ಕೌಟುಂಬಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಪೊಲೀಸರ ಎದುರೇ ದುರುಳ ಪತಿಯೊಬ್ಬ ತನ್ನ ಪತ್ನಿಯ ಕತ್ತು ಕೊಯ್ದಿರುವ ಘಟನೆ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಘಟನೆ ನಡೆದಿದ್ದು, ಆರೋಪಿ ಪತಿ ಹರೀಶ್ ಎಂಬಾತ ತನ್ನ ಪತ್ನಿ ಶಿಲ್ಪಾ ಅವರ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದಿದ್ದಾನೆ. ಶಿಲ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹರೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಶಿಲ್ಪಾ ಅವರನ್ನು ಸದಾ ಅನುಮಾನಿಸುತ್ತಿದ್ದ ಹರೀಶ್, ದಿನನಿತ್ಯ ಹಿಂಸಿಸುತ್ತಿದ್ದ. ಆತನ ಹಿಂಸೆ ತಾಳದೆ ಶಿಲ್ಪಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ದಂಪತಿಯನ್ನು ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸುತ್ತಿದ್ದರು.
ಈ ವೇಳೆ, ತನ್ನ ವಿರುದ್ಧ ಶಿಲ್ಪಾ ಅವರು ಮಾಡುತ್ತಿದ್ದ ಆರೋಪಗಳಿಂದ ಕುಪಿತಗೊಂಡ ಹರೀಶ್, ಆಕೆಯ ಕುತ್ತಿಗೆ ಕೊಯ್ದಿದ್ದಾನೆ. ಕೂಡಲೇ ಆತನನ್ನು ಹಿಡಿದ ಪೊಲೀಸರು ಚಾಕುವನ್ನು ಕಸಿದುಕೊಂಡು, ಬಂಧಿಸಿದ್ದಾರೆ.