ರಾಮದುರ್ಗ ತಾಲೂಕಿನ ರೈತರಿಗೆ ಜೀವನಾಧಾರ ಆಗಬೇಕಿದ್ದ ಶ್ರೀ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಜೀವಂತ ಸಾಕ್ಷಿಯಾಗಿದೆ. 30ಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ನೀರು ಒದಗಿಸುವ, ಕೃಷಿ ಹಸನು ಮಾಡುವ ಭಾಷಣ ಮಾಡಿದ್ದವರು ಈಗ ರೈತರ ಕಡೆ ತಿರುಗಿ ನೋಡದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಅಶೋಕ ಪಟ್ಟಣ ಅವರು ಎರಡನೆಯ ಬಾರಿ ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಗೊತ್ತುವಳಿ ಪಾಸ್ ಮಾಡಿಸಿ, ಬಜೆಟ್‌ನಲ್ಲಿ ₹544 ಕೋಟಿ ಅನುದಾನ ಮಂಜೂರು ಮಾಡಿಸಿದರು. 2015ರಲ್ಲಿ ಟೆಂಡರ್ ಕೂಡ ಕರೆದಿದ್ದರು, ನಂತರ 2016ರ ಜನವರಿ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದರು. ಅಂದು ರೈತರಿಗೆ ಬಹುಕಾಲದ ನೀರಿನ ಅಭಾವಕ್ಕೆ ಪರಿಹಾರ ಸಿಗುವ ಭರವಸೆ ಮೂಡಿತ್ತು.
“ಭರವಸೆಯ ಕಂಗಳಲಿ ಯೋಜನೆಯ ಜಾರಿಗೆ ಕಾದು ಒಂದು ದಶಕ ಕಳೆದರೂ, ಯೋಜನೆ ಇನ್ನೂ ಅರ್ಧದಲ್ಲೇ ನಿಂತಿದೆ. ಶಂಕುಸ್ಥಾಪನೆ ಮಾಡಿದ ಫೋಟೋಗಳು ಹರಿದಾಡಿದವೇ ಹೊರತು ರೈತರ ಹೊಲಕ್ಕೆ ನೀರು ಹರಿಯಲಿಲ್ಲ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ನೆನಪಾಗುವ ಯೋಜನೆ, ಜನರು ಮತಗಟ್ಟೆಗೆ ಹೋಗಿ ಬಂದಮೇಲೆ ನೆನಪಾಗದು. ಇದನ್ನು ಅಭಿವೃದ್ಧಿ ಎಂದು ಕರೆಯಬೇಕೆ?” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಾಲಕ್ಕೆ ವೀರಭದ್ರೇಶ್ವರ ಏತ ನೀರಾವರಿ ಯೋಜನೆಯ ಸಫಲತೆಗೆ ಶ್ರಮಿಸಿದ ಶಾಸಕ, ಅಶೋಕ ಪಟ್ಟಣವರ ಈಗ ಯೋಜನೆಯ ಜಾರಿಯ ಕುರಿತು ತಲೆಕೆಡಿಸಿಕೊಳ್ಳದೆ ರೈತರಲ್ಲಿ ನಿರಾಸೆ ಮೂಡಲು ಕಾರಣರಾಗಿದ್ದಾರೆ.
ಎರಡನೇ ಸಾರಿ ಶಾಸಕರಾಗಿದ್ದ ವೇಳೆ ʼನಮ್ಮ ಭಾಗದ ರೈತರಿಗೆ ನೀರು ಸಿಗಬೇಕು, ಹೊಲ ಹಸನಾಗಬೇಕುʼ ಎಂಬ ಉದ್ದೇಶದಿಂದ 2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಂಕುಸ್ಥಾಪನೆ ಮಾಡಿಸಿದ್ದರು.
“ಅಂದು ಬೆಂಗಳೂರಿನ ಕಚೇರಿಗಳಿಗೆ ಎರಡು ಕೈಯಲ್ಲಿ 10 ಕೆಜಿ ಫೈಲು ಹೊತ್ತು ಅಧಿಕಾರಿಗಳ, ಸಚಿವರ ಮನೆ ಬಾಗಿಲು ತಟ್ಟಿದ್ದನ್ನು ಜನ ಇಂದಿಗೂ ನೆನೆಯುತ್ತಾರೆ. ʼನಮ್ಮ ಕ್ಷೇತ್ರದ ರೈತರ ಅಭಿವೃದ್ಧಿಗೆ ಈ ಯೋಜನೆ ಜಾರಿಗೊಳಿಸಿʼ ಎಂದು ಶಾಸಕ ಅಶೋಕ ಪಟ್ಟಣವರು ಸಚಿವರ, ಅಧಿಕಾರಿಗಳ ಬೆನ್ನು ಬಿದ್ದಿದ್ದರು ಆದರೆ ಪ್ರಸ್ತುತ ವರ್ಷಗಳಲ್ಲಿ ಅವರು ರೈತರ ಹಿತಾಸಕ್ತಿಯನ್ನು ಕಡೆಗಣಿಸಿದ್ದಾರೆ” ಎಂದು ಗ್ರಾಮದ ಜನ ಆರೋಪಿಸಿದ್ದಾರೆ.
“ಬಿಜೆಪಿಯ ಮಹಾದೇವಪ್ಪ ಯಾದವಾಡ ಶಾಸಕರಾಗಿದ್ದಾಗಲೂ ಈ ಯೋಜನೆಗೆ ವೇಗ ಸಿಗಲಿಲ್ಲ. ಈಗ ಮತ್ತೆ ಅಶೋಕ ಪಟ್ಟಣ ಶಾಸಕರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ತಿಯಾಗುವ ಲಕ್ಷಣವಿಲ್ಲ. ಹತ್ತು ವರ್ಷಗಳನ್ನು ನಿರಾಸೆಯ ನೆರಳಿನಲ್ಲಿ ಕಳೆದಿದ್ದೇವೆ. ಯೋಜನೆ ನಮಗಾಗಿ ಘೋಷಿಸಿದಿರೋ ಅಥವಾ ನಿಮ್ಮ ರಾಜಕೀಯ ಭಾಷಣಕ್ಕಾಗಿಯೋ?” ರಾಮದುರ್ಗದ ರೈತರು ಎಂದು ಕಿಡಿಕಾರಿದ್ದಾರೆ.

“ತಾಲ್ಲೂಕಿನ ರೈತರು ಮಳೆ ನಂಬಿಕೊಂಡು ಬದುಕುವವರು, ನೀರಾವರಿ ಯೋಜನೆ ಸಂಪೂರ್ಣಗೊಂಡರೆ ಬದುಕು ಹಸನಾಗುತ್ತದೆ. ಆದರೆ ಇಲ್ಲಿ ಕೋಟ್ಯಂತರ ರೂಪಾಯಿ ಘೋಷಣೆ ಮಾಡಿ, ಟೆಂಡರ್ ಕರೆದು, ಶಂಕು ಸ್ಥಾಪನೆಯೂ ಮಾಡಿದ ಮೇಲೂ ರೈತರ ಭೂಮಿಗೆ ನೀರು ಹರಿಯಲಿಲ್ಲ. ಶಾಸಕ ಅಶೋಕ ಪಟ್ಟಣವರ ಮತ್ತು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಇವರಿಬ್ಬರೂ ಕೇವಲ ರಾಜಕಾರಣ ಮಾಡುತ್ತಿದ್ದಾರೆಯೆ ಹೊರತು ಜನ ಸೇವೆ ಮಾಡಿತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ರೈತ ಸಂಘಟನೆಯ ಜಗದೀಶ ದೇವರಡ್ಡಿ, “ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆಯಾಗಿ 10 ವರ್ಷ ಕಳೆದಿದೆ ಇನ್ನೂ ಕಾಮಗಾರಿ ಪೂರ್ಣವಾಗಲಿಲ್ಲ.ಈ ಕುರಿತು ರೈತ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಇದೇ ತಿಂಗಳ 25ರಂದು ಸಾಲಹಳ್ಳಿ ಗ್ರಾಮದಲ್ಲಿ ರೈತ ಸಂಘಟನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಬಿ.ಎಸ್. ನಾಯ್ಕ ಮಾತನಾಡಿ, “ಶಾಸಕರು ಯೋಜನೆ ಶುರು ಮಾಡಿ 10 ವರ್ಷ ಆಯ್ತು. ಯೋಜನೆ ಶುರುವಾದ ಮೇಲೆ ಶಾಸಕ ಅಶೋಕ ಪಟ್ಟಣ ಅವರು ಚುನಾವಣೆಯಲ್ಲಿ ಸೋತರು. ಇದರಿಂದ ಅವರಿಗೆ ಬೇಸರ ಆಗಿರಬಹುದು. ಇದೇ ಕಾರಣಕ್ಕೆ ಯೋಜನೆ ಪೂರ್ಣಗೊಳಿಸುವ ಕಡೆ ಗಮನ ಕೊಡಲಿಲ್ಲ ಎನ್ನುವ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದ್ದು, ಸೋಲು-ಗೆಲುವು ಸಾಮಾನ್ಯ. ಈಗ ಮರಳಿ ಶಾಸಕ ಸ್ಥಾನಕ್ಕೆ ಜನ ಆಯ್ಕೆ ಮಾಡಿದ್ದಾರೆ ಈಗಲಾದರೂ ರೈತರ ಹಿತದೃಷ್ಟಿಯಿಂದ ಯೋಜನೆ ಪೂರ್ಣಗೊಳಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ> ದಕ್ಷಿಣ ಕನ್ನಡ | ಬತ್ತಿದ ತುಂಬೆ, ಶಾಂಭವಿ, ಗುರುಪುರ ಜಲಾಶಯ; ಕುಡಿಯುವ ನೀರಿಗೂ ಹಾಹಾಕಾರ
ರಾಜ್ಯ ರೈತ ಸಂಘಟನೆಯ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, “ರಾಮದುರ್ಗ ತಾಲ್ಲೂಕಿನ ವೀರಭದ್ರೇಶ್ವರ ಹಾಗೂ ಸಾಲಾಪೂರ ಏತ ನೀರಾವರಿ ಯೋಜನೆಗಳಿಗೆ 10 ವರ್ಷ ಆಯ್ತು. ಇದುವರೆಗೂ ರೈತರಿಗೆ ಒಂದು ಹನಿ ನೀರು ಸಿಗಲಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಿರ್ಲಕ್ಷ್ಯ ಹೀಗೆಯೇ ಮುಂದುವರೆದರೆ ಸಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ದೊಡ್ಡ ಮಟ್ಟದ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
“ರಾಮದುರ್ಗ ತಾಲ್ಲೂಕಿನ ರೈತರ ಬದುಕಿಗೆ ಆಸರೆಯಾಗಿ ಒದಗಬೇಕಿದ್ದ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಇಂದು ರಾಜಕೀಯ ಗಾಳಕ್ಕೆ ಸಿಕ್ಕು ಅರ್ಧಕ್ಕೆ ನಿಂತಿದೆ. ಹತ್ತು ವರ್ಷಗಳ ಸುಧೀರ್ಘ ವಿಳಂಬದ ನಂತರ ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಾಜಕೀಯ ಬಿಟ್ಟು ಕಾಮಗಾರಿ ಪರಿಪೂರ್ಣವಾಗಿಸುವತ್ತ ಗಮನ ಕೊಡಬೇಕು. ಇಲ್ಲವಾದಲ್ಲಿ ನೀರಿಗಾಗಿ ಹತ್ತು ವರ್ಷಗಳಿಂದ ಪರಿತಪಿಸುತಿರುವ ರೈತರು ಬೀದಿಗಿಳಿದು ಹೋರಾಟ ಮಾಡುವ ದಿನಗಳಿಗೆ ಸರ್ಕಾರ ಸಾಕ್ಷಿಯಾಗಲಿದೆ” ಎಂದು ರೈತರು ಎಚ್ಚರಿಸಿದ್ದಾರೆ.
ಕ್ಷೇತ್ರದ ಶಾಸಕ ಅಶೋಕ ಪಟ್ಟಣ ರೈತರ ಅನುಕೂಲಕ್ಕಾಗಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಹಾಗೂ ಸಾಲಾಪೂರ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರ ಹೊಲಗಳಿಗೆ ನೀರು ಹರಿಸುವ ಅನುಕೂಲ ಮಾಡಿಕೊಡಬೇಕು ಎನ್ನುವುದು ರಾಮದುರ್ಗದ ಜನರ ಆಶಯ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು



