ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಮಂಜೂರು ಮಾಡುವಂತೆ ಒತ್ತಾಯಿಸಿ, ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳು ಪ್ರತಿಭಟನಾ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಹಾಗೂ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಡಾ.ಪುನೀತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಹಾವೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ದಿಂದ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡುವ ಕನಸನ್ನು ಹೊತ್ತು ನಗರಕ್ಕೆ ಆಗಮಿಸುತ್ತಾರೆ ಒಂದೆಡೆ ಬಸ್ಸಿನ ಸಮಸ್ಯೆ ಹಾಗೂ ಹೆಚ್ಚಿನ ಅಭ್ಯಾಸಕ್ಕಾಗಿ ವಸತಿಗಾಗಿ ಸಾವಿರಾರು ಸಂಖ್ಯೆಯಲ್ಲಿ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳು ಅರ್ಜಿ ಹಾಕಿದರೂ ಸಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತಿಲ್ಲ” ಎಂದರು.
“ಅರ್ಜಿ ಹಾಕಿದ ಸಾವಿರಾರು ವಿದ್ಯಾರ್ಥಿಗಳ ಪೈಕಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಮಾತ್ರ ವಸತಿ ಸೌಲಭ್ಯಗಳು ಸಿಗುತ್ತಿವೆ. ಇದರಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದರೆ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ” ಎಂದರು.
ಲಕ್ಷಾಂತರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತಿರುವ ಜಿಲ್ಲಾ ಕೇಂದ್ರವಾಗಿದ್ದು,ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಗಳು ಇಲ್ಲ. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಸತಿ ಸೌಲಭ್ಯದಿಂದ ದೂರ ಉಳಿದ್ದಾರೆ. ಬಹುತೇಕ ವಸತಿ ನಿಲಯಗಳು ಸ್ವಂತ ಕಟ್ಟಡವಿಲ್ಲದೆ, ಮೂಲಭೂತ ಸೌಲಭ್ಯಗಳಿಲ್ಲದೆ, ನಿಲಯ ಪಾಲಕರು ಇಲ್ಲದೆ, ವಿದ್ಯಾರ್ಥಿ ಸಮುದಾಯ ಬೀದಿಗಿಳಿದು ಪದೇ ಪದೇ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಹೇಳಿದರು.
ಎಸ್ಎಫ್ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ಕುಮಾರ್ ನಾಗವತ್ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡುತ್ತದೆ. ಅದೇ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಿ, ಇಲ್ಲವೇ ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಕೊಡುವ ವಿದ್ಯಾ ಶ್ರೀ ಯೋಜನೆಯ ಹಣದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಸಿಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕು” ಎಂದು ಒತ್ತಾಯಿಸಿದರು.
“ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು” ಎಂದು ಆಗ್ರಹಿಸಿದರು.
ಮನವಿ ಪತ್ರ ಸ್ವೀಕರಿಸಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಡಾ.ಪುನೀತ್ ಅವರು ಮಾತನಾಡಿ, ಹಾಸ್ಟೆಲ್ ಗಳ ಕಟ್ಟಡಗಳ ಸಂಖ್ಯೆ ಇರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಕಲ್ಪಿಸಲು ಅಸಾಧ್ಯವಾಗುತ್ತದೆ. ಸರ್ಕಾರಕ್ಕೆ ಹೊಸ ಹಾಸ್ಟೆಲ್ ಮಂಜೂರಾತಿಗೆ ವರದಿ ಕಳಿಸುತ್ತೇವೆ. ಆದರೂ ಸ್ಥಳೀಯವಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮನವಿಗೆ ಸ್ಪಂದಿಸಲಾಗುವುದು” ಎಂದರು.
“ಈಗಾಗಲೇ ಎರಡೂ ಮೂರು ತಿಂಗಳು ಕಳೆದರೂ ಬಿಸಿಎಮ್ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆಯೇ ವಿನಃ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ. ಹಾಸ್ಟೆಲ್ ಸೌಲಭ್ಯ ಸಿಗುವವರೆಗೆ ಹೋಗುವುದಿಲ್ಲ” ಎಂದು ಪಟ್ಟುಹಿಡಿದಾಗ. ಅಧಿಕಾರಿಗಳು ಬೇಟಿ ನೀಡಿ ಚರ್ಚಿಸಿದಾಗ, ವಿದ್ಯಾರ್ಥಿಗಳು ಸೋಮವಾರ ವರೆಗೆ ಗಡುವು ನೀಡಿದರು. “ಹಾಸ್ಟೆಲ್ ಸೌಲಭ್ಯ ಕೊಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ” ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕದ ಉಪಾಧ್ಯಕ್ಷ ದ್ಯಾಮಣ್ಣ ಎಸ್, ಮುಖಂಡರಾದ ಶೋಭಾ ದೇವರಮನಿ, ಕಲ್ಪನಾ ಬಡಿಗೇರಿ, ಲಕ್ಷ್ಮೀ ರೆಡ್ಡಿಗೊಂಡರ, ಮಹದೇವಿ ಪೂಜಾರ, ರೇಖಾ ಹರವಿ, ಸಪ್ನ ಮನೋಜಿ, ಪ್ರಿಯ ಟಿ, ಅರ್ಚನಾ ಹಡಪದ್, ನಿಖಿತ ಸಾವಕ್ಕನವರ, ಲಲಿತಾ ಮೆಕ್ಕಿ, ಜಯಲಕ್ಷ್ಮೀ ಪಾಟೀಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.




