ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಇಂದು (ಏಪ್ರಿಲ್ 29) ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇಕಡಾ 78.68 ರಷ್ಟು ಮತದಾನ ದಾಖಲಾಗಿದೆ. ಸಣ್ಣ-ಪುಟ್ಟ ಘರ್ಷಣೆಗಳು ಹಾಗೂ ಆರೋಪ-ಪ್ರತ್ಯಾರೋಪಗಳ ನಡುವೆಯೂ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸುತ್ತಿದ್ದಾರೆ. ರಾಜ್ಯದ 7 ಜಿಲ್ಲೆಗಳ 142 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.
ಕೋಲ್ಕತ್ತಾ, ಹೌರಾ, ಹೂಗ್ಲಿ, ನಾಡಿಯಾ, ಪುರ್ಬಾ ಬರ್ಧಮಾನ್, ಉತ್ತರ ಹಾಗೂ ದಕ್ಷಿಣ 24 ಪರಗಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ನಿರ್ಣಾಯಕ ಹಂತದ ಮತದಾನ ನಡೆಯುತ್ತಿದೆ. ಒಟ್ಟು 3.21 ಕೋಟಿ ಮತದಾರರು 1,448 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮೊದಲ ಹಂತದಲ್ಲಿ ದಾಖಲಾದ ಶೇ. 80ಕ್ಕೂ ಅಧಿಕ ಮತದಾನದಂತೆ, ಈ ಹಂತದಲ್ಲಿಯೂ ಹೆಚ್ಚಿನ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ. ಚುನಾವಣಾ ಆಯೋಗದ ಮಾಹಿತಿಯಂತೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೇ. 61.11 ಮತದಾನವಾಗಿತ್ತು, ಅದು 3 ಗಂಟೆಯ ಹೊತ್ತಿಗೆ ಶೇ. 78.68ಕ್ಕೆ ಏರಿಕೆಯಾಗಿದೆ. ಭದ್ರತೆಗಾಗಿ ಸಾವಿರಾರು ಕೇಂದ್ರೀಯ ಭದ್ರತಾ ಪಡೆಗಳ (CAPF) ತುಕಡಿಗಳನ್ನು ನಿಯೋಜಿಸಲಾಗಿದ್ದು, ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಅವರು ಮತದಾನ ಶಾಂತಿಯುತವಾಗಿ ಸಾಗಿದೆ ಎಂದು ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ‘ಭವಾನಿಪುರ’. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಇದೆ. ಮತದಾನದ ಸಮಯದಲ್ಲಿ ಭವಾನಿಪುರದ ಮತಗಟ್ಟೆಯೊಂದರ ಬಳಿ ಸುವೇಂದು ಅಧಿಕಾರಿ ಅವರನ್ನು ಟಿಎಂಸಿ ಕಾರ್ಯಕರ್ತರು ಸುತ್ತುವರಿದು ‘ಜೈ ಬಂಗಾಳ’ ಘೋಷಣೆ ಕೂಗಿದ ಘಟನೆ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಕೇಂದ್ರೀಯ ಪಡೆಗಳು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ. ಇನ್ನೊಂದೆಡೆ, ಪುರ್ಬಾ ಬರ್ಧಮಾನ್‌ನಲ್ಲಿ ಬಾಂಬ್‌ಗಳಿರುವ ಚೀಲ ಪತ್ತೆಯಾಗಿರುವ ಬಗ್ಗೆಯೂ ವರದಿಯಾಗಿದೆ.
ಇದನ್ನು ಓದಿದ್ದೀರಾ? ತಮಿಳುನಾಡಿನ ಮೊದಲ ಲಿಂಗತ್ವ ಅಲ್ಪಸಂಖ್ಯಾತ ಕ್ರಿಕೆಟ್ ಅಂಪೈರ್ ರಿತಿಕಾ ಶ್ರೀ – ಸವಾಲು ಮೆಟ್ಟಿ ನಿಂತ ಸಾಧಕಿ
ಪಾನಿಹಟಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರತ್ನ ದೇವನಾಥ್ ಅವರ ವಿರುದ್ಧವೂ ಸ್ಥಳೀಯರು ‘ಗೋ ಬ್ಯಾಕ್’ ಘೋಷಣೆ ಕೂಗಿದ್ದಾರೆ. ಇವಿಎಂ ಯಂತ್ರದಲ್ಲಿ ಬಿಜೆಪಿ ಬಟನ್ ಮೇಲೆ ಶಾಯಿ ಸುರಿದಿದ್ದಾರೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಇನ್ನೊಂದೆಡೆ, ಟಿಎಂಸಿ ನಾಯಕ ಫಿರ್ಹಾದ್ ಹಕೀಮ್ ಅವರು, ಚುನಾವಣಾ ಆಯೋಗದ ಅವ್ಯವಸ್ಥೆಯಿಂದ ಮತದಾನ ವಿಳಂಬವಾಗುತ್ತಿದೆ ಎಂದು ದೂರಿದ್ದಾರೆ. ಬಿಜೆಪಿ ಅಭ್ಯರ್ಥಿ ಅಸಿಮ್ ಕುಮಾರ್ ಸರ್ಕಾರ್ ಅವರು ಇವಿಎಂ ದೋಷಗಳ ಬಗ್ಗೆ ದೂರು ನೀಡಿದ್ದು, ಕೆಲವು ಮತಗಟ್ಟೆಗಳಲ್ಲಿ ಮರು-ಮತದಾನಕ್ಕೆ ಆಗ್ರಹಿಸಿದ್ದಾರೆ.
ಎರಡನೇ ಹಂತದ ಚುನಾವಣೆಯು ಟಿಎಂಸಿ ಪಕ್ಷಕ್ಕೆ, ವಿಶೇಷವಾಗಿ ದಕ್ಷಿಣ ಬಂಗಾಳ ಹಾಗೂ ಕೋಲ್ಕತ್ತಾ ಭಾಗದಲ್ಲಿ ಅತ್ಯಂತ ನಿರ್ಣಾಯಕವಾಗಿದೆ. ಈ ಭಾಗಗಳು ಮಮತಾ ಬ್ಯಾನರ್ಜಿ ಅವರ ಅಭೇದ್ಯ ಕೋಟೆ ಎಂದು ಭಾವಿಸಲಾಗಿದೆ. ಟಿಎಂಸಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಬಿಜೆಪಿ ಈ ಭಾಗದಲ್ಲೂ ಮುನ್ನಡೆದು ಅಧಿಕಾರಕ್ಕೆ ಏರುವ ವಿಶ್ವಾಸದಲ್ಲಿದೆ.




