“ಜಾನಪದವು ಸರ್ವಕಾಲಿಕವಾಗಿದ್ದು, ಜನಜೀವನದ ಅವಿಭಾಜ್ಯ ಅಂಗವಾಗಿದೆ” ಎಂದು ಎಚ್.ಎ. ನಂದಿ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಂ. ಉಪ್ಪಾರ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆ.ಡಿ. ಸರ್ಕಾರಿ ಪ್ರೌಢಶಾಲೆಯಲ್ಲಿ ಆಗಸ್ಟ್ 22ರಂದು ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕರ್ನಾಟಕದ ವಿವಿಧ ಭಾಗಗಳ ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಜಾನಪದ ಪರಂಪರೆಯನ್ನು ಹೊಂದಿವೆ. ಜಾನಪದದಲ್ಲಿ ಹಾಸ್ಯ, ವಿಡಂಬನೆ, ಚಿಂತನೆ ಹಾಗೂ ಜೀವನ ಮೌಲ್ಯಗಳು ಅಡಕವಾಗಿವೆ” ಎಂದರು.
“ಒಡಪು, ಒಡಗೆತೆ, ಕಥೆ, ತ್ರಿಪದಿಗಳು ಸೇರಿದಂತೆ ಹಲವು ಪ್ರಕಾರಗಳ ಮೂಲಕ ಜಾನಪದವು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಶ್ರಮಜೀವಿಗಳ ದೈನಂದಿನ ಬದುಕು, ಮದುವೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಜಾನಪದ ಹಾಡುಗಳು ಹಾಗೂ ಆಚರಣೆಗಳು ಬೆಸೆದುಕೊಂಡಿವೆ” ಎಂದು ತಿಳಿಸಿದರು.
“ಶಿರಶಾಡ ಮಠದ ಅಭಿನವ ಮುರುಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಶಿಕ್ಷಣ ಹಾಗೂ ಶಿಸ್ತಿನೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡುವುದು ಅಗತ್ಯ. ಜಾನಪದ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಮುಂದಿನ ಪೀಳಿಗೆಗೆ ಅದನ್ನು ಉಳಿಸಬೇಕು. ಇಲ್ಲವಾದರೆ ಜಾನಪದ ಸಂಸ್ಕೃತಿ ಅಳಿವಿನಂಚಿಗೆ ತಲುಪುವ ಅಪಾಯವಿದೆ” ಎಂದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಮಾತನಾಡಿ, “ಅಳಿವಿನಂಚಿನಲ್ಲಿರುವ ಜಾನಪದ ಕಲೆ ಹಾಗೂ ಸಂಸ್ಕೃತಿಯ ಸಂರಕ್ಷಣೆಗೆ ಕನ್ನಡ ಜಾನಪದ ಪರಿಷತ್ ಕೈಗೊಳ್ಳುತ್ತಿರುವ ಕಾರ್ಯ ಶ್ಲಾಘನೀಯ. ವಿವಿಧ ರಾಜ್ಯಗಳು ಹಾಗೂ ವಿದೇಶಗಳಲ್ಲಿಯೂ ಜಾನಪದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜಾನಪದ ಸಂರಕ್ಷಣೆಗೆ ಶ್ರಮಿಸಲಾಗುತ್ತಿದೆ” ಎಂದರು.
“ವಿದ್ಯಾರ್ಥಿಗಳಿಗಾಗಿ ಜಾನಪದ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಯುವ ಪೀಳಿಗೆಗೆ ಜಾನಪದದ ಅರಿವು ಮೂಡಿಸಲು ಸಹಕಾರಿಯಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎಂ. ಬಂಡಗಾರ ವಹಿಸಿದ್ದರು. ಬಸವರಾಜ ಅಂಕದ, ಸರ್ದಾರ್ ಮುಲ್ಲಾ, ಸಿದ್ಧಾರೂಢ ಕೊಳ್ಳೂರ, ಅಣ್ಣಾರಾಯ ಗುಗದಡ್ಡಿ, ಸಂಗನಗೌಡ ಹಚ್ಚಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಬುಡಕಟ್ಟು ಕಲಾವಿದರಾದ ದೇವಿಂದ್ರ ಪ. ಗೊಂದಳಿ, ಬಾಬು ಗೊಂದಳಿ ಹಾಗೂ ಸುಭಾಸ್ ಗೊಂದಳಿ ಗೊಂದಳಿ ಕಲಾ ಪ್ರದರ್ಶನ ನೀಡಿದರು. ಸುಭಾಸ್ ಕಾಮಾ ಎಕ್ತಾರಿ ಪದಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಸಂಗನಗೌಡ ಹಚ್ಚಡದ ಕಾರ್ಯಕ್ರಮ ನಿರೂಪಿಸಿದರು. ಅಣ್ಣಾರಾಯ ಗುಗದಡ್ಡಿ ವಂದಿಸಿದರು.




