ಮನೆಯ ಮುಂದೆ ನಿಲ್ಲಿಸಿದ್ದ ಮಹೀಂದ್ರಾ ಅರ್ಜುನ್ ಟ್ರ್ಯಾಕ್ಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಬಸವರಾಜ ಶಿವರಾಯಿ ಗಾಡಿವಡ್ಡರ ಅವರು ಸೆ.22ರಂದು ಪೊಲೀಸರಿಗೆ ದೂರು ನೀಡಿದ್ದರು. ಸೆ.20ರ ರಾತ್ರಿ 10ರಿಂದ ಸೆ.21ರ ಬೆಳಗಿನ 5 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಕಳ್ಳತನವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗಾಗಿ ಬೆಳಗಾವಿ ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಅವರ ಸೂಚನೆಯಂತೆ ಪಿಎಸ್ಐ ಶಿವಕುಮಾರ ಬಿರಾದಾರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಹೆಚ್ಚುವರಿ ಎಸ್ಪಿ ಆರ್.ಬಿ. ಬಸ್ಸರಗಿ, ಚಿಕ್ಕೋಡಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡರ ಹಾಗೂ ಸಿಪಿಐ ವಿಶ್ವನಾಥ ಚೌಗಲೆ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ಪೊಲೀಸರು ಅ.2ರಂದು ಮೂವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸಿಪಿಐ ವಿಶ್ವನಾಥ ಚೌಗಲೆ, ಪಿಎಸ್ಐ ಶಿವಕುಮಾರ ಬಿರಾದಾರ, ಸಿಬ್ಬಂದಿಗಳಾದ ಎಸ್.ಆರ್. ಭಾಗಾಯಿ, ಗಜಾನನ ಎಸ್. ಕಾಂಬಳೆ, ಎಸ್.ಪಿ. ಗಲಗಲಿ, ರಾಮು ಜಿ. ಕುಳೊಳ್ಳಿ, ವಿಜಯಕುಮಾರ ಬಿ. ಪಾಟೀಲ, ರಮೇಶ ಎಸ್. ಹಾದಿಮನಿ ಹಾಗೂ ತಾಂತ್ರಿಕ ವಿಭಾಗದ ವಿನೋದ ಠಕ್ಕನ್ನವರ ಕಾರ್ಯವನ್ನು ಬೆಳಗಾವಿ ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.



