“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ಸ್ಥಾಪಿಸುವುದು ಸೇರಿದಂತೆ ಜನತೆಯ ಆರೋಗ್ಯದ ವಿಷಯದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರು ಹಾಗೂ ಸಮಾನ ಮನಸ್ಕ ಸಂಘಟನೆಗಳ ಕಾರ್ಯಕರ್ತರನ್ನು ರಾಜ್ಯ ಸರಕಾರ ಪೋಲಿಸರ ಮೂಲಕ ಬಂಧಿಸಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತೀವ್ರವಾಗಿ ಖಂಡಿಸಿದ್ದಾರೆ.
ಹಾವೇರಿ ಪಟ್ಟಣದಲ್ಲಿ ಮಂಗಳವಾರ ಪತ್ರಿಕಾ ಹೇಳಿಕೆ ನೀಡಿದ ಅವರು, “ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ಕರಾರು ಒಪ್ಪಂದ ರದ್ದುಗೊಳಿಸಲು, ವೆನ್ಲಾಕ್ ಆಷ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಖಾಸಗೀಕರಣದ ಪಿಪಿಪಿ ಮಾದರಿ ಕೈಬಿಡಲು, ಜಯದೇವ-ಕಿದ್ವಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸ್ಥಾಪಿಸಲು, ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರತೀ ತಾಲೂಕಿಗೂ ಸಾರ್ವಜನಿಕ ತಾಲೂಕು ಆಸ್ಪತ್ರೆ ಸ್ಥಾಪಿಸುವಂತೆ ಆಗ್ರಹಿಸಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಉಸ್ತುವಾರಿ ಮಂತ್ರಿಗಳ ಕಛೇರಿ ಚಲೋ ನಡೆಸುತ್ತಿದ್ದವರನ್ನು ರಾಜ್ಯ ಸರಕಾರ ಏಕಾಏಕಿ ಬಂಧಿಸಿರುವುದು ನಾಚಿಕೆಗೇಡಿನ ಸಂಗತಿ” ಎಂದರು.
“ಜನರ ಆರೋಗ್ಯದ ಪ್ರಶ್ನೆಗೆ ಉತ್ತರ ನೀಡಬೇಕಾದ ಸರ್ಕಾರ, ಪ್ರಶ್ನೆ ಕೇಳಿದವರನ್ನೇ ಬಂಧಿಸುವುದು ಯಾವ ನ್ಯಾಯ? ಸಾರ್ವಜನಿಕ ಆಸ್ಪತ್ರೆ ಜನತೆಯ ಮೂಲಭೂತ ಹಕ್ಕಾಗಿದೆಯೇ ವಿನಃ ಐಶಾರಾಮಿ ಬೇಡಿಕೆಯಲ್ಲ; ಸರಕಾರಿ ಆಷ್ಪತ್ರೆ ಕೇಳಿದ ಯುವಜನರ ಮೇಲೆ ದೌರ್ಜನ್ಯ ಎಸಗಿರುವುದು ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ. ಜನತೆಯ ಆರೋಗ್ಯದ ಸಮಸ್ಯೆಗಳಿಗೆ ಸ್ಪಂದಿಸದೆ ಸರ್ಕಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದು ಹೇಳಿದರು.
“ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾದರೂ ಜನಬದ್ಧತೆ ಮತ್ತು ಜನಪರ ಕಾಳಜಿ ಇದ್ದರೆ ಕೂಡಲೇ ಡಿವೈಎಫ್ಐ ಸಂಘಟನೆ ಎತ್ತಿರುವ ಬೇಡಿಕೆಗಳನ್ನು ಈಡೇರಿಸಬೇಕು. ಜನಪರವಾಗಿ ಧ್ವನಿ ಎತ್ತಿದವರನ್ನೇ ಪೋಲಿಸರ ಮೂಲಕ ಬಂಧನ ಮಾಡಿ ಧ್ವನಿ ಹತ್ತಿಕ್ಕುವ ರಾಜ್ಯ ಸರಕಾರದ ನೀತಿಗೆ ಡಿವೈಎಫ್ಐ ಸಂಘಟನೆ ಮಣಿಯುವುದಿಲ್ಲ. ರಾಜ್ಯ ಸರಕಾರ ಖಾಸಗೀ ಆಷ್ಪತ್ರೆಗಳ ಲಾಭಿಗೆ ಮಣಿದು ಸರಕಾರಿ ಆಷ್ಪತ್ರೆಗಳನ್ನು ಬಲಹೀನಗೊಳಿಸುತ್ತಿರುವುದು ನಾಡಿನ ಜನತೆಗೆ ಬಗೆಯುತ್ತಿರುವ ದ್ರೋಹವಾಗಿದೆ. ಆರೋಗ್ಯ ಸೌಲಭ್ಯ ಕೇಳಿದವರನ್ನು ಪೋಲಿಸರನ್ನು ಬಿಟ್ಟು ಬಂಧಿಸಲು ಮುಂದಾಗುತ್ತಿರುವ ಸರಕಾರದ ನಡೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯ ಸರಕಾರ ಡಿವೈಎಫ್ಐ ಸಂಘಟನೆ ಎತ್ತಿರುವ ಜನರಿಗೆ ಆರೋಗ್ಯ ಅನುಕೂಲ ಕಲ್ಪಿಸುವ ಈ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಿದ ಡಿವೈಎಫ್ಐ ಮುಖಂಡರನ್ನು ಬೇಷರತ್ ಆಗಿ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರತರೆನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.




