ಕೃತಿ: Federation Versus Freedom (ಒಕ್ಕೂಟ ವ್ಯವಸ್ಥೆ ವರ್ಸಸ್ ಸ್ವಾತಂತ್ರ‍್ಯ)
ಮೊದಲ ಮುದ್ರಣ: 1939, Gokhale Institute of Politics and Economics
ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ: 1979
ಇಂಗ್ಲಿಷ್ ಸಂಪುಟ: 1
ಕನ್ನಡ ಸಂಪುಟ: 1
Repro India Limited (Kalpaz) Edition- 2017
ಡಾ. ಬಿ. ಆರ್. ಅಂಬೇಡ್ಕರ್ ಅವರ ‘ಫೆಡರೇಷನ್ ವರ್ಸಸ್ ಫ್ರೀಡಂ’ (Federation Versus Freedom) ಕೃತಿಯು 1939ರಲ್ಲಿ ಅವರು ಪುಣೆಯಲ್ಲಿ ನೀಡಿದ ಉಪನ್ಯಾಸವನ್ನು ಆಧರಿಸಿದೆ. 1935ರ ‘ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್’ ಅಡಿಯಲ್ಲಿ ಬ್ರಿಟಿಷರು ಪ್ರಸ್ತಾಪಿಸಿದ ‘ಫೆಡರೇಷನ್’ (ಒಕ್ಕೂಟ) ವ್ಯವಸ್ಥೆಯನ್ನು ಈ ಕೃತಿಯು ತೀಕ್ಷ್ಣವಾಗಿ ವಿಮರ್ಶಿಸುತ್ತದೆ. ಅಂಬೇಡ್ಕರ್ ಅವರ ಪ್ರಕಾರ, ‘ಈ ಒಕ್ಕೂಟವು ಭಾರತೀಯರಿಗೆ ನಿಜವಾದ ಸ್ವಾತಂತ್ರ‍್ಯ ನೀಡುವ ಬದಲು, ಬ್ರಿಟಿಷರು ಮತ್ತು ಭಾರತದ ರಾಜಮಹಾರಾಜರು ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಮಾಡಿಕೊಂಡ ಒಪ್ಪಂದವಾಗಿತ್ತು.’ ಇದು ದೇಶದ ಪ್ರಗತಿಪರ ಶಕ್ತಿಗಳನ್ನು ಹತ್ತಿಕ್ಕುವ ಸಂಚು ಎಂದು ಅವರು ಕರೆದರು. ಪ್ರಸ್ತಾಪಿತ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವಿರಲಿಲ್ಲ. ಬ್ರಿಟಿಷ್ ವೈಸರಾಯ್ ಅವರಿಗೆ ‘ವಿಶೇಷ ಅಧಿಕಾರ’ಗಳನ್ನು ನೀಡಲಾಗಿತ್ತು. ಇದರಿಂದಾಗಿ ಚುನಾಯಿತ ಸರ್ಕಾರವಿದ್ದರೂ ಅಂತಿಮ ನಿರ್ಧಾರ ಬ್ರಿಟಿಷರ ಕೈಯಲ್ಲೇ ಇರುತ್ತಿತ್ತು. ಒಕ್ಕೂಟಕ್ಕೆ ಸೇರಲು ಸಂಸ್ಥಾನಗಳಿಗೆ ಮುಕ್ತ ಅವಕಾಶವಿತ್ತು, ಆದರೆ ಹೊರಬರಲು ಅಸ್ಪಷ್ಟ ನಿಯಮಗಳಿದ್ದವು. ನಮಗೆ ಬೇಕಿರುವುದು ಕೇವಲ ಅಧಿಕಾರ ಹಂಚಿಕೆಯ ಒಕ್ಕೂಟವಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು ಮತ್ತು ಘನತೆ ನೀಡುವ ‘ಸ್ವತಂತ್ರ ಭಾರತ’ ಎಂಬುದು ಅಂಬೇಡ್ಕರ್ ಅವರ ದೃಷ್ಟಿಕೋನವಾಗಿತ್ತು. ಹೀಗಾಗಿ ಈ ಕೃತಿಯು ಅಂದಿನ ರಾಜಕೀಯ ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಅತ್ಯಂತ ತಾರ್ಕಿಕವಾಗಿ ಎತ್ತಿ ತೋರಿಸುತ್ತದೆ.
1939ರ ಜನವರಿ 29ರಂದು ಪುಣೆಯ ಗೋಖಲೆ ಭವನದಲ್ಲಿ ಗೋಖಲೆ ರಾಜಕೀಯ ಮತ್ತು ಅರ್ಥಶಾಸ್ತç ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ನೀಡಿದ ಉಪನ್ಯಾಸದ ಪುಸ್ತಕ ರೂಪವೇ ‘ಫೆಡರೇಷನ್ ವರ್ಸಸ್ ಫ್ರೀಡಂ’. ʻ1935ರ ಭಾರತ ಸರ್ಕಾರದ ಕಾಯ್ದೆʼಯ ಮೂಲಕ ಜಾರಿಗೆ ತರಲು ಉದ್ದೇಶಿಸಲಾಗಿದ್ದ ಹಾಗೂ ನಮ್ಮ ಇಂದಿನ ಆಡಳಿತದ ಬಹಳಷ್ಟು ಸಂರಚನೆಗಳಿಗೆ ಮೂಲವಾಗಿರುವ ಫೆಡರಲ್ ಸಂರಚನೆಯನ್ನು ಕುರಿತು `ಫೆಡರೇಶನ್ ವರ್ಸಸ್ ಸ್ವಾತಂತ್ರ‍್ಯ’ (Federation Versus Freedom) ಕೃತಿಯಲ್ಲಿ ಆಳವಾದ ವಿಮರ್ಶಾತ್ಮಕ ವಿಶ್ಲೇಷಣೆ ನಡೆಸಿರುವ ಡಾ. ಅಂಬೇಡ್ಕರ್ ಅವರು ಆ ಕಾಯ್ದೆಯಿಂದ ರಾಜ ಸಂಸ್ಥಾನಗಳಿಗೆ ಹೋಲಿಸಿದರೆ ಬ್ರಿಟಿಷ್ ಭಾರತದಲ್ಲಿನ ಸ್ವಾತಂತ್ರ‍್ಯಕ್ಕೆ ಉಂಟಾಗಲಿದ್ದ ಕೆಟ್ಟ ಪರಿಣಾಮಗಳನ್ನು ತೆರೆದಿಟ್ಟಿದ್ದಾರೆ.
ಈ ರೀತಿಯ ಕಾನೂನಾತ್ಮಕ ಮತ್ತು ರಾಜಕೀಯ ವಿಶ್ಲೇಷಣೆಯ ಮೂಲಕ ಅಂಬೇಡ್ಕರ್ ಅವರು, ವಸಾಹತುಶಾಹಿ ಯಂತ್ರಾಂಗವು ಕಾನೂನಿನ ಮೂಲಕ ಕಾರ್ಯ ನಿರ್ವಹಿಸುತ್ತ ಪ್ರಜಾಪ್ರಭುತ್ವ ಮತ್ತು ಸ್ವಾಯತ್ತತೆಯತ್ತ (self-governance) ಹೆಜ್ಜೆ ಹಾಕಿದಂತೆ ಕಾಣಿಸುತ್ತಿದ್ದರೂ, ಅದು ಬ್ರಿಟಿಷ್ ಭಾರತದ ಹೆಚ್ಚು ಪ್ರಗತಿಶೀಲ ನಾಯಕತ್ವದ (ಅಂದರೆ ಮುಖ್ಯವಾಗಿ ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯಾಗಿದ್ದ ಕಾಂಗ್ರೆಸ್ಸಿನ – ಅನು.) ನಿರ್ಧಾರಗಳು ಮತ್ತು ಕ್ರಿಯೆಗಳನ್ನು ತಡೆಗಟ್ಟಲು ರಾಜ ಸಂಸ್ಥಾನಗಳನ್ನು ಪರೋಕ್ಷವಾಗಿ ಬಳಸುವ ಮಾರ್ಗವಾಗಿತ್ತು ಎಂಬುದನ್ನು ಎತ್ತಿ ತೋರಿಸುತ್ತಾರೆ.

1935ರ ಕಾಯಿದೆಯಲ್ಲಿ ವಿವರಿಸಲಾದ ಒಕ್ಕೂಟ ವ್ಯವಸ್ಥೆಯನ್ನು, ಒಕ್ಕೂಟ ಆಡಳಿತ ವ್ಯವಸ್ಥೆ ಸ್ಥಾಪಿಸಲು ಸೂಚಿಸಲಾದ ವಿಧಾನಗಳನ್ನು ಹಾಗೂ ಆ ಯೋಜನೆಯಲ್ಲಿವೆ ಎಂದು ಘೋಷಿಸಲಾದ ʻಪ್ರಯೋಜನಗಳನ್ನುʼ ಕುರಿತು ವಿದ್ಯಾವಂತ ಸಾಮಾನ್ಯ ಜನರಿಗೆ (ಮತ್ತು ಬಹುಶಃ ನಾಗರಿಕ ಸಮಾಜಕ್ಕೆ) ಅರಿವು ಮೂಡಿಸುವ ಸ್ವಯಂಪ್ರೇರಿತ ಉದ್ದೇಶದಿಂದ ಬಾಬಾಸಾಹೇಬರು ಇದನ್ನು ಬರೆದಿದ್ದಾರೆ.
ಪ್ರಸ್ತುತ ಈ ಬರಹವು ಡಾ. ಅಂಬೇಡ್ಕರ್ ತಮಗಿದ್ದ ಕಾನೂನಿನ ತೀಕ್ಷ್ಣ ಜ್ಞಾನವನ್ನು ತನ್ನ ರಾಜಕೀಯ ಕ್ರಿಯೆಗಳಿಗೆ ತಕ್ಕನಾಗಿ ಸಮರ್ಥ ರೀತಿಯಲ್ಲಿ ಬಳಸುತ್ತಿದ್ದುದನ್ನು ಹಾಗೂ ಸಮಕಾಲೀನ Ambedkarite ರಾಜಕೀಯದಲ್ಲಿ ಅದರ ಪ್ರಸ್ತುತತೆಯನ್ನು ವಿಶದಪಡಿಸುವ ಉದ್ದೇಶವನ್ನು ಹೊಂದಿದೆ.
ಮುಖ್ಯ ವಾದಗಳು
“ಜನರು ತಮ್ಮ ಆದರ್ಶಗಳನ್ನು ಭವಿಷ್ಯದಲ್ಲಿ ಹುಡುಕುವ ಬದಲು ಪ್ರಾಚೀನತೆಯ ಕಡೆಗೆ ಮರಳುತ್ತಿರುವ ಕಾಲ ಇದಾಗಿದೆ. ಇದು ಜನರು ತಮಗಾಗಿ ಚಿಂತನೆ ಮಾಡುವುದನ್ನು ನಿಲ್ಲಿಸಿರುವ ಕಾಲವಾಗಿದೆ ಮತ್ತು ಅವರು ಚಿಂತನೆ ಮಾಡುವುದನ್ನು ನಿಲ್ಲಿಸಿರುವುದರಿಂದ, ತಮ್ಮ ಜೀವನದ ವಾಸ್ತವಗಳನ್ನು ಓದುವುದು ಮತ್ತು ಪರಿಶೀಲಿಸುವುದನ್ನೂ ನಿಲ್ಲಿಸಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದ ಬಾಬಾಸಾಹೇಬರು, ಈಗಾಗಲೇ ಒಕ್ಕೂಟ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿಕೊಂಡಿರುವ ಅಮೆರಿಕ (ಯುಎಸ್‌ಎ), ಜರ್ಮನಿ, ಸ್ವಿಝರ್ಲೆಂಡ್, ಕೆನಡಾ ಹಾಗೂ ಆಸ್ಟ್ರೆಲಿಯಗಳೊಂದಿಗೆ ಹೋಲಿಸುವ ಮೂಲಕ, ಒಕ್ಕೂಟ ಆಡಳಿತ ವ್ಯವಸ್ಥೆಯ ಹುಟ್ಟು ಮತ್ತು ಬೆಳವಣಿಗೆಯನ್ನು ವಿವರಿಸುತ್ತಾರೆ. 1935ರ ಕಾಯ್ದೆಯ ಒಂದೊಂದೇ ಭಾಗವನ್ನು ವಿವರಿಸುತ್ತ, ಈ ಕಾಯ್ದೆಯ ಮೂಲಕ, ರಾಜ ಸಂಸ್ಥಾನಗಳನ್ನೂ ಬ್ರಿಟಿಷ್ ಭಾರತದ ಪ್ರಾಂತ್ಯಗಳನ್ನೂ ಒಳಗೊಂಡು ಬ್ರಿಟಿಷರು ಸ್ಥಾಪಿಸಲು ಬಯಸಿದ್ದ ʻಭಾರತ ಒಕ್ಕೂಟʼದ ಸ್ವರೂಪವನ್ನು ಅಂಬೇಡ್ಕರ್ ಅವರು ಚಿತ್ರಿಸುತ್ತಾರೆ.
ಇದನ್ನೂ ಓದಿರಿ: ವರ್ತಮಾನದ ಬಿಕ್ಕಟ್ಟಿಗೆ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ಯ ಮದ್ದು
ಆದರೆ ಮುಖ್ಯ ವಾದಗಳಿಗೆ ಪ್ರವೇಶಿಸುವ ಮೊದಲು, ಆಡಳಿತದ ಕೇಂದ್ರೀಕೃತ ಮತ್ತು ಫೆಡರಲ್ ಸ್ವರೂಪಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ. ಕೇಂದ್ರೀಕೃತ ಆಡಳಿತದ ಸ್ವರೂಪದಲ್ಲಿ ಅಧಿಕಾರವು ಕೇಂದ್ರೀಕೃತವಾಗಿದ್ದು, ರಾಜ್ಯಗಳು ಆಡಳಿತದಲ್ಲಿ ಅಧೀನ ಪಾತ್ರವನ್ನು ನಿರ್ವಹಿಸುತ್ತವೆ. ಫೆಡರಲ್ ಸ್ವರೂಪದ ಆಳ್ವಿಕೆಯು ಕೇಂದ್ರ ಮತ್ತು ರಾಜ್ಯಗಳ ಅಧಿಕಾರದ ವಲಯಗಳನ್ನು ವಿಭಜಿಸುತ್ತದೆ ಮತ್ತು ಒಬ್ಬರಿಗೆ ನಿಗದಿತವಾಗಿ ನೀಡಲಾದ ವಲಯದಲ್ಲಿ ಇನ್ನೊಬ್ಬರು ಪ್ರವೇಶಿಸುವುದಕ್ಕೆ ನಿರ್ಬಂಧವಿರುತ್ತದೆ. ಉದಾಹರಣೆಗೆ, ಇಂದು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ಚಲಾವಣೆ, ವಿದೇಶಿ ವ್ಯವಹಾರಗಳು ಇತ್ಯಾದಿ ವಿಷಯಗಳಲ್ಲಿ ವಿಶೇಷ ಅಧಿಕಾರಗಳು ಇವೆ; ಹಾಗೆಯೇ ರಾಜ್ಯ ಸರ್ಕಾರಗಳಿಗೆ ಭೂಮಿ, ಕೃಷಿ, ಸಾರ್ವಜನಿಕ ಆರೋಗ್ಯ ಇವುಗಳ ಮೇಲೆ ವಿಶೇಷ ಅಧಿಕಾರಗಳಿವೆ. ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸೇರಿದ ಸಮಾನಾಂತರ ಪಟ್ಟಿಯಲ್ಲಿರುವ ಶಿಕ್ಷಣ, ಅರಣ್ಯ ಇತ್ಯಾದಿ ವಿಷಯಗಳಲ್ಲಿ ಇಬ್ಬರೂ ಅಧಿಕಾರಗಳನ್ನು ಚಲಾಯಿಸಬಹುದು.
ಭಾರತದ ಸಂವಿಧಾನವು 1950ರಲ್ಲಿ ಅನುಮೋದಿಸಿದ ಅಧಿಕಾರಗಳ ಹಂಚಿಕೆಯ ಈ ಸ್ವರೂಪವು 1935ರ ಕಾಯ್ದೆಯ ಮೂಲಕ ಉದ್ದೇಶಿತ ವಿನ್ಯಾಸದ ಪರಿಷ್ಕೃತ ರೂಪವಾಗಿದೆ. ಆದರೆ 1935ರ ಕಾಯ್ದೆಯಲ್ಲಿ ಯೋಜಿಸಲಾಗಿದ್ದ ವಿಧಾನವು ಈಗ ಅಸ್ತಿತ್ವದಲ್ಲಿರುವ ವಿನ್ಯಾಸದಷ್ಟು ನೇರವಾಗಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಲು, 1947ರ ಮೊದಲು ಇದ್ದ ವಸಾಹತುಶಾಹಿ ಆಳ್ವಿಕೆಯನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.
ಬ್ರಿಟಿಷ್ ಆಳ್ವಿಕೆಯು ಉಪಖಂಡದ ಎಲ್ಲ ಪ್ರದೇಶಗಳಲ್ಲಿ ಒಂದೇ ರೀತಿಯಾಗಿರಲಿಲ್ಲ. ಕೆಲವು ಪ್ರದೇಶಗಳು ಬ್ರಿಟಿಷ್ ಪ್ರಾಂತ್ಯಗಳ ರೀತಿಯಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ನೇರ ಆಳ್ವಿಕೆಯ ಅಡಿಯಲ್ಲಿ ಇದ್ದವು ಅಥವಾ ಬ್ರಿಟಿಷ್ ಗೌರ್ನರ್‌ಗಳ ಆಳ್ವಿಕೆಯಡಿ ʻಪ್ರೆಸಿಡೆನ್ಸಿʼ ನಗರಗಳಾಗಿದ್ದವು. ಇತರ ಪ್ರದೇಶಗಳು ಬ್ರಿಟಿಷ್ ಸರ್ಕಾರದ ಪರೋಕ್ಷ ಆಡಳಿತದ ಅಡಿಯಲ್ಲಿದ್ದವು. ಅಂದರೆ, ʻಸಹಾಯಕ ಸೈನ್ಯ ಪದ್ಧತಿʼ ಎಂಬ ಅಧೀನತೆಯ ಒಪ್ಪಂದಗಳ ಮೂಲಕ ರಾಜ ಸಂಸ್ಥಾನಗಳು ತಮ್ಮ ಪ್ರದೇಶಗಳಲ್ಲಿ ಸ್ವಯಂ ಆಡಳಿತ ನಡೆಸಬಹುದಾಗಿತ್ತಾದರೂ ಅವುಗಳಿಗೆ ಸಾರ್ವಭೌಮತೆ ಇರದೆ, ಅವುಗಳ ಸ್ವಾತಂತ್ರ‍್ಯವು ಚಕ್ರಾಧಿಪತ್ಯದ ಪರಮಾಧಿಕಾರದ ಅಡಿಯಲ್ಲೇ ಇರುತ್ತಿತ್ತು.
ಅಂದು ಸುಮಾರು 17 ಬ್ರಿಟಿಷ್ ಇಂಡಿಯಾ ಪ್ರಾಂತ್ಯಗಳು ಮತ್ತು ಸುಮಾರು 627 ರಾಜ ಸಂಸ್ಥಾನಗಳು ಇದ್ದವು. ಈ ಎರಡು ರೀತಿಯ ಪ್ರದೇಶಗಳ ನಡುವೆ ಮುಖ್ಯವಾದ ಹಲವು ಸಾಮಾಜಿಕ-ರಾಜಕೀಯ ಭಿನ್ನತೆಗಳು ಇದ್ದವು: ಬ್ರಿಟಿಷ್ ಇಂಡಿಯಾ ಹೆಚ್ಚು ಪ್ರಗತಿಶೀಲ, ನಗರೀಕೃತ ಮತ್ತು ಪ್ರಜಾಪ್ರಭುತ್ವೀಕರಣಗೊಂಡಿತ್ತು, ಆದರೆ ರಾಜ ಸಂಸ್ಥಾನಗಳು, ಸಾಮಾನ್ಯವಾಗಿ ಊಳಿಗಮಾನ್ಯತೆ ಮತ್ತು ನಿರಂಕುಶಾಧಿಕಾರದ ಕುದಿಕುಲುಮೆಗಳಾಗಿದ್ದವು (ಅಪರೂಪಕ್ಕೆಂಬಂತೆ ಹಾಗಿಲ್ಲದ ಕೆಲವು ರಾಜ ಸಂಸ್ಥಾನಗಳೂ ಇದ್ದವು).
1935ರ ಕಾಯ್ದೆಯಡಿಯ ಒಕ್ಕೂಟ ಯೋಜನೆ ತಾರತಮ್ಯಕಾರಿಯಾಗಿತ್ತು.
1935ರ ಫೆಡರಲ್ ಯೋಜನೆಯು ಎರಡೂ ರೀತಿಯ ಪ್ರದೇಶಗಳ ಪ್ರತಿನಿಧಿಗಳನ್ನು ಒಟ್ಟಿಗೆ ದ್ವಿ-ಸದನಗಳುಳ್ಳ ಶಾಸಕಾಂಗ ಸಭೆಗೆ ತರಲು ಪ್ರಯತ್ನಿಸಿತು. ಆದರೆ, ಈ ಶಾಸಕಾಂಗದಲ್ಲಿ ಬ್ರಿಟಿಷ್ ಭಾರತದ ಪ್ರಾತಿನಿಧ್ಯಕ್ಕೂ ರಾಜ ಸಂಸ್ಥಾನಗಳ ಪ್ರಾತಿನಿಧ್ಯಕ್ಕೂ ನಡುವಿರುವ ಅಸಮಾನತೆಯನ್ನು, ಹೇಗೆ ಬ್ರಿಟಿಷ್ ಭಾರತವು ಕಡಿಮೆ ಪ್ರಾತಿನಿಧ್ಯವನ್ನು ಹೊಂದಿದ್ದರೆ, ಭಾರತೀಯ ರಾಜ ಸಂಸ್ಥಾನಗಳು ಅಧಿಕ ಪ್ರಾತಿನಿಧ್ಯವನ್ನು ಹೊಂದಿವೆ ಎಂಬುದನ್ನು ಡಾ. ಅಂಬೇಡ್ಕರ್ ಅವರು ಎತ್ತಿತೋರಿಸುತ್ತಾರೆ. ಮೇಲಾಗಿ, ಶಾಸನ ಸಭೆಯ ಸ್ಥಾನಗಳನ್ನು ತುಂಬುವ ವಿಧಾನದಲ್ಲೂ ಅಸಮಾನತೆಯಿದೆ – ಬ್ರಿಟಿಷ್ ಭಾರತದಿಂದ ಎರಡೂ ಸದನಗಳಿಗೆ ಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿದರೆ, ರಾಜ ಸಂಸ್ಥಾನಗಳ ಪ್ರತಿನಿಧಿಗಳನ್ನು ದೇಶದ ಆಳುವ ವಸಾಹತುಶಾಹಿ ಸರ್ಕಾರ ನಾಮನಿರ್ದೇಶನ ಮಾಡುತ್ತದೆ ಎಂಬುದನ್ನೂ ಅಂಬೇಡ್ಕರ್ ಪ್ರಶ್ನಿಸುತ್ತಾರೆ.

1935ರ ಕಾಯ್ದೆಯಡಿಯ ಒಕ್ಕೂಟ ಕಾರ್ಯಾಂಗವು ಆವರೆಗೆ ಇದ್ದಂತಹ ಸಮ್ಮಿಶ್ರ ಕಾರ್ಯಾಂಗಕ್ಕಿಂತ ಅತ್ಯಂತ ಭಿನ್ನವಾಗಿತ್ತು. ಒಕ್ಕೂಟ ಕಾರ್ಯಾಂಗವು ʻಒಕ್ಕೂಟ ಪಟ್ಟಿʼಯ ಮೇಲೆ ಸಂಪೂರ್ಣ ಅಧಿಕಾರ ಹೊಂದಿದಂತಹ ಕೇಂದ್ರೀಕೃತ ವ್ಯವಸ್ಥೆಯಾಗಿತ್ತು. ಪ್ರಾಂತೀಯ ಕಾರ್ಯಾಂಗಕ್ಕೆ ʻಪ್ರಾಂತೀಯ ಪಟ್ಟಿʼಯ ಮೇಲೆ ಸಂಪೂರ್ಣ ಅಧಿಕಾರವಿತ್ತು. ಒಕ್ಕೂಟ ಮತ್ತು ಪ್ರಾಂತೀಯ ಕಾರ್ಯಾಂಗ(ಸರ್ಕಾರ)ಗಳೆರಡೂ ಅಧಿಕಾರ ಚಲಾವಣೆ ಮಾಡಬಹುದಾದ ಕೆಲವು ವಿಚಾರಗಳು ʻಸಮಾನಾಂತರ ಪಟ್ಟಿʼಯಲ್ಲಿದ್ದವು.
ಇದನ್ನೂ ಓದಿರಿ: ‘ಹಿಂದೂಧರ್ಮದ ಒಗಟುಗಳು’: ಉತ್ತರ ಸಿಗದ ಪ್ರಶ್ನೆಗಳ ಬೆನ್ನೇರಿ
ಆದರೆ ಈ ಮೂರೂ ಪಟ್ಟಿಗಳಲ್ಲಿಲ್ಲದೆ ಇನ್ನೂ ಕೆಲವು ವಿಷಯಗಳಿದ್ದು, ಅವುಗಳ ಮೇಲೆ ಭಾರತದ ಗೌರ್ನರ್ ಜನರಲ್ ಮಾತ್ರ ಅಧಿಕಾರ ಚಲಾಯಿಸಬಹುದಾಗಿತ್ತು.
ಬ್ರಿಟಿಷ್ ಪ್ರಾಂತ್ಯಗಳು ಮತ್ತು ರಾಜ ಸಂಸ್ಥಾನಗಳ ತೆರಿಗೆ ಸಂಗ್ರಹಣೆಯ ಅಧಿಕಾರಗಳಲ್ಲೂ ತಾರತಮ್ಯವಿತ್ತು; 1935ರ ಕಾಯ್ದೆಯಲ್ಲಿ ಹೇಳಲಾದುದರ ಹೊರತಾಗಿ ಇತರ ಮೂಲಗಳಿಂದ ತೆರಿಗೆ ಸಂಗ್ರಹಿಸುವುದಕ್ಕೆ ಪ್ರಾಂತೀಯ ಸರ್ಕಾರಗಳಿಗೆ ನಿಷೇಧವಿದ್ದರೆ, ರಾಜ ಸಂಸ್ಥಾನಗಳಿಗೆ ಅಂತಹ ಯಾವುದೇ ನಿರ್ಬಂಧಗಳಿರಲಿಲ್ಲ. ಅಷ್ಟೇ ಅಲ್ಲದೆ ರಾಜ ಸಂಸ್ಥಾನಗಳು ಅಬಕಾರಿ ತೆರಿಗೆಯನ್ನು ಸಹ ಸಂಗ್ರಹಿಸಲು ಅವಕಾಶವಿತ್ತು. ಇದನ್ನೂ ಡಾ. ಅಂಬೇಡ್ಕರ್ ಎತ್ತಿತೋರಿಸುತ್ತಾರೆ.
ಇಷ್ಟೇ ಅಲ್ಲದೆ, ರಾಜ ಸಂಸ್ಥಾನಗಳ ʻವಿಲೀನದ ಒಡಂಬಡಿಕೆʼಗಳಲ್ಲಿನ ನಿಬಂಧನೆಗಳಲ್ಲಿ ʻಒಕ್ಕೂಟದ ಕಾಯ್ದೆಗಳನ್ನು ಆಯಾ ರಾಜ ಸಂಸ್ಥಾನದ ಏಜೆನ್ಸಿಗಳೇ ಜಾರಿ ಮಾಡುತ್ತವೆ ಹೊರತು ಒಕ್ಕೂಟದ ಏಜೆನ್ಸಿಗಳಲ್ಲʼ ಎಂಬುದಾಗಿ ನಿಬಂಧನೆ ವಿಧಿಸಬಹುದಿತ್ತು; ಮತ್ತು ಹಾಗೇನಾದರೂ ನಿಬಂಧನೆ ವಿಧಿಸಿದ್ದಲ್ಲಿ, ಒಕ್ಕೂಟದ ಕಾರ್ಯಾಂಗಕ್ಕೆ ಆ ಸಂಸ್ಥಾನದ ಒಳಗಿನ ವ್ಯವಹಾರಗಳಲ್ಲಿ ಯಾವುದೇ ಆಡಳಿತಾತ್ಮಕ ಅಧಿಕಾರ ಇರುವುದಿಲ್ಲ. ಆದರೆ ಬ್ರಿಟಿಷ್ ಭಾರತದ ಪ್ರಾಂತ್ಯಗಳಿಗೆ ಇಂತಹ ಅಧಿಕಾರ ಇರಲಿಲ್ಲ.
1935ರ ಕಾಯಿದೆಯ ಅಡಿಯಲ್ಲಿ ಫೆಡರಲ್ ವ್ಯವಸ್ಥೆಯ ನಿರೀಕ್ಷಿತ ಪ್ರಯೋಜನಗಳ ಪೊಳ್ಳುತನ ಬಯಲು
1935ರ ಕಾಯ್ದೆಯಲ್ಲಿ ಕಲ್ಪಿಸಿಕೊಂಡಿರುವಂತೆ ಒಕ್ಕೂಟದ ಘಟಕಗಳ ಒಗ್ಗೂಡುವಿಕೆಯ ಸ್ವರೂಪವು ಐಕ್ಯತೆಯನ್ನು ಬೆಳೆಸದಿರಬಹುದು; ಅಥವಾ, ಒಂದೆಡೆ ಪ್ರಾಂತೀಯ ಸರ್ಕಾರಗಳ ಪ್ರತಿನಿಧಿಗಳಿಗೆ ಹೆಚ್ಚಿನ ಕಾನೂನು ನಿರ್ಬಂಧಗಳನ್ನು ವಿಧಿಸಿರುವುದು, ಮತ್ತೊಂದೆಡೆ ರಾಜ ಸಂಸ್ಥಾನಗಳ ಪ್ರತಿನಿಧಿಗಳಿಗೆ ವಿಪುಲ ಸ್ವಾತಂತ್ರ‍್ಯ ನೀಡಿರುವುದು – ಇದರಿಂದಾಗಿ ಹೆಚ್ಚು ಪ್ರಜಾಸತ್ತಾತ್ಮಕವಾಗಿರುವ ಪ್ರಾಂತ್ಯಗಳು ನಿರಂಕುಶ ರಾಜ ಸಂಸ್ಥಾನಗಳ ಮೇಲೆ ಬೀರುವ ಪ್ರಭಾವ ನಗಣ್ಯವಾಗಿರುವಂತೆ ಹೇಗೆ ಈ ಕಾಯ್ದೆ ವಿನ್ಯಾಸಗೊಂಡಿದೆ; ಮತ್ತು ಕೊನೆಯದಾಗಿ, ಕಾಯ್ದಿರಿಸಿದ ವಿಷಯಗಳು ಮತ್ತು ವರ್ಗಾಯಿಸಲಾದ ವಿಷಯಗಳು – ಇವುಗಳ ವರ್ಗೀಕರಣದ ಪ್ರಕಾರ ಮಂತ್ರಿಗಳಿಗೆ ನೀಡಿರುವ ಅಧಿಕಾರಗಳನ್ನು 1935ರ ಕಾಯ್ದೆ ಹೇಗೆ ನಿರ್ಬಂಧಿಸುತ್ತದೆ ಮತ್ತು ಹೇಗೆ ಅವರ ಜವಾಬ್ದಾರಿಯನ್ನು ನಿರಾಕರಿಸುತ್ತದೆ ಎಂಬುದನ್ನು ಅಂಬೇಡ್ಕರ್ ಎತ್ತಿ ತೋರಿಸುತ್ತಾರೆ. ಆ ಮೂಲಕ, ಒಕ್ಕೂಟ ಆಡಳಿತದ ಘೋಷಿತ ಪ್ರಯೋಜನಗಳಾದ: ಭಾರತವನ್ನು ಒಗ್ಗೂಡಿಸುವುದು, ರಾಜಪ್ರಭುತ್ವದ ಸಂಸ್ಥಾನಗಳನ್ನು ಪ್ರಜಾಸತ್ತಾತ್ಮಕಗೊಳಿಸುವಂತೆ ಪ್ರಭಾವ ಉಂಟುಮಾಡುವುದು ಹಾಗೂ ಜವಾಬ್ದಾರಿಯುತ ಸರ್ಕಾರದ ಭರವಸೆ – ಇವು ಕೂಡ ಹೇಗೆ ಪೊಳ್ಳು ಎಂಬುದನ್ನು ಬಹಳ ಎಚ್ಚರಿಕೆಯಿಂದ ಬಯಲುಗೊಳಿಸುತ್ತಾರೆ.
ಫೆಡರೇಶನ್ ವರ್ಸಸ್ ಸ್ವಾತಂತ್ರ‍್ಯದ ಸಮಕಾಲೀನ ಪ್ರಸ್ತುತತೆ
ಡಾ. ಅಂಬೇಡ್ಕರ್ ತಮ್ಮ ವಿಶಿಷ್ಟ ಬೌದ್ಧಿಕ ಪ್ರಾಮಾಣಿಕತೆಯಿಂದಾಗಿ, ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಬಗೆಗೆ ತಮಗೆ ವೈಯಕ್ತಿಕವಾಗಿ ಒಲವಿರುವುದನ್ನು ವ್ಯಕ್ತಪಡಿಸುತ್ತಾರೆ; ಆದಾಗ್ಯೂ ಅಂತಹ ಒಲವು, ಅವರು 1935ರ ಕಾಯ್ದೆಯಲ್ಲಿ ಪ್ರಸ್ತಾಪಿಸಲ್ಪಟ್ಟ ನಿರ್ದಿಷ್ಟ ಯೋಜನೆಯ ಮತ್ತು ಅದರ ನ್ಯೂನತೆಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸುವುದಕ್ಕೆ ಅಡ್ಡಿಯಾಗುವುದಿಲ್ಲ. ಈ ಪ್ರಬಂಧವು ಡಾ. ಅಂಬೇಡ್ಕರ್ ಅವರಿಗಿದ್ದ ಕಾನೂನಿನ ರಾಜಕಾರಣದ ಬಗೆಗಿನ ತಿಳಿವಳಿಕೆಯನ್ನು ಹಾಗೂ ಸಾರ್ವಜನಿಕ ಮೊಬಿಲೈಸೇಶನ್‌ಗೆ ವಿಮರ್ಶೆಯನ್ನು ಬಳಸುವ ಬಗೆಗಿನ ಅವರ ಸ್ಪಷ್ಟತೆಯನ್ನು ನಿಚ್ಚಳವಾಗಿ ತೋರಿಸಿಕೊಡುತ್ತದೆ.

1935ರ ಕಾಯಿದೆಯ ಉದ್ದೇಶಿತ ʻಒಕ್ಕೂಟ ಯೋಜನೆʼಯನ್ನು ಕುರಿತ ಈ ಶ್ರಮದಾಯಕ ಮತ್ತು ಸಮಗ್ರ ವಿಶ್ಲೇಷಣೆಯ ಮೂಲಕ ಡಾ. ಅಂಬೇಡ್ಕರ್ ಅವರು, ಈ ಯೋಜನೆಯು ಹೇಗೆ ಬ್ರಿಟಿಷ್ ಆಳ್ವಿಕೆಯಿಂದ ಸಾಪೇಕ್ಷವಾಗಿ ಹೆಚ್ಚು ಸ್ವತಂತ್ರವಾಗಿದ್ದ ಬ್ರಿಟಿಷ್ ಭಾರತದ ನಾಯಕತ್ವದ ಅಧಿಕಾರವನ್ನು ಕುಗ್ಗಿಸುವ ಕುತಂತ್ರಿ ಗುರಿಯನ್ನು ಹೊಂದಿದೆ ಎಂಬುದನ್ನು ತೋರಿಸಿಕೊಡುತ್ತಾರೆ. ಉದಾಹರಣೆಗೆ, ಬ್ರಿಟಿಷ್ ಸರ್ಕಾರವು ರಾಜಪ್ರಭುತ್ವದ ರಾಜ್ಯಗಳೊಂದಿಗೆ ಹಿಂದೆ ಕಾರ್ಯಗತಗೊಳಿಸಿದ ಒಪ್ಪಂದಗಳನ್ನು 1935ರ ಕಾಯಿದೆಯ ಮೂಲಕ ರದ್ದುಗೊಳಿಸಿರಲಿಲ್ಲವಾದ್ದರಿಂದ, ಅವುಗಳ ಮೇಲೆ ಒಂದು ಮಟ್ಟಿನ ಹಿಡಿತವನ್ನು ಈಗಲೂ (1935ರ ಈ ಕಾಯ್ದೆಯ ಸಮಯದಲ್ಲೂ – ಅನು.) ಹೊಂದಿತ್ತು. ಆದ್ದರಿಂದ, ಪ್ರಾಂತೀಯ ಸರ್ಕಾರಗಳಿಗೆ ಹೋಲಿಸಿದರೆ ರಾಜಸಂಸ್ಥಾನಗಳಿಗೆ ಹೆಚ್ಚು ಸ್ವಾತಂತ್ರ‍್ಯವನ್ನು ನೀಡಲಾಗಿದೆ ಎಂಬಂತೆ ಕಂಡು ಬಂದರೂ, ಬ್ರಿಟಿಷರು ರಾಜರುಗಳ ಮೇಲಿನ ತಮ್ಮ ಪರಮಾಧಿಕಾರದ ಮೂಲಕ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಮಾರ್ಗಗಳು ಇದ್ದೇ ಇದ್ದವು.
ಇದನ್ನೂ ಓದಿರಿ: ‘ಶೂದ್ರರು ಯಾರಾಗಿದ್ದರು?: ‘…ಅಜ್ಞಾನಿ ಶೂದ್ರರಿಗಾಗಿ ಈ ಪುಸ್ತಕ’
ʻಜನರು ತಮಗಾಗಿ ಚಿಂತನೆ ಮಾಡುವುದನ್ನೂ ತಮ್ಮ ಜೀವನದ ವಾಸ್ತವಗಳನ್ನು ಪರಿಶೀಲಿಸುವುದನ್ನೂ ನಿಲ್ಲಿಸಿರುವ, ತಮ್ಮ ಚಿಂತನೆ ಮತ್ತು ಕ್ರಿಯೆಗಳ ತಿದ್ದುಪಡಿಯ ವಿಧಾನವಾಗಿ ಅನುಭವದ ಮೇಲೆ ಅವಲಂಬಿಸುವ ಬದಲು ತಮ್ಮ ʻಆಂತರಿಕ ಧ್ವನಿ’ಯಿಂದ ಮಾರ್ಗದರ್ಶನ ಪಡೆಯುತ್ತಿರುವ ಯುಗಕ್ಕೆ ಹಿಂದಿರುಗಲು ಮತ್ತೊಮ್ಮೆ ಕಾನೂನುಗಳನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಅಂಬೇಡ್ಕರ್ ಅವರು ಬಳಸಿರುವ ಕಾನೂನಿನ ವಿಶ್ಲೇಷಣೆ ಮತ್ತು ವಿಮರ್ಶೆಯ ವಿಧಾನವು ಸಹ ಇಂದಿನ ಕಾನೂನು ವಿದ್ವಾಂಸರಿಗೆ ಪ್ರಗತಿಪರ ನ್ಯಾಯಶಾಸ್ತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಸ್ತುತವಾಗಿದೆ.
ಅಂತಿಮವಾಗಿ, 1935ರ ಕಾಯ್ದೆಯ ಮೂಲಕ ಬ್ರಿಟಿಷರು ತರಲು ಉದ್ದೇಶಿಸಿದ್ದ ಒಕ್ಕೂಟ ಯೋಜನೆಯ ಪ್ರಸ್ತಾವಿತ ರೂಪ ಮತ್ತು ಸಂರಚನೆಯ ಬಗೆಗಿನ ಸಾರ್ವತ್ರಿಕ ಅಸಮಾಧಾನದ ಕಾರಣ ಅದನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ನಂತರ, 1947ರಲ್ಲಿ ಭಾರತದ ಸಂವಿಧಾನದ ಬಗ್ಗೆ ಚರ್ಚಿಸಿ ಅದರ ಕರಡನ್ನು ರಚಿಸಲು ಸಂವಿಧಾನ ಸಭೆ ಸೇರಿದಾಗ, ಡಾ. ಅಂಬೇಡ್ಕರ್ ಅವರು 1935ರ ಕಾಯಿದೆಯಲ್ಲಿದ್ದ ಒಕ್ಕೂಟ ಯೋಜನೆಯ ದೋಷಗಳು ಭಾರತದ ಉದ್ದೇಶಿತ ಹೊಸ ಸಂವಿಧಾನದಲ್ಲಿ ಸೇರಿಕೊಳ್ಳದಂತೆ ನೋಡಿಕೊಂಡರು. ಇಂದು, ಡಾ. ಅಂಬೇಡ್ಕರ್ ಅವರ ಬೌದ್ಧಿಕ ಕೊಡುಗೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಮನ್ನಣೆ ನೀಡುವ ಅವರ ರಾಜಕೀಯ ಇಚ್ಛಾಶಕ್ತಿಯಿಂದಾಗಿ ನಾವು ಖಂಡಿತವಾಗಿಯೂ ಅದಕ್ಕಿಂತ (ಉದ್ದೇಶಿತ 1935ರದಕ್ಕಿಂತ) ಉತ್ತಮ ರೀತಿಯ ಒಕ್ಕೂಟ ವ್ಯವಸ್ಥೆಯನ್ನು ಹೊಂದಿದ್ದೇವೆ.
ಅನುವಾದ: ಸಿರಿಮನೆ ನಾಗರಾಜ್

ಮೃದುಲಾ ವಿ
ಮೃದುಲಾ ವಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಇಲ್ಲಿನ ಹಲವಾರು ನ್ಯಾಯಾಲಯಗಳಲ್ಲಿ ವಕೀಲರಾಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ, ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅಂಚಿನಲ್ಲಿರುವ ಸಮುದಾಯಗಳ ಭೂಮಿ ಹಕ್ಕುಗಳು, ಡಿಜಿಟಲ್ ಹಕ್ಕುಗಳು, ಸಾಂಸ್ಥಿಕ ತಾರತಮ್ಯ ಮತ್ತು ಕ್ರಿಮಿನಲ್ ಲಾ ಮುಂತಾದವುಗಳು ಇವರು ವಕೀಲರಾಗಿ ಕೇಂದ್ರೀಕರಿಸಿರುವ ವಲಯಗಳು. ಮೃದುಲಾ ಬೌದ್ಧರಾಗಿದ್ದು, ನಾಟಕ, ಕವಿತೆ ಮತ್ತು ಸಿನೆಮಾಗಳಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ.



