ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ರಾಕೇಶ್ ವಾಲಿಕರ್ ಎಂಬಾತನನ್ನು ಹಳಿಯಾಳ ಪೊಲೀಸರು ಅನಮೋಡ ಚೆಕ್‌ಪೋಸ್ಟ್ ಬಳಿ ಬಂಧಿಸಿದ್ದಾರೆ.
ವಂಚನೆ ,ಮೀಟರ್ ಬಡ್ಡಿ, ರೌಡಿಸಂ ಸೇರಿದಂತೆ ಹಲವು ಆರೋಪಗಳು ಈತನ ಮೇಲಿದ್ದು. ಇತ್ತೀಚೆಗೆ ಜೀವ ಬೆದರಿಕೆ ಹಾಕಿ ಬೈಕ್ ಕಸಿದುಕೊಂಡು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇವನನ್ನು ಹಳಿಯಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಳಿಯಾಳ ಪಟ್ಟಣದ ಚವ್ಹಾಣ ಪ್ಲಾಟ್ ನಿವಾಸಿಯಾದ ರಾಕೇಶ್ ದಿನಕರ ವಾಲಿಕರ್, ಕಾನ್ವೆಂಟ್ ರಸ್ತೆ ನಿವಾಸಿ ರಾಹುಲ್ ಜಯವಂತ ವಾಣಿ ಎಂಬಾತನನ್ನು ಸಂಪರ್ಕಿಸಿ ಹಣವನ್ನು ಡಬಲ್ ಮಾಡಿಕೊಡುತ್ತೇನೆ, 1 ಲಕ್ಷ ರೂ. ನೀಡು ಎಂದು ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದಾಗ, ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಜೋಯಿಡಾ | ಹಾವು ಕಡಿದು ಗೋವಾ ಕಾಂಗ್ರೆಸ್ ಉಪಚುನಾವಣಾ ಅಭ್ಯರ್ಥಿ ಡಾ. ಕೇತನ್ ಭಾಟಿಕರ್ ದುರ್ಮರಣ
ಭಯಗೊಂಡ ರಾಹುಲ್, ತನ್ನ ಕೆಎ-65/ಜೆ-1393 ಸಂಖ್ಯೆಯ ರಾಯಲ್ ಎನ್‌ಫೀಲ್ಡ್ ಬೈಕ್ (ಸುಮಾರು ₹1.50 ಲಕ್ಷ ಮೌಲ್ಯ) ಅನ್ನು ಆರೋಪಿತನಿಗೆ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದಾರೆ.
ಪ್ರಕರಣವು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗದೇ ಇರುವುದರಿಂದ ದಸ್ತಗಿರಿ ವಾರಂಟ್ ಜಾರಿಗೊಂಡಿತ್ತು. ವಿಶೇಷ ಪತ್ತೆ ತಂಡ ರಚಿಸಿದ ಪೊಲೀಸರು, ಮೇ 16ರಂದು ಆರೋಪಿತನು ಗೋವಾದ ಪೊಂಡಾದಿಂದ ಹಳಿಯಾಳದತ್ತ ಬರುತ್ತಿರುವ ಮಾಹಿತಿ ಆಧರಿಸಿ ನಾಲ್ಕು ಗಂಟೆಗಳ ಕಾರ್ಯಾಚರಣೆ ನಡೆಸಿ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ ಮತ್ತು ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ ಹಾಗೂ ಸಿಪಿಐ ಜಯಪಾಲ್ ಪಾಟೀಲ್ ಮಾರ್ಗದರ್ಶನ ನೀಡಿದ್ದರು. ಪಿಎಸ್ಐ ಬಸವರಾಜ ಮಬನೂರ ಮತ್ತು ಕೃಷ್ಣಾ ಅರಕೇರಿ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




