“ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಈ ವರ್ಷದ ಮುಂಗಾರು ಮಳೆ, ಹಿಂಗಾರು ಮಳೆ ಎರಡು ಸರಿಯಾಗಿ ಆಗಿಲ್ಲ. ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ ‘ತೀವ್ರ ಬರಪೀಡಿತ ಜಿಲ್ಲೆ’ ಎಂದು ಘೋಷಿಸಲು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ವತಿಯಿಂದ ಗದಗ ಪಟ್ಟಣದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ, ಬಾಲು ರಾಠೋಡ ಮಾತನಾಡಿ, “ಜಿಲ್ಲೆಯ ಗಜೇಂದ್ರಗಡ, ರೋಣ, ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಗದಗ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ವರ್ಷದ ಮುಂಗಾರು ಮಳೆ ಸರಿಯಾಗಿ ಆಗಿಲ್ಲ. ಕೆರೆ, ಕೊಳ, ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗಿವೆ. ಜೋಳ, ಹತ್ತಿ, ಸಜ್ಜೆ, ಹೆಸರು ಶೇಂಗಾ ತೋಗರಿ ಸೂರ್ಯಕಾಂತಿ ಮೆಕ್ಕೆಜೋಳ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ರೈತರು ಬಿತ್ತನೆಗೆ ಹಾಕಿದ ಬಂಡವಾಳವೂ ನಷ್ಟವಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಅಭಾವವಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಹೇಳಿದರು.
“ಗದಗ ಜಿಲ್ಲೆಯನ್ನು ಒಂದು ತಿಂಗಳ ಒಳಗಾಗಿ ‘ತೀವ್ರ ಬರಪೀಡಿತ ಜಿಲ್ಲೆ’ಯಂದು ಘೋಷಿಸಬೇಕು. ಇಲ್ಲದಿದ್ದರೆ ರೈತರು ಹಾಗೂ ಕೃಷಿ ಕೂಲಿಕಾರರು ಮತ್ತು ಜಿಲ್ಲೆಯ ಜನರು ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿ ನೀಡಿದರು.
ಬೇಡಿಕೆಗಳು: 1)ಗದಗ ಜಿಲ್ಲೆಯನ್ನು ಕೂಡಲೇ “ತೀವ್ರ ಬರಪೀಡಿತ ಜಿಲ್ಲೆ” ಎಂದು ಘೋಷಿಸಬೇಕು. 2) ಬೆಳೆ ಸಮೀಕ್ಷೆ ಮಾಡಿ ಎಲ್ಲಾ ರೈತರಿಗೆ ನೇರ ಪರಿಹಾರ ಜಮಾ ಮಾಡಬೇಕು. 3) ರಾಷ್ಟ್ರೀಕೃತ ಬ್ಯಾಂಕಿನ ರೈತರ ಕೃಷಿ ಸಾಲ ಮತ್ತು ಸಹಕಾರಿ ಸಾಲ ಮನ್ನಾ ಮಾಡಬೇಕು. 4) ಕುಡಿಯುವ ನೀರು ಮತ್ತು ಮೇವು ಪೂರೈಕೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು.
ಮನವಿ ಸಮಯದಲ್ಲಿ ಜಿಲ್ಲಾ ಮುಖಂಡರು ಬಸವರಾಜ್ ಮಂತೂರ್, ಪೀರು ರಾಠೋಡ, ಮೈಬೂ ಹವಾಲ್ದಾರ್, ಶರಣು ಮಾಟರಂಗಿ, ಅನಿಲ್ ರಾಠೋಡ್, ರೂಪೇಶ್ ಮಾಳೋತ್ತರ, ಚನ್ನಪ ಗುಗಲೋತ್ತರ, ಮಾದೇವಿ ದೊಡ್ಮನಿ, ಶಿವಕ್ಕ ಬೇವಿನಮರದ, ಸರಸ್ವತಿ ಬಣಕಲ್, ಎಲ್ಲವ್ವ ಸಂಧಿಮನೆ ಸೇರಿದಂತೆ ಅನೇಕರಿದ್ದರು.




