ಭಾರತೀಯ ವಕೀಲರ ಪರಿಷತ್ತಿನ (ಬಾರ್ ಕೌನ್ಸಿಲ್ ಆಫ್ ಇಂಡಿಯಾ – ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ತಮ್ಮ ಹುದ್ದೆಗೆ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಬಿಸಿಐ ಸಹ-ಅಧ್ಯಕ್ಷ ಹಾಗೂ ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಆಗ್ರಹಿಸಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ಮಿಶ್ರಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗಸ್ಟ್ 22ರಂದು ಬರೆದಿರುವ ಸುದೀರ್ಘ ಪತ್ರದಲ್ಲಿ ರೆಡ್ಡಿ ಗಡುವು ನೀಡಿದ್ದಾರೆ.
”ಬಾರ್ ಕೌನ್ಸಿಲ್ ಆಫ್ ಇಂಡಿಯಾ ಯಾವುದೇ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. ಇಲ್ಲಿರುವ ಪ್ರತಿಯೊಂದು ರೂಪಾಯಿಯೂ ಸಾರ್ವಜನಿಕ ನಂಬಿಕೆಯ ನಿಧಿಯಾಗಿದೆ. ಸಂಸತ್ತು ನೀಡಿರುವ ಸಾಂವಿಧಾನಿಕ ಅಧಿಕಾರವು ಇಡೀ ವಕೀಲರ ಸಮುದಾಯದ ಒಳಿತಿಗಾಗಿಯೇ ಹೊರತು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿರುವ ವ್ಯಕ್ತಿಯ ವೈಯಕ್ತಿಕ ಲಾಭಕ್ಕಲ್ಲ,” ಎಂದು ಪತ್ರದಲ್ಲಿ ರೆಡ್ಡಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದರೊಂದಿಗೆ ಬಿಸಿಐ ಖಾತೆಗಳು ಹಾಗೂ ಮಿಶ್ರಾ ಅವರ ಅಧಿಕಾರಾವಧಿಯಲ್ಲಿ ಸ್ಥಾಪಿಸಲಾದ ‘ಬಿಸಿಐ ಟ್ರಸ್ಟ್ ಪರ್ಲ್ – ಫಸ್ಟ್’ (BCI Trust PEARL – First) ಸಂಸ್ಥೆಯ ಆರ್ಥಿಕ ವಹಿವಾಟುಗಳ ಕುರಿತು ಸ್ವತಂತ್ರ ಆಡಿಟ್ ನಡೆಸಬೇಕು ಮತ್ತು ಹೊಸ ಕಾನೂನು ಕಾಲೇಜುಗಳ ಮಾನ್ಯತೆ ಪ್ರಕ್ರಿಯೆಯಲ್ಲಿ ಬಿಸಿಐ ಯಾವುದೇ ಹಣ ಸ್ವೀಕರಿಸುವುದನ್ನು ತಕ್ಷಣವೇ ನಿರ್ಬಂಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಭಾಗವಹಿಸುವಿಕೆಯನ್ನು ವಿರೋಧಿಸಿದ್ದ ವಿದ್ಯಾರ್ಥಿಗಳಿಗೆ ವಕೀಲರಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಮಿಶ್ರಾ ಬೆದರಿಕೆ ಹಾಕಿದ್ದ ವಿವಾದವನ್ನು ಪತ್ರದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಬಿಸಿಐ ಪೂರ್ಣ ಪ್ರಮಾಣದ ಸಭೆಯಲ್ಲಿ ಯಾವುದೇ ಚರ್ಚೆ ಅಥವಾ ನಿರ್ಣಯ ಕೈಗೊಳ್ಳದೆ, ಅಧ್ಯಕ್ಷರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯುವ ಕಾನೂನು ವಿದ್ಯಾರ್ಥಿಗಳ ಭವಿಷ್ಯದ ವಿರುದ್ಧ ಸೇಡು ತೀರಿಸಿಕೊಳ್ಳುವ ಧಾಟಿಯಲ್ಲಿ ಈ ಆದೇಶ ಹೊರಡಿಸಲಾಗಿತ್ತು ಎಂದು ರೆಡ್ಡಿ ಆಕ್ಷೇಪಿಸಿದ್ದಾರೆ.
ಬಿಸಿಐ ಆಡಳಿತದಲ್ಲಿ ನಡೆದಿರುವ ಅಕ್ರಮ ನೇಮಕಾತಿಗಳು, ಪಾರದರ್ಶಕತೆಯಿಲ್ಲದ ಸಿಬ್ಬಂದಿ ಆಯ್ಕೆ ಹಾಗೂ ಬೃಹತ್ ಪ್ರಮಾಣದ ನಿಧಿ ವರ್ಗಾವಣೆಯ ಆರೋಪಗಳನ್ನು ಪತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. 2020ರಲ್ಲಿ ಮಿಶ್ರಾ ಅವರು ತಮ್ಮ ಆಪ್ತರನ್ನೇ ಟ್ರಸ್ಟಿಗಳನ್ನಾಗಿ ನೇಮಿಸಿ ಸ್ಥಾಪಿಸಿದ ‘ಬಿಸಿಐ ಟ್ರಸ್ಟ್ ಪರ್ಲ್’ಗೆ ಬಿಸಿಐನ ಅಧಿಕೃತ ನಿಧಿಯಿಂದ ಬರೋಬ್ಬರಿ ₹150 ಕೋಟಿ ಹಣವನ್ನು ಸದಸ್ಯರ ತೀವ್ರ ವಿರೋಧದ ನಡುವೆಯೂ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಖಾಸಗಿ ಸ್ವರೂಪದ ಟ್ರಸ್ಟ್‌ನ ದಾಖಲೆಗಳನ್ನು ಬಿಸಿಐ ಸದಸ್ಯರಿಗಾಗಲಿ ಅಥವಾ ಕೌನ್ಸಿಲ್‌ಗಾಗಲಿ ಎಂದಿಗೂ ಬಹಿರಂಗಪಡಿಸಿಲ್ಲ. ಅಲ್ಲದೆ, ದೇಶದಲ್ಲಿ ಹೊಸ ಕಾನೂನು ಕಾಲೇಜುಗಳಿಗೆ ಅನುಮೋದನೆ ಅಥವಾ ನವೀಕರಣ ನೀಡುವ ಹೆಸರಿನಲ್ಲಿ ಕಾಲೇಜುಗಳಿಂದ ₹25 ಲಕ್ಷದಿಂದ ₹1 ಕೋಟಿವರೆಗೆ ದೇಣಿಗೆ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ದೂರುಗಳು ಬಂದಿವೆ ಎಂದು ರೆಡ್ಡಿ ದೂರಿದ್ದಾರೆ.
ಕಾನೂನು ಶಿಕ್ಷಣದ ನಿಯಂತ್ರಣ ಸಂಸ್ಥೆಯ ಅಧಿಕಾರವನ್ನು ನಿಧಿ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಅರ್ಹತೆಯಿಲ್ಲದ ಕಳಪೆ ಕಾಲೇಜುಗಳು ಮುಂದುವರಿಯುತ್ತಿದ್ದು, ದೇಶದ ಕಾನೂನು ಶಿಕ್ಷಣದ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದೆ ಎಂದು ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಬಿಸಿಐ ನಡೆಸುವ ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಆಡಳಿತಾತ್ಮಕ ಹುದ್ದೆಗಳಲ್ಲಿ ಮಿಶ್ರಾ ಅವರ ಕುಟುಂಬಸ್ಥರೇ ಬೀಡುಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. 2012ರಿಂದ ಸತತ 14 ವರ್ಷಗಳ ಕಾಲ ನಿಯಮಗಳನ್ನು ಗಾಳಿಗೆ ತೂರಿ ಮಿಶ್ರಾ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಿರುವುದು ಚುನಾಯಿತ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೇ ನಾಶಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ವಕೀಲ ಸಮುದಾಯದ ಘನತೆ ಕಾಪಾಡಲು ಅವರು ಅಧಿಕಾರ ತ್ಯಜಿಸುವುದು ಅನಿವಾರ್ಯ ಎಂದಿದ್ದಾರೆ. ಇನ್ನೊಂದೆಡೆ, ಮಿಶ್ರಾ ಅವರ ನಿರಂತರ ಅಧಿಕಾರಾವಧಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿಯೂ ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.




