ಗದಗ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಪುಟ ದರ್ಜೆ ಸಚಿವ ಬಸವರಾಜ ರಾಯರಡ್ಡಿ ಅವರು ಸತತ ಎರಡನೇ ದಿನವೂ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯನ್ನು ಅವಲೋಕಿಸಿದರು.
ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಇಂದು ಬರ ಪರಿಸ್ಥಿತಿ ಕುರಿತು ಶಿರಹಟ್ಟಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಎರಡೂ ತಾಲೂಕುಗಳಲ್ಲಿನ ಮಳೆ ಪ್ರಮಾಣ, ಬಿತ್ತನೆ, ಬೆಳೆಗಳ ಸ್ಥಿತಿ, ಬೆಳೆ ಹಾನಿ ಹಾಗೂ ರೈತರಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.
ತಾಲೂಕುಗಳಲ್ಲಿ ಪ್ರಸಕ್ತ ಮಳೆ ಪರಿಸ್ಥಿತಿ, ಬಿತ್ತನೆಯಾಗಿರುವ ಪ್ರದೇಶ, ಮಳೆಯ ಕೊರತೆಯಿಂದ ಹಾನಿಗೊಳಗಾಗಿರುವ ಬೆಳೆಗಳು ಹಾಗೂ ರೈತರಿಗೆ ಅಗತ್ಯವಿರುವ ಪರಿಹಾರ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಬಳಿಕ ಸಚಿವ ಬಸವರಾಜ ರಾಯರಡ್ಡಿ ಅವರು ಛಬ್ಬಿ ಗ್ರಾಮಕ್ಕೆ ಭೇಟಿ ನೀಡಿ ಮೆಕ್ಕೆಜೋಳದ ಜಮೀನಿನಲ್ಲಿ ಬೆಳೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಮಳೆಯ ಕೊರತೆಯಿಂದ ಬೆಳೆಯ ಮೇಲೆ ಉಂಟಾಗಿರುವ ಪರಿಣಾಮ, ಬೆಳೆಗಳ ಬೆಳವಣಿಗೆ ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ವೀಕ್ಷಿಸಿದರು.
ಬಳಿಕ ರೈತರೊಂದಿಗೆ ಸಂವಾದ ನಡೆಸಿದ ಸಚಿವರು, ಪ್ರಸಕ್ತ ಬರ ಪರಿಸ್ಥಿತಿ, ಬೆಳೆ ಹಾನಿ, ಮಳೆಯ ಪ್ರಮಾಣ ಹಾಗೂ ಕೃಷಿ ಚಟುವಟಿಕೆಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು. ರೈತರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಬಸವರಾಜ ರಾಯರಡ್ಡಿ ಅವರು, “ಸರ್ಕಾರ ರೈತರೊಂದಿಗೆ ಇದೆ. ಬರ ಪರಿಸ್ಥಿತಿಯಿಂದ ರೈತರಿಗೆ ತೊಂದರೆಯಾಗದಂತೆ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ರೈತರ ಸಮಸ್ಯೆಗಳನ್ನು ಅಧಿಕಾರಿಗಳು ಸ್ಥಳೀಯವಾಗಿ ಪರಿಶೀಲಿಸಿ ವಾಸ್ತವಿಕ ವರದಿ ಸಲ್ಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಶಿರಹಟ್ಟಿ ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಜಂಟಿ ನಿರ್ದೇಶಕ ಚಿದಾನಂದ, ಶಿರಹಟ್ಟಿ ತಹಶೀಲ್ದಾರ್ ರಾಘವೇಂದ್ರ, ಲಕ್ಷ್ಮೇಶ್ವರ ತಹಶೀಲ್ದಾರ್ ಧನಂಜಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಉಪಸ್ಥಿತರಿದ್ದರು.




