕು ಎಂದು ವಾದಿಸಿದ್ದರು. ಸೇನ್ ಇನ್ನು ಮುಂದುವರೆದು ಕೇವಲ ಸಂಪನ್ಮೂಲಗಳನ್ನು ನೀಡುವುದಷ್ಟೇ ಮುಖ್ಯವಲ್ಲ, ಆ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಜೀವನ ನಡೆಸುವ ‘ಸಾಮರ್ಥ್ಯ’ಆ ವ್ಯಕ್ತಿಗೆ ಇದೆಯೇ ಎಂದು ನೋಡಬೇಕು ಎಂದು ವಾದಿಸಿದರು. ಉದಾಹರಣೆಗೆ, ಒಬ್ಬ ಅಂಗವಿಕಲ ವ್ಯಕ್ತಿ ಮತ್ತು ಸದೃಢ ವ್ಯಕ್ತಿಗೆ ಸಮಾನ ಆದಾಯ ನೀಡಿದರೂ, ಅಂಗವಿಕಲ ವ್ಯಕ್ತಿಗೆ ಆ ಆದಾಯವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲು ಹೆಚ್ಚಿನ ಅಡೆತಡೆಗಳಿರುತ್ತವೆ. ಆದ್ದರಿಂದ, ನಾವು ಜನರ ‘ನೈಜ ಸ್ವಾತಂತ್ರ್ಯ’ ಮತ್ತು ಸಾಮರ್ಥ್ಯವನ್ನು ಹೋಲಿಕೆ ಮಾಡಬೇಕು.

ಸೇನ್ ಅವರ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಧ್ಯಯನದಿಂದ ಹಿಂದೆ ಸಾಮಾಜಿಕ ಆಯ್ಕೆ ಮತ್ತು ಕಲ್ಯಾಣ ಅರ್ಥಶಾಸ್ತ್ರವನ್ನು ಆವರಿಸಿಕೊಂಡಿದ್ದ ನಿರಾಶಾವಾದದ ಮಂಜು ಹರಿಯಲು ಸಾಧ್ಯವಾಗಿದೆ. ಸೇನ್ ಅವರು ಕೆನ್ನೆತ್ ಆ್ಯರೋ ಅವರ ಅಸಾಧ್ಯತೆಯ ಸಿದ್ಧಾಂತವನ್ನು ಒಂದು ಎಚ್ಚರಿಕೆಯಾಗಿ ನೋಡಿದರು. ಕೇವಲ ಅಂಕಿ-ಅಂಶ ಅಥವಾ ಬಹುಮತದ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಅಸಮಾನತೆ, ಬಡತನ, ಇತ್ಯಾದಿ ಪಿಡುಗುಗಳನ್ನು ಹೋಗಲಾಡಿಸಲು ನಾವು ವ್ಯಕ್ತಿಗಳ ನಡುವಿನ ಸುಖ-ದುಃಖಗಳನ್ನು ಹೋಲಿಕೆ ಮಾಡುವುದು ಅನಿವಾರ್ಯ. ಹಾಗಾಗಿಯೇ ಸೇನ್ ವೈಯಕ್ತಿಕ ಹೋಲಿಕೆಯನ್ನು ಸಾಮಾಜಿಕ ಆಯ್ಕೆಯ ಚರ್ಚೆಯ ವ್ಯಾಪ್ತಿಗೆ ತಂದರು. ಸಮಾಜದ ಸುಧಾರಣೆಗೆ ಪ್ರಯತ್ನಿಸುವಾಗ, ವಿವಿಧ ಸಾಮಾಜಿಕ ಆಸಕ್ತಿಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಿ ಬಂದಾಗ ಕೇವಲ ಜನರ ಇಷ್ಟ-ಕಷ್ಟಗಳ ಆದ್ಯತೆಗಳನ್ನು ನೋಡುವುದಕ್ಕೆ ಸೀಮಿತವಾಗಬಾರದು. ಜನರ ಕ್ಷೇಮವನ್ನು ಆಳೆಯುವ ವಿಭಿನ್ನ ಮಾಪನಗಳನ್ನು ಬಳಸುವುದು ಹೆಚ್ಚು ಉತ್ತಮ ಕ್ರಮವಾಗುತ್ತದೆ. ಹಾಗಾಗಿಯೇ ಸೇನ್ ಸಾಮಾಜಿಕ ಒಳಿತನ್ನು ಅಳೆಯಲು ಉಪಯುಕ್ತತತೆಯ ಬದಲಿಗೆ ಸ್ವಾತಂತ್ರ್ಯವನ್ನು ಮಾಪನವನ್ನಾಗಿ ತಂದರು.
ಆಸಮಾನತೆಯನ್ನು ಕೇವಲ ಬ್ಯಾಂಕ್ ಬ್ಯಾಲೆನ್ಸ್ನ ವ್ಯತ್ಯಾಸವಾಗಿ ನೋಡಬಾರದು. ಅದು ಒಬ್ಬ ವ್ಯಕ್ತಿಗೆ ತನ್ನ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಿಕೊಳ್ಳಲು ಇರುವ ಅಡೆತಡೆಗಳು ಎಂದು ಸೇನ್ ಭಾವಿಸಿದ್ದರು. ಆರ್ಥಿಕ ನೀತಿಗಳು ಜನರ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಣವೊಂದೇ ಬಡತನವನ್ನು ನೀಗಿಸುವುದಿಲ್ಲ. ವಯಸ್ಸು, ಜಾತಿ, ಲಿಂಗ (ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚಿನ ಆದಾಯದ ಅಗತ್ಯವಿರುತ್ತದೆ). ಇರುವ ಸ್ಥಳ ಮತ್ತು ಆರೋಗ್ಯದ ವಾತಾವರಣ ಇವೆಲ್ಲಾ ಒಬ್ಬ ವ್ಯಕ್ತಿಯು ಹಣವನ್ನು ಉತ್ತಮ ಬದುಕಾಗಿ ಬದಲಾಯಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತವೆ. ಅಮರ್ತ್ಯ ಸೇನ್ ತಂದ ಈ ಬದಲಾವಣೆಗಳಿಂದಾಗಿ ಅರ್ಥಶಾಸ್ತ್ರ ಕೇವಲ ಅಂಕಿಅಂಶಗಳ ಅಧ್ಯಯನವಾಗಿ ಉಳಿಯದೆ, ಮನುಷ್ಯನ ಬದುಕನ್ನು ಸುಧಾರಿಸುವ ಉನ್ನತ ಕಲೆಯಾಗಿ ಬದಲಾಯಿತು.
-ಟಿ ಎಸ್ ವೇಣುಗೋಪಾಲ್
References
Amartya sen, The possibility of Social choice in Rationality and freedom
Amartya Sen, Collective Choice and Social welfare
Amartya Sen, Home in the World, A memoir
Lawrence Hamilton, Amartya Sen

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.





